ರಾಮು ಮುಖದಲ್ಲಿ ಇಳಿಸಂಜೆಯಲ್ಲೂ ಹೊಸ ಕಳೆ ತೇಲುತ್ತಿತ್ತು. ಅದನ್ನು ಕಂಡ ಲಕ್ಷ್ಮವ್ವ, 'ಹುಡುಗು ಮುಂಡೇದು ಹಾದಿ ಬೀದಿಯ ಮಕ್ಕಳೊಂದಿಗೆ ಆಡ್ತಾ ಇವತ್ತೇನೋ ಹೊಸಕತೆಯೊಂದಿಗೆ ಚಿಗುರು ಮೀಸೆಯ ಮೇಲೆ ನಗುವನ್ನೊತ್ತು ಬರುತಿದೆಯೋ?' ಎಂದು ಗೊಣಗಿದಳು. ಹಟ್ಟಿಗೆ ಬಂದ ತಕ್ಷಣ 'ಅವ್ವೋ ನಿಂಗೇನೋ ಹೇಳೋದೈತೆ ಬಾರವ್ವೋ' ಎಂದು ಅವಸರಿಸಿದ. ಪಾತ್ರೆ ತೊಳೆಯುತ್ತಿದ್ದ ಲಕ್ಷ್ಮವ್ವ ಕುಳಿತಲ್ಲಿಂದಲೇ 'ಏನ ದಿನಾಗ್ಲೂ ಇದ್ದದ್ದೇ ನಿಂದು. ಇವತ್ತು ಯಾರ ಕೂಟ ಜಗಳದಲ್ಲಿ ಗೆದ್ದೆ?' ಕೇಳಿದಳು. 'ಇಲ್ಲವ್ವೋ' ಎನ್ನುತ್ತಾ, ಅವಳ ಹತ್ತಿರಕ್ಕೆ ಬಂದು ಕುಕ್ಕರಗಾಲಲ್ಲಿ ಕೂರ್ತಾ 'ಮಿಠಾಯಿ ಅಂಗಡಿ ಬಾಬಣ್ಣ ನಾಳೆಯಿಂದ ಕೆಲಸಕ್ಕೆ ಬಾ ಅಂದವ್ನ. ದಿನಕ್ಕೆ 15 ರುಪೈ ಕೊಡ್ತೀನಿ ಅಂದ' ಎಂದು ಹೇಳಿದವನ ಮುಖದಲ್ಲಿ ಸಂತಸವಿತ್ತು. ಮಗ ಇಷ್ಟು ಬೇಗ್ನೆ ಮನೆಯ ಕಷ್ಟ ಅರಿತಿದ್ದನ್ನು ಕಂಡ ಲಕ್ಷ್ಮವ್ವನ ಕಣ್ಣಾಲಿಗಳು ನೀರಾಡಿದವು. 'ಅಳಬೇಡವ್ವೋ. ಅಪ್ಪ ಮೇಲಿಂದ ನೋಡ್ತಿದ್ದಾನೆ. ನಿನ್ನ ಕಣ್ಣಲ್ಲಿ ನೀರು ಬಂದ್ರೆ ನನ್ನನ್ನು ಕನಸಲ್ಲಿ ಬಂದು ಕೊಂದೇಬಿಡ್ತಾನೆ' ಎಂದಳವಳು.
'ಮ್ವಾರಿ ತೊಳಿದು ಬಾರಲಾ ರಾಮ, ಇಟ್ಟು ಉಪ್ಪೆಸರು ಮಾಡೀವ್ನಿ' ಎಂದು ಲಕ್ಷ್ಮವ್ವ ಕರೆದಾಗ 'ಹಸಿವಿಲ್ಲವ್ವಾ' ಎಂದು ಎಲ್ಲೋ ಶೂನ್ಯದಲ್ಲಿ ಕಾಣೆಯಾಗಿದ್ದ. 'ಜಾಸ್ತಿ ಆತು ಕಣ್ಲಾ ನಿಂದು. ರಾತ್ರಿಯೆಲ್ಲಾ ಕನಸು ಕಾಣುವಿಯಂತೆ ಉಣ್ಣು' ಎಂದು ಗಂಗಳವ ತಂದು ಮುಂದಿಟ್ಟಳು. ಎತ್ತಲೋ ಗಮನದಲಿ ಮುಂದೆ ಇದ್ದ ಇಟ್ಟು ಖಾಲಿ ಮಾಡಿ ಕೈತೊಳೆದು ಆಕಾಶವ ನೋಡುತಾ ಹಟ್ಟಿ ಮುಂದೆ ಮಲಗಿದಾಗ ರಾಮನ ತಮ್ಮ ತಂಗಿ ಮಿಠಾಯಿ ಅಂಗಡಿ, ಅಲ್ಲಿನ ತಿನಿಸುಗಳ ಬಗ್ಗೆ ಅವನನ್ನು ನೂರೊಂದು ಪ್ರಶ್ನೆಗಳ ಕೇಳುತಲಿದ್ದರೂ ಕಿವಿಗಳು ಆಲಿಸದೇ ಹೋದವು. ಅವರ ಬಾಯಿ ಸೋತು, ನಿದ್ದೆಗೆ ಜಾರಿದರು.
ರಾಮುಗೆ ಮಾತ್ರ ನಿದ್ದೆಯೇ ಬರಲಿಲ್ಲ. ಕಣ್ಣು ಬಿಟ್ಟಿದ್ದರೂ, ಮುಚ್ಚಿದ್ದರೂ ನಾಳೆ ತಾನು ಕೆಲಸಕ್ಕೆ ಹೋಗುತಿರುವ ಅಂಗಡಿಯೇ ಕಾಣುತ್ತಿತ್ತು. ಇವನ ಹೊರಳಾಟ ಕಂಡ ಲಕ್ಷ್ಮವ್ವ ಗದರಿದ ಸದ್ದಿಗೆ ಅಲ್ಲೆಲ್ಲೋ ಬೊಗಳುತಿದ್ದ ನಾಯಿಯೂ ಸುಮ್ಮನಾಗಿದೆ. ಅಂತೂ ಕನಸಿನ ತುಂಬಾ ಲಡ್ಡು, ಜಿಲೇಬಿಯ ರುಚಿ ತುಂಬಿಕೊಂಡು ಇಂವ ನಿದ್ದೆಗೆ ಬಿದ್ದ.
=
ಮರುದಿನ ಬೆಳಗ್ಗೆ ಪೆಟಾರಿಯ ತೆಗೆದು ಅದರಲ್ಲಿದ್ದ ಎಲ್ಲಾ ಬಟ್ಟೆಗಳ ಜಾಲಾಡಿದ. ಇರುವುದರಲ್ಲೇ ಒಳ್ಳೆಯ ಹಳದಿ ಬಣ್ಣದ್ದನ್ನು ಉಟ್ಟ. ಲಕ್ಷ್ಮವ್ವ ಕೊಟ್ಟ ರಾತ್ರಿ ಮಿಕ್ಕಿದ್ದ ರಾಗಿ ಮುದ್ದೆಗೆ ಹುಳಿಮಜ್ಜಿಗೆಯ ಕಿವುಚಿದ ತಟ್ಟೆಯ ನೋಡಿ 'ಹೋಗವ್ವೋ. ಇದನ್ಯಾರು ತಿಂತಾರೆ? ರಾತ್ರಿಯಿಂದ ಬಾಬಣ್ಣ ಅಂಗಡಿಯ ಸಿಹಿ ತಿನ್ನಲು ಕಾದು ಕುಳಿತೀವ್ನಿ' ಎಂದು ಎದ್ದು ಹೋದದ್ದನ್ನು ಕಂಡು ಲಕ್ಷ್ಮವ್ವ, 'ಹಾಳಾದವ್ನೆ ಅಲ್ಪನ್ಗೆ ಏಶ್ವರ್ಯ ಬಂದ್ರೆ ನಿನ್ನಂಗೆ ನೋಡು. ಹೋಗು ಹೋಗು ಎಲ್ಲಿ ಹೋಗ್ತೀಯಾ? ಹೊತ್ತು ಮುಳ್ಗುದ ಮೇಲೆ ಸಿಕ್ಕೇ ಸಿಗ್ತೀಯ' ಎಂಬ ಗೊಣಗುವಿಕೆಗೆ ಕಿವಿಗೊಡದೆ ಹೊರಟೇ ಬಿಟ್ಟ ರಾಮು.
ಬಾಬಣ್ಣನ ಅಂಗಡಿಯ ದಾರಿ ಹಿಡಿದವನ ಕಾಲು ಕಣ್ಣುಗಳು ಭುವಿಯ ಮೇಲೆಯೇ ಇರದೆ ಎದುರಿಗೆ ಸೈಕಲ್ನಲ್ಲಿ ಬಂದ ವೆಂಕಟೇಶಪ್ಪನಿಗೆ ಅಡ್ಡ ಹೋದ ಕಾರಣ, 'ಮಂಗ್ಯಾ ನನ್ಮಗ್ನೆ. ಕಣ್ಕಾಣಕಿಲ್ವೇನೋ?' ಎಂದು ಬೈಸಿಕೊಂಡ. ಹುಟ್ಟಿದಾಗಿಂದ ಬರೀ ನೋಡುವುದರಲೇ ಕಳೆದಿದ್ದ ಆ ಸಿಹಿ ಅಂಗಡಿಗೆ ಇಂದು ನಾನು ಕೆಲಸಕ್ಕೆ ಹೋಗ್ತೀವ್ನಿ. ಕಣ್ಮುಂದೆಯೇ ಕಾಣುವ ಹಲವಾರು ತಿನಿಸುಗಳನ್ನು ಬಾಯಿಗೂ ಸೇರಿಸಬಹುದು ಎಂದುಕೊಂಡವನ ಬಾಯೆಲ್ಲಾ ನೀರಾಡಿತು.
ಅಂಗಡಿ ಮುಂದೆ ನಿಂತ ರಾಮುನ ಕಂಡ ಬಾಬಣ್ಣ, 'ಬಾರಲಾ ಒಳೀಕೆ. ಏನು ಮಕ ನೋಡ್ತಾ ನಿಂತ್ಬಿಟ್ಟಿ. ಒಸಿ ಕಸ ಬಳಿದು ನೀರಾಕು ಅಂಗಡಿ ಮುಂದೆ' ಎಂದು ಗದರುವ ದನಿಯಲ್ಲಿ ಹೇಳಿದ. ವೈವಿಧ್ಯ ಸಿಹಿಯ ನೋಡುತಾ ನಿಧಾನವಾಗಿ ಕೆಲಸ ಸಾಗುವುದ ಕಂಡ ಬಾಬಣ್ಣ, 'ಬಿರಬಿರನೆ ಕೈಯಾಡಿಸೋ ರಾಮ. ಗಿರಾಕಿಗಳು ಶುರುವಾದ ಮೇಲೆ ಧೂಳೆಬ್ಬಿಸಿದರೆ ಯಾರೂ ಸಾಮಾನು ಕೊಳ್ಳಾಕಿಲ್ಲ' ಎಂದ. ನಂತರ ಕೆಲಸದ ಮೇಲೆ ಕೆಲಸ ಅವನ ಬೆನ್ನಿಗೆ ಬಿದ್ದವು.
ಸಿಹಿಯ ಉಂಡೆಗಳ ಬಾಯಿಗೆ ಹಾಕುವ ಗಳಿಗೆಯ ನೆನೆದೇ ಮನದಲ್ಲೇನೋ ಪುಳಕ ರಾಮನಿಗೆ. ಮೊದಲ ದಿನದ ನೌಕರಿ ಕೇಳಿದರೆ ಎಲ್ಲಿ ಬೈಸಿಕೊಳ್ಳಬೇಕೋ ಎಂದು ಕಂಪಿಸಿದ. ಹೊತ್ತು ನೆತ್ತಿಗೇರತೊಡಗಿತು. ರಾಮನ ಹೊಟ್ಟೆ ಮಾತಾಡತೊಡಗಿತು. ಗಡಿಗೆಯಲ್ಲಿದ್ದ ನೀರನ್ನು ಕುಡಿದಾಗ ಸ್ವಲ್ಪ ನೆಮ್ಮದಿ. ಅರೆ ತಾಸು ಕಳೆದ ಮೇಲೆ ಮತ್ತೆ ತಾಳಲಾರದ ಹಸಿವು. ಮತ್ತೆ ನೀರು ಕುಡಿದರೂ ಸಮಾಧಾನವಾಗಲಿಲ್ಲ. ಎದುರಿಗೆ ಬಣ್ಣಬಣ್ಣದ ದೊಡ್ಡದೊಡ್ಡ ತಟ್ಟೆಗಳಿದ್ದರೂ ತಿನ್ನುವ ಹಾಗಿಲ್ಲ.
ಕ್ಷಣಗಳು ಯುಗಗಳಾದವು. ಮಧ್ಯಾಹ್ನ ಎರಡಾಯಿತು. 'ಉಣ್ಣಾಕೆ ಬನ್ನಿ' ಎಂದು ಹೆಂಡತಿ ಬಂದು ಕರೆದಾಗ ಅಂಗಡಿ ಮುಚ್ಚಲು ಹೇಳಿದ ಬಾಬಣ್ಣ. 'ಅರ್ಧ ತಾಸಿನಲ್ಲಿ ಮನೆಗೆ ಹೋಗಿ ಉಂಡು ಬಾ' ಎಂದು ತಾಕೀತು ಮಾಡಿದ. ಅಲ್ಲಿಂದ ಹೊರಟ ರಾಮ ಮನೆಗೆ ಹೋದರೆ ಅಮ್ಮ ಮುಸುರೆ ತಿಕ್ಕಲು ಹೋಗಿರುತ್ತಾಳೆ. ಬೀಗ ಬಡಿದ ಕದ ನೋಡಿ ಬರಬೇಕೆಂದು ಅಲ್ಲೇ ಅರಳೀಕಟ್ಟೆಯ ಮೇಲೆ ಕುಳಿತ. ಬೆಳಗಿನಿಂದ ಮಾಡಿದ ಕೆಲಸದಿಂದ ಮೈನೋವಿದ್ದರೂ, ಮುದುಡಿ ಮಲಗಿ ಕಣ್ಮುಚ್ಚಲೆತ್ನಿಸಿದರೂ ಮನಸು ದೇಹ ಹಗುರಾಗಲು ಹೊಟ್ಟೆಯ ಹುಳುಗಳ ಸದ್ದು ಬಿಡಲೇ ಇಲ್ಲ. ಅರ್ಧ ತಾಸು ಕಳೆದ ಮೇಲೆ ಎಲ್ಲಿ ತಡವಾಯಿತೋ ಎಂದು ಅಂಗಡಿ ಕಡೆಗೆ ನಡೆದ.
ಬಾಬಣ್ಣ, 'ಉಂಡೇನ್ಲಾ?' ಎಂದಾಗ ಇಲ್ಲ ಅಂದ್ರೆ ತಪ್ಪಾದೀತು ಎಂದುಕೊಂಡು 'ಹ್ಞೂಂ' ಎಂದ. 'ಇಲ್ದಿದ್ರೆ ಹೇಳು, ಮೈಸೂರು ಪಾಕಿನ ಪುಡಿ ತಿನ್ನೀವಂತೆ' ಎಂದಾಗ, ಅಯ್ಯೋ ನಿಜ ಹೇಳ್ಬೇಕಿತ್ತು. ಹೊಟ್ಟೆನಾದ್ರೂ ತಣ್ಣಗಾಗಿರೋದು ಎಂದು ಕರುಬಿದ. ತಂಬಿಗೆಯ ಎತ್ತಿ ಸಮಾಧಾನ ಆಗುವವರೆಗೂ ನೀರ ಇಳಿಸಿದ.
ಸಂಜೆ ಆಯಿತು. ಬೆಳಗಿನಿಂದ ಇಟ್ಟಿಲ್ಲದೆ ದೇಹ ಸೋತು ಹೋಗಿದೆ. ಆದರೆ, ಗಿರಾಕಿಗಳು ಹೆಚ್ಚಾಗತೊಡಗಿದರು. ಎತ್ತು, ಇಳಿಸುವ, ತೂಗುವ ಕೆಲಸ ಸಾಗೇ ಇತ್ತು. ಬಾಯಿಯ ಚಪಲ ಹೋಗಲಿ, ಹೊಟ್ಟೆಯ ಸಪ್ಪಳವ ಕೊನೆಗಾಣಿಸಲೂ ಆಗಲಿಲ್ಲ ರಾಮುವಿಗೆ. ಅವ್ವ ಕೊಟ್ಟ ಇಟ್ಟು ಮಜ್ಜಿಗೆ ಕುಡಿದು ಬಂದಿದ್ದರೆ ಈ ಗತಿ ಬರುತಿರಲಿಲ್ಲ ಎಂದು ಆಗ ಅರಿವಾಗತೊಡಗಿತು ರಾಮನಿಗೆ. ಕೆಲಸ ಮುಗಿದು, ಮನೆ ದಾರಿ ಹಿಡಿದರೆ ಸಾಕೆಂದು ಕಾಯತೊಡಗಿದ. ರಾತ್ರಿ ಆಯಿತು. 'ನಡೀಲ ಮನೆಗೆ ನಾಳೆ ಬಿರನೆ ಬಂದು ಕೆಲಸ ಶುರುವಚ್ಚಿಕೊಂಡು ಬಿಡು' ಎಂದ ಬಾಬಣ್ಣ ಕಾಗದದ ಪಟ್ಟಣವನು ಕೈಗಿಟ್ಟು 'ಚಂದ ಮಾಡ್ತೀಯಲೆ ಕೆಲಸ. ಹಿಂಗೇ ಮುಂದುವರೆಸು ಎಂದ. ಬತ್ತೀನ್ರಿ ಬಾಬಣ್ಣ ಎಂದು ಹೊರಟವನ ಮನದಲಿ ಆ ಪಟ್ಟಣದಲಿ ಏನಿದೆ ಎಂಬ ಕಾತರ. ಸ್ವಲ್ಪ ದೂರ ಹೋದ್ಮೇಲೆ ಪಟ್ಟಣ ತೆಗೆದು ನೋಡಿದಾಗ, ಅಳಿದುಳಿದು ಪುಡಿಯಾದ ಸಿಹಿತಿನಿಸುಗಳು ಕಾಣಿಸಿದವು. ಮತ್ತೆ ಹೊಟ್ಟೆ ಸದ್ದು ಮಾಡಿತು. ಆದರೆ ಅವನಿಗೇ ತಿಳಿಯದೆ ತಮ್ಮ, ತಂಗಿ, ಅವ್ವನ ನೆನಪು ಕೈಗಳು ಬಾಯತ್ತ ಹೋಗುವುದನ್ನು ತಡೆಯಿತು. ಸರಸರನೆ ಮನೆಯತ್ತ ನಡೆದ.
=
ಮನೆಗೆ ಬಂದಾಕ್ಷಣ 'ಬಾರ್ಲಾ ಸಿಹಿ ಅಂಗ್ಡಿ ಹುಡುಗ' ಎಂದಳು ಲಕ್ಷ್ಮವ್ವ. ಅಣ್ಣನ ಕೈಯಿಂದ ಪಟ್ಟಣವ ಕಿತ್ತುಕೊಂಡ ತಂಗಿ ಖುಷಿಯಿಂದ ತೆರೆದಳು. 'ಯಾಕೋ ಅಣ್ಯಾ ಎಲ್ಲಾ ಪುಡಿ ಆಗೈತಿ' ಎಂದಾಗ, 'ಕೈಜಾರಿ ಪಟ್ಟಣ ಕೆಳಕ್ಕೆ ಬಿತ್ತು ಕಣೆ. ಸದ್ಯ ಒಡಕಣ್ಲಿಲ್ಲಾ. ನೀನು ತಿನ್ನು' ಎಂದ ತಕ್ಷಣ, ಆಕೆ ಮುಕ್ಕತೊಡಗಿದಳು. ಲಕ್ಷ್ಮವ್ವ ತಂದಿಟ್ಟ ಗಂಗಳದಲಿನ ಇಟ್ಟು ಸೊಪ್ಪೆಸರನು ನೋಡಿದ ರಾಮನಿಗೆ ಮೃಷ್ಟಾನ್ನ ಭೋಜನ ಕಂಡಂತಾಯಿತು. ತಲೆ ಎತ್ತದೆ ಒಂದೇ ಸಮನೆ ಮುಗಿಯುವವರೆಗೂ ತಿಂದ. ನೆಕ್ಕಿದ. 'ಅವ್ವ ಸೊಪ್ಪೆಸರು ಇಟ್ಟು ಬೋ ಪಸಂದಾಗಿ ಮಾಡೌವ್ಳೆ' ಎಂದ. ಬೆಳಗಿನಿಂದ ದುಡಿತದ ಪರಿಣಾಮ, ಚಾಪೆ ಕೆಳಗೆ ಬಂದ ತಕ್ಷಣ ಆಗಸದಲಿ ಚುಕ್ಕಿಗಳೂ ಕಾಣದಾದವು. ಕಣ್ಗಳು ನಿದಿರಮ್ಮನ ಅರಮನೆಯಲಿ ಕನಸಿಗೆ ಕೈಹಾಕತೊಡಗಿದವು. ಕನಸಿನ ತುಂಬಾ ಇಟ್ಟು. ಹುಳಿ ಮಜ್ಜಿಗೆ, ಸೊಪ್ಪೆಸರ ಗಂಗಳಗಳು ರಾರಾಜಿಸುತ್ತಿದ್ದವು.ಟಿ
- ಜಮುನಾ ರಾಣಿ ಎಚ್.ಎಸ್.
jamuna.pradeep@gmail.com