ಯೋಗರಾಗ ಭಟ್ರು!
ಕನ್ನಡ ಸಿನಿಮಾ ಸಂಗೀತಲೋಕದಲ್ಲಿ ಸಂಗೀತಕ್ಕಿಂತಲೂ ಸಾಹಿತ್ಯದಲ್ಲಿ ಅನಪೇಕ್ಷಿತ ಬದಲಾವಣೆ ಆದಾಗ ಸಾರಸ್ವತ ಲೋಕ ಮೂಗು ಮುರಿದಿದ್ದು ...
ಕನ್ನಡ ಸಿನಿಮಾ ಸಂಗೀತಲೋಕದಲ್ಲಿ ಸಂಗೀತಕ್ಕಿಂತಲೂ ಸಾಹಿತ್ಯದಲ್ಲಿ ಅನಪೇಕ್ಷಿತ ಬದಲಾವಣೆ ಆದಾಗ ಸಾರಸ್ವತ ಲೋಕ ಮೂಗು ಮುರಿದಿದ್ದು ಹಲವು ಸಲ. ಅದಕ್ಕೆ ಉದಯಶಂಕರ್ ಜಮಾನವೂ ಉದಾಹರಣೆ. ಉದಯಶಂಕರ್ ಸಾಹಿತ್ಯವನ್ನು ಹೇಗೆ ನಾವು ಅಪ್ರತಿಮ ಎಂದು ವರ್ಣಿಸುತ್ತೇವೆಯೋ ಅದೇ ಸಮಯದಲ್ಲಿ ಅವರು ತಮ್ಮ ದ್ವಂದಾರ್ಥದ ಹಾಡು, ಸಂಭಾಷಣೆಗಳಿಂದಲೂ ಸುದ್ದಿಯಾಗಿದ್ದರೆಂಬುದು ಗಮನಾರ್ಹ. ಆಮೇಲೆ ಆಡುಮಾತನ್ನು ಹಾಡಾಗಿಸಿದ ಹಂಸಲೇಖರ ಶೈಲಿ, ಮೊನ್ನೆ ಮೊನ್ನೆ ಹಾಡುಗಳಲ್ಲೂ ಗದ್ಯ ಪದಗಳನ್ನು ತುರುಕಿ ಅಚ್ಚರಿ ಮೂಡಿಸಿದ ಜಯಂತ ಕಾಯ್ಕಿಣಿಯವರೆಗೆ ಕನ್ನಡ ಚಿತ್ರಗೀತೆಗಳ ಜೈತ್ರಯಾತ್ರೆ ಸಾಗಿತ್ತು. ಆದರೆ, ಕಾಯ್ಕಿಣಿಯ ಜೊತೆಯಲ್ಲೇ ಬಂದ ನಮ್ಮ ಯೋಗರಾಜ್ ಭಟ್ಟರು ಕನ್ನಡದ ಸೊಗಡನ್ನು ಹೇಗೆ ತಗಡು ಮಾಡಬಹುದೆಂಬುದನ್ನು ತೋರಿಸಿಕೊಟ್ಟಿದ್ದಾರೆ.
ಭಟ್ಟರು ಸೊಗಸುಗನ್ನಡದಲ್ಲೂ ಒಂದಷ್ಟು ಹಾಡು ಬರೆದಿದ್ದಾರೆ. ಇತ್ತೀಚೆಗಿನ 'ಸೌಂದರ್ಯ ಸಮರಾ...' ಕೂಡಾ ಅದಕ್ಕೊಂದು ಉದಾಹರಣೆ. ಆದರೆ, ಅವುಗಳೆಲ್ಲ ಕಾಯ್ಕಿಣಿಯ ಹಾಡುಗಳೆಂದು ಸುದ್ದಿಮಾಡಿವೆ. ಜೊತೆಗೆ ಹಳೆಪಾತ್ರೆಯಂಥ ಹಾಡುಗಳು ಭಟ್ಟರದ್ದಾಗಿ 'ರದ್ದಿ ಪದಗಳಿಂದ ರಸಾಯನ ಮಾಡುವವರೇ ಭಟ್ಟರು' ಎಂದು ಗುರುತಿಸಿಕೊಂಡಿರುವುದು ಹೆಚ್ಚು. ಕ್ರಮೇಣ ಯೋಗರಾಜ್ ಭಟ್ಟರದ್ದೇ ಒಂದು ಟ್ರೆಂಡಾಯಿತು. ಆದರೂ ಬೇರೆಯವರಿಗೆ ಇವರಂತೆ ಪದಗಳನ್ನು ಕೊಲ್ಲುವ ಶೈಲಿ ಸಿದ್ಧಿಸಲಿಲ್ಲ. ಅದೇ ಒಂದು ಶಾಪವೆಂದುಕೊಳ್ಳಬೇಕೆಂದುಕೊಳ್ಳುವಾಗಲೇ ಅವರು ಬರೆದ ಹಾಡುಗಳಿದ್ದ ಚಿತ್ರಗಳೂ ಸಾಲು ಸಾಲಾಗಿ ಯಶಸ್ಸಾಗುತ್ತಿದೆಯೆಂಬ ಭ್ರಮೆಯೂ ಹುಟ್ಟಿತು.
'ಚಿತ್ರದಲ್ಲಿ ಸ್ಟಾರ್ ನಾಯಕರು ಇಲ್ಲವಾದರೂ ಯೋಗರಾಜ್ ಭಟ್ಟರದೊಂದು ಹಾಡಿದ್ದರೆ ಸಾಕು ಚಿತ್ರ ಗೆದ್ದಂತೆ' ಎಂದು ನಿರ್ದೇಶಕರುಗಳೇ ನಂಬಿದ್ದಾರೆ. ಅವರುಗಳನ್ನು ನಿರಾಶೆ ಮಾಡುವ ಪಾಪಕ್ಕೆ ಹೋಗದ ಭಟ್ಟರು ಬರೆಬರೆದು ಕೊಟ್ಟಿದ್ದಾರೆ. ಹೆಚ್ಚಿನವುಗಳು ಆ ನಂಬಿಕೆಯನ್ನು ಸುಳ್ಳು ಮಾಡಿಲ್ಲ. ಆದರೆ, ಇದು ಒಂದು ತಲೆಮಾರು ಶುದ್ಧಸಾಹಿತ್ಯದ ಮೇಲೆ ಇಟ್ಟಿದ್ದ ಭರವಸೆಯನ್ನೇ ಬುಡಮೇಲು ಮಾಡಿತು. ಇದನ್ನು ಭಟ್ಟರು ಈಗಲೂ ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂಬುದನ್ನು ಅವರೇ ಇಲ್ಲಿ ತಿಳಿಸಿದ್ದಾರೆ.
ಜನಕ್ಕೆ ಇಷ್ಟವಾಗುತ್ತದೆ ಎಂಬ ಕಾರಣಕ್ಕಾಗಿ ವೈದ್ಯನಾದವನು ಔಷಧ ಬಿಟ್ಟು ಗಾಂಜಾ ಕೊಡುವುದು ಎಷ್ಟು ಸರಿ?
ಎಲ್ಲರ ಟೇಸ್ಟನ್ನ ಮ್ಯಾಚ್ ಮಾಡುವವನೇ ಬರಹಗಾರ. ಪ್ರತಿಯೊಬ್ಬರಿಗೂ ಒಂದೊಂದು ರೀತಿಯ ಟೇಸ್ಟ್ ಇರುತ್ತದೆ. ಅವರೆಲ್ಲರನ್ನ ರೀಚ್ ಆಗ್ಬೇಕು. ಯಾರೋ ಒಬ್ಬರಿಗೆ ಇಷ್ಟವಾಗಿಲ್ಲ ಎಂಬುದು ಮುಖ್ಯವಾಗುವುದಿಲ್ಲ. ಯಾರೊಬ್ಬರೂ ಇಷ್ಟಪಡದ ಹಾಡು ಬರೆದರೆ ಮಾತ್ರ ಆ ಪ್ರಶ್ನೆ ಬರುತ್ತದೆ. ತಾತ್ಪರ್ಯ ಮತ್ತು ವ್ಯಂಗ್ಯ ಯಾರಿಗೆ ಅರ್ಥವಾಗುವುದಿಲ್ಲವೋ ಅವರು ಸರಿಸುಮಾರು 40 ವರ್ಷ ಹಿಂದೆ ಇದ್ದಾರೆ ಎನ್ನಬಹುದು. ಇವತ್ತು ಯಾರಿಗೂ ನೇರವಾಗಿ ಬುದ್ಧಿವಾದ ಹೇಳಿದರೆ ತಟ್ಟೋದಿಲ್ಲ.
ಮುಂಗಾರುಮಳೆಯ ಮೆಳ್ಳೆಗಣ್ಣಿನ ಟಿ.ಟಿ, ಗಾಳಿಪಟದಲ್ಲಿನ ಸೌಂಡ್‌ಲೆಸ್ ಶಿಷ್ಯ, ಡ್ರಾಮಾದಲ್ಲಿ ಒಬ್ಬನ ಕಿವುಡುತನ.. ಹೀಗೆ ಮನುಷ್ಯನ ಅಂಗವೈಕಲ್ಯದ ಲೇವಡಿ ಮಾಡಿರುವುದು ತಪ್ಪೆನಿಸುವುದಿಲ್ಲವೇ?
ಅದು ಮತ್ತೆ ಮೂರ್ಖತನವೆನಿಸುತ್ತದೆ. ತಪ್ಪುಗಳನ್ನು ಹುಡುಕುವುದು ಸಮಕಾಲೀನವಲ್ಲ. ಅದಕ್ಕಿಂತ ದೊಡ್ಡ ತಪ್ಪು ಬೇರೆ ಇಲ್ಲ. ನಿಮ್ಮಂತೆ ಕರಾವಳಿಯ ಬಹಳಷ್ಟು ಮಂದಿ ವಿಮರ್ಶಕರು ಈ ವಿಚಾರದಲ್ಲಿ ಇನ್ನೂ ಹತ್ತು ವರ್ಷ ಹಿಂದೆಯೇ ಉಳಿದಿದ್ದಾರೆ.
ನಿಮ್ಮ ಹುಟ್ಟು ಬಿಟ್ಟರೆ ಕರಾವಳಿಯೊಂದಿಗೆ ನಿಮಗೆ ಬೇರೆ ಸಂಬಂಧಗಳಿಲ್ಲವೇ?
ಪೂರ್ತಿ ಬಳಗವೆಲ್ಲಾ ಅಲ್ಲೇ ಇದೆ. ಮಂದಾರ್ತಿ ತಂದೆಯ ಊರು. ತಾಯಿ ಉಡುಪಿಯ ಪೆರಂಪಳ್ಳಿಯವರು. ನನ್ನ ಅಣ್ಣತಮ್ಮಂದಿರಿಗೆಲ್ಲ ಜನ್ಮಸ್ಥಳ ಅದೇ. ಆದರೆ ನನ್ನ ವಿದ್ಯೆ, ಓದು, ಬೆಳೆದಿದ್ದು ಎಲ್ಲವೂ ಧಾರವಾಡದಲ್ಲಿ.
ಕಾಸರವಳ್ಳಿ, ಬಿ. ಸುರೇಶ್‌ರಿಗೆ ಶಿಷ್ಯರಾಗಿ ನೀವೆಷ್ಟು ಕಾಲ ಕೆಲಸ ಮಾಡಿದ್ದೀರಿ?
ಕಾಸರವಳ್ಳಿಯವರೊಂದಿಗೆ 'ಕ್ರಾರ್ಯ' ಚಿತ್ರಕ್ಕೆ ಕೆಲಸಮಾಡಿದ್ದೇನೆ. ಬಿ. ಸುರೇಶ್ ಬಳಿ 2-3 ವರ್ಷವಿದ್ದೆ. ಅಲ್ಪಸ್ವಲ್ಪ ಬರವಣಿಗೆ ನಿರ್ದೇಶನವೆಲ್ಲ ಅವರ ಗರಡಿಯಲ್ಲೇ ಕಲಿತೆ. ಅದಲ್ಲದೆ, ದೇಸಾಯಿಯವರೊಂದಿಗೆ 'ಬೆಳದಿಂಗಳ ಬಾಲೆ'ಯ ಕಾಲದಲ್ಲೇ ನಾನು ಕೆಲಸ ಮಾಡಿದ್ದೇನೆ. ರವಿಚಂದ್ರನ್‌ರ 'ಚೆಲುವ', 'ಕಲಾವಿದ' ಚಿತ್ರಗಳಲ್ಲೂ ಕಾರ್ಯನಿರ್ವಹಿಸಿದ್ದೇನೆ. ಉಪೇಂದ್ರ ನನ್ನ ಗುರುಗಳು. ಅವರಲ್ಲಿಗೆ ಕೆಲಸ ಕಲಿಯಲು ಹೋಗಿದ್ದೆ. ಆದರೆ, ಆ ಸಮಯದಲ್ಲಿ ಅವರ ಸಿನೆಮಾದ ಗ್ಯಾಪ್ ಇತ್ತಾದ ಕಾರಣ ಕೆಲಸಮಾಡಿಲ್ಲ.
ಸಂದೀಪ್ ಚೌಟ ಎಂಬ ಕನ್ನಡಿಗನನ್ನು ಕನ್ನಡ ಚಿತ್ರಕ್ಕೆ ಪ್ರಥಮವಾಗಿ ಬಳಸಲು ಪ್ರೇರಣೆಯಾಗಿದ್ದು?
ಸಂದೀಪ್ ಚೌಟ ನನಗೆ ಪರಿಚಯವಾಗಿದ್ದು ಸುದೀಪ್ ಮೂಲಕ. ಅವರು ಆಗ ಹಿಂದಿಯಲ್ಲೇನೋ ಟ್ರೈ ಮಾಡುತ್ತಿದ್ದ ಕಾಲ. ಸಂದೀಪ್ ಚೌಟ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡವರು. ಈಗಲೂ ನನಗವರು ಸ್ನೇಹಿತರು.
ನಟರಾಜ ಸರ್ವಿಸ್' ಚಿತ್ರದ ಬಗ್ಗೆ...
ಪವನ್ ಒಡೆಯರ್ ನಿರ್ದೇಶಿಸಬೇಕಾಗಿದ್ದ ಚಿತ್ರವಾಗಿತ್ತು. ಶರಣ್‌ರನ್ನು ಹಾಕಿ ಮಾಡಲು ಹೊರಟಿದ್ದೆವು. ಆದರೆ, ಪವನ್ 'ಗೂಗ್ಲಿ' ಮಾಡಿದರು. ಶರಣ್ 'ವಿಕ್ಟರಿ' ಮಾಡಿದರು. 'ನಟರಾಜ ಸರ್ವಿಸ್' ಬಾಕಿಯಾಗಿದೆ. ಸಿನೆಮಾರಂಗದಲ್ಲಿ ಅಂಥವೆಲ್ಲ ಸಾಮಾನ್ಯ.
'ದ್ಯಾವ್ರೇ'ಯಲ್ಲಿ ಪ್ರಮುಖ ಪಾತ್ರ ಎಂದಿದ್ದ ನೀವು ನಾಯಕನ ಪಾತ್ರ ನಿಭಾಯಿಸಿದ್ದೀರಿ. ಮುಂದೆ?
ಅದು ಶಿಷ್ಯ ಗಡ್ಡ ವಿಜಿಯ ಒತ್ತಾಯಕ್ಕೆ ಮಣಿದು ಒಪ್ಪಿದ ಪಾತ್ರ. ಜೊತೆಗೆ ಪಾತ್ರವೂ ಇಷ್ಟವಾಗಿತ್ತು. ನನಗೆ ನಿರ್ದೇಶನಕ್ಕಿಂತ ನಟನೆ ಕಷ್ಟ. ಹಾಗಾಗಿ ಮುಂದೆ ಏನೋ ಗೊತ್ತಿಲ್ಲ. ಸದ್ಯಕ್ಕಂತೂ ನಿರ್ದೇಶನದ ಕಡೆಗಷ್ಟೇ ಗಮನ.
ನಿಮ್ಮ ನಿರ್ದೇಶನದ ಹೊಸ ಚಿತ್ರದ ಬಗ್ಗೆ...
ಸದ್ಯಕ್ಕೆ ನನ್ನ ವರ್ಷದ ಗುಂಗು ಎಲ್ಲವೂ ನಾನು ನಿರ್ದೇಶಿಸುತ್ತಿರುವ ಹಿಂದಿ ಚಿತ್ರದಲ್ಲೇ ಇದೆ. ತುಂಬಾ ದಿನದಿಂದ ಯೋಚನೆ ಮಾಡೀ ಮಾಡಿ ತಯಾರು ಮಾಡಿದ ಕಥಾವಸ್ತು. ಅದರ ಕೆಲಸ ಒಂದು ಅಂತಿಮ ಹಂತ ತಲುಪುವ ಮೊದಲು ಹೇಳಿಕೆಗಳನ್ನು ನೀಡಿ ಅದು ಅದರಂತೆ ನಡೆಯದೇ ಹೋದರೆ ಉಂಟಾಗಬಹುದಾದ ಆಭಾಸಗಳಿಗೆ ಕಾರಣನಾಗ ಬಯಸುವುದಿಲ್ಲ. ಸದ್ಯದಲ್ಲೇ ನಿಮ್ಮೆದುರು ತಿಳಿಸಲಿದ್ದೇನೆ.
ಕಿರುತೆರೆಯ ಜೊತೆಗೆ ನಿಮ್ಮ ಸಂಬಂಧವೇನಿತ್ತು?
ಕಿರುತೆರೆಯಲ್ಲಿ ನಾನು ಹೆಚ್ಚು ಕೆಲಸ ಮಾಡಿಲ್ಲ. 'ಚಕ್ರ' ನನ್ನ ಮೊದಲ ಧಾರಾವಾಹಿ. 'ಸಾಧನೆ' ಬಿ. ಸುರೇಶ್‌ರದ್ದು. ಅದರಲ್ಲಿ ಅವರ ಸಬಾರ್ಡಿನೇಟ್ ನಿರ್ದೇಶಕರಲ್ಲಿ ನಾನೂ ಒಬ್ಬ. ಮತ್ತೆ ಎಲ್ಲೋ 'ಜೋಗಪ್ಪ' ಮಾಡಿದ್ದೇನೆ. ಉಳಿದಂತೆ ಡಾಕ್ಯುಮೆಂಟರಿಗಳನ್ನು ನಿರ್ದೇಶಿಸಿದ್ದೇನೆ. ಅವುಗಳಿಗೆ ವಾಯ್ಸ್ ಕೊಟ್ಟು ಬದುಕಿದ್ದೇನೆ ಬಿಟ್ಟರೆ ಕಿರುತೆರೆಯೊಂದಿಗೆ ಬೇರೆ ಸಂಬಂಧಗಳಿಲ್ಲ.
- ಶಶಿಕರ ಪಾತೂರು
shashishashi82@gmail.com
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.