ಬೆಂಗಳೂರು: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗೆ ಅನುಮತಿ ನೀಡಿದ್ದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ, ಕರ್ನಾಟಕದ ಐದು ಪ್ರಮುಖ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆಗಳು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿವೆ. ಅದರಂತೆ, ಮೋಟಾರ್ ಸೈಕಲ್‌ಗಳನ್ನು ಸಾರಿಗೆ ವಾಹನಗಳಾಗಿ ನೋಂದಾಯಿಸಲು ಮತ್ತು ಅವುಗಳಿಗೆ 'ಕಾಂಟ್ರಾಕ್ಟ್ ಕ್ಯಾರೇಜ್' ಪರವಾನಗಿ ನೀಡುವ ಅರ್ಜಿಗಳನ್ನು ಪರಿಗಣಿಸುವಂತೆ ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠವು ಜನವರಿ 2026 ರಲ್ಲಿ ನೀಡಿದ್ದ ತೀರ್ಪಿಗೆ ತಕ್ಷಣವೇ ಮಧ್ಯಂತರ ತಡೆಯಾಜ್ಞೆ ನೀಡುವಂತೆ ಈ ಸಂಘಟನೆಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿವೆ. ಆ ಕುರಿತ ವರದಿ ಇಲ್ಲಿದೆ:
ಪ್ರಕರಣದ ಹಿನ್ನೆಲೆ ಏನು?
ಮೋಟಾರು ವಾಹನ ಕಾಯ್ದೆಯಡಿ ದ್ವಿಚಕ್ರ ವಾಹನಗಳೂ ಸಹ ಸಾರಿಗೆ ವಾಹನ ಮತ್ತು ಕಾಂಟ್ರಾಕ್ಟ್ ಕ್ಯಾರೇಜ್ ವ್ಯಾಪ್ತಿಗೆ ಬರುತ್ತವೆ ಎಂದು ಸ್ಪಷ್ಟಪಡಿಸಿದ್ದ ಹೈಕೋರ್ಟ್ ವಿಭಾಗೀಯ ಪೀಠ, ಬೈಕ್ ಟ್ಯಾಕ್ಸಿಗಳ ನೋಂದಣಿ ಮತ್ತು ಪರ್ಮಿಟ್ ಅರ್ಜಿಗಳನ್ನು ಪರಿಗಣಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಆದರೆ, ಬೆಂಗಳೂರಿನಲ್ಲಿ ಸದ್ಯ ನಿಯಮಬದ್ಧವಾಗಿ ಪರವಾನಗಿ ಪಡೆದು ಸಂಚರಿಸುತ್ತಿರುವ ಸುಮಾರು 1.5 ಲಕ್ಷ ಆಟೋ ಮತ್ತು ಟ್ಯಾಕ್ಸಿ ಚಾಲಕರ ದೈನಂದಿನ ದುಡಿಮೆಯ ಮೇಲೆ ಇದು ಗಂಭೀರ ಪರಿಣಾಮ ಬೀರಲಿದೆ ಎಂದು ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕರ್ನಾಟಕದ ಪ್ರಮುಖ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆಗಳು, ಸುಪ್ರೀಂ ಮೊರೆ ಹೋಗಿವೆ.
ಹಾಗಾದ್ರೆ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ 5 ಸಂಘಟನೆಗಳು ಯಾವುವು?
ನಾಡಪ್ರಭು ಕೆಂಪೇಗೌಡ ಆಟೋ ಚಾಲಕರ ಸಂಘಟನೆ, ಕರ್ನಾಟಕ ವೆಂಕಟೇಗೌಡ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ, ಬೃಹತ್ ಬೆಂಗಳೂರು ಚಾಲಕರ ಸಂಘ, ಕರ್ನಾಟಕ ಸಾರಥಿಗಳ ಮಹಾಸಂಘ, ಜೈ ಕರ್ನಾಟಕ ಸಾರಥಿ ಸೇನೆ ಟ್ರಸ್ಟ್. ಮತ್ತು ಈ ಸಂಘಟನೆಗಳ ಜೊತೆಗೆ ಸತೀಶ್ ಕೆ.ಎಸ್ ಎಂಬ ವೈಯಕ್ತಿಕ ಚಾಲಕರೂ ಸಹ ವಕೀಲ ಕೆ. ಶಿವ ಅವರ ಮೂಲಕ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್ ಆದೇಶಕ್ಕೆ ತಕ್ಷಣವೇ ಮಧ್ಯಂತರ ತಡೆಯಾಜ್ಞೆ ನೀಡುವಂತೆ ಕೋರಿದ್ದಾರೆ.
ಈ ಸಂಘಟನೆಗಳ ವಾದವೇನು?
1.5 ಲಕ್ಷ ಚಾಲಕರ ಜೀವನೋಪಾಯಕ್ಕೆ ಹೊಡೆತ: ಸಮಗ್ರ ನಿಯಮಾವಳಿಗಳಿಲ್ಲದೆ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡಿದರೆ, ಬೆಂಗಳೂರು ಸೇರಿದಂತೆ ರಾಜ್ಯದ ಸುಮಾರು 1.5 ಲಕ್ಷ ನೋಂದಾಯಿತ ಆಟೋ-ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರ ಬದುಕು ದುಸ್ತರವಾಗಲಿದೆ ಎಂದು ಸಂಘಟನೆಗಳು ವಾದಿಸಿವೆ.
ನಿಯಂತ್ರಕ ಅಸಮಾನತೆ: ಆಟೋ ಮತ್ತು ಕ್ಯಾಬ್ ಚಾಲಕರು ಸರ್ಕಾರದ ಕಟ್ಟುನಿಟ್ಟಿನ ನಿಯಮಗಳಾದ ಪರ್ಮಿಟ್, ವಾಹನ ಫಿಟ್‌ನೆಸ್, ವಾಣಿಜ್ಯ ವಿಮೆ, ಕಡ್ಡಾಯ ಮೀಟರ್ ದರ ಹಾಗೂ ತೆರಿಗೆಗಳನ್ನು ನಿಯಮಿತವಾಗಿ ಪಾವತಿಸುತ್ತಿದ್ದಾರೆ. ಆದರೆ ಯಾವುದೇ ಸಮಾನ ಮಾನದಂಡಗಳಿಲ್ಲದೆ ಬೈಕ್ ಟ್ಯಾಕ್ಸಿಗಳಿಗೆ ಮುಕ್ತ ಅವಕಾಶ ನೀಡುವುದು ಅಸ್ತಿತ್ವದಲ್ಲಿರುವ ಸಾರಿಗೆ ವ್ಯವಸ್ಥೆಗೆ ಅನ್ಯಾಯ ಎಸಗಿದಂತಾಗುತ್ತದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ನೀತಿ ರೂಪಿಸುವ ಅಧಿಕಾರ ಸರ್ಕಾರದ ವ್ಯಾಪ್ತಿಗೆ ಸೇರಿದ್ದು: ಸಾರಿಗೆ ನೀತಿಗಳನ್ನು ರೂಪಿಸುವುದು ರಾಜ್ಯ ಸರ್ಕಾರ ಮತ್ತು ಸಾರಿಗೆ ಪ್ರಾಧಿಕಾರಗಳ ಶಾಸನಬದ್ಧ ಕರ್ತವ್ಯ. ಅಗ್ರಿಗೇಟರ್ (ರ್ಯಾಪಿಡೋ, ಓಲಾ, ಉಬರ್ ಮುಂತಾದ) ಕಂಪನಿಗಳ ಹಿತಾಸಕ್ತಿ ರಕ್ಷಿಸಲು ನಿರ್ದಿಷ್ಟ ನೀತಿ ಜಾರಿಗೊಳಿಸುವಂತೆ ನ್ಯಾಯಾಲಯಗಳು ಸರ್ಕಾರಕ್ಕೆ ಕಡ್ಡಾಯ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಅರ್ಜಿದಾರರು ಹೇಳಿದ್ದಾರೆ.
2019ರ ತಜ್ಞರ ಸಮಿತಿ ವರದಿ: ರಸ್ತೆ ಸುರಕ್ಷತೆ, ತೀವ್ರ ಸಂಚಾರ ದಟ್ಟಣೆ, ವಾಯುಮಾಲಿನ್ಯ ಹಾಗೂ ರಸ್ತೆ ಸ್ಥಳಾವಕಾಶದ ಬಳಕೆಯನ್ನು ಉಲ್ಲೇಖಿಸಿ, ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ನೀಡುವುದನ್ನು ವಿರೋಧಿಸಿ 2019 ರಲ್ಲಿ ಸಲ್ಲಿಸಲಾಗಿದ್ದ ತಜ್ಞರ ಸಮಿತಿಯ ವರದಿಯನ್ನು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ಏತನ್ಮಧ್ಯೆ, ಕೇವಲ ಚಾಲಕರ ಸಂಘಟನೆಗಳು ಮಾತ್ರವಲ್ಲದೆ, ಕರ್ನಾಟಕ ಸರ್ಕಾರ ಕೂಡ ಹೈಕೋರ್ಟ್ ಆದೇಶದ ವಿರುದ್ಧ ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಪ್ರತ್ಯೇಕ ಮೇಲ್ಮನವಿ ಸಲ್ಲಿಸಿದೆ. "ದ್ವಿಚಕ್ರ ವಾಹನಗಳು ಸಾರ್ವಜನಿಕ ಸಾರಿಗೆಗೆ ಸೂಕ್ತವಲ್ಲ, ಇವುಗಳಲ್ಲಿ ಅಪಘಾತದ ಅಪಾಯ ಹೆಚ್ಚು ಮತ್ತು ಪ್ರಯಾಣಿಕರ ಸುರಕ್ಷತೆಯ ಕೊರತೆ ಇದೆ" ಎಂದು ಸರ್ಕಾರ ಕೋರ್ಟ್‌ಗೆ ತಿಳಿಸಿದೆ.