ಪಾರ್ವತಿ ಪರ್ವ
ಅಮ್ಮನೀನೆ ನಮಗೆಲ್ಲ...
ಅಣ್ಣಾವ್ರಿಗೆ ಪಾರ್ವತಮ್ಮ ಹೇಗೆ ಪ್ರೇರಣೆಯಾಗಿದ್ದರು? ಮಕ್ಕಳ ಪ್ರತಿ ನಡೆಯಲ್ಲೂ ತುಂಬಿದ ಸ್ಫೂರ್ತಿ ಎಂಥದ್ದು? ಇವೆಲ್ಲವನ್ನೂ ಅವರ ಮಾತುಗಳಲ್ಲೇ ಖುಷಿ ಖುಷಿಯಾಗಿ
ಕೇಳೋಣ...
ಕನ್ನಡದ ಎಂದೂ ಮಾಸದ 'ಮುತ್ತು' ಡಾ. ರಾಜ್. ಆ ಮುತ್ತು ಅಷ್ಟು ಪ್ರಖರವಾಗಿ ಬೆಳಗಲು, ಮನೆ ಮನಗಳಲ್ಲಿ ಆರಾಧನೆಗೊಳ್ಳಲು ಕಾರಣವಾದ, ಅನೇಕ ಸಂಕಟಗಳಲ್ಲಿ ನೆರವಾದ, ಸಹಸ್ರ ಖುಷಿಗಳಲ್ಲಿ ಸೇತುವೆಯಾದವರು ಪತ್ನಿ ಪಾರ್ವತಮ್ಮ ರಾಜ್ಕುಮಾರ್. ಅವರೆಂದೂ ಗಂಡನೊಂದಿಗೆ ಪರದೆ ಮೇಲೆ ಬರಲಿಲ್ಲ, ಆದರೂ ಕನ್ನಡಿಗರಿಗೆ ಪಾರ್ವತಮ್ಮ ಅವರು 'ಸ್ಟಾರ್'. ಕಾಸಿನಗಲ ಕುಂಕುಮದೊಂದಿಗೆ ಅವರೊಳಗೆ ಇನ್ನೂ ಅಣ್ಣಾವ್ರು 'ನಗು ನಗುತಾ ನಲಿ'ಯುತ್ತಿದ್ದಾರೆ. ಈ ವಯಸ್ಸಿನಲ್ಲೂ ಸಿನಿಮಾರಂಗದ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾರವರು. ಅಣ್ಣಾವ್ರಿಗೆ ಅವರು ಹೇಗೆ ಪ್ರೇರಣೆಯಾಗಿದ್ದರು? ಮಕ್ಕಳಲ್ಲೂ ತುಂಬಿದ ಸ್ಫೂರ್ತಿ ಎಂಥದ್ದು? ಇವೆಲ್ಲವನ್ನೂ ಅವರ ಮಾತ ಲ್ಲೇ 'ಖುಷಿ' ಖುಷಿಯಾಗಿ ಕೇಳೋಣ...
ವಜ್ರೇಶ್ವರಿ ಕಂಬೈನ್ಸ್ ಕಟ್ಟಿ ಬೆಳೆಸುವ ಆರಂಭದ ದಿನಗಳಲ್ಲಿ ನೀವು ಎದುರಿಸಿದ ಚಾಲೆಂಜ್ಗಳೇನು?
ವಜ್ರೇಶ್ವರಿ ಕಂಬೈನ್ಸ್ ಶುರುಮಾಡುವ ವೇಳೆಗಾಗಲೇ ರಾಜ್ ಅವರು 160ಕ್ಕೂ ಹೆಚ್ಚು ಸಿನಿಮಾ ಮಾಡಿ ಆಗಿತ್ತು. ಅವರು ಯಾವಾಗ್ಲೂ ಒಂದು ಮಾತು ಹೇಳ್ತಿದ್ರು, 'ಪಿಕ್ಚರ್ ಸರಿಯಾಗಿ ನಡೀದಿದ್ರೆ ನಮ್ಮೂರಿಗೆ ವಾಪಸ್ ಹೋಗಿ ಬಿಡೋಣ'. 'ಮಕ್ಕಳು ಓದೋ ಸಮಯದಲ್ಲಿ ಹೀಗಂದ್ರೆ ಹೇಗೆ? ಒಂದು ಅವಕಾಶ ಕೊಡಿ. ನಾವೇ ಒಂದು ಸಿನಿಮಾ ಮಾಡೋಣ. ಕಷ್ಟ ಆದ್ರೆ ಹೊರಟೋಗೋಣ' ಅಂದೆ. 'ಆಗ್ಲಿ' ಅಂದ್ರು. 'ಶ್ರೀನಿವಾಸ ಕಲ್ಯಾಣ', 'ತ್ರಿಮೂರ್ತಿ' ಚಿತ್ರಗಳಿಂದ ಶುರುಮಾಡಿದ್ವಿ. ಡಿಸ್ಟ್ರಿಬ್ಯೂಷನ್ ಹೊಣೇನೂ ತೊಗೊಂಡು ನೋಡೋಣ ಅಂತ ಅದನ್ನೂ ಕೈಗೆತ್ತಿಕೊಂಡೆ, ಮೊದಲು ಹುಬ್ಬಳ್ಳಿಯಲ್ಲಿ ರಾಜೇಶ್ವರಿ ಕಂಬೈನ್ಸ್ ಶುರು ಮಾಡಿದ್ವಿ. ಆಮೇಲೆ ವಜ್ರೇಶ್ವರಿ ಶುರುವಾಯ್ತು. 75ಕ್ಕೂ ಹೆಚ್ಚು ಸಿನಿಮಾ ಮಾಡಿದ್ವಿ.
ಡಾ. ರಾಜ್ ಪತ್ನಿ ಅನ್ನುವ ಅಂಶಕ್ಕೆ ನಿಮ್ಮಲ್ಲಿ ಎಷ್ಟು ಪಾಲು?
ನಂದೇನೂ ಇಲ್ಲ. ರಾಜ್ ಅವರಂತಹ ವ್ಯಕ್ತಿ ಜೊತೆಯಲ್ಲಿದ್ದಾಗ ಯಶಸ್ಸು ಇಲ್ಲದೇ ಇರಕ್ಕೆ ಸಾಧ್ಯನೇ ಇಲ್ಲ, 'ನನಗೆ ಶಕ್ತಿ ಅವರೇ!' ಅವರಿಂದಲೇ ಸಿನಿಮಾ ಮಾಡಲು ಸಾಧ್ಯವಾಯ್ತು. ಅವರ ಸರಳತೆ, ಅವರ ಸೌಹಾರ್ದತೆಯೇ ನಮಗೆಲ್ಲಾ ಪ್ರೇರಕ ಶಕ್ತಿ.
ಹೆಣ್ಣಾಗಿ ಇಷ್ಟು ಎತ್ತರಕ್ಕೆರಲು ಹೇಗೆ ಸಾಧ್ಯವಾಯ್ತು?
ಸಂದರ್ಭಗಳೇ ಕಾರಣ. ಯಾರೇನು ಮಾಡಬೇಕು, ಮಾಡಬಾರ್ದು ಅನ್ನೋದು ಅಲ್ಲ. ನನಗೆ ಆ ಥರ ಸಂದರ್ಭಗಳು ಬಂದವು. ಸಂಸಾರದ ಒತ್ತಡವನ್ನು ಅವರ ಮೇಲೆ ತಂದ್ರೆ ಅವರ ಕಲೆ ಬೆಳೆಯೋದಿಕ್ಕೆ ಸಾಧ್ಯ ಇಲ್ಲ ಅಂತ ಆ ಹೊಣೆ ತಗೊಂಡೆ. ಅದಕ್ಕೂ ಅವರೇ ಪ್ರೇರಣೆ.
ಅಂದಿನ ಅಣ್ಣಾವ್ರ ಚಿತ್ರಗಳು, ಇಂದಿನ ಹೊಸ ಪೀಳಿಗೆಯ ಚಿತ್ರಗಳಲ್ಲಿ ನಿಮಗೆ ಯಾವ್ಯಾವ ವ್ಯತ್ಯಾಸಗಳು ಕಾಣ್ತಿವೆ?
ಸಿನಿಮಾಗಳ ತಯಾರಿ, ಸಂಭಾವನೆ ಎಲ್ಲದರಲ್ಲೂ ಬದಲಾವಣೆ ಕಂಡಿದ್ದೀನಿ. ಬ್ಲ್ಯಾಕ್ ಆ್ಯಂಡ್ ವೈಟ್ನಿಂದ ಕಲರ್ ನೋಡ್ದೆ. ಅದಾದ ಮೇಲೆ ಸಿನಿಮಾ ಸ್ಕೋಪ್ ಬಂತು. ಹಿಂದೆ ಹೆಚ್ಚು ಕಾದಂಬರಿ ಆಧಾರಿತವಾಗಿರ್ತಿತ್ತು. ಆದರೆ, ಈಗ ಹಾಗಿಲ್ಲ. ಬದಲಾವಣೆಗಳು ಎಲ್ಲಾ ಹಂತದಲ್ಲೂ ಇದ್ದೇ ಇವೆ.
ಹೊಸ ನಾಯಕಿಯರನ್ನು ತಂದವರು ನೀವು. ಆಯ್ಕೆ ಸಂದರ್ಭ ಯಾವ ಅಂಶವನ್ನು ಪರಿಗಣಿಸ್ತೀರಿ?
ನಾವೆಲ್ಲಾ ಒಟ್ಟಾಗಿ ಕೂತು ಕಥೆ ಹೇಳ್ತೀವಿ. ಅದರ ಪ್ರಕಾರ, ಪಾತ್ರಕ್ಕೆ ಅನುಗುಣವಾಗುವಂತೆ ಹೀರೋಯಿನ್ ಆರಿಸ್ತೀವಿ. ಕೆಲವು ಸನ್ನಿವೇಶಗಳಿಗೆ ಹೊಸಬರು ಬಂದ್ರೆ ಸರಿ ಅನ್ನಿಸಿದಾಗ ಎಲ್ಲರ ಅಭಿಪ್ರಾಯ ಪಡೆದು ನಿರ್ಧಾರ ತಗೊಳ್ತೀವಿ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.