ನಿನ್ನ ಮುಟ್ಟಬಹುದಾ?
ಮೊನ್ನೆಯೊಬ್ಬ ಹತ್ತಿರ ಬಂದು 'ನಿನ್ನನ್ನು ಮುಟ್ಟಬಹುದಾ?'ಎಂದು ಕೇಳಿದ. ಮಂಗಳಮುಖಿಯರೂ ಈ ಮೊದಲು ಹೀಗೆ ಕಾಡಿದ್ದಿದೆ. ನನಗೆ ಈ ರೀತಿಯ ಅನುಭವ ಭಯವನ್ನುಂಟು ಮಾಡಿದೆ. ಪರಿಹರಿಸಿ.
ಸೋಮನಾಥ್, ಜಮಖಂಡಿ
ಅವನ ಸ್ಪರ್ಶದ ಬಯಕೆಯನ್ನು ನೀನು ಪರೀಕ್ಷೆಗೊಳಪಡಿಸಲೇಬೇಕು. ಅವನ ದೃಷ್ಟಿಯಲ್ಲಿ 'ಇನ್ನೇನೋ' ಇದೆ ಎಂದು ನಿನಗನ್ನಿಸಿದರೆ ಆತನಿಂದ ದೂರ ಉಳಿಯುವುದೇ ಒಳ್ಳೆಯದು. ಅಷ್ಟಕ್ಕೂ ಯಾಕೆ ನಿನಗೇ ಹೀಗೆ 'ಅನುಭವ' ಆಗುತ್ತಿದೆ ಎಂಬುದನ್ನೂ ನೀನು ಆತ್ಮವಿಮರ್ಶೆ ಮಾಡಿಕೊಳ್ಳುವ ಅಗತ್ಯವಿದೆ. ಯಾವ ಕಾರಣಕ್ಕಾಗಿ ನೀನು ಆಕರ್ಷಣೆಯ ವಸ್ತುವಾಗಿದ್ದೀ? ನಿನ್ನ ಹಾವಭಾವಗಳನ್ನೂ ಗಮನಿಸಿಕೋ. ಪರಿಹಾರ ಅಲ್ಲೇ ಇರಬಹುದು.
ಪ್ರೇಮಿ ಕಾಡ್ತಾನೆ...
ಬಲವಂತವಾಗಿ ನನ್ನನ್ನು ಮದುವೆ ಮಾಡಿದರು. ಪ್ರೀತಿಸಿದವನ ಮನೆಯೂ ಗಂಡನ ಮನೆ ಬಳಿಯೇ ಇದೆ. ಗಂಡನ ಪ್ರೀತಿಯ ಮನೆ ಇದೇ ಆಗಿರುವುದರಿಂದ ಮನೆ ಬದಲಿಸಲು ಒಪ್ಪುತ್ತಿಲ್ಲ. ಮನಸ್ಸು ಪ್ರೀತಿಸಿದವನನ್ನೇ ಬಯಸುತ್ತಿದೆ. ನಾನೇನು ಮಾಡಲಿ?
- ಸೌಮ್ಯಾ ಶೆಟ್ಟಿ, ಕುಂದಾಪುರ
ತುಂಬಾ ಅಪಾಯದ ವಲಯದಲ್ಲಿದ್ದೀಯ. ಗಂಡನೊಂದಿಗೆ ಮುಕ್ತವಾಗಿ ಚರ್ಚಿಸುವುದೊಳಿತು. ನಿನ್ನ ಪ್ರೀತಿಯ ವಿಚಾರವನ್ನು ಆತನಿಗೆ ಹೇಳುವುದೊಳಿತು. ಪತ್ನಿಯ 'ರಕ್ಷಣೆ'ಯನ್ನು ಎಲ್ಲರೂ ಬಯಸುತ್ತಾರೆ. ನಿನ್ನ ಗಂಡ ಮನೆ ಬದಲಿಸುವ ವಿಚಾರಕ್ಕೆ ಬಂದೇ ಬರುತ್ತಾನೆ.
ಮನೆಯಲ್ಲಿ ಒಪ್ತಾರಾ?
ನನಗೆ ಇಬ್ಬರು ಅಕ್ಕಂದಿರು. ಅವರಿಬ್ಬರೂ ಪ್ರೇಮಿಸಿ, ಓಡಿ ಹೋಗಿದ್ದಾರೆ. ಹೀಗಾಗಿ, ಅಪ್ಪ- ಅಮ್ಮ ನನಗೆ ವಿಶೇಷ ಕಾಳಜಿಯಿಂದ ಬೆಳೆಸುತ್ತಿದ್ದಾರೆ. ಈಗ ನಾನೂ ಪ್ರೀತಿಯ ಬಲೆಗೆ ಬಿದ್ದಿರುವೆ. ನಮ್ಮ ಮದುವೆಗೆ ಮನೆಯಲ್ಲಿ ಯಾರೂ ಒಪ್ಪಲಿಕ್ಕಿಲ್ಲ. ಮುಂದೇನಾಗಬಹುದು?
- ಸಾನ್ವಿ ಪಾಟೀಲ, ಹುನಗುಂದ
ನಿಮ್ಮ ಅಪ್ಪ- ಅಮ್ಮನಿಗೆ ನಿನ್ನ ಮೇಲೆ ಸಹಜ ಕಾಳಜಿ, ಆತಂಕ ಇದ್ದೇ ಇದೆ. ನೋಡು ಸಾಧ್ಯವಾದಷ್ಟು ಕನ್ವಿನ್ಸ್ ಮಾಡೋದಿಕ್ಕೆ ಟ್ರೈ ಮಾಡು. ನಿನ್ನ ಕುಟುಂಬಕ್ಕೆ ಹತ್ತಿರದಲ್ಲಿರುವ ಒಂದಿಬ್ಬರು ಹಿರಿಯರ ಸಹಾಯ ಪಡೆದುಕೋ. ನಿನ್ನ ಹುಡುಗನ ಕಾರ್ಯಸಾಧನೆಗಳನ್ನು ಅವರ ಮುಂದಿಡಲೇಬೇಕು ನೀನು. ಒಳ್ಳೆಯದಾಗಲಿ...
(ನಿಮ್ಮ ಸಮಸ್ಯೆಗಳನ್ನು ಇಲ್ಲಿ ಹಂಚಿಕೊಳ್ಳಬಹುದು)