

ಬೆಂಗಳೂರು: ಮೆಟ್ರೋ ರೈಲಿನೊಳಗೆ ಮಹಿಳೆಯೊಬ್ಬರು ಮೇಲ್ಭಾಗದ ಕಂಬವನ್ನು ಹಿಡಿದು ಪುಲ್‌ಅಪ್ಸ್ ವ್ಯಾಯಾಮ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಪ್ರಸ್ತುತ ವಿಡಿಯೋ ಮೇಲಿನ ಬರಹಗಳ ಪ್ರಕಾರ ಈ ವಿಡಿಯೋ ಬೆಂಗಳೂರು ಮೆಟ್ರೋ ರೈಲಿನಲ್ಲಿ ನಡೆದಿದೆ ಎಂದು ಹೇಳಲಾಗಿದ್ದು, ವಿಡಿಯೋದಲ್ಲಿ ಕಪ್ಪು ಬಣ್ಣದ ಟಾಪ್ ಮತ್ತು ಜೀನ್ಸ್ ಧರಿಸಿರುವ ಮಹಿಳೆಯೊಬ್ಬರು ಮೆಟ್ರೋ ರೈಲಿನ ಮೇಲ್ಭಾಗದಲ್ಲಿರುವ ಹಿಡಿಕೆಯನ್ನು ಹಿಡಿದು ದೇಹವನ್ನು ಮೇಲಕ್ಕೆ ಎತ್ತುತ್ತಾ ಪುಲ್‌ಅಪ್ಸ್ ಮಾಡುತ್ತಿರುವುದು ಕಂಡುಬಂದಿದೆ.
ಈ ವೇಳೆ ಸುತ್ತಮುತ್ತ ಇತರ ಪ್ರಯಾಣಿಕರು ಮತ್ತು ಮೆಟ್ರೋ ರೈಲಿನ ಒಳಭಾಗವೂ ಕಾಣಿಸುತ್ತದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ಕೆಲವರು ಮಹಿಳೆಯ ದೈಹಿಕ ಸಾಮರ್ಥ್ಯ ಮತ್ತು ಆತ್ಮವಿಶ್ವಾಸವನ್ನು ಮೆಚ್ಚಿಕೊಂಡಿದ್ದರೆ, ಇನ್ನು ಕೆಲವರು ಸಾರ್ವಜನಿಕ ಸಾರಿಗೆಯಲ್ಲಿ ಇಂತಹ ಚಟುವಟಿಕೆ ನಡೆಸುವುದು ಸೂಕ್ತವೇ ಎಂದು ಪ್ರಶ್ನಿಸಿದ್ದಾರೆ.
ಆತ್ಮವಿಶ್ವಾಸವೋ, ಸಾರ್ವಜನಿಕ ಶಿಷ್ಟಾಚಾರದ ಉಲ್ಲಂಘನೆಯೋ?
ಮಹಿಳೆಯರ ಸ್ವಾತಂತ್ರ್ಯ ಮತ್ತು ದೈಹಿಕ ಸಾಮರ್ಥ್ಯವನ್ನು ವ್ಯಕ್ತಪಡಿಸುವ ದೃಷ್ಟಿಯಿಂದ ಈ ಕಸರತ್ತನ್ನು ನೋಡಬೇಕು ಎಂಬುದು ಕೆಲವರ ಅಭಿಪ್ರಾಯ. ಸಾಂಪ್ರದಾಯಿಕ ನಿರೀಕ್ಷೆಗಳನ್ನು ಮೀರಿ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವುದರಲ್ಲಿ ತಪ್ಪೇನಿಲ್ಲ ಎಂದು ಕೆಲವರು ವಾದಿಸಿದ್ದಾರೆ.
ಆದರೆ, ಮೆಟ್ರೋ ರೈಲು ಮುಖ್ಯವಾಗಿ ಪ್ರಯಾಣಕ್ಕಾಗಿ ಇರುವ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಿದ್ದು, ವ್ಯಾಯಾಮ ಮಾಡುವ ಸ್ಥಳವಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಚಲಿಸುವ ರೈಲಿನಲ್ಲಿ ಇಂತಹ ಕಸರತ್ತು ಮಾಡುವುದರಿಂದ ಸುರಕ್ಷತೆಗೆ ತೊಂದರೆಯಾಗಬಹುದೇ ಅಥವಾ ಇತರ ಪ್ರಯಾಣಿಕರಿಗೆ ಅಡಚಣೆ ಉಂಟಾಗಬಹುದೇ ಎಂದೂ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಈ ವೈರಲ್ ವಿಡಿಯೋ ಸತ್ಯಾಸತ್ಯತೆ ಕುರಿತು ಈ ವರೆಗೂ ಬಿಎಂಆರ್ ಸಿಎಲ್ ಮಾಹಿತಿ ನೀಡಿಲ್ಲ.