ಜಮೀನು ಬಿಟ್ಟುಕೊಡದ ಅನ್ನದಾತರ ಮೇಲೆ ಖಾಸಗಿ ಕಂಪನಿಯ ದಬ್ಬಾಳಿಕೆ! ಜಿಲ್ಲಾಧಿಕಾರಿಗಳ ಬದಲು ಭೂಸ್ವಾಧೀನ ಪ್ರಕ್ರಿಯೆಗೆ ಮುಂದಾದ ಪೊಲೀಸರಿಂದ, ರೈತರ ಮೇಲೆ FIR
ಕೊಪ್ಪಳ ಜಿಲ್ಲೆಯಲ್ಲಿ ಖಾಸಗಿ ಸೋಲಾರ್ ಕಂಪನಿಗೆ ಜಮೀನು ನೀಡಲು ನಿರಾಕರಿಸಿದ 8 ಮಂದಿ ರೈತರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಆ ಕುರಿತ ವರದಿ ಇಲ್ಲಿದೆ:
ಮಂಗಳೂರು (ಕೊಪ್ಪಳ): ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರು ಗ್ರಾಮದಲ್ಲಿ ಖಾಸಗಿ ಸೋಲಾರ್ ಕಂಪನಿಗೆ (ಟೊರೆಂಟ್ ಸೋಲಾರ್ ಪ್ರೈವೇಟ್ ಲಿಮಿಟೆಡ್) ಜಮೀನು ಬಿಟ್ಟುಕೊಡಲು ನಿರಾಕರಿಸಿದ 8 ಮಂದಿ ರೈತರ ವಿರುದ್ಧ ಬೇವೂರು ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ರೈತ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ವಿವಾದ?
ಟೊರೆಂಟ್ ಸೋಲಾರ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ವಿದ್ಯುತ್ ಕಂಬಗಳನ್ನು ಅಳವಡಿಸುವ ಸಲುವಾಗಿ ರೈತರ ಒಪ್ಪಿಗೆ ಪಡೆಯದೆಯೇ ಜಮೀನಿನಲ್ಲಿ ಕಾಮಗಾರಿ ನಡೆಸಲು ಮುಂದಾಗಿತ್ತು. ಆದರೆ, ಇದನ್ನು ವಿರೋಧಿಸಿದ ರೈತರು, ತಾವು ಜಮೀನು ಬಿಟ್ಟುಕೊಡುವುದಿಲ್ಲ ಮತ್ತು ಕಾನೂನುಬದ್ಧವಾಗಿ ಜಿಲ್ಲಾಧಿಕಾರಿಗಳೇ ನೋಟಿಸ್ ನೀಡಲಿ ಎಂದು ಪಟ್ಟು ಹಿಡಿದಿದ್ದರು. ಈ ಸಂಬಂಧ ಬೇವೂರು ಪೊಲೀಸ್ ಠಾಣೆಯ ಪಿಎಸ್‌ಐ ಖಾಸಗಿ ಕಂಪನಿಯ ಪರವಾಗಿ ರೈತರಿಗೆ ನೋಟಿಸ್ ನೀಡಿ, ಜಮೀನು ನೀಡದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಅಲ್ಲದೆ, ಕಾಮಗಾರಿಗೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ 8 ಮಂದಿ ರೈತರ ವಿರುದ್ಧ ಬೇವೂರು ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ರೈತರ ಆಕ್ರೋಶ
ಮುಂದುವರೆದು, ಭೂಸ್ವಾಧೀನ ಪ್ರಕ್ರಿಯೆಯನ್ನು ಕಂದಾಯ ಇಲಾಖೆ ಅಥವಾ ಜಿಲ್ಲಾಧಿಕಾರಿಗಳ ಮೂಲಕ ನಡೆಸುವ ಬದಲು, ಪೊಲೀಸರೇ ಖಾಸಗಿ ಕಂಪನಿಯ ಏಜೆಂಟರಂತೆ ವರ್ತಿಸಿ ಬೆದರಿಕೆ ಹಾಕುತ್ತಿದ್ದಾರೆ ಎಂದು ರೈತರು ಕಿಡಿಕಾರಿದ್ದಾರೆ. ಕಂಪನಿಯ ದೌರ್ಜನ್ಯಕ್ಕೆ ಬೇಸತ್ತ ಕೆಲವು ರೈತರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಎಚ್ಚರಿಕೆ ನೀಡಿದ್ದರು. ಏತನ್ಮಧ್ಯೆ, ರೈತರ ಮೇಲೆ ಕೇಸ್ ದಾಖಲಿಸಿರುವ ವಿಚಾರ ತಿಳಿಯುತ್ತಿದ್ದಂತೆ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅಧಿಕಾರಿಗಳು ಮತ್ತು ಪೊಲೀಸರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಂಪನಿಯ ದಬ್ಬಾಳಿಕೆ ಮತ್ತು ಪೊಲೀಸರ ನಡೆಯ ಬಗ್ಗೆ ತಕ್ಷಣವೇ ಗಮನಹರಿಸಿ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಸಚಿವರು ತಿಳಿಸಿದ್ದಾರೆ.