ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

'ರೈತರು ಅನಿರ್ದಿಷ್ಟ ಕಾಲ ಕಾಯುವಂತಾಗಬಾರದು': ಕೇಂದ್ರದ ನೆರವು ಕೋರಿ ಪ್ರಧಾನಿ, ಶಾಗೆ ಪರಮೇಶ್ವರ ಮತ್ತೊಂದು ಪತ್ರ!

ಎನ್‌ಡಿಆರ್‌ಎಫ್ (NDRF) ಅಡಿಯಲ್ಲಿ 22,400.58 ಕೋಟಿ ರೂಪಾಯಿಗಳ ಕೇಂದ್ರ ನೆರವನ್ನು ಕೋರಿ ರಾಜ್ಯ ಸರ್ಕಾರ ಪರಿಷ್ಕೃತ ಸಮಗ್ರ ಮನವಿಯನ್ನು ಸಲ್ಲಿಸಿದೆ.

ಜಿ ಪರಮೇಶ್ವರ
Ramyashree GN
Updated On : 23 Nov 2026, 4:01 pm

ಬೆಂಗಳೂರು: ರಾಜ್ಯದ 226 ತಾಲ್ಲೂಕುಗಳಲ್ಲಿ ಉಂಟಾಗಿರುವ ತೀವ್ರ ಬರವನ್ನು ಎದುರಿಸಲು ಹಾಗೂ ಇದರಿಂದ ಸಂಭವಿಸಿರುವ ಅಂದಾಜು 62,481 ಕೋಟಿ ರೂಪಾಯಿಗೂ ಹೆಚ್ಚಿನ ಆರ್ಥಿಕ ನಷ್ಟವನ್ನು ನಿಭಾಯಿಸಲು, ಕೇಂದ್ರವು 22,400.58 ಕೋಟಿ ರೂಪಾಯಿಗಳ ತುರ್ತು ನೆರವನ್ನು ಒದಗಿಸಬೇಕೆಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮತ್ತೊಮ್ಮೆ ಮನವಿ ಮಾಡಿದ್ದಾರೆ.

ಮೂವರು ಕೇಂದ್ರ ಸಚಿವರಿಗೆ ಪ್ರತ್ಯೇಕ ಪತ್ರಗಳನ್ನು ಬರೆದು, ಬರ ಪರಿಸ್ಥಿತಿಯ ಕುರಿತು ಅವರಿಗೆ ಖುದ್ದಾಗಿ ವಿವರಿಸಲು ಭೇಟಿಯ ಸಮಯವನ್ನು ಕೋರಿದ್ದಾರೆ. ಅಲ್ಲದೆ, 'ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ'ಯ (NDRF) ಅಡಿಯಲ್ಲಿ ಕೋರಲಾದ ಆರ್ಥಿಕ ನೆರವಿಗೆ ಅನುಮೋದನೆ ನೀಡುವ ಮತ್ತು ಅದನ್ನು ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಅವರು ಒತ್ತಾಯಿಸಿದ್ದಾರೆ.

'ನೈಸರ್ಗಿಕ ವಿಕೋಪಗಳಿಗೆ ರಾಜಕೀಯ ಗಡಿಗಳಾಗಲಿ ಅಥವಾ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಾಗಲಿ ಅನ್ವಯಿಸುವುದಿಲ್ಲ. ಇವುಗಳಿಗೆ ನಮ್ಮ ಪ್ರತಿಕ್ರಿಯೆಯಲ್ಲೂ ಇದೇ ತಿಳಿವಳಿಕೆ ಪ್ರತಿಬಿಂಬಿತವಾಗಬೇಕು' ಎಂದು ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

Advertisement

Advertisement

ನವೆಂಬರ್ 2 ರಂದು ಸಲ್ಲಿಸಿದ ಮನವಿ ಸೇರಿದಂತೆ, ರಾಜ್ಯ ಸರ್ಕಾರವು ಪದೇ ಪದೆ ಮನವಿಗಳನ್ನು ಸಲ್ಲಿಸಿದರೂ, ಕೇಂದ್ರ ಸರ್ಕಾರ ಈ ವಿಷಯದಲ್ಲಿ ತುರ್ತು ಕ್ರಮ ಕೈಗೊಳ್ಳದಿರುವ ಬಗ್ಗೆ ಕಳವಳ ಮತ್ತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದ್ದು, 226 ತಾಲ್ಲೂಕುಗಳು ಬಾಧಿತವಾಗಿವೆ. ಇದರಿಂದ ಅಂದಾಜು 62,481.88 ಕೋಟಿ ರೂಪಾಯಿಗಳ ಆರ್ಥಿಕ ನಷ್ಟ ಉಂಟಾಗಿದೆ.

ಎನ್‌ಡಿಆರ್‌ಎಫ್ (NDRF) ಅಡಿಯಲ್ಲಿ 22,400.58 ಕೋಟಿ ರೂಪಾಯಿಗಳ ಕೇಂದ್ರ ನೆರವನ್ನು ಕೋರಿ ರಾಜ್ಯ ಸರ್ಕಾರ ಪರಿಷ್ಕೃತ ಸಮಗ್ರ ಮನವಿಯನ್ನು ಸಲ್ಲಿಸಿದೆ.

Also Read

ಡಿಸೆಂಬರ್ 1ರೊಳಗೆ ರೈತರ ಬ್ಯಾಂಕ್ ಖಾತೆಗಳಿಗೆ ₹5,000 ಬರ ಪರಿಹಾರ ಜಮೆ: ಡಿಸಿಎಂ ಪರಮೇಶ್ವರ್; Video

ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಎತ್ತಿ ತೋರಿಸಿದ ಪರಮೇಶ್ವರ ಅವರು, ಸರ್ಕಾರವು ಈಗಾಗಲೇ ತನ್ನ ಸ್ವಂತ ಸಂಪನ್ಮೂಲಗಳಿಂದ ಬರ ಪರಿಹಾರದ ಮೊದಲ ಕಂತನ್ನು ಬಿಡುಗಡೆ ಮಾಡಿದೆ ಮತ್ತು ಅರ್ಹ ರೈತರಿಗೆ ತಲಾ ಕನಿಷ್ಠ 5,000 ರೂಪಾಯಿಗಳ ನೆರವು ನೀಡುವುದಾಗಿ ಘೋಷಿಸಿದೆ ಎಂದು ತಿಳಿಸಿದರು.

'ಕೇಂದ್ರ ಸರ್ಕಾರದ ನೆರವಿಗಾಗಿ ನಮ್ಮ ರೈತರು ಕಾಯುವಂತೆ ಮಾಡದಿರಲು ನಾವು ನಿರ್ಧರಿಸಿದ್ದೇವೆ. ಆದಾಗ್ಯೂ, ನಮ್ಮ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ಸಂಭವಿಸಿರುವ ವಿನಾಶದ ಪ್ರಮಾಣವು ರಾಜ್ಯವು ತನ್ನ ಸ್ವಂತ ಸಂಪನ್ಮೂಲಗಳ ಮೂಲಕ ಸಮರ್ಪಕವಾಗಿ ನಿಭಾಯಿಸಬಲ್ಲ ಸಾಮರ್ಥ್ಯಕ್ಕಿಂತ ಎಷ್ಟೋ ಪಟ್ಟು ಹೆಚ್ಚಾಗಿದೆ' ಎಂದು ಅವರು ಹೇಳಿದರು.

'ಲಕ್ಷಾಂತರ ರೈತ ಕುಟುಂಬಗಳು ತಮ್ಮ ಆದಾಯದ ಮೂಲಗಳನ್ನು ಕಳೆದುಕೊಂಡಿವೆ. ಉಳಿತಾಯವನ್ನೆಲ್ಲ ಖರ್ಚು ಮಾಡಿವೆ; ಅಲ್ಲದೆ, ತಮ್ಮ ದೈನಂದಿನ ಅಗತ್ಯಗಳನ್ನು ಪೂರೈಸಿಕೊಳ್ಳಲು, ಕೃಷಿ ಸಾಲಗಳನ್ನು ಮರುಪಾವತಿಸಲು ಮತ್ತು ಮುಂದಿನ ಕೃಷಿ ಹಂಗಾಮಿಗೆ ಸಿದ್ಧತೆ ನಡೆಸಲು ಪರದಾಡುತ್ತಿವೆ. ಸೂಕ್ತ ನೆರವು ಸಿಗದ ಪ್ರತಿಯೊಂದು ದಿನವೂ ಗ್ರಾಮೀಣ ಭಾಗದ ಸಂಕಷ್ಟವನ್ನು ಇನ್ನಷ್ಟು ತೀವ್ರಗೊಳಿಸುತ್ತದೆ ಮತ್ತು ನಮ್ಮ ರೈತರಿಗೆ ಆರ್ಥಿಕ ಚೇತರಿಕೆಯ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸುತ್ತದೆ' ಎಂದರು.

ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಹಕಾರದ ಅಗತ್ಯವನ್ನು ಒತ್ತಿಹೇಳಿದ ಪರಮೇಶ್ವರ ಅವರು, ಭಾರತದ ಒಕ್ಕೂಟ ವ್ಯವಸ್ಥೆಯ ಪ್ರಜಾಪ್ರಭುತ್ವದ ಬಲವು ಈ ಎರಡೂ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಲು ತೋರುವ ಸಿದ್ಧತೆಯಲ್ಲಿದೆ; ವಿಶೇಷವಾಗಿ ಲಕ್ಷಾಂತರ ಜನರ ಬದುಕು ಮತ್ತು ಜೀವನೋಪಾಯಗಳು ಅಪಾಯದಲ್ಲಿರುವಾಗ ಈ ಸಹಕಾರ ಅತ್ಯಗತ್ಯವಾಗಿರುತ್ತದೆ. ಅಲ್ಲದೆ, ಮಳೆ ಕೈಕೊಟ್ಟಾಗ ಇಡೀ ಕುಟುಂಬಗಳು ಸಾಲದ ಸುಳಿಗೆ ಸಿಲುಕದಂತೆ ಅಥವಾ ವರ್ಷಗಟ್ಟಲೆಯ ಕಠಿಣ ಪರಿಶ್ರಮ ವ್ಯರ್ಥವಾಗದಂತೆ ತಡೆಯಬಲ್ಲ ಕೃಷಿ ಆಧಾರಿತ ಆರ್ಥಿಕತೆಯನ್ನು ರೂಪಿಸುವ ಅಗತ್ಯವನ್ನೂ ಅವರು ಪ್ರತಿಪಾದಿಸಿದರು.

'ಕರ್ನಾಟಕದ ಪರಿಷ್ಕೃತ ಬರಗಾಲದ ಮನವಿಗೆ ಅತ್ಯುನ್ನತ ಆದ್ಯತೆ ನೀಡುವಂತೆಯೂ, ಅಗತ್ಯವಿರುವ ಆರ್ಥಿಕ ನೆರವನ್ನು ತ್ವರಿತವಾಗಿ ಮಂಜೂರು ಮಾಡಿ ಬಿಡುಗಡೆ ಮಾಡುವಂತೆಯೂ ನಾನು ಮತ್ತೊಮ್ಮೆ ಕಳಕಳಿಯಿಂದ ಕೋರುತ್ತೇನೆ. ರಾಜ್ಯದಲ್ಲಿನ ಸದ್ಯದ ಪರಿಸ್ಥಿತಿ ಮತ್ತು ನಮ್ಮ ಜನರ ತುರ್ತು ಅಗತ್ಯಗಳ ಬಗ್ಗೆ ನಿಮಗೆ ಖುದ್ದಾಗಿ ವಿವರಿಸಲು, ಆದಷ್ಟು ಬೇಗ ಭೇಟಿಯಾಗಲು ಅವಕಾಶ ನೀಡಬೇಕೆಂದು ಮತ್ತೊಮ್ಮೆ ವಿನಂತಿಸುತ್ತೇನೆ' ಎಂದು ಹೇಳಿದರು.

'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿರುವ ಪರಮೇಶ್ವರ್ ಅವರು, ರಾಷ್ಟ್ರದ ಪ್ರಗತಿ ಮತ್ತು ಆಹಾರ ಭದ್ರತೆಗೆ ಕರ್ನಾಟಕದ ರೈತರು ಅಪಾರ ಕೊಡುಗೆ ನೀಡಿದ್ದಾರೆ ಹಾಗೂ ಈ ಸಂಕಷ್ಟದ ಸಮಯದಲ್ಲಿ ಅವರು ಎಲ್ಲರ ಬೆಂಬಲವನ್ನು ಪಡೆಯಲು ಅರ್ಹರಾಗಿದ್ದಾರೆ. ತಮ್ಮ ಸಮಸ್ಯೆಗಳನ್ನು ಆಲಿಸಲು ಮತ್ತು ತಮ್ಮ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು ಅವರು ಅನಿರ್ದಿಷ್ಟ ಕಾಲ ಕಾಯುವಂತಾಗಬಾರದು ಎಂದು ತಮ್ಮ ಮನವಿಯನ್ನು ಪುನರುಚ್ಚರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments