ಜನ ಪೇಜಾವರಿ ಶ್ರೀ ಅಂತಾರೆ
ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರಿಗೆ ಪ್ರಣಾಮ. ಹೇಗಿದ್ದೀರಿ ? ಫುಲ್ ಟೆನ್ಷನ್ಇರ್ಬೇಕು. ಸ್ವಾಮೀಜಿ, ಮತ್ತೆ ನೀವು ಸುದ್ದಿಯಲ್ಲಿದ್ದೀರಿ.
ಅಲ್ಲ ಸ್ವಾಮೀಜಿ, ಊರಿನ ಊಸಾಬರಿ ನಿಮಗ್ಯಾಕೆ? ಸ್ವಾಮಿ, ದೇವ ಅಂತ ಪೂಜೆ, ಪುನಸ್ಕಾರ ಮಾಡಿಕೊಂಡು, ಉಪನ್ಯಾಸ ಕೊಟ್ಟುಕೊಂಡು, ಮಠ, ಭಕ್ತರನ್ನ ನೋಡಿಕೊಂಡು ಇರೋದು ಬಿಟ್ಟು ಎಲ್ಲ ವಿಚಾರಗಳಲ್ಲಿ ಮೂಗು ತೂರಿಸೋಕೆ ಹೋಗ್ತೀರಿ. ಈ ವಯಸ್ಸಲ್ಲಿ ಬೇಕಾ?
ನೀವು ದೊಡ್ಡೋರು, ತಿಳಿದೋರು, ದೇವರು, ಧರ್ಮ ಓದಿದೋರು. ಇಳಿ ವಯಸ್ಸಲ್ಲೂ ಇಡೀ ದೇಶ ಓಡಾಡ್ತೀರಿ, ಧರ್ಮವನ್ನ ಕಾಪಾಡಕ್ಕೆ ಹೋರಾಟ ಮಾಡ್ತೀರಿ, ಎಲ್ಲ ಓಕೆ. ಆದರೆ, ದಾರೀಲಿ ಹೋಗೋ ಮಾರಮ್ಮ ಮನೆಗಂಟ ಕರೀತೀರಲ್ಲ, ಯಾಕೆ ?
ಅದಕ್ಕೆ ಜನ ನಿಮ್ಮನ್ನ 'ಕಿರಿಕ್ ಸ್ವಾಮಿಜಿ' ಅಂತ ಕರೀತಾ ಇದ್ದಾರೆ ಗೊತ್ತಾ ? ಅದೇನು ಪ್ರಚಾರಕ್ಕೆ ಮಾಡ್ತೀರೋ, ತಿಳಿಯದೇ ಮಾಡ್ತೀರೋ ಗೊತ್ತಾಗಲ್ಲಪ್ಪ. ಟೀವಿನೋರು ಮೈಕ್ ಹಿಡಿದ್ರೆ ಸಾಕು, ರಾಜಕೀಯದವರ ಥರ ಗಂಟೆಗಟ್ಲೆ ಮಾತಾಡ್ತೀರಿ. ಸ್ವಾಮಿಗಳು ಜಾಸ್ತಿ ಮಾತನಾಡಬಾರದು, ಕೂಲಾಗಿ ಇರ್ಬೇಕು ಅಂತಾರೆ. ಸೈಲೆಂಟಾಗಿ ಇರಕ್ಕೆ ನಿಮ್ಮಿಂದ ಆಗೋದೇ ಇಲ್ವಾ?
ಈವಾಗ ನೋಡಿ ಕುರುಬ ಸಮುದಾಯದವರಿಗೆ ವೈಷ್ಣವ ದೀಕ್ಷೆ ಕೊಡೋ ವಿಚಾರ ನಿಮ್ಮ ಹೆಗಲೇರಿಕೊಂಡಿದೆ. ನಮಗೆ ದೀಕ್ಷೆ ಕೊಡಿ ಅಂತ ಕುರುಬರಲ್ಲಿ ಯಾರಾದ್ರೂ ಬಂದು ನಿಮ್ಮನ್ನ ಕೇಳಿಕೊಂಡಿದ್ರಾ ? ಕನಕದಾಸರು ಏನಾದರೂ ನಿಮ್ಮ ಕನಸಲ್ಲಿ ಬಂದು, ನಮ್ಮೋರಿಗೆ ವೈಷ್ಣವ ದೀಕ್ಷೆ ಕೊಟ್ಟುಬಿಡಿ. ನಿಮಗೆ ಪುಣ್ಯ ಬರುತ್ತೆ ಅಂತ ಹೇಳಿದ್ರಾ? ಸಿದ್ದರಾಮಯ್ಯ ಅವರೇನಾದ್ರೂ ಸರ್ಕಾರಿ ಆದೇಶ ಜಾರಿ ಮಾಡಿದ್ರಾ? ಯಾರೋ ಕೇಳಿದ್ರು ಅಂತ ನಾನು ಹೇಳ್ದೆ ಅಂತೀರಿ. ಅದನ್ನ ಒಪ್ಪೋಣ, ಕುರುಬರಿಗೆ ವೈಷ್ಣವ ದೀಕ್ಷೆ ಕೊಡ್ತೀರಾ? ಅಂತ ಕೇಳ್ದಾಗ ನನಗೂ ಅದಕ್ಕೂ ಸಂಬಂಧವಿಲ್ಲ ಅಂತ ಹೇಳಿ ಎದ್ದು ಬರಬಹುದಾಗಿತ್ತಲ್ಲ? ಅದು ಬಿಟ್ಟು ಅವರು ಬರಲಿ ನೋಡೋಣ, ಮಾಡೋಣ ಅಂತೆಲ್ಲ ಯಾಕೆ ಹೇಳಬೇಕಿತ್ತು. ಕುರುಬ ಸಮುದಾಯದವರಿಗೆ ಅವರದ್ದೇ ಅದ ರೀತಿ ರಿವಾಜುಗಳು ಇರ್ತವೆ. ಅದನ್ನ ಪಾಲಿಸಿಕೊಂಡು ಬರ್ತಾ ಇದಾರೆ. ನೀವು ಈವಾಗ ಅವರಿಗೆ ದೀಕ್ಷೆ ಕೊಡ್ತೀನಿ, ಜನಿ ವಾರ ಹಾಕಿಸ್ತೀನಿ ಅಂತ ಹೋದ್ರೆ ಯಾರಾದ್ರೂ ಒಪ್ಪೋ ಮಾತಾ?
ಇದೆಲ್ಲಾ ಹೋಗಲಿ, ಕನಕದಾಸರು ಕುರುಬರೇ ಅಲ್ಲ ಅಂತೀರಿ. ಇತಿಹಾಸವನ್ನು ಯಾಕೆ ತಿರುಗಮುರಗ ಮಾಡ್ತೀರಿ. ಕನಕನ ಕಿಂಡಿ ಬಗ್ಗೆ ಈ ಹಿಂದೆ ಗಲಾಟೆ ಆಗಿದ್ದು ಮರೆತು ಹೋಯ್ತಾ? ಪದೇ ಪದೇ ಯಾಕೆ ಕಿರಿಕ್?
ಸಮಾಜದ ಒಳ್ಳೆಯದಕ್ಕೆ ಸಲಹೆ, ಸೂಚನೆ ಕೊಟ್ರೆ ತಪ್ಪೇನು ಅಂತೀರಿ. ಅಲ್ಲ ಸ್ವಾಮಿಗಳೇ, ದೇಶದಲ್ಲಿ, ರಾಜ್ಯದಲ್ಲಿ ಏನೇನು ನಡೀತಾ ಇದೆ ಅನ್ನೋದನ್ನ ನೀವೂ ನೋಡ್ತಾನೇ ಇದ್ದೀರಿ. ಬೆಳಗ್ಗೆ ಎದ್ರೆ ಒಂದಲ್ಲ ಒಂದು ಹಗರಣ, ಭ್ರಷ್ಟಾಚಾರ ಅಂತ ಮೀಡಿಯಾದೋರು ಬರೀತಾನೇ ಇದ್ದಾರೆ. ಕೈಗೆ ಸಿಕ್ಕಿದ್ದನ್ನ ನುಂಗಿ ನೀರು ಕುಡಿಯೋ ರಾಜಕೀಯದೋರ ಬಗ್ಗೆ ನೀವು ಮಾತಾಡಿದ್ದೀರ ? ಸರ್ಕಾರ ಹೀಗೇ ಕೆಲ್ಸ ಮಾಡ್ಬೇಕು, ಜನಕ್ಕೆ ಒಳ್ಳೇದು ಮಾಡ್ಬೇಕು ಅಂತ ಹೇಳಿದ್ದೀರ ? ಇಲ್ಲ, ಯಾಕೇಳಿ? ಯಾವ ಪಾರ್ಟಿಯೋರನ್ನೂ ನೀವು ಎದುರು ಹಾಕಿಕೊಳ್ಳಲ್ಲ ಅಂತ ಜನ ಹೀಗೆ ಮಾತಾಡ್ತಾ ಇದಾರೆ ಸ್ವಾಮಿಗಳೇ. ಅವರ ಮಾತು ಕೇಳಿದ್ರೆ ನಂಗೂ ಬೇಜಾರಾಗುತ್ತೆ. ಆದ್ರೂ ನೀವು ಒಳ್ಳೆಯವರು ಸ್ವಾಮಿಗಳೇ, ಸಣ್ಣಪುಟ್ಟ ವಿಚಾರಗಳ ಬಗ್ಗೆ ವರಿ ಮಾಡ್ಕೋಬೇಡಿ. ನಿಮಗೆ ಮಾಡುವುದಕ್ಕೆ ಬೇಕಾದಷ್ಟು ಕೆಲಸಗಳಿವೆ. ಇಂಥ ದ್ದನ್ನ ಬೇರೆಯವರಿಗೆ ಬಿಡಿ. ಜನ ಆಮೇಲೆ ಪೇಜಾವರ ಸ್ವಾಮಿಗಳು ಅನ್ನೋ ಬದ್ಲು ಪೇಜಾ'ವರಿ' ಸ್ವಾಮಿಗಳು ಅಂತ ಆಡ್ಕೋ ತಾರೆ. ಜಾಸ್ತಿ ಮಾತಾಡಿದ್ರೆ ಕ್ಷಮಿಸಿ ಸ್ವಾಮೀಜಿ. ಹೇಳಬೇಕು ಅನ್ನಿಸಿದ್ದನ್ನ ಹೇಳಿದ್ದೀನಿ. ಸರಿಯಾಗಿದ್ರೆ ಒಪ್ಪಿಕೊಳ್ಳಿ. ತಪ್ಪು ಅಂತ ಅನ್ಸಿದ್ರೆ ಹೊಟ್ಟೆಗೆ ಹಾಕಿಕೊಳ್ಳಿ.
ನಮಸ್ಕಾರ...
- ಕೆ.ವಿ. ಪ್ರಭಾಕರ್
prabhukolar@yahoo.com