ರಾಜ್ ಮಹಲ್
ಡಾ. ರಾಜ್ಕುಮಾರ್... ಕನ್ನಡ ನೆಲದ ಒಂದು ಶಾಶ್ವತ ಸಾಂಸ್ಕೃತಿಕ ನೆರಳು...
ಡಾ. ರಾಜ್ಕುಮಾರ್... ಕನ್ನಡ ನೆಲದ ಒಂದು ಶಾಶ್ವತ ಸಾಂಸ್ಕೃತಿಕ ನೆರಳು. ಈ ವ್ಯಕ್ತಿತ್ವ ರೂಪಿಸುವಲ್ಲಿ ಕುಟುಂಬದ ಪಾತ್ರವೂ ಸಾಕಷ್ಟಿದೆ. ಹೀಗಾಗಿ ಈ ಜೇನುಗೂಡನ್ನು 'ಸಿನಿಮಾ ಕುಟುಂಬ' ಎಂಬ ವೃತ್ತದೊಳಗಷ್ಟೇ ಸೇರಿಸಲಾಗದು. ಸಂಸ್ಕೃತಿಯ ಭಾಗವಾಗಿಯೂ ಪರಿಗಣಿಸಬಹುದು. ಇಂಥ ಕಾರಣಕ್ಕಾಗಿಯೇ 'ಕನ್ನಡ ನಾಡು' ಎಂದಾಕ್ಷಣ ಮೊದಲು ನೆನಪಾಗುವುದು ಡಾ. ರಾಜ್.
ಪ್ರತಿ ಭಾಷೆಗೂ ಒಂದು ನಾದ, ಲಹರಿ ಅನ್ನೋದು ಇದೆ. ಆಯಾ ಭಾಷೆಯ ನಾದವನ್ನು ಆ ನೆಲದ ಸೊಗಡಿನಿಂದಲೇ ಅಸ್ವಾದಿಸಬೇಕು. ಹಾಗೆ, ಕನ್ನಡ ಭಾಷೆಯ ನಾದ ಡಾ. ರಾಜ್ ಬಳಸುವ ಭಾಷೆ ಮತ್ತು ಅವರ ಜೀವನದಲ್ಲಿ ಅಡಗಿದೆ ಎಂಬುದನ್ನು ಪುತಿನರಂಥವರೇ ಒಪ್ಪಿಕೊಂಡ ಸತ್ಯ. ಕನ್ನಡಿಗರಿಗೇನೇ ಸಮಸ್ಯೆ ಎದುರಾದಾಗ ಡಾ. ರಾಜ್, 'ನಾನಿರುವುದು ನಿಮಗಾಗಿ' ಎನ್ನುತ್ತಿದ್ದರು. ಡಬ್ಬಿಂಗ್, ಪರಭಾಷೆ ಚಿತ್ರಗಳ ಹಾವಳಿಯನ್ನು ಯಾರ ಮರ್ಜಿಗೂ ಒಳಗಾದೆ ವಿರೋಧಿಸಿದ್ದು ಇದೇ ಡಾ. ರಾಜ್ ಕುಟುಂಬ.
ಒಂದೊಮ್ಮೆ ಚಿತ್ರೋದ್ಯಮ ಮತ್ತು ಕನ್ನಡ ಚಳವಳಿ ಒಂದೇ ಆಗಿತ್ತು. ಹೆಚ್ಚೂಕಮ್ಮಿ ಇವೆರಡೂ ನಾಣ್ಯದ ಎರಡು ಮುಖ. ಅಂಥ ದ್ದೊಂದು ಗಟ್ಟಿ ಸೇತುವೆ ಕಟ್ಟಿದವರು ಡಾ. ರಾಜ್. ಅವರು ಇರುವಷ್ಟು ಕಾಲ ಚಳವಳಿಗೆ ಹೆಗಲು ಕೊಡುತ್ತಿದ್ದರು. ಭಾಷೆ, ನಾಡಿಗೆ ಧಕ್ಕೆ ಎದುರಾದಾಗ ಚಿತ್ರರಂಗ ದೊಡ್ಡ ಧ್ವನಿ ಎತ್ತು ತ್ತಿತ್ತು. ಆ ಧ್ವನಿಯ ಮುಂದೆ ರಾಜ್ ಎಂಬ ಮೇರು ಶಿಖರದ ನೆರಳಿರುತ್ತಿತ್ತು. ಡಾ. ರಾಜ್ ಕನ್ನಡದ ಅಸ್ತಿತ್ವವನ್ನು ದಶಕಗಳ ಕಾಲ ಕಾದುಕೊಂಡು ಬಂದರು. ನಾಡಿನ ಒಬ್ಬ ಮಹೋನ್ನತ ಸಾಂಸ್ಕೃತಿಕ ರಾಯಭಾರಿಯಾದದ್ದು ಹೀಗೆ. ಗೋಕಾಕ್ ಚಳವಳಿಗೆ ನಿಜವಾಗಿಯೂ ಕಾವು ಏರಿದ್ದು ಅಣ್ಣಾವ್ರ ಪ್ರವೇಶದ ನಂತರವೇ. ಆಗ ರೀಮೇಕ್ ಇದ್ದರೂ ಬಾಲ ಬಿಚ್ಚಲಿಲ್ಲ; ಡಬ್ಬಿಂಗ್ ಸದ್ದು ಮಾಡಲಿಲ್ಲ; ಪರಭಾಷಾ ಚಿತ್ರಗಳು ಹದ್ದು ಮೀರಿ ವರ್ತಿಸಲಿಲ್ಲ; ಅಡಿಯೋ ಕಂಪನಿಗಳು ಬೀದಿಗಳಿಯಲಿಲ್ಲ; ಕನ್ನಡ ಚಿತ್ರಮಂದಿರಗಳೇ ಕನ್ನಡ ಚಿತ್ರಗಳನ್ನು ಹೊರಗಿಡಲಿಲ್ಲ. ಹೊರಗಿನವರು ಬಂದರೆ ಅವರನ್ನು ಅತಿಥಿಗಳಾಗಿಯೇ ಉಪಚರಿಸುತ್ತಾ 'ಇದು ನಮ್ಮ ಮನೆ, ನೀವು ಅತಿಥಿಗಳಷ್ಟೆ. ಹೊಸದಾಗಿ ಮನೆ ಕಟ್ಟಕೂಡದು' ಎನ್ನುವ ಎಚ್ಚರಿಕೆಯೂ ಇತ್ತು.
ನಮ್ಮದೇ ರಾಜ್ಯದಲ್ಲಿ ಕನ್ನಡ ಚಿತ್ರದ ಹಾಡುಗಳನ್ನು ಹಾಕಿದ ಎಫ್ಎಂಗಳು, ವಿ. ಮನೋಹರ್ರಂಥ ಅಪ್ಪಟ ಕನ್ನಡ ಸಂಗಿತ ನಿರ್ದೇಶಕನಿಗೆ ಬಹಿಷ್ಕಾರ, ಮತ್ತೆ ಸದ್ದು ಮಾಡುತ್ತಿರುವ ಡಬ್ಬಿಂಗ್ ಡಬ್ಬಾ, ಕಾವೇರಿ ಹೋರಾಟದಲ್ಲಿ ನಿರುತ್ಸಾಹ, ಬೆಳಗಾವಿಯಲ್ಲಿ ಮರಾಠಿಗರು ಗದ್ದಲ... ಈಗ ಡಾ. ರಾಜ್ ನೆನಪಾಗದಿರಲು ಸಾಧ್ಯವೇ ಇಲ್ಲ. ಹೀಗಾಗಿ ಡಾ. ರಾಜ್ಕುಮಾರ್ ಸೇರಿದಂತೆ ಇಡೀ ಅವರ ಕುಟುಂಬವನ್ನು ಈ ನಾಡಿನಿಂದ ಪ್ರತ್ಯೇಕ ಮಾಡಿ ನೋಡುವಂತಿಲ್ಲ.
ಕಲಾ ಜಗತ್ತಿನಲ್ಲಿ ತಮ್ಮ ಬದುಕು ಕಾಣುತ್ತಲೇ ಇಡೀ ನಾಡಿಗೆ ಒಂದು ಸಾಂಸ್ಕೃತಿಕ ಪರಂಪರೆಯನ್ನು ಹಾಕಿಕೊಂಡು 'ಬಂಗಾರದಂಥ ಕುಟುಂಬ'ವನ್ನು ಪಡೆದಿರುವುದು ನಮ್ಮೆಲ್ಲರ ಭಾಗ್ಯ. ಡಾ. ರಾಜ್ ಕುಟುಂಬ ಕೇವಲ ಸಿನಿಮಾ ಅಥವಾ ಸೆಲೆಬ್ರಿಟಿ ಫ್ಯಾಮಿಲಿ ಅಲ್ಲ. ಅದು ನಮ್ಮ ನಾಡಿನ ಶಕ್ತಿ. ಸ್ಟಾರ್ ಆಗಿ ಬೆಳೆಯುವುದರ ಜೊತೆಗೆ ಡಾ. ರಾಜ್ ಅವರ ಸಾಂಸ್ಕೃತಿಕ ಪರಂಪರೆಯನ್ನು ಈಗ ಶಿವರಾಜ್ ಕುಮಾರ್ ಮುಂದುವರಿಸುತ್ತಿದ್ದಾರೆ. ಅಣ್ಣಾವ್ರು ಇನ್ನೂ ನಮ್ಮನ್ನು ಪ್ರಭಾವಿಸುತ್ತಿದ್ದಾರೆ ಎನ್ನುವುದಕ್ಕೆ ಅವರ ಕುಟುಂಬದ ಈ ಎಲ್ಲ ಬೆಳವಣಿಗೆಗಳು ಸಾಕ್ಷಿ.
- ಆರ್. ಕೇಶವಮೂರ್ತಿ keshavarkm1@gmail.com
- ಗೀತಾ ಶ್ರೀನಿವಾಸನ್ kngeetha1155@gmail.com