ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಶಿವನ ಸಮುದ್ರ

Vishwanath S
Updated On : 7 Dec 2013, 3:24 am

'ಅಣ್ಣಾವ್ರ ಮಕ್ಕಳು' ಎಂದಾಕ್ಷಣ ಚಿತ್ರರಂಗದಲ್ಲಿ ಮಾತ್ರವಲ್ಲ, ಅದರಾಚೆಗೂ ಒಂದು ವೈಬ್ರೇಷನ್ ಉಂಟುಮಾಡುವ ಮೂರು 'ಮುತ್ತು'ಗಳು ನಮ್ಮ ನಡುವೆ ಇವೆ. ಆದರೆ, ಇವರು 'ನಮ್ ಅಪ್ಪಾಜಿ ದೊಡ್ಡವ್ರು. ನಾವು ದೊಡ್ಡವ್ರ ಮಕ್ಕಳು' ಎನ್ನುವ ಜಂಭ ಇಲ್ಲದೆ ಸಿಂಪ್ಲಿಸಿಟಿಯ ಅಪ್ಪಟ ಶುದ್ಧ ವ್ಯಕ್ತಿತ್ವಗಳು. ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್... ಒಬ್ಬೊಬ್ಬರದ್ದೂ ಒಂದೊದು ಗುಣ. 'ದಿ ಪವರ್ ಪ್ಯಾಕ್‌' ಎನ್ನುವುದಕ್ಕೆ ಹೇಳಿಮಾಡಿಸಿದ ಸೋದರರು. ಮೂವರಿಗೂ ಅವರದ್ದೇ ಆದ ಸ್ಟಾರ್‌ಡಮ್ ಇದೆ.
'ಆನಂದ್‌' ಚಿತ್ರದ ಶಿವರಾಜ್‌ಕುಮಾರ್ ಮುಂದೆ 'ಹ್ಯಾಟ್ರಿಕ್ ಹೀರೋ' ಆಗಿ, 'ಸ್ಯಾಂಡಲ್‌ವುಡ್ ಕಿಂಗ್‌', 'ಸೆಂಚುರಿ ಸ್ಟಾರ್‌' ಆಗಿ ಅಭಿಮಾನಿಗಳ ಮೆಚ್ಚಿನ ಹೀರೋ ಆದರು. ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿದರು. ಜೀವನದಲ್ಲಿ ಅರ್ಧಶತಕ ಬಾರಿಸಿದರು. ಆದರೂ, ಅದೇ ಹದಿನಾರರ ಎನರ್ಜಿಟಿಕ್, ಇಪ್ಪತ್ತರ ಪವರ್‌ಫುಲ್ ಹೀರೋ ಶಿವಣ್ಣ, ಅಭಿಮಾನಿಗಳಿಗೆ ಹಾಗೂ ಉದ್ಯಮದ ಪಾಲಿಗೆ ನಿಜಕ್ಕೂ 'ಶಿವನ ಸಮುದ್ರ'. 'ಶಿವಾ'ನಂದ ಸರ್ಕಲ್‌ನಲ್ಲಿ ನಿಂತು ನೂರಕ್ಕೂ ಹೆಚ್ಚು ಚಿತ್ರಗಳನ್ನು ಕಣ್ತುಬಿಕೊಂಡಿರುವ ಅವರ ಬಳಗಕ್ಕೆ ಮತ್ತೊಂದು ಅದ್ಧೂರಿ ಎಂಟರ್‌ಟೈನ್‌ಮೆಂಟ್ ಪ್ಯಾಕೇಜ್ ಹೊತ್ತು ತಂದಿದ್ದಾರೆ ಶಿವರಾಜ್‌ಕುಮಾರ್.
ಅದು 'ಭಜರಂಗಿ'. ಸದ್ಯದಲ್ಲೇ ತೆರೆಯ ಮೇಲೆ ಈ ಚಿತ್ರ ಬರಲಿದೆ. ಸ್ಟಾರ್ ಡೈರೆಕ್ಟರ್ ಉಪೇಂದ್ರರಿಂದ ಹಿಡಿದು, ಅನುಭವಿ ನಿರ್ದೇಶಕ ಡಿ. ರಾಜೇಂದ್ರ ಬಾಬುರ ಹಾದಿಯಾಗಿ, ಸಾಮಾಜಿಕ ಕಳಕಳಿ ಇರುವ ಟಿ.ಎಸ್. ನಾಗಾಭರಣರ 'ಜನುಮದ ಜೋಡಿ'ಯಾಗಿ ಹರ್ಷನಂಥ ನ್ಯೂ ಕಮರ್ ನಿರ್ದೇಶಕನವರೆಗೂ ಶಿವರಾಜ್‌ಕುಮಾರ್ ಹೊಸತನದಲ್ಲೇ ತಮ್ಮನ್ನು ಪ್ರೆಸೆಂಟ್ ಮಾಡಿಕೊಂಡವರು. 100, 50, 25... ಚಿತ್ರೋದ್ಯಮದಲ್ಲಿ ಲಕ್ಕಿ ನಂಬರ್ ಎನಿಸಿಕೊಂಡಿರುವ ಈ ಮೂರರಲ್ಲಿ ಯಾವುದಾದರೂ ಒಂದು ದಕ್ಕಿದರೇ ಸಿನಿಮಾ ಮಂದಿಗೆ ಅದೇ ಒಂದು ದೊಡ್ಡ ಸಂಭ್ರಮ. ಆದರೆ, ಶಿವರಾಜ್‌ಕುಮಾರ್ ಅವರ ಜೀವನದಲ್ಲಿ ಈ ಮೂರು ಒಟ್ಟಿಗೆ ದಕ್ಕಿವೆ. ಒಬ್ಬ ನಟನಿಗೆ ಇದಕ್ಕಿಂತ ಭಾಗ್ಯ ಮತ್ತೇನು ಬೇಕು? ಎನ್ನುವಾಗ ಶಿವಣ್ಣ ಮಾತಿಗೆ ಸಿಕ್ಕರು.

ಚಿತ್ರರಂಗಕ್ಕೆ ಬಂದು 25 ವರ್ಷ ಆಯ್ತು. ಈ ನಡುವಿನ ಬದಲಾವಣೆಗೆ ಹೇಗೆ ಒಗ್ಗಿದ್ದೀರಿ?
ನಾನು ಚಿತ್ರರಂಗಕ್ಕೆ ಬಂದಾಗಿದ್ದಕ್ಕೂ ಈಗಿನಕ್ಕೂ ತುಂಬಾ ವ್ಯತ್ಯಾಸಗಳಾಗಿವೆ ನಿಜ. ಬದಲಾವಣೆ ಎಲ್ಲರೂ ಒಪ್ಪಿಕೊಳ್ಳಬೇಕಿರುವ ಸಾಮಾಜಿಕ ನಿಮಯ. ಅಂಥ ಚೇಂಜ್ ಚಿತ್ರರಂಗಕ್ಕೂ, ಜನರಿಗೂ ಬೇಕಿದೆ. ಮುಖ್ಯವಾಗಿ ಅದು ತಾಂತ್ರಿಕತೆಗೆ ಸಂಬಂಧಿಸಿದ್ದೇ ಆಗಿರುತ್ತದೆ. ಉಳಿ ದಂತೆ ಕಥೆಗಳು, ಹೊಸ ನಿರ್ದೇಶಕರ ಆಗಮನವಾಗುತ್ತಲೇ ಇದೆ. ಇದನ್ನೇ ನಾನು ಬದಲಾವಣೆ ಅಂದುಕೊಂಡಿದ್ದೇನೆ. ಹೊಸ ಕಥೆಗಳನ್ನು ಒಪ್ಪಿ ಕೊಳ್ಳುತ್ತಿದ್ದೇನೆ. ಹೊಸ ನಿರ್ದೇಶಕರ ಚಿತ್ರಗಳಲ್ಲೂ ನಟಿಸುತ್ತಿದ್ದೇನೆ. ಒಂದೇ ಸೂತ್ರಕ್ಕೆ ಅಥವಾ ನಿರ್ದೇಶಕರಿಗೆ ಅಂಟಿಕೊಂಡ ಮನುಷ್ಯ ಅಲ್ಲ ನಾನು. ಈ ಕ್ಷಣಕ್ಕೂ ಹೊಸತನ ಬಯಸುತ್ತೇನೆ. 'ನಾನು ಏನಾಗಬೇಕು, ಏನು ಮಾಡುತ್ತಿದ್ದೇನೆ' ಎನ್ನುವುದರ ಬಗ್ಗೆ ಪಕ್ಕಾ ಸ್ಪಷ್ಟತೆ ಇದ್ದರೆ ಎಂಥದೇ ಬದಲಾವಣೆಗಳಿಗೆ ಒಗ್ಗಿಕೊಳ್ಳಬಹುದು. ನನ್ನ ಪಯಣದಲ್ಲಿ ಕ್ಲ್ಯಾರಿಟಿ ಇದೆ. ಜೊತೆಗೆ ಜನಕ್ಕೆ ಎಂಥ ಸಿನಿಮಾ ಕೊಡಬೇಕೆಂಬ ತಿಳಿವಳಿಕೆ ಇದೆ. ಹೀಗಾಗಿ 25 ವರ್ಷಗಳ ಹಿಂದಿನ, ಇಂದಿನ 'ನಾನು'ಗಳಲ್ಲಿ ಸಾಕಷ್ಟು ಬದಲಾವಣೆ ಕಂಡಿದ್ದೀರಿ.

ನೀವು ನಟಿಸಲು ಆರಂಭಿಸಿದ ದಿನಗಳ ನಿರ್ದೇಶಕರಿಗೂ ಈಗಿನ ನಿರ್ದೇಶಕರಿಗೂ ಏನು ವ್ಯತ್ಯಾಸ?
ಆಗಿನ ನಿರ್ದೇಶಕರ ಕಥನಾ ಶೈಲಿ, ನಿರ್ದೇಶನದ ರೀತಿ, ನೀತಿಗಳು ಮತ್ತು ಈಗಿನವರ ಯೋಚನಾ ಲಹರಿಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಉಪೇಂದ್ರರಿಂದ ಹಿಡಿದು, ನಾಗಾಭರಣ, ಡಿ. ರಾಜೇಂದ್ರ ಬಾಬುರ ಆದಿಯಾಗಿ, ಹರ್ಷನಂಥ ನ್ಯೂ ಕಮರ್ ನಿರ್ದೇಶಕನವರೆಗೂ ನಾನು ಕೆಲಸ ಮಾಡಿದ್ದೇನೆ. ಒಬ್ಬೊಬ್ಬರದೂ ಒಂದೊಂದು ಸ್ಟೈಲ್. ಈಗಿನ ನಿರ್ದೇಶಕರಲ್ಲಿ ರೋಚಕತೆ, ಅದ್ಧೂರಿತನ, ತಾಂತ್ರಿಕತೆ ಹೆಚ್ಚು. ಈಗಿನ ಜನರೇಷನ್ ತುಂಬಾ ಫಾಸ್ಟ್. ತಾಂತ್ರಿ ಕತೆಗೆ  ತಕ್ಕಂತೆ ಯೋಚನೆಗಳು ಬದಲಾಗಿವೆ. ದೃಶ್ಯಗಳನ್ನು ಕಟ್ಟುವ, ನಿರೂಪಿಸುವ ಹಾಗೂ ಮೇಕಿಂಗ್ ವಿಚಾರದಲ್ಲಿ ಹಳೇ ಮತ್ತು ಹೊಸ ನಿರ್ದೇಶಕರಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ಕಂಡಿದ್ದೇನೆ.  ಈಗ 'ಭಜರಂಗಿ' ಚಿತ್ರವನ್ನೇ ತೆಗೆದುಕೊಳ್ಳಿ, ಒಂದೊಂದು ದೃಶ್ಯದಲ್ಲೂ ಅದ್ಧೂರಿತನ, ತಾಂತ್ರಿಕ ವೈಭವ ಎದ್ದು ಕಾಣುತ್ತದೆ. ಹಾಡುಗಳಲ್ಲಂತೂ ಸಿಕ್ಕಾಪಟ್ಟೆ ವರ್ಕ್ ಮಾಡಿದ್ದಾರೆ. ಇದನ್ನೇ ಹಿರಿಯ ನಿರ್ದೇಶಕರಾಗಿದ್ದರೇ ತುಂಬಾ ಸಾಫ್ಟ್ ಆಗಿ ಮಾಡುತ್ತಿದ್ದರು. ಹಾಗಂತ ಅದು ತಪ್ಪು ಅಂತ ಹೇಳುತ್ತಿಲ್ಲ. ಅದು ಅವರ ಸ್ಟೈಲ್. ರಾಜೇಂದ್ರ ಬಾಬು, 'ರೆಬೆಲ್ ಸ್ಟಾರ್‌' ಅಂಬರೀಷ್‌ರನ್ನು 'ಒಲವಿನ ಉಡುಗೊರೆ' ಚಿತ್ರದ ಮೂಲಕ ಪಕ್ಕಾ ಫ್ಯಾಮಿಲಿ ಪ್ರೇಮಿಯನ್ನಾಗಿ ಮಾಡಲಿಲ್ಲವೇ? 'ಓಂ'ನಂಥ ರಫ್ ಆ್ಯಂಡ್ ಟಫ್ ಚಿತ್ರ ಮಾಡಿದ ನನ್ನ, ನಾಗಾಭರಣ  'ಜನುಮದ ಜೋಡಿ'ಯನ್ನಾಗಿಸಲಿಲ್ಲವೇ? ಹೀಗಾಗಿ ಹಳೆಯದನ್ನು ಬಿಡಕ್ಕಾಗಲ್ಲ. ಕೊನೆಗೂ ನಾನು ಹೇಳುವ ಮಾತು ಒಂದೇ; 'ನಾನು ನಿರ್ದೇಶಕರ ನಟ, ಪ್ರೇಕ್ಷಕರ ಅಭಿಮಾನಿ'.

ಸಿನಿಮಾಕ್ಕೆ ಬರೋ ಎಲ್ಲ ಹೀರೋಗಳೂ ಕಲಿಯಬೇಕು ಅಂತ ನೀವೂ ಡ್ಯಾನ್ಸ್ ಕಲಿತ್ರಾ? ಅಥವಾ ಮೊದಲಿನಿಂದಲೂ ಆಸಕ್ತಿ ಇತ್ತಾ?
ಅಪ್ಪಾಜಿ ಹೇಳಿದಂತೆ 'ಕಾಲಕ್ಕೆ ತಕ್ಕಂತೆ ಕುಣಿಯಬೇಕು' ಎಂದಿದ್ದರಲ್ಲಿ ಬೇರೆ ಅರ್ಥ ಇದೆ. ಅವರ ಹಾಡಿಗೂ ನನ್ನ ಕುಣಿತಕ್ಕೂ ವ್ಯತ್ಯಾಸವಿದೆ. ನನ್ನ ಕುಣಿತ ಹೊಸದೇನೂ ಅಲ್ಲ. ನಾನು ತುಂಬಾ ಚೆನ್ನಾಗಿ ಡ್ಯಾನ್ಸ್ ಮಾಡ್ತಿನಿ ಅಂದ್ರೆ ಅದರ ಕ್ರೆಡಿಟ್ಟು ನೃತ್ಯ ನಿರ್ದೇಶಕರಿಗೆ ಸಲ್ಲಬೇಕು. ಇನ್ನು ಮೊದಲಿನಿಂದಲೂ ಕುಣಿತದ ಬಗ್ಗೆ ಒಂಚೂರು ಮೋಹ. ಮೊದಲೇ ಕ್ಲಾಸಿಕಲ್, ಕೂಚಿಪುಡಿ ಕಲಿತಿದ್ದೆ. ಟಿವಿಯಲ್ಲೋ, ರೇಡಿಯೋದಲ್ಲೋ ಹಾಡು ಬರುತ್ತಿದ್ದರೆ ಅದರ ಲಯಕ್ಕೆ ತಕ್ಕಂತೆ ದೇಹ ಕುಣಿಸುತ್ತೇನೆ. ಹಾಡು ಕಿವಿ ಮೇಲೆ ಬಿತ್ತು ಅಂದ್ರೆ ದೇಹ ಸುಮ್ಮನಿರಲ್ಲ. ಸಿನಿಮಾಗಳಲ್ಲೂ ನೃತ್ಯಕ್ಕೆ ಹೆಚ್ಚು ಗಮನ ಕೊಡುತ್ತೇನೆ. ಎಂಥ ರಿಸ್ಕ್ ಬೇಕಾದರೂ ತೆಗೆದುಕೊಂಡು ಸ್ಟೆಪ್ಸ್ ಹಾಕಬಲ್ಲೆ. ಡ್ಯಾನ್ಸ್ ಅಂದ್ರೆ ನನಗೆ ಪ್ರೀತಿ.

ನಿರ್ದೇಶನದ ಆಸೆಯನ್ನು ತುಂಬಾ ದಿನಗಳ ಹಿಂದೆಯೇ ಹೇಳಿಕೊಂಡಿದ್ದೀರಿ. ಅದು ಯಾವಾಗ ನೀವು ಡೈರೆಕ್ಟರ್ ಕ್ಯಾಪ್ ತೊಡುತ್ತೀರಿ?
ಹ್ಹ ಹ್ಹ ಹ್ಹ... ಈ ವಿಚಾರ ಯಾವಾಗ ಬಂತೋ ಗೊತ್ತಿಲ್ಲ. ನನಗೂ ಆಸೆ ಇದೆ. ಆಂದ್ರೆ ನಿರ್ದೇಶನ ಎನ್ನುವುದು ಹುಡುಗಾಟಿಕೆ ವಿಚಾರ ಅಲ್ಲ ನೋಡಿ! ಅದಕ್ಕೇ ಅಂತ ತಯಾರಿ ಬೇಕು. ಸುಮ್ನೆ ಹೀರೋಯಿಸಂ ಇದೆ ಅಂದಮಾತ್ರಕ್ಕೆ, 'ಆ್ಯಕ್ಷನ್ ಕಟ್‌' ಹೇಳಿದರೆ ಸಿನಿಮಾ ಆಗಲ್ಲ. ಆದರೂ ನಿರ್ದೇಶಕನ ಕನಸು ಮಾತ್ರ ನನ್ನಿಂದ ದೂರವಾಗಿಲ್ಲ. ನೋಡೋಣ ಕ್ಯಾಮೆರಾ ಮುಂದೆ ಕೂರುವ ಅವಕಾಶ ಯಾವಾಗ ಸಿಗುತ್ತೆ ಅಂತ. ಸದ್ಯಕ್ಕಂತೂ ನಟನೆಗೆ ಮಾತ್ರ ಸೀಮಿತ.

ಅಣ್ಣಾವ್ರ ಮಗ ಎನ್ನುವ ದೃಷ್ಟಿಯಿಂದ ನಿಮ್ಮ ಮುಂದಿನ ಜೀವನದಲ್ಲಿ ವಿಶೇಷ ಕೆಲಸಮಾಡುವ ಬಯಕೆ, ಯೋಜನೆ ಇದೆಯಾ?
ನನಗೆ ಸಿನಿಮಾ ಮೇಲೆ ಎಷ್ಟು ಪ್ರೀತಿ ಇದೆಯೋ ಅದರ ದುಪ್ಪಟ್ಟು ಸಾಮಾಜಿಕ ಕಾರ್ಯಗಳ ಬಗ್ಗೆಯೂ ಆಸಕ್ತಿ ಇದೆ. ಕೇವಲ ಅಣ್ಣಾವ್ರ ಮಗ ಎನ್ನುವ ಕಾರಣಕ್ಕಲ್ಲ, ಏನಾದರೂ ನನ್ನಿಂದ ನಾಲ್ಕಾರು ಜನಕ್ಕೆ ಸಹಾಯವಾಗುವ ನಿಟ್ಟಿನಲ್ಲಿ ಕೆಲಸ ಮಾಡುವ ಆಸೆ ಇದೆ. ಆಂದ್ರೆ ಯಾವ ರೀತಿಯದ್ದು ಎನ್ನುವುದು ಸದ್ಯಕ್ಕೆ ನಿರ್ಧಾರ ಮಾಡಿಲ್ಲ. ಇನ್ನು ನಿತ್ಯ ನಾವು ಮಾಡುವ ಸಹಾಯವನ್ನು ಹೇಳಿಕೊಳ್ಳಬಾರದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments