ತುಮಕೂರು: ನೈಸ್ ರಸ್ತೆ ಯೋಜನೆಗೆ ಸಿದ್ದಗಂಗಾ ಮಠದ ಜಮೀನು ನೀಡಿರುವ ಸಂಬಂಧ ಹಾಗೂ ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿ ಅವರ ಹೇಳಿಕೆಗಳಿಗೆ ಸಂಬಂಧಿಸಿದಂತೆ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ನಾವು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಹೋಗಿರೋದು ಸತ್ಯ. ನಮಗೆ ಬಿಡಿಎನಲ್ಲಿ ಕೆಲಸ ಆಗಬೇಕಿತ್ತು. ಎರಡರಿಂದ ಮೂರು ವಿಚಾರಗಳಲ್ಲಿ ಅವರನ್ನು ಖುದ್ದಾಗಿ ಭೇಟಿ ಮಾಡಿದ್ದೆವು. ಆ ವಿಚಾರಗಳು ಸಂಪುಟ (ಕ್ಯಾಬಿನೆಟ್) ಸಭೆಗೆ ಹೋಗಬೇಕಿದ್ದ ಕಾರಣ ಅವರ ಬಳಿ ತೆರಳಿದ್ದೆವು.
ಭೇಟಿಯಾದ ನಿಖರ ದಿನಾಂಕ ನೆನಪಿಲ್ಲ, ಸಿದ್ದರಾಮಯ್ಯನವರು ಸಿಎಂ ಆದ ಮೇಲೆಯೇ, ಸುಮಾರು ಒಂದೂವರೆ ತಿಂಗಳ ಹಿಂದೆ ಭೇಟಿಯಾಗಿದ್ದೆವು. ನಾನು ಬರ್ತೀನಿ ಅಂತ ಅವರ ಸಿಬ್ಬಂದಿ ಅವರಿಗೆ ಸರಿಯಾಗಿ ಮಾಹಿತಿ ನೀಡಿರಲಿಲ್ಲ. ಮಠದಿಂದ ಬೇರೆ ಯಾರೋ ಬರ್ತಾರೆ ಅಂತ ಅವರು ತಿಳಿದುಕೊಂಡಿದ್ದರು.
ಆದರೆ, ನೀವು ಅರ್ಜಿ ಕೊಡಲು ಬರಬೇಡಿ, ಆಶೀರ್ವಾದ ಮಾಡಲು ಬನ್ನಿ, ಕರೆದರೆ ನಾನೇ ಬರ್ತೀನಿ ಎಂದು ಅತ್ಯಂತ ಸಂಸ್ಕಾರದ ಮಾತನ್ನು ಹೇಳಿದರು. ನಮಗೆ ಅನಿವಾರ್ಯ ಪರಿಸ್ಥಿತಿ ಇತ್ತು. ನಮ್ಮ ಸಮಸ್ಯೆಯನ್ನು ಮಧ್ಯದಲ್ಲಿ ಯಾರಿಗೂ ಹೇಳದೆ ನೇರವಾಗಿ ಹೇಳುವುದು ಒಳ್ಳೆಯದು ಎಂದು ತೆರಳಿದ್ದೆವು. ರೈತರು ಕೂಡ ಬಹಳ ಒತ್ತಾಯ ಮಾಡುತ್ತಿದ್ದರಿಂದ ಅನಿವಾರ್ಯವಾಗಿ ಹೋಗಬೇಕಾಯಿತು ಎಂದು ಶ್ರೀಗಳು ವಿವರಿಸಿದರು.
ನೈಸ್ ರಸ್ತೆಗೆ ನಮ್ಮ ಆಕ್ಷೇಪವಿಲ್ಲ. ಆದರೆ ನೈಸ್ ರಸ್ತೆ ಹೆಸರಲ್ಲಿ ಹೆಚ್ಚುವರಿಯಾಗಿ ಜಮೀನು ತೆಗೆದುಕೊಂಡಿದ್ದಾರೆ. ರಸ್ತೆ ಆದ್ಮೇಲೆ ಟೋಲ್ ಬಳಸುತ್ತಿದ್ದಾರೆ, ಆದರೆ ಜಾಗ ಹಾಗೇ ಉಳಿದುಕೊಂಡಿದೆ. ಹೀಗಾಗಿ ಉಳಿದ ಜಮೀನು ವಾಪಸ್ ಕೊಡಿ ಎಂದು ರೈತರು ಒತ್ತಾಯ ಮಾಡುತ್ತಿದ್ದಾರೆ. ನಮ್ಮ ಜೊತೆಗೆ ಜಮೀನು ಕೊಟ್ಟಂತಹ ರೈತರು ಬಹಳ ಜನರಿದ್ದಾರೆ.
2001-2002ರಲ್ಲಿ ಖೇಣಿಯವರೇ ಮಠಕ್ಕೆ ಬಂದಿದ್ದರು. ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅವರನ್ನು ಒಪ್ಪಿಸಿದ್ದರು. ಸೋಂಪುರದಲ್ಲಿ ಮಠಕ್ಕೆ ಸೇರಿದ 7 ಎಕರೆ 39 ಗುಂಟೆ ಜಮೀನಿತ್ತು, ಅದನ್ನು ಭಕ್ತರೊಬ್ಬರು ದಾನವಾಗಿ ನೀಡಿದ್ದರು. ಆ ಜಮೀನು ಹಾಗೆಯೇ ಇತ್ತು. ರಸ್ತೆಗೆ ಬೇಕಿದೆ ಕೊಡಿ ಎಂದು ಅವರು ಕೇಳಿದ್ದರು ಎಂದರು.
ಅಶೋಕ್ ಖೇಣಿ ಪೂಜ್ಯರಿಗೆ ಒಂದು ಭರವಸೆ ನೀಡಿದ್ದರು. ಪತ್ರದಲ್ಲಿ ಬರೆದುಕೊಟ್ಟು ಸೈಟ್ ನೀಡುವುದಾಗಿ ಹೇಳಿದ್ದರು. ಜೊತೆಗೆ ಮಠಕ್ಕೆ ನಿಶ್ಚಿತ ಆದಾಯ ಬರುವಂತೆ ಮಾಡಿಕೊಡ್ತೀನಿ ಎಂದು ಭರವಸೆ ನೀಡಿದ್ದರು. ಆದರೆ ಅದ್ಯಾವುದೂ ಈಡೇರಿಲ್ಲ. ಕಳೆದ 8 ವರ್ಷಗಳಿಂದ ಅವರನ್ನು ಸಂಪರ್ಕ ಮಾಡಲು ಸತತ ಪ್ರಯತ್ನ ಮಾಡುತ್ತಿದ್ದೇವೆ, ಅದ್ಯಾವುದೂ ಆಗಿಲ್ಲ.
ಅವರಿಗೆ ಪತ್ರ ಬರೆದರೂ ಉತ್ತರ ನೀಡಿಲ್ಲ. ಈಗ ರೈತರು ಮಠದವರೇ ಕೊಟ್ಟಿದ್ದಾರೆ, ನಮ್ಮದೇನು? ಎಂದು ಜಮೀನು ನೀಡಿದ್ದೆವು, ನೀವು ಬನ್ನಿ ಎಂದು ಒತ್ತಾಯ ಮಾಡಿದರು. ಸಿಎಂ ಭೇಟಿ ಮಾಡೋಣ ಎಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ಹೋಗಿದ್ದೆವು. ರಸ್ತೆಗೆ ಬಳಸಿಕೊಂಡಿರುವುದನ್ನು ಬಿಟ್ಟು ಉಳಿಕೆ ಜಮೀನನ್ನು ರೈತರಿಗೆ ವಾಪಸ್ ಕೊಡಿ ಎಂದು ಕೇಳಿದ್ದೇವೆ. ಅದೇನು ತೀರ್ಮಾನ ಮಾಡ್ತಾರೋ ಗೊತ್ತಿಲ್ಲ, ಅದನ್ನು ಬಿಟ್ಟು ಬೇರೆ ವಿಚಾರವಿಲ್ಲ ಎಂದು ಸ್ಪಷ್ಟಪಡಿಸಿದರು.
ಸೋಂಪುರ ಅಕ್ಕಪಕ್ಕದಲ್ಲಿ ಜಮೀನಿದೆ. ಇದರಲ್ಲಿ ಎರಡು ಎಕರೆ ಮಾತ್ರ ರಸ್ತೆಗೆ ಬಳಸಿಕೊಂಡಿದ್ದಾರೆ, ಉಳಿದ 6 ಎಕರೆ ಜಮೀನು ಹಾಗೆಯೇ ಇದೆ. ನಮ್ಮದು 6 ಎಕರೆ ಇದ್ದರೆ, ರೈತರದ್ದು ಬೇರೆ ಬೇರೆ ಪ್ರಮಾಣದಲ್ಲಿದೆ. ಸ್ವಾಧೀನ ಮಾಡಿಕೊಂಡ ಜಮೀನನ್ನು 25 ವರ್ಷಗಳಲ್ಲಿ ಬಳಸಿಕೊಳ್ಳದೆ ಇದ್ದರೆ ವಾಪಸ್ ಕೊಡುವಂತೆ ಸುಪ್ರೀಂ ಕೋರ್ಟ್ ಆದೇಶವಿದೆಯಂತೆ. ಹಾಗಾಗಿ ಜಮೀನು ವಾಪಸ್ ನೀಡುವಂತೆ ಕೇಳಿಕೊಂಡಿದ್ದೇವೆ ಎಂದು ನುಡಿದರು.
ಚಿನ್ನದ ಕರಡಿಗೆ ಕಾಣಿಕೆ ಸುಳ್ಳು: ಸತ್ಯಕ್ಕೆ ದೂರವಾದ ಮಾತು
ಶಿವಕುಮಾರ ಸ್ವಾಮೀಜಿಗೆ ಚಿನ್ನದ ಕರಡಿಗೆ ನೀಡಿದ ವಿಚಾರವಾಗಿ ಸ್ಪಷ್ಟನೆ ನೀಡಿದರು. ಅಶೋಕ್ ಖೇಣಿ ಚಿನ್ನದ ಕರಡಿಗೆ ಕೊಟ್ಟಿಲ್ಲ. ಮಾಹಿತಿನೂ ಇಲ್ಲ, ದಾಖಲೆನೂ ಇಲ್ಲ, ನಮಗ್ಯಾರಿಗೂ ಗೊತ್ತಿಲ್ಲ. ಸ್ಚಾಮೀಜಿಗೆ ಬಹಳ ವರ್ಷಗಳ ಹಿಂದೆ ಹುಲಿಕುಂಟೆ ಸೋಮಣ್ಣ ಎಂಬುವರು ಚಿನ್ನದ ಕರಡಿಗೆ ನೀಡಿದ್ದರು. ಅವರು ಬಂದು ಮೂರ್ನಾಲ್ಕು ತಿಂಗಳು ಬಂದು ಕಾಡಿ ಬೇಡಿದ್ದರು.
ಪೂಜ್ಯರು ಅದೆಲ್ಲಾ ಬೇಡ ಅಂತ ಹೇಳುತ್ತಿದ್ದರು, ಅದರ ಬದಲು ಹುಡುಗರಿಗೆ ಎರಡು ರೂಮ್ ಕಟ್ಟಿಸಿಕೊಡಿ ಅಂದಿದ್ದರಂತೆ. ಆದರೂ ಅವರ ಕುಟುಂಬದವರು ಒತ್ತಾಯ ಮಾಡಿದ್ದರು. ನೀವು ಹಾಕಿಕೊಂಡಿರೋದನ್ನ ನಾವು ನೋಡಬೇಕು ಅಂತ ಒತ್ತಾಯ ಮಾಡಿ ಹಾಕಿದ್ದರು. ಕೊನೆ ತನಕ ಸ್ವಾಮೀಜಿ ಅದನ್ನ ಹಾಕಿಕೊಂಡಿದ್ದರು. ಆ ಕರಡಿಗೆ ನಮ್ಮಲ್ಲಿ ಹಾಗೇ ಇದೆ, ಅಷ್ಟು ಬಿಟ್ಟರೆ ಖೇಣಿ ಹೇಳಿದ್ದಂತೆ ಅವರು ಕೊಟ್ಟಿರೊದು ದಾಖಲೆ ಇಲ್ಲ. ಅದು ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದರು.
ಅಶೋಕ್ ಖೇಣಿ ಅವರು ಶ್ರೀ ಶಿವಕುಮಾರ ಸ್ವಾಮೀಜಿಗೆ ಚಿನ್ನದ ಕರಡಿಗೆ ಕಾಣಿಕೆ ನೀಡಿದ್ದರು ಎಂಬ ವಿಚಾರಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ಶ್ರೀಗಳು, ಅದೆಲ್ಲ ಸತ್ಯಕ್ಕೆ ದೂರವಾದ ಮಾತು. ಆ ಸಂದರ್ಭದಲ್ಲಿ (2001-02) ಬಂದಿದ್ದು ಬಿಟ್ಟರೆ ಅವರು ಮಠಕ್ಕೆ ಇನ್ಯಾವತ್ತೂ ಬಂದಿಲ್ಲ. ಅವರು ಕೊಟ್ಟಂತಹ ಯಾವುದೇ ದಾಖಲೆ ಇಲ್ಲ. ಸುಮ್ಮನೆ ಉತ್ಪ್ರೇಕ್ಷೆಯಾಗಿ ಪ್ರಚಾರಕ್ಕಾಗಿ ಇದನ್ನು ಬಳಸಿಕೊಂಡಿದ್ದಾರೆ.
ಸ್ವಾಮೀಜಿ ಲಿಂಗೈಕ್ಯರಾದಾಗ ಆ ಮನುಷ್ಯ ಇಲ್ಲಿಗೆ ಬಂದೇ ಇಲ್ಲ, ಇಲ್ಲಿ ಇರಲೇ ಇಲ್ಲ. ಹಾಗಿರುವಾಗ ಆ ರೀತಿ ಉದ್ಭವವಾಗುವುದಕ್ಕೆ ಸಾಧ್ಯವೇ ಇಲ್ಲ ಎಂದು ತಳ್ಳಿಹಾಕಿದರು. ಇಲ್ಲದ ವಿಚಾರವನ್ನು ಮಾತನಾಡಿರುವುದು ನಮಗೆ ಬಹಳ ಬೇಸರ ತಂದಿದೆ. ಭಕ್ತರಿಗಷ್ಟೇ ಅಲ್ಲ, ನಮಗೂ ತುಂಬಾ ನೋವಾಗಿದೆ ಈ ಬಗ್ಗೆ ಮಠದಿಂದ ಈಗಾಗಲೇ ಅಧಿಕೃತ ಪ್ರಕಟಣೆ ನೀಡಲಾಗಿದ್ದು, ಅವರು ಏನೇನು ಮಾತನಾಡಿದ್ದಾರೋ ಅದಕ್ಕೆಲ್ಲ ಸೂಕ್ತ ಪ್ರತಿಕ್ರಿಯೆ ಕೊಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದರು.