ಬೆಂಗಳೂರು: ಘನತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ನಗರ ಪಾಲಿಕೆಗಳು ಕ್ರಮ ಮುಂದುವರಿಸಿವೆ.
ತ್ಯಾಜ್ಯವನ್ನು ವಿಂಗಡಿಸದೆ ವಿಲೇವಾರಿ ಮಾಡಿದ ಕಾರಣಕ್ಕೆ ಆನ್‌ಲೈನ್ ವಿತರಣಾ ವೇದಿಕೆಗಳಾದ ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮತ್ತು ಜೆಪ್ಟೊಗೆ ಬೆಂಗಳೂರು ಪೂರ್ವ ನಗರ ಪಾಲಿಕೆ (BECC) ಸೋಮವಾರ ತಲಾ 5,000 ರೂ. ದಂಡ ವಿಧಿಸಿದೆ.
ದೊಡ್ಡನೆಕುಂದಿ ವಿಭಾಗದ ಪ್ರಿಯದರ್ಶಿನಿ ವಾರ್ಡ್‌ನ ಮಾರುತಿ ಲೇಔಟ್‌ನಲ್ಲಿ ತ್ಯಾಜ್ಯ ವಿಂಗಡಣೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸ್ವಿಗ್ಗಿ ಇನ್‌ಸ್ಟಾಮಾರ್ಟ್‌ಗೆ 5,000 ರೂ. ದಂಡ ವಿಧಿಸಲಾಗಿದೆ ಎಂದು ಬೆಂಗಳೂರು ಪೂರ್ವ ನಗರ ಪಾಲಿಕೆ ತಿಳಿಸಿದೆ.
ಇದೇ ವಿಭಾಗದಲ್ಲಿ ತ್ಯಾಜ್ಯವನ್ನು ಉತ್ಪತ್ತಿಯಾದ ಸ್ಥಳದಲ್ಲೇ ವಿಂಗಡಿಸದೆ, ಎಲ್ಲೆಂದರಲ್ಲಿ ವಿಲೇವಾರಿ ಮಾಡಿದ ಕಾರಣಕ್ಕೆ ಜೆಪ್ಟೊಗೂ 5,000 ರೂ. ದಂಡ ವಿಧಿಸಲಾಗಿದೆ.
ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಆರೋಗ್ಯ ಮೇಲ್ವಿಚಾರಕರು ಮತ್ತು ಅವರ ತಂಡವು ತ್ಯಾಜ್ಯ ವಿಂಗಡಣೆ ಹಾಗೂ ಸೂಕ್ತ ವಿಲೇವಾರಿ ನಿಯಮಗಳನ್ನು ಪಾಲಿಸದಿರುವುದನ್ನು ಪತ್ತೆಹಚ್ಚಿದೆ. ಹೀಗಾಗಿ, ಘನತ್ಯಾಜ್ಯ ನಿರ್ವಹಣಾ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ” ಎಂದು ಪಾಲಿಕೆ ತಿಳಿಸಿದೆ.
ಇದಕ್ಕೂ ಮೊದಲು ಅಕ್ಟೋಬರ್ 10ರಂದು ವಿಜಿನಾಪುರದಲ್ಲಿ ತ್ಯಾಜ್ಯ ವಿಂಗಡಣೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಜೆಪ್ಟೊಗೆ 15,000 ರೂ. ದಂಡ ವಿಧಿಸಲಾಗಿತ್ತು.
ಇನ್ನು ಕೆ.ಆರ್. ಮಾರುಕಟ್ಟೆ ಪ್ರದೇಶದಲ್ಲಿ ಘನತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಬೆಂಗಳೂರು ಕೇಂದ್ರ ನಗರ ಪಾಲಿಕೆ (BCCC) ಒಟ್ಟು 2,200 ರೂ. ದಂಡ ವಿಧಿಸಿದೆ. ಬಾಣಸವಾಡಿಯಲ್ಲಿ ಅಕ್ರಮವಾಗಿ ಪ್ರಾಣಿಗಳ ತ್ಯಾಜ್ಯ ಸಾಗಿಸುತ್ತಿದ್ದ ವಾಹನದ ಮಾಲೀಕರಿಗೆ ಬೆಂಗಳೂರು ಉತ್ತರ ನಗರ ಪಾಲಿಕೆ (BNCC) 30,000 ರೂ. ದಂಡ ವಿಧಿಸಿದೆ.
ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ವಾಹನ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಬೆಂಗಳೂರು ಉತ್ತರ ನಗರ ಪಾಲಿಕೆ ತಿಳಿಸಿದೆ.