ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೆಲಸ ಗಿಟ್ಟಿಸಿಕೊಳ್ಳಲು ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಮಂದಿ ಬರುತ್ತಾರೆ. ಆದರೆ ಅದೇ ಬೆಂಗಳೂರಿನಲ್ಲಿರುವ ಕನ್ನಡಿಗರಿಗೆ ಸ್ವಂತ ನೆಲದಲ್ಲೇ ಉದ್ಯೋಗದ ಬಾಗಿಲು ಮುಚ್ಚಿದರೆ ಪರಿಸ್ಥಿತಿ ಏನಾಗಬಹುದು? ಅಂತಹದ್ದೇ ಒಂದು ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಮತ್ತು ಆಕ್ರೋಶಕ್ಕೆ ನಾಂದಿ ಹಾಡಿದೆ. ಹೌದು, ಬೆಂಗಳೂರಿನ ಖಾಸಗಿ ಕಂಪನಿಯೊಂದು ಉದ್ಯೋಗದ ಸ್ಥಳ ಬೆಂಗಳೂರು ಎಂದು ಉಲ್ಲೇಖಿಸಿ, ಅದಕ್ಕೆ ಕೇವಲ ತಮಿಳುನಾಡು ಮೂಲದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಷರತ್ತು ವಿಧಿಸಿರುವುದು ಕನ್ನಡಿಗರು ಮತ್ತು ಕನ್ನಡ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಬೆಂಗಳೂರು, ಕೊಯಮತ್ತೂರು ಹಾಗೂ ನಮಕ್ಕಲ್ ನಗರಗಳಲ್ಲಿ ಕಾರ್ಯಾಚರಿಸುವ ಖಾಸಗಿ ಕಂಪನಿಯೊಂದರ ಜನರಲ್ ಮ್ಯಾನೇಜರ್ ಮತ್ತು ಎಚ್‌ಆರ್ (HR) ಟೀಮ್ ಹೆಡ್ ಆಗಿರುವ ಬಾಲ ಎಂ. ಎಂಬುವವರು ವೃತ್ತಿಪರ ಜಾಲತಾಣವಾದ ಲಿಂಕ್ಡ್‌ಇನ್‌ನಲ್ಲಿ ಉದ್ಯೋಗ ಜಾಹೀರಾತೊಂದನ್ನು ಪೋಸ್ಟ್ ಮಾಡಿದ್ದು, ಅಲ್ಲಿ ಕಂಪನಿಯಲ್ಲಿನ ಡೇಟಾ ಅನಾಲಿಸ್ಟ್ ಹುದ್ದೆಯ ಕೆಲಸದ ಸ್ಥಳ ಬೆಂಗಳೂರು ಎಂದು ನಮೂದಿಸಲಾಗಿತ್ತು. ಆದರೆ, ಆ ಹುದ್ದೆಗೆ ಕೇವಲ ತಮಿಳುನಾಡು ಮೂಲದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು ಎಂಬ ವಿಲಕ್ಷಣ ಷರತ್ತನ್ನು ವಿಧಿಸಲಾಗಿತ್ತು. ತದನಂತರ, ಈ ಉದ್ಯೋಗ ಪ್ರಕಟಣೆಯ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಮಾಧ್ಯಮಗಳಾದ ಎಕ್ಸ್ (ಟ್ವಿಟರ್) ಮತ್ತು ರೆಡ್ಡಿಟ್‌ನಲ್ಲಿ ಭಾರಿ ವೈರಲ್ ಆದವು.
ತಾರತಮ್ಯದ ಆರೋಪ
ಕಂಪನಿ ನಡೆಸಲು ಕರ್ನಾಟಕದ ಭೂಮಿ ಮತ್ತು ಮೂಲಸೌಕರ್ಯ ಬೇಕು, ಆದರೆ ಕೆಲಸ ಕೊಡಲು ಇಲ್ಲಿನ ಕನ್ನಡಿಗರು ಬೇಡವೇ? ಎಂದು ನೆಟ್ಟಿಗರು ಪ್ರಶ್ನಿಸಿದರು. ಅದರಂತೆ, ಸ್ಥಳೀಯರನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಿ ಇಂತಹ ಪ್ರಾದೇಶಿಕ ತಾರತಮ್ಯ ಎಸಗುತ್ತಿರುವುದರ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿದೆ.=
ಏತನ್ಮಧ್ಯೆ, ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಇಂತಹ ಪ್ರಸಂಗಗಳು ಪದೇ ಪದೇ ವರದಿಯಾಗುತ್ತಿದ್ದು, ಕೆಲವು ತಿಂಗಳುಗಳ ಹಿಂದೆಯಷ್ಟೇ ಜೆ.ಪಿ. ನಗರದ ಕಂಪನಿಯೊಂದು "ಕನ್ನಡಿಗೇತರರಿಗೆ ಮಾತ್ರ ಆದ್ಯತೆ" ಎಂದು ಜಾಹೀರಾತು ನೀಡಿ ನಂತರ ಕನ್ನಡಿಗರ ಆಕ್ರೋಶಕ್ಕೆ ಹೆದರಿ ಕ್ಷಮೆಯಾಚಿಸಿತ್ತು. ಪ್ರಸ್ತುತ ಘಟನೆಯು ಸ್ಥಳೀಯರಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಮೀಸಲಾತಿ ನೀಡಬೇಕು ಎಂಬ ಕಾನೂನಿನ ಬೇಡಿಕೆಗೆ ಮತ್ತಷ್ಟು ಪುಷ್ಟಿ ನೀಡಿದೆ.