ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಬೆಂಗಳೂರು ಟ್ರಾಫಿಕ್ ಕಿರಿಕಿರಿಗೆ Namma Metro ಮದ್ದು: 2027ಕ್ಕೆ Blue Line ಮಾರ್ಗ ಸಂಚಾರಕ್ಕೆ ಮುಕ್ತ..!

19 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ಒಟ್ಟು 13 ನಿಲ್ದಾಣಗಳಿವೆ. ಸಂಚಾರ ದಟ್ಟಣೆಯಿಂದ ಕೂಡಿರುವ ಹೊರ ವರ್ತುಲ ರಸ್ತೆಯಲ್ಲಿನ ಪ್ರಯಾಣಿಕರಿಗೆ ಇದು ಪ್ರಮುಖ ಸಾರಿಗೆ ಪರ್ಯಾಯವಾಗಲಿದೆ.

ನಮ್ಮ ಮೆಟ್ರೋದ ಪ್ರಾಯೋಗಿಕ ಸಂಚಾರವನ್ನು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಪರಿಶೀಲಿಸಿದರು.
Manjula VN
Updated On : 25 Nov 2026, 9:18 am

ಬೆಂಗಳೂರು: ಬೆಂಗಳೂರಿನ ಹೊರ ವರ್ತುಲ ರಸ್ತೆಯ (ORR) ಸಂಚಾರ ದಟ್ಟಣೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿರುವ 'ನಮ್ಮ ಮೆಟ್ರೋ' ನೀಲಿ ಮಾರ್ಗದ (Blue Line) 19 ಕಿ.ಮೀ ಉದ್ದದ ಹಂತ-2A ಕಾರಿಡಾರ್ 2027ರ ಮಧ್ಯಭಾಗದ ವೇಳೆಗೆ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ.

ಕೆ.ಆರ್. ಪುರಂನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ (Trial Runs) ಆರಂಭವಾಗಿದ್ದು, ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಕಾಮಗಾರಿ ಪರಿಶೀಲನೆ ನಡೆಸಿದ ಬಳಿಕ ಈ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

19 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ಒಟ್ಟು 13 ನಿಲ್ದಾಣಗಳಿವೆ. ಸಂಚಾರ ದಟ್ಟಣೆಯಿಂದ ಕೂಡಿರುವ ಹೊರ ವರ್ತುಲ ರಸ್ತೆಯಲ್ಲಿನ ಪ್ರಯಾಣಿಕರಿಗೆ ಇದು ಪ್ರಮುಖ ಸಾರಿಗೆ ಪರ್ಯಾಯವಾಗಲಿದೆ. ಈ ರಸ್ತೆಯುದ್ದಕ್ಕೂ ಹಲವು ಕಂಪನಿಗಳಿದ್ದು, ಸುಮಾರು 12 ಲಕ್ಷ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

Advertisement

Advertisement

ಪ್ರಸ್ತುತ ಕೆ.ಆರ್. ಪುರಂನಿಂದ ಮಹದೇವಪುರದವರೆಗೆ ನಾಲ್ಕು ನಿಲ್ದಾಣಗಳನ್ನು ಒಳಗೊಂಡಂತೆ ಪ್ರಾಯೋಗಿಕ ಸಂಚಾರ ನಡೆಸಲಾಗುತ್ತಿದೆ. ಮುಂದಿನ ವಾರಗಳಲ್ಲಿ ಇತರ ನಿಲ್ದಾಣಗಳಿಗೂ ಇದನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದರು.

ಈ ತಿಂಗಳು ಪ್ರಾಯೋಗಿಕ ಸಂಚಾರ ಮುಂದುವರಿಯಲಿದ್ದು, ಮುಂದಿನ ತಿಂಗಳು ಮತ್ತೆ ನಾಲ್ಕು ನಿಲ್ದಾಣಗಳನ್ನು ಒಳಗೊಳ್ಳಲಿದೆ. ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯ ಅಳವಡಿಕೆ ಜನವರಿ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಫೆಬ್ರವರಿ ಬಳಿಕ ಕಡ್ಡಾಯ ಸುರಕ್ಷತಾ ಪ್ರಮಾಣೀಕರಣ ಪ್ರಕ್ರಿಯೆ ಆರಂಭವಾಗಲಿದೆ. ಒಟ್ಟಾರೆ ಪರೀಕ್ಷೆ ಮತ್ತು ಪ್ರಮಾಣೀಕರಣ ಪ್ರಕ್ರಿಯೆಗೆ ಸುಮಾರು ಎಂಟು ತಿಂಗಳು ಬೇಕಾಗಬಹುದು ಎಂದು ಸಚಿವರು ವಿವರಿಸಿದರು.

ಕೆ.ಆರ್. ಪುರಂ ಮತ್ತು ಹೆಬ್ಬಾಳ ಮೂಲಕ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸುವ 58.2 ಕಿ.ಮೀ. ಉದ್ದದ ಸಂಪೂರ್ಣ ಬ್ಲೂ ಲೈನ್ ಕಾಮಗಾರಿಯನ್ನು ಮುಂದಿನ 18 ತಿಂಗಳಲ್ಲಿ ಪೂರ್ಣಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ. ಈ ಯೋಜನೆಗೆ ಅಂದಾಜು 20,000 ಕೋಟಿ ರೂ. ವೆಚ್ಚವಾಗಲಿದೆ ಎಂದು ಹೇಳಿದರು.

ವಿಶೇಷವಾಗಿ 2ಬಿ ಹಂತದ ಕೆ.ಆರ್. ಪುರಂ-ಹೆಬ್ಬಾಳ ನಡುವಿನ ಕಾಮಗಾರಿಯನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮೆಟ್ರೋ ಯೋಜನೆಗಳಿಗೆ ಹಣಕಾಸಿನ ಕೊರತೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.

Also Read

PM Modi flags off Pink Line Metro | ನಮ್ಮ ಮೆಟ್ರೋ ಪಿಂಕ್ ಲೈನ್ ಗೆ ಮೋದಿ ಚಾಲನೆ; ಕಾಸ್ಮೋಸ್-ಮೈಸೂರು ತಾರಾಲಯ ಉದ್ಘಾಟನೆ

ಮೆಟ್ರೋ ಯೋಜನೆಗಳ ಸಾಲ ಮರುಪಾವತಿಯ ಹೊಣೆ ರಾಜ್ಯ ಸರ್ಕಾರದ ಮೇಲಿದೆ. ಅಲ್ಲದೆ, ಬಿಎಂಆರ್‌ಸಿಎಲ್‌ನ ಕಾರ್ಯಾಚರಣೆಯ ನಷ್ಟವನ್ನು ಭರಿಸಲು ಸರ್ಕಾರ ಆರ್ಥಿಕ ನೆರವು ನೀಡುತ್ತಿದೆ. ಸಾಲ ಪಡೆದ ಸಂದರ್ಭದಲ್ಲಿ ಡಾಲರ್ ಮೌಲ್ಯ ಸುಮಾರು 70ರಿಂದ 80 ರೂ.ಗಳಷ್ಟಿದ್ದರೆ, ಈಗ ಅದು ಸುಮಾರು 100 ರೂ.ಗಳಿಗೆ ಏರಿಕೆಯಾಗಿದೆ.

ಇದರಿಂದ ವಿದೇಶಿ ವಿನಿಮಯ ದರದಲ್ಲಿನ ಏರಿಳಿತ ಸಾಲ ಮರುಪಾವತಿಯ ಹೊರೆ ಹೆಚ್ಚಿಸಿದೆ. ಸಾಲದ ಹೊರೆ ಸುಮಾರು ಶೇ. 30ರಷ್ಟು ಹೆಚ್ಚಾಗಿದೆ. ಅಗತ್ಯಕ್ಕೆ ಅನುಗುಣವಾಗಿ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟು ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಇನ್ನೂ ಅನುಮೋದನೆ ಪಡೆಯದ ಪ್ರಸ್ತಾವಿತ ರೆಡ್ ಲೈನ್ ಮೆಟ್ರೋ ಯೋಜನೆ ಕುರಿತು ಕೇಂದ್ರ ಸರ್ಕಾರದೊಂದಿಗೆ ರಾಜ್ಯವು ಸಕಾರಾತ್ಮಕ ಚರ್ಚೆ ನಡೆಸಿದೆ ಎಂದು ಸಚಿವರು ಹೇಳಿದರು. '

ಸರಜಾಪುರದಿಂದ ಇಬ್ಲೂರು ಜಂಕ್ಷನ್ ಮೂಲಕ ಸೇಂಟ್ ಜಾನ್ಸ್‌ವರೆಗೆ ರಸ್ತೆ ಮತ್ತು ಮೆಟ್ರೋ ಮೂಲಸೌಕರ್ಯವನ್ನು ಒಗ್ಗೂಡಿಸುವ ಎರಡು ಹಂತದ ಮೇಲ್ಸೇತುವೆ ಮಾರ್ಗ ನಿರ್ಮಿಸುವ ಪ್ರಸ್ತಾವನೆಯೂ ಇದೆ. ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ.

ಮೆಟ್ರೋದ ಆರ್ಥಿಕ ಸ್ಥಿತಿಗತಿ ಕುರಿತು ಮಾತನಾಡಿದ ಅವರು, ಟಿಕೆಟ್ ಆದಾಯವು ಕಾರ್ಯಾಚರಣೆಯ ವೆಚ್ಚವನ್ನು ಭರಿಸಲು ಸಾಕಾಗುತ್ತಿಲ್ಲ ಎಂದರು. ಸವಕಳಿ ವೆಚ್ಚವನ್ನೂ ಸೇರಿಸಿದರೆ ಬಿಎಂಆರ್‌ಸಿಎಲ್‌ಗೆ ವಾರ್ಷಿಕ ಸುಮಾರು 700 ಕೋಟಿ ರೂ. ನಷ್ಟವಾಗುತ್ತಿದೆ. ಆದರೆ, ಸವಕಳಿ ವೆಚ್ಚವನ್ನು ಹೊರತುಪಡಿಸಿದರೆ ಸುಮಾರು 60 ಕೋಟಿ ರೂ. ಕಾರ್ಯಾಚರಣಾ ಹೆಚ್ಚುವರಿ ಆದಾಯವಿದೆ ಎಂದು ಅಂದಾಜಿಸಲಾಗಿದೆ. ಬ್ಲೂ ಲೈನ್ ಸಂಚಾರ ಆರಂಭವಾದ ಬಳಿಕ ವೆಚ್ಚ ಹೆಚ್ಚಾಗುವ ನಿರೀಕ್ಷೆಯಿದೆ. ಆದರೆ ಮೆಟ್ರೋ ಪ್ರಯಾಣ ದರ ಏರಿಕೆ ಕುರಿತು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments