ಅಷ್ಟು ಸುಲಭಕ್ಕೆ ಸಿಗುವನೇ ಬುದ್ಧ?
ಜಾವ ಐದರ ಇರುಳು ಅಗಿದು
ಬೆಳಕು ಮುಕ್ಕಳಿಸುವ ಹೊತ್ತು
ಲುಂಬಿನಿ ವನದ ವೃಕ್ಷ ಸ್ಥಳದಲ್ಲಿ
ಬುದ್ಧನ ಕನಲಿಕೆ
ಕಣ್ಣ ಪಸೆಯ ನೀರು
ಒರೆಸಿಕೊಂಡು ಪಾದ ಊರುವ
ಆತುರದಲ್ಲಿ ಗಡಿ ದಾಟುವ ನೆನಕೆ
ನಾರಾಯಣ ನದಿಯ ನೆತ್ತಿಯ
ಮನೋಕಾಮನ ದೇಗುಲ ಹತ್ತಿ
ಬೆನ್ನು ತಿರುಗಿಸುವಾಗ
ಸುಮ್ಮನೆ ಮಾಯವಾದರು ಬೌದ್ಧ ಭಿಕ್ಕುಗಳು
ಅಂಗಾತ ಮಲಗಿದ ಕಪ್ಪು ಶಿಲೆಯ
ಸ್ವಯಂ ಬುದ್ಧನ ಪಕ್ಕದಲ್ಲೇ
ಬಿಕರಿಗಿದ್ದ ಬುದ್ಧ ಸೂತ್ರದ ಸುರುಳಿ ಕೊಳ್ಳಲು
ಪಾಕೆಟ್ಟಿನಲ್ಲಿತ್ತು
ಚಲಾವಣೆಗೊಳ್ಳದ ನೋಟುಗಳು
ಬುದ್ಧ ಸ್ತೂಪ ತೋರಿಸುತ್ತೇನೆಂದ
ಸಶಸ್ತ್ರಧಾರಿ ಸಂತನೊಬ್ಬ
ಸದ್ದಿಲ್ಲದೆ ಸರಯೂ ನದಿಯ
ದಂಡೆ ಮೇಲೆ ಕೂರಿಸಿಬಿಟ್ಟ
ಬುದ್ಧ ಪಾದ ಅಡ್ಡಾಡಿದ
ರಾಜಬೀದಿಯ ಪಕ್ಕದಲ್ಲಿ ತಲೆ ಎತ್ತಿದ್ದ
ಮಂದಿರದ ಅಂಗಳದಲ್ಲಿ ಉಳ್ಳವನೊಬ್ಬ
ತನ್ನ ದೇಹವನ್ನು ಅಘೋರಿಗಳ
ಬಾಯಿಗೆ ಉಯಿಲು ಬರೆದಿದ್ದ
ಗಡಿಯಲ್ಲಿ, ನದಿಯಲ್ಲಿ, ಗುಡ್ಡದಲ್ಲಿ
ಬೆನ್ನಲ್ಲಿ, ನಿಮ್ಮಲ್ಲಿ, ನನ್ನಲ್ಲಿ ಎಲ್ಲೆಲ್ಲೂ
ಇರುವ ಬುದ್ಧನನ್ನು
ದಕ್ಕಿಸಿಕೊಳ್ಳಲು ರಾತ್ರಿಯಾಗದ ಇರುಳಿನಲ್ಲಿ
ನಡೆದಾಡುತ್ತಲೇ ಇದ್ದೇನೆ.
- ಉಗಮ ಶ್ರೀನಿವಾಸ್
ugamasrinivas@gmail.com