ಅವರು ಕನ್ನಡದ ಮಗು. ನ್ಯಾಚುರಲ್ಲಾದ ನಗುವನ್ನು ತುಂಬಿಕೊಂಡು, ದಟ್ಟ ಹುಬ್ಬಿನ ನೆರಳಿನಲ್ಲಿ ದಿಟ್ಟಿಸುತ್ತಾ ಮಾತಾ ಡುತ್ತಿದ್ದರೆ ಆ ನುಡಿಗಳಲ್ಲಿ ನಾವು ಕಳೆದುಹೋಗುತ್ತೇವೆ. ಅಂದರೆ, ಅವರ ಮೇಲೆ ನಮಗೆ ಬೆಳೆದ ಆಪ್ತತೆಯನ್ನು ನೀವೇ ಅಂದಾಜು ಮಾಡಿ. ರಾಘವೇಂದ್ರ ರಾಜ್‌ಕುಮಾರ್ ಎಂದರೇನೆ ಒಂದು ಅಚ್ಚರಿ. 'ಟುವ್ವಿ ಟುವ್ವಿ' ಎಂಬ ಮಾಧುರ್ಯ ಅವರ ಮಾತುಗಳಲ್ಲಿ. ನೀವು ಅಣ್ಣಾವ್ರ ಇಡೀ ಫ್ಯಾಮಿಲಿಯನ್ನು ತೆರೆಯ ಮೇಲೆ ತಂದು ಕಲ್ಪಿಸಿಕೊಳ್ಳಿ, ರಾಘಣ್ಣ ಅಲ್ಲಿ ಸಿಕ್ಕಾಪಟ್ಟೆ ಸಾಫ್ಟ್ ಅಂತ ಅನ್ನಿಸುತ್ತಾರೆ. ಅವರು ಸಿನಿಮಾದಲ್ಲಿ ಸಿಟ್ಟಾಗಿದ್ದು ನಿಮಗೆ ನೆನಪಾಗುವುದಿಲ್ಲ, ಅವರು ಮಚ್ಚು ಹಿಡಿದು ಯಾರನ್ನೋ ಕೊಚ್ಚಿ ಹಾಕಿದ ದೃಶ್ಯವೂ ಕಣ್ಮುಂದೆ ಬರುವುದಿಲ್ಲ. ಈ ಸರ್ವೇಯ ಕಾರಣಕ್ಕೇ ರಾಘಣ್ಣ ತುಂಬಾ ವಿಶೇಷ ಅಂತನ್ನಿಸುತ್ತಾರೆ.
ಈ ದಿನಗಳಲ್ಲಿ ಅವರು ನಟನೆಯಿಂದ ದೂರವಿದ್ದರೂ, ಚಿತ್ರರಂಗದೊಂದಿಗೆ ತೀರಾ ಹತ್ತಿರದ ಸಂಬಂಧವನ್ನೇ ಇಟ್ಟುಕೊಂಡಿದ್ದಾರವರು. ಅದು ಹೇಗೆ ಎನ್ನುವ ಕುತೂಹಲ ನಿಮಗೂ ಇದೆಯಲ್ಲವೇ? ಹಾಗಾದರೆ, ಮುಂದೆ ಓದಿ...
ನಾಯಕ ನಟನಾಗಿ ಅಷ್ಟು ಒಳ್ಳೇ ಹೆಸರು ಮಾಡಿದವರು ಇದ್ದಕ್ಕಿದ್ದಂತೆ ನಟನೆ ಬೇಡ ಎನ್ನುವ ನಿರ್ಧಾರ ತೆಗೆದುಕೊಳ್ಳಲು ಕಾರಣ? ಅದರ ಅಗತ್ಯ ಇತ್ತಾ?
ನನ್ನ ಜೀವನದಲ್ಲಿ ನಾನು ಅಂದುಕೊಂಡಿದ್ದೇ ಬೇರೆ, ನಡೆದದ್ದೇ ಬೇರೆ. ಡಾಕ್ಟರ್ ಅಗ್ಬೇಕು ಅಂತಿದ್ದೆ. ಸಿತಾರ್ ಕಲೀಬೇಕು ಅಂತಿದ್ದೆ. ಡಾಕ್ಟರ್ ಓದಕ್ಕೆ ಸೇರಿ ಒಂದೂವರೆ ವರ್ಷ ಓದುವಷ್ಟೊತ್ತಿಗೆ ಆಸಕ್ತಿ ಹೊರಟು ಹೋಯ್ತು. ಆಮೇಲೆ ಆ್ಯಕ್ಟಿಂಗ್‌ಗೆ ಬಂದೆ. ಸುಮಾರು 11-12 ವರ್ಷಗಳ ಕಾಲ ಚೆನ್ನಾಗಿ ನಡೀತು. ಆಗ ಅಮ್ಮ ಒಬ್ಬರೇ ಆಫೀಸ್ ಜವಾಬ್ದಾರಿ ಹೊತ್ತಿದ್ರು. ಯಾರಾದ್ರೂ ಅಮ್ಮನಿಗೆ ಜೊತೆಯಾಗಿ ಜವಾಬ್ದಾರಿ ತಗೋಬೇಕಿತ್ತು. ಎಲ್ಲಾ ಕೋಇನ್ಸೈಡ್ ಆಯ್ತು, ಆ್ಯಕ್ಟಿಂಗ್ ನಿಲ್ಲಿಸಿರಬಹುದು. ಆದರೆ, ಫಿಲ್ಮ್ ಫೀಲ್ಡ್‌ನಲ್ಲೇ ಇದ್ದೀನಿ. ಸ್ಕ್ರೀನ್‌ಪ್ಲೇ, ಡೈಲಾಗ್, ಪ್ರೊಡಕ್ಷನ್ ಎಲ್ಲದರಲ್ಲೂ ಪಾತ್ರ ವಹಿಸಿದ್ದೀನಿ. ಅಪ್ಪಾಜಿಯವರ 'ಶಬ್ದವೇದಿ'ಯಿಂದ ಶುರುವಾಗಿ ಎಲ್ಲಾ ಸಿನಿಮಾಗಳೂ ಚೆನ್ನಾಗಿ ನಡೆದಿವೆ. ಖುಷಿಯಾಗಿದೆ.
ಅಣ್ಣಾವ್ರಂಥ ದೊಡ್ಡ ಹೆಸರಿನ ಬ್ಯಾನರ್‌ನಡಿ ಸಿನಿಮಾ ಮಾಡುವಾಗ ಯಾವ ರೀತಿಯ ಸವಾಲುಗಳನ್ನು ಎದುರಿಸಿದ್ರೀ?
ಒಳ್ಳೇ ಕಥೆ ಒಳ್ಳೇ ಮಾರಲ್ ಇರ್ಬೇಕು, ಅಶ್ಲೀಲ ಇರ್ಬಾರ್ದು ಎಂಬುದೆಲ್ಲ ಪಾಲಿಸಿ ಇತ್ತು ಅವರಿಗೆ. ಅಪ್ಪಾಜಿಯವರೊಂದಿಗೆ ಕೂತ್ಕೊಂಡು ಕಥೆ ಕೇಳಿದ್ದೀವಿ. ಅವರಿರುವಾಗ ಒಂದು ಪಿಕ್ಚರ್ ಮಾಡಬೇಕು ಅಂದ್ರೆ, ನಮ್ಮನ್ನೆಲ್ಲಾ ಕೂರ್ಸಿಕೊಳ್ಳೋರು, 'ಕೇಳು, ತಿಳ್ಕೊ' ಅನ್ನೋರು; 'ನಿಂದೇನಾದ್ರು ಸಲಹೆ ಇದ್ರೆ ಹೇಳು' ಅನ್ನೋರು. ಮಾತಾಡೋಕ್ಕೆ ಮುಂಚೆ 'ಕೇಳೋದನ್ನ' ಕಲ್ಸಿದ್ರು. ಚಿತ್ರದಲ್ಲಿ- ಮಾರಲ್, ಎಂಟರ್‌ಟೈನ್ಮೆಂಟ್, ಕಾಮಿಡಿ, ಕಥೆ ಎಲ್ಲಾ ಇರ್ಬೇಕು ಅಂತಿದ್ರು.
ಹಳೇ ಕಾಲಕ್ಕೆ ಹೋಲಿಸಿದ್ರೆ, ಸಿನಿಮಾ ನಿರ್ಮಾಣ ಬರ್ತಾಬರ್ತಾ ಕಾಂಪ್ಲಿಕೇಟ್ ಅಗ್ತಿದೆ ಅನ್ನಿಸಿದ್ಯಾ?
ಸ್ವಾಭಾವಿಕವಾಗಿ ಒಂದನ್ನು ಪಡೀಬೇಕು ಅಂದ್ರೆ ಇನ್ನೊಂದನ್ನು ಕಳ್ಕೋಬೇಕು. ನಮ್ಮಲ್ಲಿ ಒಂದು ಬೌಂಡರಿ ಇದೆ. ಹೀರೋ, ಹೀರೋ ತಂಗಿ, ತಂದೆ, ತಾಯಿ, ವಿಲನ್, ಹೀಗೆ. ಕಥೆ ಇದರ ಸುತ್ತಲೇ ಸುತ್ತುತ್ತದೆ. ಇಡೀ ವರ್ಷದಲ್ಲಿ 500- 600 ಚಿತ್ರಗಳು ಹೊರಬರುತ್ತೆ. ಮೊದಲೆಲ್ಲಾ ಒಂದೆಡೆ ನಡೆಯೋದು ಇನ್ನೊಂದೆಡೆ ಗೊತ್ತಾಗ್ತಿರಲಿಲ್ಲ. ಈಗ ಹಾಗಿಲ್ಲ. ಕೂತೆಡೆಯಿಂದಲೇ ಎಲ್ಲಿ ಏನು ನಡೀತಿದೆ ಎಂಬುದನ್ನು ತಿಳಿಯಬಹುದು. ಕಾಂಪಿಟೇಷನ್ ಹೆಚ್ಚಾಗಿದೆ.
ಈ ವರ್ಷ ನಿಮ್ಮ ಮಗ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಮಗನಿಗೆ ಯಾವ ರೀತಿಯ ತಯಾರಿ ಕೊಟ್ಟಿದ್ದೀರಿ? ಅಣ್ಣಾವ್ರ ಮೊಮ್ಮಗ ಎಂಟ್ರಿ ತಗೋತಿರೋದು ವಿಶೇಷ ಅಲ್ವಾ?
ನಮ್ಮ ಅಪ್ಪಾಜಿ ಯಾವತ್ತೂ ಹೀಗೆ ಯೋಚ್ನೆ ಮಾಡಿದವರಲ್ಲ. ನಾನು ಬಣ್ಣ ಹಚ್ಚಿದೆ ನನ್ನ ಮಕ್ಕಳೂ ಫಿಲ್ಮ್‌ಫೀಲ್ಡ್‌ಗೆ ಬರಬೇಕು ಅಂತಿಲ್ಲ. ಮೊದಲಿಗೆ ಏನು ಕಲೀಬೇಕು ಅಂತ ಆಸೆನೋ ಅದನ್ನೇ ಕಲೀಲಿ ಅಂತಿದ್ರು. ಈಗ್ಲೂ ಹಾಗೇನೇ... ನನ್ನ ಮಗ ಬರ್ತಿದ್ದಾನೆ ಅನ್ನೋದಕ್ಕಿಂತ, ಜನಕ್ಕೆ ಒಬ್ಬ ಅರ್ಟಿಸ್ಟ್ ಸಿಗ್ತಿದ್ದಾನೆ ಅನ್ನಬಹುದು. ನನ್ನ ಮಗ, ರಾಜ್‌ಕುಮಾರ್ ಮೊಮ್ಮಗ ಅಂತ ಸಿನಿಮಾ ಬಿಡುಗಡೆ ಮಾಡ್ತಿಲ್ಲ. ಅವತ್ತು ರಾಜ್‌ಕುಮಾರ್ 'ಬೇಡರ ಕಣ್ಣಪ್ಪ' ಮಾಡಿ, ಸ್ವಂತ ಶಕ್ತಿಯಿಂದ ಎಲ್ಲರ ಮೆಚ್ಚುಗೆ ಪಡೆದರು. ಹಾಗೇನೇ ಇವನೂ ಸ್ವಂತ ಶಕ್ತಿಯಿಂದ ಮುಂದೆ ಬರಬೇಕು. ಒಳ್ಳೇ ಕಥೆಯನ್ನು ಆಯ್ಕೆಮಾಡೋದು, ಸಾಂಗ್ಸ್, ಸೀಕ್ವೆನ್ಸ್ ಎಲ್ಲಾ ಚೂಸ್ ಮಾಡೋದಷ್ಟೇ ನಮ್ಮ ಕೆಲಸ. ಅವನು ಒಳ್ಳೇ ಅಭಿನಯ ತೋರಿ, ಒಳ್ಳೇ ಹೆಸರು ಮಾಡೋದು ಅವನಿಗೆ ಬಿಟ್ಟಿದ್ದು.
ನಟನಾಗಿದ್ದ ನಿಮಗೆ ನಿರ್ಮಾಣದಲ್ಲಿ ಆಸಕ್ತಿ ಹೇಗೆ ಮೂಡಿತು?
ಅಪ್ಪಾಜಿ ಸಿನಿಮಾ ಅಂದ್ರೆ ಅದು ನಮ್ದೇ ಸಿನಿಮಾ. ನಿರ್ಮಾಣ ಅನ್ನೋದು ಹೊಸದೇನಲ್ಲ, ನಮ್ಮ ತಾಯಿ ಪ್ರೊಡಕ್ಷನ್ 71ರಲ್ಲಿ ಪ್ರಾರಂಭಿಸಿದರು. ಹಾಗಾಗಿ ಯಾವಾಗ್ಲೂ 'ಆ್ಯಕ್ಟರ್ ಕಮ್ ಪ್ರೊಡ್ಯೂಸರ್' ಆಗಿದ್ದೆ. ಅಂದ್ರೆ ತಪ್ಪಾಗಲ್ಲ.