ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸಿದ್ದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಹಗರಣದಲ್ಲಿ ಜೈಲು ಪಾಲಾಗಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಹಾಗೂ ಬಿಜೆಪಿ ಮುಖಂಡ ಬಸವರಾಜ್ ಕನ್ನಾಳೆ ಅಕ್ರಮಗಳು ಇದೀಗ ಬಗೆದಷ್ಟೂ ಬಯಲಾಗುತ್ತಿವೆ.
ಜ್ಞಾನೇಂದ್ರ ಕುಮಾರ್ ತನ್ನ ಪ್ರೇಯಸಿಗೆ ಚಿನ್ನ ಖರೀದಿಸಲು ಹಣ ಹಾಕಿದ್ದ ಕನ್ನಾಳೆ ಇದೀಗ ಅವರಿಬ್ಬರ ಸುತ್ತಾಟಕ್ಕೂ ಹಣ ನೀಡಿರುವುದು ಸಿಐಡಿ ತನಿಖೆಯಲ್ಲಿ ಬಯಲಾಗಿದೆ.
ಜ್ಞಾನೇಂದ್ರ ಕುಮಾರ್ ಹಾಗೂ ಆತನ ಪ್ರೇಯಸಿ ಉತ್ತರ ಪ್ರದೇಶ ಪ್ರಸಿದ್ಧ ಸ್ಥಳ ಸೇರಿದಂತೆ ದೇಶದ ವಿವಿಧೆಡೆಗೆ ಪ್ರಯಾಣಿಸಲು 23 ವಿಮಾನದ ಟಿಕೆಟ್‌ಗಳು ಸೇರಿ ಇತರ ಖರ್ಚು-ವೆಚ್ಚಗಳಿಗೆ ಸುಮಾರು ₹11 ಲಕ್ಷವನ್ನು ಬಸವರಾಜ ಕನ್ನಾಳೆಯೇ ಭರಿಸಿರುವುದು ತನಿಖೆಯಿಂದ ತಿಳಿದುಬಂದಿದೆ.
ಬೀದರ್‌ನಲ್ಲಿರುವ ತನ್ನ ಮಾಲೀಕತ್ವದ ಭಗವತಿ ಎಂಟರ್‌ರ್ಪ್ರೈಸಸ್ ಮೂಲಕ ಕನ್ನಾಳಿ ಜ್ಞಾನೇಂದ್ರ ಕುಮಾರ್ ಮತ್ತು ಪ್ರೇಯಸಿಗೆ ಟಿಕೆಟ್‌ಗಳನ್ನು ಖರೀದಿಸಿ ನೀಡಿದ್ದಾನೆ.
ಮಾರ್ಚ್ ಮತ್ತು ಜೂನ್ ತಿಂಗಳಲ್ಲಿ ಜ್ಞಾನೇಂದ್ರ ಕುಮಾರ್ ತನ್ನ ಪ್ರೇಯಸಿಗೆ ₹26 ಲಕ್ಷ, ಮತ್ತೊಮ್ಮೆ ₹26 ಲಕ್ಷ ಸೇರಿದಂತೆ ಒಟ್ಟು ₹52 ಲಕ್ಷ ಮೌಲ್ಯದ ಚಿನ್ನ ಮತ್ತು ವಜ್ರಾಭರಣಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದಕ್ಕಾಗಿ ₹1.9 ಲಕ್ಷ ನಗದು ಮತ್ತು ಸ್ನೇಹಿತೆಯ ಕ್ರೆಡಿಟ್ ಕಾರ್ಡ್ ಬಳಸಿ ₹1 ಲಕ್ಷ ಸೇರಿದಂತೆ ಒಟ್ಟು ₹2.9 ಲಕ್ಷ ಪಾ ವತಿಸಲಾಗಿತ್ತು. ಬಾಕಿ ಹಣವನ್ನು ಬೀದರ್‌ನ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿರುವ ವಿವಿಧ ಖಾತೆಗಳ ಮೂಲಕ ಡಿಕನ್ಸನ್ ರಸ್ತೆಯಲ್ಲಿರುವ ಜ್ಯುವೆಲ್ಲರಿ ಶಾಪ್‌ವೊಂದಕ್ಕೆ ವರ್ಗಾಯಿಸಿದ್ದಾನೆ.
ಈ ಹಣ ವರ್ಗಾವಣೆ ಮಾಡುವ ಸಲುವಾಗಿಯೇ ಆರೋಪಿ ಬಸವರಾಜು ಕನ್ನಾಳೆ ತನ್ನ ಸ್ನೇಹಿತರ ಹೆಸರಿನಲ್ಲಿ ಕೋ-ಆಪರೇಟಿವ್ ಸೊಸೈಟಿಯಲ್ಲಿ ಖಾತೆಗಳನ್ನು ತೆರೆಸಿದ್ದನು. ಇದೀಗ, ಚಿನ್ನಾಭರಣ ಖರೀದಿಸಿದ್ದ ಕುರಿತು ಜುವೆಲ್ಲರಿ ಶಾಪ್‌ನಲ್ಲಿರುವ ಸಿಸಿ ಕ್ಯಾ ಮೆರಾಗಳ ದೃಶ್ಯಗಳನ್ನು ಜಪ್ತಿ ಮಾಡಲಾಗಿದೆ ಎಂದು ಇವರಿಬ್ಬರ ಜಾಮೀನಿಗೆ ಆಕ್ಷೇಪಣೆ ಸಲ್ಲಿರುವ ಸಿಐಡಿ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದೆ.