ಬೆಂಗಳೂರು: ಪ್ರಯಾಣದ ವೇಳೆ ನಿದ್ದೆಗೆ ಜಾರಿದ್ದ 18 ವರ್ಷದ ಯುವತಿಯೊಬ್ಬರನ್ನು ಉಬರ್ (Uber) ಚಾಲಕನೊಬ್ಬ ಅಪ್ಪಿಕೊಂಡು ತುಟಿಗಳಿಗೆ ಮುತ್ತಿಟ್ಟಿದ್ದಾನೆ ಎಂದು ಆರೋಪಿಸಲಾಗಿದೆ.
ವಿದ್ಯಾರ್ಥಿನಿಯಾಗಿರುವ ಸಂತ್ರಸ್ತೆ ತನ್ನ ಅಜ್ಜಿಯ ಮನೆಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಭಾನುವಾರ ನಸುಕಿನ ಜಾವ ಸುಮಾರು 1.45ರ ಸುಮಾರಿಗೆ ದೊಡ್ಡಕಲ್ಲಸಂದ್ರದ ಕೋಣನಕುಂಟೆ ಕ್ರಾಸ್ ಬಳಿ ಈ ಘಟನೆ ಸಂಭವಿಸಿದೆ.
ವಾಹನ ನಿಂತಿದ್ದನ್ನು ಗಮನಿಸಿ ಎಚ್ಚರಗೊಂಡ ಸಂತ್ರಸ್ತೆಗೆ, ಚಾಲಕ ತನ್ನನ್ನು ಅಪ್ಪಿಕೊಂಡು ಮುತ್ತಿಡುತ್ತಿರುವುದು ಕಂಡುಬಂದಿದೆ. ಆತ ಮತ್ತೆ ಮುತ್ತಿಡಲು ಪ್ರಯತ್ನಿಸಿದಾಗ, "ನೀವೇನಾದರೂ ಮಾಡಿದಿರಾ? ಎಂದು ಆಕೆ ಪ್ರಶ್ನಿಸಿದ್ದಾಳೆ.
ಆರಂಭದಲ್ಲಿ ಇದನ್ನು ನಿರಾಕರಿಸಿದ ಚಾಲಕ, ನಂತರ "ಹೌದು, ಕ್ಷಮಿಸಿ" ಎಂದು ಕ್ಷಮೆ ಯಾಚಿಸಿದ್ದಾನೆ ಎಂದು ಆರೋಪಿಸಲಾಗಿದೆ. ಹಿಂಬದಿಯ ಸೀಟಿನಲ್ಲಿ ತನ್ನ ಲಗೇಜ್ ಇರಿಸಿದ್ದರಿಂದ ತಾನು ಮುಂಭಾಗದ ಪ್ರಯಾಣಿಕರ ಸೀಟಿನಲ್ಲಿ ಕುಳಿತಿದ್ದಾಗಿ ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾಳೆ.
ಸಂತ್ರಸ್ತೆ ತನ್ನ ಸ್ನೇಹಿತೆಯ ಮೊಬೈಲ್ ಫೋನ್ ಮೂಲಕ ರಾತ್ರಿ ಸುಮಾರು 1.25ಕ್ಕೆ ಕ್ಯಾಬ್ ಬುಕ್ ಮಾಡಿದ್ದಳು. ಸ್ನೇಹಿತೆಯನ್ನು ಭೇಟಿಯಾಗಲು ದೀಪಾಂಜಲಿ ನಗರಕ್ಕೆ ಹೋಗಿದ್ದ ಆಕೆ, ಅಲ್ಲಿಂದ ತನ್ನ ಅಜ್ಜಿಯ ಮನೆಗೆ ಮರಳುತ್ತಿದ್ದಳು. ಕ್ಯಾಬ್‌ನಿಂದ ಹೊರಬರಲು ಪ್ರಯತ್ನಿಸಿದಾಗ ಚಾಲಕ ಬಾಗಿಲುಗಳನ್ನು ಲಾಕ್ ಮಾಡಿ ವಾಹನ ಚಲಾಯಿಸುವುದನ್ನು ಮುಂದುವರಿಸಿದ ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ತಿಳಿಸಿದ್ದಾಳೆ.
ಆಕೆ ಕಿರುಚಾಡಿ ಕಿಟಕಿಯನ್ನು ಬಡಿದಾಗ ಚಾಲಕ ವಾಹನವನ್ನು ನಿಲ್ಲಿಸಿದ್ದಾನೆ ಎಂದು ಹೇಳಲಾಗಿದೆ. ಆಕೆ ಹೊರಗೆ ಬಂದ ನಂತರ, ಚಾಲಕ ಆಕೆಯ ಲಗೇಜ್‌ನೊಂದಿಗೆ ವಾಹನವನ್ನು ಚಲಾಯಿಸಿಕೊಂಡು ಹೋಗಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ಆಕೆ ಮತ್ತೊಂದು ಆಟೋ-ರಿಕ್ಷಾದಲ್ಲಿ ಅಜ್ಜಿಯ ಮನೆಗೆ ತೆರಳಿ, ಘಟನೆಯ ಬಗ್ಗೆ ಉಬರ್‌ಗೆ ದೂರು ನೀಡಿದ್ದಾಳೆ. ಚಾಲಕನ ಸ್ನೇಹಿತರು ಆಕೆಯ ಲಗೇಜ್ ಅನ್ನು ಹಿಂತಿರುಗಿಸಿದ್ದಾರೆ ಎಂದು ಹೇಳಲಾಗಿದೆ. ಸಂತ್ರಸ್ತೆ ಸೋಮವಾರ ದೂರು ದಾಖಲಿಸಿದ್ದಾಳೆ.
ಚಾಲಕನನ್ನು ಮೊಹಮ್ಮದ್ ವಸೀಮ್ ಎಂದು ಗುರುತಿಸಲಾಗಿದ್ದು, ಆತ ಸುಮಾರು 28 ವರ್ಷ ವಯಸ್ಸಿನವನಾಗಿದ್ದು ಕೇರಳದ ಮೂಲದವನಾಗಿದ್ದಾನೆ. ನಾವು ಇನ್ನೂ ಆತನನ್ನು ವಶಕ್ಕೆ ಪಡೆದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೋಣನಕುಂಟೆ ಪೊಲೀಸರು ಲೈಂಗಿಕ ಕಿರುಕುಳ ಹಾಗೂ ಬಿಎನ್‌ಎಸ್ (BNS) ನ ಇತರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.