ಯು ಟಿ ಖಾದರ್  
ರಾಜ್ಯ

ಬೀದಿ ಬದಿ ಆಹಾರ ವ್ಯಾಪಾರಿಗಳಿಗೆ ಆಹಾರ ನೈರ್ಮಲ್ಯ ತರಬೇತಿ: ಸಚಿವ ಯು. ಟಿ. ಖಾದರ್

ಆಹಾರ ತಯಾರಿಸುವ ಹಾಗೂ ಬಡಿಸುವ ಸಂದರ್ಭದಲ್ಲಿ ಸ್ವಚ್ಛತೆ, ಆಹಾರ ಪದಾರ್ಥಗಳ ಸುರಕ್ಷಿತ ನಿರ್ವಹಣೆ, ಶುಚಿತ್ವ ಮತ್ತು ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡುವ ವಿಧಾನ ಸೇರಿದಂತೆ ಹಲವು ವಿಷಯಗಳು ತರಬೇತಿಯ ಭಾಗವಾಗಲಿವೆ.

ಬೆಂಗಳೂರು: ಬೀದಿ ಆಹಾರ ಮಾರಾಟಗಾರರಿಗೆ ಆಹಾರ ಸುರಕ್ಷತೆ, ಸ್ವಚ್ಛತೆ, ಆಹಾರವನ್ನು ಸುರಕ್ಷಿತವಾಗಿ ನಿರ್ವಹಿಸುವ ವಿಧಾನ ಹಾಗೂ ಅಡುಗೆ ಎಣ್ಣೆಯ ಜವಾಬ್ದಾರಿಯುತ ಬಳಕೆ ಕುರಿತು ಜಾಗೃತಿ ಮತ್ತು ತರಬೇತಿ ಕಾರ್ಯಕ್ರಮವನ್ನು ಶೀಘ್ರದಲ್ಲೇ ಆರಂಭಿಸಲಾಗುವುವದು ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಬುಧವಾರ ಹೇಳಿದರು.

ಬೆಂಗಳೂರಿನಲ್ಲಿ ಬೆಂಗಳೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಬಿಸಿಐಸಿ) ಆಯೋಜಿಸಿದ್ದ ಆಹಾರ ಸುರಕ್ಷತೆ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಬೀದಿ ಆಹಾರ ಮಾರಾಟಗಾರರು ಮತ್ತು ಆಹಾರ ನಿರ್ವಹಿಸುವ ಸಿಬ್ಬಂದಿಗೆ ತರಬೇತಿ ನೀಡುವುದರ ಜೊತೆಗೆ ತಪಾಸಣೆ ಮತ್ತು ನಿಯಮ ಜಾರಿ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಸರ್ಕಾರ ಗಮನಹರಿಸಲಿದೆ ಎಂದು ಹೇಳಿದರು.

ಆಹಾರ ತಯಾರಿಸುವ ಹಾಗೂ ಬಡಿಸುವ ಸಂದರ್ಭದಲ್ಲಿ ಸ್ವಚ್ಛತೆ, ಆಹಾರ ಪದಾರ್ಥಗಳ ಸುರಕ್ಷಿತ ನಿರ್ವಹಣೆ, ಶುಚಿತ್ವ ಮತ್ತು ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡುವ ವಿಧಾನ ಸೇರಿದಂತೆ ಹಲವು ವಿಷಯಗಳು ತರಬೇತಿಯ ಭಾಗವಾಗಲಿವೆ. ಈ ಯೋಜನೆಯಡಿ 1,000ಕ್ಕೂ ಹೆಚ್ಚು ಬೀದಿ ಆಹಾರ ಮಾರಾಟಗಾರರಿಗೆ ತರಬೇತಿ ನೀಡಲಾಗುವುದು.

ಅಡುಗೆ ಎಣ್ಣೆಯನ್ನು ಪದೇಪದೇ ಮರುಬಳಕೆ ಮಾಡುವುದನ್ನು ತಡೆಯುವ ಮಾರ್ಗಗಳ ಬಗ್ಗೆಯೂ ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಹೋಟೆಲ್‌ಗಳು ಮತ್ತು ಇತರ ಆಹಾರ ಸಂಸ್ಥೆಗಳಿಂದ ಬಳಸಿದ ಅಡುಗೆ ಎಣ್ಣೆಯನ್ನು ಸಂಗ್ರಹಿಸಿ, ಅದನ್ನು ಜೈವಿಕ ಇಂಧನ ಉತ್ಪಾದನೆಗೆ ಕಚ್ಚಾ ವಸ್ತುವಾಗಿ ಬಳಸುವ ಜೈವಿಕ ಇಂಧನ ಕಂಪನಿಗಳೊಂದಿಗೆ ಸಹಯೋಗ ಮಾಡುವುದು ಪರಿಶೀಲನೆಯಲ್ಲಿರುವ ಒಂದು ಆಯ್ಕೆಯಾಗಿದೆ.

ಇದರಿಂದ ಬಳಸಿದ ಎಣ್ಣೆಯನ್ನು ವಿಲೇವಾರಿ ಮಾಡಲು ಸಂಸ್ಥೆಗಳಿಗೆ ಪರ್ಯಾಯ ವ್ಯವಸ್ಥೆ ಸಿಗುವುದರ ಜೊತೆಗೆ, ಅಸುರಕ್ಷಿತ ರೀತಿಯಲ್ಲಿ ಎಣ್ಣೆಯನ್ನು ಮರುಬಳಕೆ ಮಾಡುವುದನ್ನು ತಡೆಯಬಹುದು ಎಂದು ತಿಳಿಸಿದರು.

ಇದೇ ವೇಳೆ ಅಕ್ಟೋಬರ್‌ನಲ್ಲಿ ಕರ್ನಾಟಕದಲ್ಲಿ ರಾಷ್ಟ್ರೀಯ ಮಟ್ಟದ ಆಹಾರ ಸುರಕ್ಷತಾ ಅಧಿಕಾರಿಗಳು ಮತ್ತು ಆಯುಕ್ತರ ಸಮಾವೇಶ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಸಚಿವರು ಘೋಷಿಸಿದರು.

ವಿವಿಧ ರಾಜ್ಯಗಳ ಅಧಿಕಾರಿಗಳು ಭಾಗವಹಿಸಲಿರುವ ಈ ಸಮಾವೇಶದಲ್ಲಿ ಆಹಾರ ಸುರಕ್ಷತಾ ಕ್ರಮಗಳು, ಪ್ರಸ್ತುತ ವ್ಯವಸ್ಥೆಯಲ್ಲಿರುವ ಕೊರತೆಗಳು ಹಾಗೂ ನಿಯಮಗಳನ್ನು ಮತ್ತಷ್ಟು ಬಲಪಡಿಸಬೇಕಾದ ಕ್ಷೇತ್ರಗಳ ಕುರಿತು ಚರ್ಚೆ ನಡೆಯಲಿದೆ. ಸಮಾವೇಶದಲ್ಲಿ ಹೊರಬರುವ ಶಿಫಾರಸುಗಳನ್ನು ಅಗತ್ಯವಿದ್ದಲ್ಲಿ ಆಹಾರ ಸುರಕ್ಷತಾ ನಿಯಮಗಳಿಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರದ ಗಮನಕ್ಕೂ ತರಬಹುದು ಎಂದು ಹೇಳಿದರು.

ತಪಾಸಣೆ ನಡೆಸುವುದರಿಂದ ಮಾತ್ರ ಆಹಾರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ. ಆಹಾರ ಉದ್ಯಮಗಳು, ಮಾರಾಟಗಾರರು, ಆಹಾರ ನಿರ್ವಹಿಸುವ ಸಿಬ್ಬಂದಿ ಹಾಗೂ ಗ್ರಾಹಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಬಿಸಿಐಸಿ ಅಧ್ಯಕ್ಷ ಕೆ. ರವಿ ಮಾತನಾಡಿ, ಆಹಾರ ಸುರಕ್ಷತಾ ಮಾನದಂಡಗಳನ್ನು ಬಲಪಡಿಸಲು ಹಾಗೂ ಗ್ರಾಹಕರ ವಿಶ್ವಾಸ ಹೆಚ್ಚಿಸಲು ಸರ್ಕಾರ ಮತ್ತು ಉದ್ಯಮ ವಲಯದ ಸಹಕಾರ ಅತ್ಯಗತ್ಯ ಎಂದು ಹೇಳಿದರು.

ಜಾಗೃತಿ ಕಾರ್ಯಕ್ರಮಗಳು ಮತ್ತು ಉದ್ಯಮ ವಲಯದ ಸಹಭಾಗಿತ್ವದ ಮೂಲಕ ರಾಜ್ಯ ಸರ್ಕಾರದೊಂದಿಗೆ ಕೆಲಸ ಮಾಡಲು ಬಿಸಿಐಸಿ ಕೂಡ ಸಿದ್ಧವಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಶೇಷ ಭಾಷಣ ಮಾಡಿದ ಫೆಡರೇಶನ್ ಆಫ್ ಹೋಟೆಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ (ಎಫ್‌ಹೆಚ್‌ಆರ್‌ಎಐ) ರಾಷ್ಟ್ರೀಯ ಸಲಹೆಗಾರ ಹಾಗೂ ಆಹಾರ ಸುರಕ್ಷತೆ ಕ್ಷೇತ್ರದ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಡಾ. ವಿ. ಪಶುಪತಿ ಅವರು, ಆಹಾರ ಸುರಕ್ಷತೆಯನ್ನು ಕೇವಲ ಅಡುಗೆಮನೆಯ ಕಾರ್ಯಾಚರಣೆಗೆ ಸೀಮಿತಗೊಳಿಸದೆ, ನಿರ್ವಹಣೆಯ ಜವಾಬ್ದಾರಿಯಾಗಿ ಪರಿಗಣಿಸಬೇಕು ಎಂದು ಹೇಳಿದರು.

ಕಳೆದ 90 ದಿನಗಳಲ್ಲಿ ದೇಶಾದ್ಯಂತ 11,216 ಆಹಾರ ಸುರಕ್ಷತಾ ದಾಳಿಗಳನ್ನು ನಡೆಸಲಾಗಿದ್ದು, 172 ಅಮಾನತು ನೋಟಿಸ್‌ಗಳು, 519 ಕ್ರಿಮಿನಲ್ ಪ್ರಕರಣಗಳು ಮತ್ತು ದಂಡದೊಂದಿಗೆ 926 ಸುಧಾರಣಾ ನೋಟಿಸ್‌ಗಳನ್ನು ನೀಡಲಾಗಿದೆ ಎಂದು ತಿಳಿಸಿದರು.

ಇತ್ತೀಚೆಗೆ ನೀಡಲಾದ ಅಮಾನತು ನೋಟಿಸ್‌ಗಳ ಪೈಕಿ ಶೇ.46ರಷ್ಟು ಪ್ರಕರಣಗಳು ಕಚ್ಚಾ ವಸ್ತುಗಳ ನಿರ್ವಹಣೆಗೆ ಸಂಬಂಧಿಸಿವೆ ಎಂದು ಗಮನಸೆಳೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಗ್ರೇಟರ್ ನೋಯ್ಡಾದಲ್ಲಿ ಪ್ರವಾಸಿ ಬಸ್‌ಗೆ ಬೆಂಕಿ: 9ಮಂದಿ ಸಜೀವ ದಹನ; ಜಿಗಿದು ಪ್ರಾಣ ಉಳಿಸಿಕೊಂಡ ಜನ

ಸ್ಪರ್ಧೆ ಇರಲಿ, ವೈರತ್ವ ಬೇಡ: Trump ಭೇಟಿಯಾಗುತ್ತಿದ್ದಂತೆ Xi Jinping ಶಾಂತಿ ಮಂತ್ರ; US-China ನಡುವೆ ಶುರುವಾಯ್ತಾ ಹೊಸ ಸ್ನೇಹ ಪರ್ವ?

ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಆತಂಕ; ನಾವಿಕರು, ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ನಿಲ್ಲಲಿ: ಕ್ಷಿಪಣಿ ದಾಳಿ ಬೆನ್ನಲ್ಲೇ ವಿಶ್ವಕ್ಕೆ ಭಾರತ ಖಡಕ್ ಸಂದೇಶ..!

ಬರಗಾಲ ಕುರಿತು ಮುಗಿಯದ ಚರ್ಚೆ: ರಾಜ್ಯ ವಿಧಾನಸಭೆ ಅಧಿವೇಶನ ಒಂದು ದಿನ ವಿಸ್ತರಣೆ

ಪ್ರಧಾನಿ ಮೋದಿಗೆ ಸಿಎಂ ಡಿಕೆ ಶಿವಕುಮಾರ್ ಪತ್ರ: ಬರ ನಿರ್ವಹಣೆಗಾಗಿ ಶೇ. 50ರಷ್ಟು ಮಧ್ಯಂತರ ಪರಿಹಾರ ಬಿಡುಗಡೆಗೆ ಒತ್ತಾಯ!