ವಿಧಾನಸೌಧದಲ್ಲಿ ನಡೆದ ಕರ್ನಾಟಕ ಪ್ರಾದೇಶಿಕ ನಗರೀಕರಣ ಯೋಜನೆ 2047 ಬಿಡುಗಡೆ ಸಂದರ್ಭದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಮತ್ತು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ. 
ರಾಜ್ಯ

2047ರ ವೇಳೆಗೆ ಕರ್ನಾಟಕದ ನಗರವಾಸಿಗಳ ಪ್ರಮಾಣ ಶೇ.70ಕ್ಕೆ ಏರಿಕೆ: ಸಿಎಂ ಡಿಕೆ ಶಿವಕುಮಾರ್

ಕರ್ನಾಟಕ ಪ್ರಾದೇಶಿಕ ನಗರೀಕರಣ ಯೋಜನೆ-2047 ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜ್ಯದ ಆರ್ಥಿಕ ಬೆಳವಣಿಗೆಯ ಸಂಪೂರ್ಣ ಹೊಣೆಯನ್ನು ಬೆಂಗಳೂರು ಒಂದೇ ಹೊರಲು ಸಾಧ್ಯವಿಲ್ಲ.

ಬೆಂಗಳೂರು: ಕರ್ನಾಟಕದ ನಗರ ಪ್ರದೇಶಗಳಲ್ಲಿ ವಾಸಿಸುವ ಜನರ ಪ್ರಮಾಣ ಪ್ರಸ್ತುತ ಶೇ.46ರಷ್ಟಿದ್ದು, 2047ರ ವೇಳೆಗೆ ಇದು ಶೇ.70ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ.

ಇದಕ್ಕೆ ಅನುಗುಣವಾಗಿ ರಾಜ್ಯದ ಎಲ್ಲ ನಗರಗಳಲ್ಲೂ ಯೋಜಿತ ಅಭಿವೃದ್ಧಿ ಕೈಗೊಳ್ಳುವುದರ ಜೊತೆಗೆ ಸ್ಥಳೀಯವಾಗಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಕರ್ನಾಟಕ ಪ್ರಾದೇಶಿಕ ನಗರೀಕರಣ ಯೋಜನೆ-2047 ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜ್ಯದ ಆರ್ಥಿಕ ಬೆಳವಣಿಗೆಯ ಸಂಪೂರ್ಣ ಹೊಣೆಯನ್ನು ಬೆಂಗಳೂರು ಒಂದೇ ಹೊರಲು ಸಾಧ್ಯವಿಲ್ಲ. ಕೈಗಾರಿಕಾ ಚಟುವಟಿಕೆಗಳು ಮತ್ತು ಉದ್ಯೋಗಾವಕಾಶಗಳನ್ನು ರಾಜ್ಯದ ವಿವಿಧ ಪ್ರಾದೇಶಿಕ ನಗರಗಳಿಗೂ ವಿಸ್ತರಿಸಬೇಕು ಎಂದು ಹೇಳಿದರು.

ಬೆಂಗಳೂರು ಬೆಳವಣಿಗೆಯಾದರೆ ಕರ್ನಾಟಕ ಬೆಳೆಯುತ್ತದೆ. ನಗರಗಳ ಬೆಳವಣಿಗೆಯಿಂದ ಹಳ್ಳಿಗಳ ಜೀವನಮಟ್ಟವೂ ಸುಧಾರಿಸಬೇಕು. ನಗರಗಳು ಆರ್ಥಿಕವಾಗಿ ಬಲಿಷ್ಠವಾದರೆ ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಸಂಪನ್ಮೂಲಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಇದೇ ನಮ್ಮ ಅಭಿವೃದ್ಧಿಯ ದೃಷ್ಟಿಕೋನ ಎಂದು ತಿಳಿಸಿದರು.

ಪ್ರಸ್ತುತ ಸುಮಾರು 6.9 ಕೋಟಿ ಇರುವ ರಾಜ್ಯದ ಜನಸಂಖ್ಯೆ 2047ರ ವೇಳೆಗೆ 7.7ರಿಂದ 7.8 ಕೋಟಿಗೆ ತಲುಪುವ ನಿರೀಕ್ಷೆಯಿದೆ. ಇದೇ ಅವಧಿಯಲ್ಲಿ ನಗರ ಪ್ರದೇಶಗಳ ಜನಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಲಿದೆ. ಇದರಿಂದ ವಸತಿ, ಸಾರಿಗೆ ಮತ್ತು ಇತರ ಮೂಲಸೌಕರ್ಯಗಳ ಮೇಲೆ ಉಂಟಾಗುವ ಒತ್ತಡವನ್ನು ನಿಭಾಯಿಸಲು ಸರ್ಕಾರ ದೀರ್ಘಾವಧಿಯ ಯೋಜನೆ ರೂಪಿಸುತ್ತಿದೆ.

ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಜನರು ಹಳ್ಳಿಗಳಿಂದ ನಗರಗಳಿಗೆ ವಲಸೆ ಬರುತ್ತಿದ್ದಾರೆ. ಪ್ರತಿಯೊಬ್ಬರೂ ಬೆಂಗಳೂರಿಗೆ ಬರುವ ಬದಲು ತಮ್ಮದೇ ಊರು, ತಾಲೂಕು ಮತ್ತು ಜಿಲ್ಲೆಗಳಲ್ಲಿ ಉದ್ಯೋಗ ಪಡೆಯುವಂತಹ ವಾತಾವರಣವನ್ನು ನಾವು ಸೃಷ್ಟಿಸಬೇಕು.

ಈ ಯೋಜನೆಯು ಕೈಗಾರಿಕಾ ಬೆಳವಣಿಗೆ, ಸುಧಾರಿತ ಸೇವೆಗಳು ಮತ್ತು ಮೂಲಸೌಕರ್ಯ, ಸಾರಿಗೆ ಸಂಪರ್ಕ, ಪರಿಸರ ಸುಸ್ಥಿರತೆ, ಪ್ರತಿಭಾ ಅಭಿವೃದ್ಧಿ, ಎಲ್ಲರನ್ನೂ ಒಳಗೊಂಡ ಆರ್ಥಿಕ ಬೆಳವಣಿಗೆ ಹಾಗೂ ಡಿಜಿಟಲ್ ಆಡಳಿತ ಸೇರಿದಂತೆ ಏಳು ಪ್ರಮುಖ ಆದ್ಯತೆಗಳನ್ನು ಆಧರಿಸಿದೆ ಎಂದು ತಿಳಿಸಿದರು.

ರಾಜ್ಯದ ಪ್ರತಿಯೊಂದು ಪ್ರದೇಶದ ಸಾಮರ್ಥ್ಯಕ್ಕೆ ಅನುಗುಣವಾಗಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲು ಸರ್ಕಾರ ಉದ್ದೇಶಿಸಿದೆ. ಬಳ್ಳಾರಿಯಲ್ಲಿ ಉಕ್ಕು ಉದ್ಯಮ, ಹುಬ್ಬಳ್ಳಿ-ಧಾರವಾಡದಲ್ಲಿ ವಿದ್ಯುತ್ ವಾಹನಗಳ ತಯಾರಿಕೆ ಮತ್ತು ಮಂಗಳೂರಿನಲ್ಲಿ ದತ್ತಾಂಶ ಕೇಂದ್ರಗಳನ್ನು ಅಭಿವೃದ್ಧಿಪಡಿಸುವ ಯೋಜನೆಗಳಿವೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ನಗರ ಯೋಜನೆ ತಜ್ಞರ ಕೊರತೆ ನೀಗಿಸಲು ಪ್ರತ್ಯೇಕ ನಗರ ಯೋಜನಾ ಕಾಲೇಜು ಸ್ಥಾಪಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಲಿದೆ. ಸಂಚಾರ ದಟ್ಟಣೆ ಕಡಿಮೆ ಮಾಡಲು ನಗರಗಳು ಮತ್ತು ಪಟ್ಟಣಗಳಲ್ಲಿ ವರ್ತುಲ ರಸ್ತೆಗಳನ್ನು ನಿರ್ಮಿಸುವ ಪ್ರಸ್ತಾಪವನ್ನೂ ಮುಂದಿಟ್ಟರು. ಮೆಟ್ರೊ, ರಸ್ತೆಗಳು ಮತ್ತು ಸುರಂಗ ಮಾರ್ಗಗಳು ಸೇರಿದಂತೆ ಬೆಂಗಳೂರಿನಲ್ಲಿ ಸುಮಾರು 1.5 ಲಕ್ಷ ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಸರ್ಕಾರ ಪರಿಗಣಿಸುತ್ತಿದೆ ಎಂದು ತಿಳಿಸಿದರು.

'ಬೆಂಗಳೂರು ಮೀರಿ' (Beyond Bengaluru) ಉಪಕ್ರಮದಡಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಚಟುವಟಿಕೆಗಳನ್ನು ರಾಜ್ಯದ ಇತರ ನಗರಗಳಿಗೂ ವಿಸ್ತರಿಸುವ ಅಗತ್ಯವಿದೆ. ಈ ಮೂಲಕ ಆಗುವ ಹೂಡಿಕೆಗಳು ಸ್ಥಳೀಯ ಯುವಕರಿಗೆ ಉದ್ಯೋಗ ದೊರಕಿಸಿಕೊಡುವಂತಿರಬೇಕು ಎಂದು ಹೇಳಿದರು.

ನಗರಗಳಲ್ಲಿ ಕೈಗಾರಿಕೆಗಳು ಮತ್ತು ತೆರಿಗೆಗಳ ಮೂಲಕ ಸಂಗ್ರಹವಾಗುವ ಆರ್ಥಿಕ ಸಂಪನ್ಮೂಲಗಳು ಗ್ರಾಮೀಣ ಅಭಿವೃದ್ಧಿಗೂ ಬಳಕೆಯಾಗಬೇಕು. ಕೃಷಿ, ಕೈಗಾರಿಕೆ, ನಗರಾಭಿವೃದ್ಧಿ ಮತ್ತು ಮಾರುಕಟ್ಟೆ ಮೂಲಸೌಕರ್ಯಗಳನ್ನು ಸಮಗ್ರವಾಗಿ ಯೋಜಿಸಬೇಕಿದೆ ಎಂದು ತಿಳಿಸಿದರು.

ನಗರ ಪ್ರದೇಶದ ಶಾಲಾ ಮಕ್ಕಳಿಗೆ ಗ್ರಾಮೀಣ ಜೀವನ, ಕೃಷಿ ಮತ್ತು ರೈತರ ಕೆಲಸದ ಬಗ್ಗೆ ಪರಿಚಯ ಮಾಡಿಕೊಡಲು ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ಮೂರು ದಿನಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿಯೂ ಅವರು ಘೋಷಿಸಿದರು.

ಮೂಲಸೌಕರ್ಯಗಳ ಅಗತ್ಯದ ಕುರಿತು ಮಾತನಾಡಿದ ಶಿವಕುಮಾರ್, 2047ರ ವೇಳೆಗೆ ಕರ್ನಾಟಕದ ವಿದ್ಯುತ್ ಬೇಡಿಕೆ 40,000ರಿಂದ 50,000 ಮೆಗಾವ್ಯಾಟ್‌ಗೆ ತಲುಪಬಹುದು ಎಂದು ಅಂದಾಜಿಸಿದರು.

ಪ್ರಸ್ತುತ ವಿದ್ಯುತ್ ಬೇಡಿಕೆ ವಾರ್ಷಿಕ ಶೇ.10ರಿಂದ 12ರಷ್ಟು ಹೆಚ್ಚಾಗುತ್ತಿದ್ದು, ಇದನ್ನು ಪೂರೈಸಲು ಹೆಚ್ಚುವರಿ ವಿದ್ಯುತ್ ಉತ್ಪಾದನೆ ಮತ್ತು ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸಬೇಕಿದೆ. ಹಗಲಿನಲ್ಲಿ ಉತ್ಪಾದನೆಯಾಗುವ ಸೌರ ವಿದ್ಯುತ್ ಅನ್ನು ರಾತ್ರಿ ಬಳಕೆಗಾಗಿ ಸಂಗ್ರಹಿಸಲು ಬ್ಯಾಟರಿ ವ್ಯವಸ್ಥೆಗಳನ್ನೂ ರೂಪಿಸಬೇಕು ಎಂದರು.

ನಗರ ಪ್ರದೇಶಗಳ ಆಸ್ತಿ ದಾಖಲೆಗಳನ್ನು ಸರಿಪಡಿಸಿ ಡಿಜಿಟಲೀಕರಣಗೊಳಿಸುವ ಅಗತ್ಯವಿದೆ. ಇದರಿಂದ ಆಸ್ತಿ ಮಾಲೀಕತ್ವದ ಹಕ್ಕುಗಳನ್ನು ರಕ್ಷಿಸುವುದರ ಜೊತೆಗೆ ತೆರಿಗೆ ಆಡಳಿತವನ್ನೂ ಸುಧಾರಿಸಬಹುದು. ಪ್ರಸ್ತಾವಿತ 'ಭೂ ಗ್ಯಾರಂಟಿ' ಉಪಕ್ರಮದ ಮೂಲಕ ಆಸ್ತಿಗಳ ವಿವರಗಳನ್ನು ವ್ಯವಸ್ಥಿತ ಡಿಜಿಟಲ್ ದಾಖಲೆಗಳಾಗಿ ರೂಪಿಸಲು ಸಾಧ್ಯವಾಗಲಿದೆ.

ನಗರಗಳು ಕೇವಲ ಕಟ್ಟಡಗಳ ಸಮೂಹವಾಗಬಾರದು. ಜನರು ನೆಮ್ಮದಿಯಿಂದ ಬದುಕಲು ಉದ್ಯಾನಗಳು, ಕೆರೆಗಳು, ಹಸಿರು ಪ್ರದೇಶಗಳು ಮತ್ತು ಸಾರ್ವಜನಿಕ ಸೌಲಭ್ಯಗಳು ಇರಬೇಕು ಎಂದು ಹೇಳಿದರು.

ಮುಂದಿನ ಎರಡು ದಶಕಗಳ ಅಭಿವೃದ್ಧಿಗೆ ಈ ಯೋಜನೆ ಮಾರ್ಗಸೂಚಿಯಾಗಲಿದೆ. ಭವಿಷ್ಯದ ಪೀಳಿಗೆಯ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು.

ಬೆಂಗಳೂರು ಒಂದೇ ಸಾಕಾಗುವುದಿಲ್ಲ. ಬೆಂಗಳೂರನ್ನು ಮೀರಿ ಕರ್ನಾಟಕ ಬೆಳೆಯಬೇಕು. ರಾಜ್ಯದ ಪ್ರತಿಯೊಂದು ಭಾಗಕ್ಕೂ ಅಭಿವೃದ್ಧಿಯ ಅವಕಾಶಗಳು ತಲುಪಬೇಕು ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ISRO ಮುಡಿಗೆ ಮತ್ತೊಂದು ಗರಿ: GSLV-F18 ರಾಕೆಟ್ ಮೂಲಕ NVS-03 ಉಪಗ್ರಹ ಯಶಸ್ವಿ ಉಡಾವಣೆ..!

Hormuzನಲ್ಲಿ ತೈಲ ಟ್ಯಾಂಕರ್‌ ಮೇಲೆ limpet ಮೈನ್ ದಾಳಿ: ನಾವಿಕರ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ, 27 ಮಂದಿ ಭಾರತೀಯರು ಪ್ರಾಣಾಪಾಯದಿಂದ ಪಾರು..!

ನಂದಿನಿ ಗ್ರಾಹಕರ ಜೇಬಿಗೆ ಕತ್ತರಿ; ಹಾಲಿನ ದರ ಏರಿಕೆ ಬೆನ್ನಲ್ಲೇ ಮೊಸರಿನ ದರವನ್ನೂ ಪರಿಷ್ಕರಿಸಿದ ಕೆಎಂಎಫ್, ಪ್ರತಿ ಲೀಟರ್‌ಗೆ 14 ರೂ. ಹೆಚ್ಚಳ..!

ಉತ್ತರಾಖಂಡ ಹೆಲಿಕಾಪ್ಟರ್ ದುರಂತ: ಹವಾಮಾನ ಇಲಾಖೆ 'Yellow alert' ನಡುವೆಯೂ ಟೇಕಾಫ್, ನಿರ್ಲಕ್ಷ್ಯಕ್ಕೆ ಆರು ಜೀವಗಳು ಬಲಿ..!

ಕಬ್ಬು ಬೆಳೆಗಾರರ ನೆರವಿಗೆ ಧಾವಿಸಿ, , ರೈತರ ಹೋರಾಟಕ್ಕೆ ಅಂತ್ಯ ಹಾಡಿ: ಪ್ರಧಾನಿ ಮೋದಿಗೆ CM ಡಿಕೆಶಿ ಮನವಿ