ಗೃಹ ಲಕ್ಷ್ಣಿ ಯೋಜನೆ 
ರಾಜ್ಯ

ಬಾಕಿ ಸಾಲ ವಸೂಲಿಗೆ 'ಗೃಹಲಕ್ಷ್ಮಿ' ಯೋಜನೆಯ ಹಣ ಕಡಿತಗೊಳಿಸದಂತೆ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಸರ್ಕಾರ!

ಸಾಲ ಮರುಪಾವತಿಗಾಗಿ ಬ್ಯಾಂಕ್‌ಗಳು ಗೃಹಲಕ್ಷ್ಮಿ ಯೋಜನೆಯಡಿ ನೀಡಲಾದ ಸಹಾಯಧನವನ್ನು ಕಡಿತಗೊಳಿಸುತ್ತಿವೆ ಎಂಬ ಮಹಿಳಾ ಫಲಾನುಭವಿಗಳ ದೂರುಗಳನ್ನು ಗಮನಕ್ಕೆ ಬಂದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರು: 'ಗೃಹಲಕ್ಷ್ಮಿ' ಯೋಜನೆಯಡಿ ಮಹಿಳೆಯರಿಗೆ ನೀಡಲಾಗುವ ಮಾಸಿಕ 2,000 ರೂಪಾಯಿಗಳ ಸಹಾಯಧನವನ್ನು ಬಾಕಿ ಇರುವ ಸಾಲದ ಕಂತುಗಳು, ಬಡ್ಡಿ ಅಥವಾ ಇತರೆ ಬಾಕಿ ಮೊತ್ತಗಳಿಗೆ ಹೊಂದಾಣಿಕೆ ಮಾಡಿಕೊಳ್ಳದಂತೆ ಕರ್ನಾಟಕ ಸರ್ಕಾರ ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ. ಅಲ್ಲದೆ, ಫಲಾನುಭವಿಗಳ ಲಿಖಿತ ಒಪ್ಪಿಗೆಯಿಲ್ಲದೆ ಕಡಿತಗೊಳಿಸಲಾದ ಹಣವನ್ನು ತಕ್ಷಣವೇ ಮರುಪಾವತಿಸುವಂತೆಯೂ ಆದೇಶಿಸಿದೆ.

ಎಲ್ಲ ವಾಣಿಜ್ಯ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ಈ ನಿರ್ದೇಶನಗಳನ್ನು ಪಾಲಿಸುವುದನ್ನು ಖಚಿತಪಡಿಸಿಕೊಳ್ಳುವಂತೆ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಉಮಾ ಮಹಾದೇವನ್ ಅವರು ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿಯ (SLBC) ಸಂಚಾಲಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸಾಲ ಮರುಪಾವತಿಗಾಗಿ ಬ್ಯಾಂಕ್‌ಗಳು ಗೃಹಲಕ್ಷ್ಮಿ ಯೋಜನೆಯಡಿ ನೀಡಲಾದ ಸಹಾಯಧನವನ್ನು ಕಡಿತಗೊಳಿಸುತ್ತಿವೆ ಎಂಬ ಮಹಿಳಾ ಫಲಾನುಭವಿಗಳ ದೂರುಗಳನ್ನು ಗಮನಕ್ಕೆ ತಂದ ನಂತರ, ವಿಧಾನ ಪರಿಷತ್ ಸದಸ್ಯ ಹಾಗೂ 'ಖಾತರಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದರು; ಈ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಮುಖ್ಯಮಂತ್ರಿ ನಿರ್ದೇಶನದ ಮೇರೆಗೆ, ಈ ಯೋಜನೆಯಡಿ ಜಮೆಯಾಗುವ ಹಣವನ್ನು ಸಾಲದ ಬಾಕಿಗಾಗಿ ಸ್ವಯಂಚಾಲಿತವಾಗಿ ಡೆಬಿಟ್ ಮಾಡದಂತೆ ಅಥವಾ ಹೊಂದಾಣಿಕೆ ಮಾಡದಂತೆ ನೋಡಿಕೊಳ್ಳಲು ಹಾಗೂ ಈ ಕುರಿತು ಎಲ್ಲ ಬ್ಯಾಂಕ್‌ಗಳಿಗೆ ಸುತ್ತೋಲೆ ಹೊರಡಿಸಲು ರಾಜ್ಯ ಸರ್ಕಾರ ರಾಜ್ಯ ಮಟ್ಟದ ಬ್ಯಾಂಕರ್ಸ್ ಸಮಿತಿ (SLBC) ಸಂಚಾಲಕರಿಗೆ ಸೂಚಿಸಿದೆ. ಅಲ್ಲದೆ, ಇಂತಹ ಕಡಿತಗಳನ್ನು ತಡೆಯಲು ಅಗತ್ಯ ತಾಂತ್ರಿಕ ಕ್ರಮಗಳನ್ನು ಕೈಗೊಳ್ಳುವಂತೆಯೂ ಮತ್ತು ಶಾಖಾ ಮಟ್ಟದ ಸಿಬ್ಬಂದಿಗೆ ಸ್ಪಷ್ಟ ಸೂಚನೆಗಳನ್ನು ನೀಡುವಂತೆಯೂ ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ.

ಫಲಾನುಭವಿಗಳ ಸ್ಪಷ್ಟ ಲಿಖಿತ ಒಪ್ಪಿಗೆಯಿಲ್ಲದೆ ಸಾಲದ ಬಾಕಿಗಾಗಿ ಈಗಾಗಲೇ ಕಡಿತಗೊಳಿಸಲಾದ ಹಣವನ್ನು ಮರುಜಮೆ (re-credit) ಮಾಡುವಂತೆ ರಾಜ್ಯ ಸರ್ಕಾರ ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ. ಈ ಸಂಬಂಧ ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೂ ನಿರ್ದೇಶನ ಹೊರಡಿಸಲಾಗಿದೆ.

ಎಲ್ಲ ಹಣಕಾಸು ಸಂಸ್ಥೆಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ಕೈಗೊಂಡ ಕ್ರಮಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಎಸ್‌ಎಲ್‌ಬಿಸಿ ಸಂಚಾಲಕರಿಗೆ ಸೂಚಿಸಲಾಗಿದೆ. ಈ ಸಂವಹನದ ಪ್ರತಿಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕಳುಹಿಸಲಾಗಿದೆ.

ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿಯಲ್ಲಿ, ಮಹಿಳೆಯರ ಕೌಟುಂಬಿಕ ವೆಚ್ಚಗಳು, ಮಕ್ಕಳ ಶಿಕ್ಷಣ ಮತ್ತು ಆರ್ಥಿಕ ಸ್ವಾತಂತ್ರ್ಯಕ್ಕೆ ಬೆಂಬಲ ನೀಡುವ ಈ ಯೋಜನೆಯ ಮೂಲ ಉದ್ದೇಶಕ್ಕೆ, ಬ್ಯಾಂಕುಗಳು ಮತ್ತು ಸೂಕ್ಷ್ಮ ಹಣಕಾಸು ಸಂಸ್ಥೆಗಳು ನಡೆಸುವ ಹಣದ ಕಡಿತಗಳು ಅಡ್ಡಿಯಾಗುತ್ತಿವೆ ಎಂದು ಗೂಳಿಗೌಡ ಅವರು ಪ್ರತಿಪಾದಿಸಿದ್ದರು.

ಅಲ್ಲದೆ, ಫಲಾನುಭವಿಗಳಿಗೆ ಬೆದರಿಕೆ ಹಾಕುವುದು ಸೇರಿದಂತೆ ಬಲವಂತದ ಸಾಲ ವಸೂಲಾತಿ ಕ್ರಮಗಳನ್ನು ಅನುಸರಿಸುತ್ತಿರುವ ಖಾಸಗಿ ಹಣಕಾಸು ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಅವರು ಕೋರಿದ್ದರು. ಅನಧಿಕೃತ ಕಡಿತಗಳನ್ನು ಮರುಪಾವತಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ ಅವರು, ಈ ಕುರಿತ ದೂರುಗಳ ಮೇಲೆ ನಿಗಾ ವಹಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸುವಂತೆಯೂ ಮನವಿ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CEC ಜ್ಞಾನೇಶ್ ಕುಮಾರ್ ವಜಾಕ್ಕೆ ಆಗ್ರಹಿಸಿ CJP ಪ್ರತಿಭಟನೆ: ದೆಹಲಿಯಲ್ಲಿ ಬಂಧನ ಪ್ರಕ್ರಿಯೆ ಆರಂಭ, ತೀವ್ರ ಭದ್ರತೆ; Video

ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ನಿರಾಳ; ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸುವ ನಿರ್ಧಾರ ರದ್ದು!

'ನ್ಯಾಯಾಂಗ ತನಿಖೆಗೆ ಒಪ್ಪಿಸಿ, ₹1 ಕೋಟಿ ಪರಿಹಾರ ನೀಡಿ': ಹನೂರು ಶೂಟೌಟ್ ಪ್ರಕರಣದ ಮಹಿಮಾ ದಾಸ್ ಸೇರಿ ಸಂತ್ರಸ್ತರ ಆಗ್ರಹ

ದೇವನಹಳ್ಳಿ ತಹಸೀಲ್ದಾರ್ ಕಚೇರಿಗೆ ದಿಢೀರ್ ಭೇಟಿ; ಕಂದಾಯ ಅಧಿಕಾರಿಯನ್ನು ಅಮಾನತುಗೊಳಿಸಿದ DCM ಜಿ ಪರಮೇಶ್ವರ

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ