ಖುಷಿ

ಸೆಕ್ಸ್ ರೇ ರಿಪೋರ್ಟ್

'8 ವರ್ಷದ ಬಾಲಕಿ ಮೇಲೆ 15 ವರ್ಷದ ಯುವಕನಿಂದ ಅತ್ಯಾಚಾರ', '18-20 ವರ್ಷದ ಆಸುಪಾಸಿನ ಕಾಲೇಜು ಹುಡುಗ- ಹುಡುಗಿಯ ಕಾಮದಾಟದ ಎಮ್ಮೆಮ್ಮೆಸ್‌'...

ಇಂದಿನ ಸಮಾಜದಲ್ಲಿ ಕಾಮವನ್ನು ಮುಚ್ಚಿಡಲು ಯತ್ನಿಸಿ ಅದರ ಮೇಲಿನ ವ್ಯಾಮೋಹವನ್ನು ಹೆಚ್ಚಿಸುತ್ತಿದ್ದೇವೆ. ಸಿನಿಮಾಗಳಲ್ಲಿನ ಹಿಂಸಾತ್ಮಕ, ಸಮಾಜಘಾತುಕ ಸನ್ನಿವೇಶಗಳನ್ನು ಸೆನ್ಸಾರ್ ಮಾಡದೆ, ಲೈಂಗಿಕ ದೃಶ್ಯಗಳನ್ನು ಸೆನ್ಸಾರ್ ಮಾಡಿ ಎನ್ನುವ ವಿವೇಕ-ವಿಚಾರವಾದಿಗಳ ತರ್ಕ ಕುಹಕವಾಗಿದೆ...

 '8 ವರ್ಷದ ಬಾಲಕಿ ಮೇಲೆ 15 ವರ್ಷದ ಯುವಕನಿಂದ ಅತ್ಯಾಚಾರ', '18-20 ವರ್ಷದ ಆಸುಪಾಸಿನ ಕಾಲೇಜು ಹುಡುಗ- ಹುಡುಗಿಯ ಕಾಮದಾಟದ ಎಮ್ಮೆಮ್ಮೆಸ್‌', 'ಕಚೇರಿಯಲ್ಲಿ ಸಹೋದ್ಯೋಗಿಯ ಮೇಲೆ ಲೈಂಗಿಕ ಕಿರುಕುಳ'- ಹೀಗೆ ಸಂಜೆ ಟೀ ಕುಡೀತಾ ಟಿವಿ ಮುಂದೆ ಕೂತವನಿಗೆ ಸಿಕ್ಕ ಹಸಿ-ಬಿಸಿ ಸುದ್ದಿಗಳಿವು. ಈ ಕಾಮಕೇಂದ್ರಿತ ಸುದ್ದಿಗಳನ್ನು ಕೇಳಿ ಹೇಸಿಗೆ ಹುಟ್ಟಿದಂತಾದ ವೇಳೆಗೆ ಅಮ್ಮ ಮಾಡಿದ ಬಿಸಿ ಬಿಸಿ ಚಹಾ ಕುಡಿದು ಟಿವಿ ಆಫ್ ಮಾಡಿ ಕಣ್ಮುಚ್ಚಿ ಕುಳಿತೆ. ದೇಹದ ಕಣ್ಮುಚ್ಚಿ, ಮನಸಿನ ಕಣ್ತೆಗೆದವನಿಗೆ ಅನ್ನಿಸಿದ್ದು ಕಾಮ ಅಂದ್ರೇನು?
ಅಷ್ಟರಲ್ಲಿ ಬಾಲ್ಯದಲ್ಲಿ ಅಜ್ಜಿ ಹೇಳಿದ ಕಾಮಾಸುರನ ಕಥೆ, ಕಾಮನನ್ನು ಗೆಲ್ಲಲಾಗದೆ ಹೋದ ಆ ಬ್ರಹ್ಮ, ವಿಷ್ಣು, ಮಹೇಶ್ವರರು ಮಾಯೆಗೆ ಶರಣಾಗಿ ಪ್ರಾರ್ಥಿಸಿದ ಕಥೆಗಳ ಮೆಲುಕಿನಿಂದ ಅನ್ಸಿದ್ದು; 'ಛೇ, ಈ ಕಾಮ ಬಹಳ ಕೆಟ್ಟದ್ದು. ಸತ್ಪ್ರಜೆಯಾಗಲು ಕಾಮದ ತ್ಯಜಿಸುವಿಕೆ ಅಗತ್ಯ' ಎಂದು. ಪುರಾಣದ ಉಲ್ಲೇಖದಂತೆ ಮಹಿಷನು ದೇವಿಯ ಸಂಹಾರಕ್ಕೆ ತನ್ನ ಚದುರಂಗ ಬಲ ಸೈನ್ಯ ಕಳಿಸಿ, ಅವರು ಸೋಲಪ್ಪಿದ ಬಳಿಕ ತನ್ನ ಮುಖ್ಯಮಂತ್ರಿಯಾದ ಚಿಕ್ಷುರ ನಾಮದ ಕಾಮನನ್ನು ದೇವಿಯ ಗೆಲ್ಲಲು ಕಳುಹಿಸುವನು. ಕಾಮನು ಪಂಚಾನನ ಸಮಾನ. ಈತನ ಬಾಣದ ಪೆಟ್ಟಿಗೆ ಒಳಗಾಗದವರಾರು ಯಾರೂ ಇಲ್ಲ. ತ್ರಿಮೂರ್ತಿಗಳು, ವಿಶ್ವಾಮಿತ್ರ, ಪರಶರಾದಿ ಮಹಾಮುನಿಗಳು, ಜೈಮಿನಿ, ವಶಿಷ್ಠ ಮೊದಲಾದ ಋಷಿಗಳು, ಚಂದ್ರ ಇಂದ್ರಾದಿ ಮಹಿಮರೆಲ್ಲರೂ ಕಾಮನ ವಶರಾದವರೇ. 
ಅದೇ ಅಜ್ಜಿ ಹೇಳಿದ್ದು, ಜಗತ್ತಿನ ಉದಯದ ಬೇರೊಂದು ಕಥೆ. ಸಂಖ್ಯಾ- ತತ್ವಶಾಸ್ತ್ರದ ಪ್ರಕಾರ, ಪ್ರಪಂಚದ ಉಗಮ ಶಿವ- ಶಕ್ತಿಯ ಸಮಾಗಮದಿಂದಾದದ್ದು. ಪುರುಷ- ಪ್ರಕೃತಿಯ ಮಿಲನದಿಂದಾದ್ದು. ಶಿವ- ಅರಿವಿನ ಸೂಚಕ, ಪುರುಷತತ್ವದ ಸಂಕೇತ. ಪ್ರಕೃತಿಯು ಜಾಗೃತ ಶಕ್ತಿಯ ಸೂಚಕ, ಸ್ತ್ರೀತತ್ವದ ಸಂಕೇತ. ಯಾವಾಗ ಪುರುಷ ಮತ್ತು ಪ್ರಕೃತಿ, ಶಿವ ಮತ್ತು ಶಕ್ತಿ ಒಂದಾಗುತ್ತಾರೋ ಆಗ ಜಗದ ಉಗಮ. ಶಿವ- ಪಾರ್ವತಿಯರ ಮಿಲನದ ಪ್ರತೀಕ, ಸಂಕೇತ ಅರ್ಧನಾರೀಶ್ವರ ಶಿವಲಿಂಗ- ಶಕ್ತಿಪೀಠ.
ಹೀಗೆ ದೀರ್ಘಾಲೋಚಿಸಿ ತೀರ್ಮಾನಕ್ಕೆ ಬರುವ ವೇಳೆಗೆ ಸರಿಯಾಗಿ ಅಮ್ಮ ಊಟಕ್ಕೆ ಕರೆದಳು. ಹೋಗಿ ಊಟ ಮುಗ್ಸಿ, ಮತ್ತೆ ನೋಡ್ತಾ ಕುಳಿತದ್ದು ಅದೇ ಟಿವಿ. ನ್ಯಾಷನಲ್ ಜಿಯೋಗ್ರಫಿಕ್ ಚಾನೆಲ್‌ನಲ್ಲಿ ಬರ್ತಾ ಇದ್ದ ಲೂಸಿ ಕ್ಲೋವರ್ ಸಂಶೋಧನೆಯ ಪ್ರಾಣಿಜಗತ್ತಿನ ಲೈಂಗಿಕ ಭಾವಗಳನ್ನು ಕುರಿತ ಸಾಕ್ಷ್ಯಚಿತ್ರ ಅದು. ಛೇ ಮತ್ತದೇ ವಿಷಯನಾ ಅಂತ ಅನ್ಸಿರೋ ಮೆದುಳಿಗೆ 'ಹೇ ನೋಡೋ.... ಏನೂ ಆಗಲ್ಲ' ಅಂತ ಹೇಳಿದ್ದು ಮನಸ್ಸು. ನೋಡೋಕ್ಕೆ ಆರಂಭಿಸಿದೆ. ಅದೊಂದು ಅದ್ಭುತ ಲೋಕ. ರಮ್ಯ ಜಗತ್ತು. ಚಿತ್ರ- ವಿಚಿತ್ರ ಭಾವಗಳು. ಕಾಮದ ವಿವಿಧ ಆಯಾಮಗಳನ್ನು ಅನಾವರಣ ಮಾಡಿದ ಆ ಕಾರ್ಯಕ್ರಮ 'ವೈಲ್ಡ್ ಸೆಕ್ಸ್‌'.

ಜೀವ ನುಂಗುವ ಕಾಮ
ಪ್ರಾಯಕ್ಕೆ ಬಂದ ಹೆಣ್ಣು ಪತಂಗ ತನ್ನ ಆಕರ್ಷಕ ರಂಗುರಂಗಿನ ಮೈಮಾಟದೊಂದಿಗೆ ಝೇಂಕರಿಸುತ್ತ ಎಲ್ಲವನ್ನೂ ತಿಳಿದು, ಏನೂ ತಿಳಿದಿಲ್ಲವೆಂಬ ಭಾವದಿಂದ ಆಹಾರದ ಬೇಟೆಗಾಗಿ ಏಕಾಗ್ರಚಿತ್ತದಿಂದ ಕಾಯುತ್ತಿರುವ ವೇಳೆಗೆ, ಕಾಮವಶವಾದ ಪುರುಷ ಪತಂಗ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ತಾನು ಸಾಯಲೂ ಸಿದ್ಧವಾಗಿ ಆಯ್ದುಕೊಂಡ ದಾರಿ  ಸೆಕ್ಸ್. ಹ್ಞಾಂ ಇದು ಸತ್ಯ. ಟಿನೊಡೆರಾ ಸೈನೆನ್ಸಿಸ್ ಪ್ರಭೇದಕ್ಕೆ ಸೇರಿದ ಕೀಟವು ತನ್ನ ಅಸ್ತಿತ್ವ ಉಳಿಸಲು, ಸಂತಾನ ಹೆಚ್ಚಿಸಲು, ವೀರ್ಯಾಣುವನ್ನು ಹೆಣ್ಣಿನ ಅಂಡಾಣುವಿಗೆ ಸೇರಿಸಲು ಕಂಡುಕೊಂಡ ಹಾದಿ ಸೆಕ್ಸ್ ಮೂಲಕ ಸಾವು. ಗಾಂಭೀರ್ಯದಿಂದ ಬೇಟೆಗೆ ನಿಂತ ಹೆಣ್ಣು ಪತಂಗದ ಮುಂದೆ ಅದೇನೋ ಸಂತಸದಿಂದ ಗಂಟೆಗೆ ಸುಮಾರು 10 ಸೆಂ.ಮೀ.ನಷ್ಟು ನಿಧಾನವಾಗಿ ಕಳ್ಳ ಬೆಕ್ಕಿನಂತೆ ಹೆಜ್ಜೆ ಸವರುತ್ತ, ಮುನ್ನಡೆಯುವಾಗ ತನ್ನ ಉದ್ದ ಮೀಸೆ ಹೆಣ್ಣಿಗೆ ತಾಗಿದಾಗ ಮನದಲ್ಲಿ ಅದೇನೋ ಆನಂದ, ಮೈಯಲ್ಲಿ ಪುಳಕ. ಅಷ್ಟರಲ್ಲೇ ಪುರುಷ ಪತಂಗದ ಮೇಲೆ ಹೆಣ್ಣಿನ ಆಕ್ರಮಣ. ಪ್ರಾರಂಭದಲ್ಲಿ ಕಣ್ಣನ್ನು ಕಚ್ಚಲಾರಂಭಿಸಿದ ಹೆಣ್ಣು ಪತಂಗ ನಿಧಾನವಾಗಿ ಇಡೀ ತಲೆಯನ್ನು ತಿನ್ನಲಾರಂಭಿಸುತ್ತದೆ. ಬೇಟೆಗೆ ನಿಂತ ಹೆಣ್ಣಿನ ಹಸಿವಿಗೆ ಆಹಾರವಾಗುತ್ತಿರುವ ಪುರುಷ ಕೀಟಕ್ಕೆ ತನ್ನ ವೀರ್ಯಾಣುವನ್ನು ತನ್ನ ಸ್ತ್ರೀ ಸಂಗಾತಿಯ ಅಂಡಾಣುವಿನೊಂದಿಗೆ ಸಮ್ಮಿಲನ ಮಾಡಬೇಕಾದ ಬಹುದೊಡ್ಡ ಕರ್ತವ್ಯ, ಅವಶ್ಯಕತೆ. ಅದಕ್ಕಾಗಿ ತನ್ನ ಪ್ರಾಣ ಲೆಕ್ಕಿಸದೆ ಸಂಭೋಗ ಪೂರೈಸಿ, ಕಾಮದಾಸವಾಗುತ್ತದೆ.

ಆರೋಗ್ಯಕರ ಆಯ್ಕೆ
ಆಫ್ರಿಕಾದ ಹುಲ್ಲುಗಾವಲನ್ನು 'ಯೀಲ್ಡ್ ಆಫ್ ಟೆಸ್ಟೋಸ್ಟಿರಾನ್‌'ಅಂತಾನೆ ವರ್ಣಿಸೋದು ಖ್ಯಾತಿ. ಆಕ್ರಮಣಕಾರಿ ಪ್ರಬಲ ಪುರುಷ ಸಮುದಾಯದ ರಣಭೂಮಿಯದು. ಪುರುಷ ಪ್ರಾಣಿಗಳ ಕಾಳಗಕ್ಕೆ ಎರಡು ಮುಖ್ಯ ಕಾರಣಗಳು;  ಆಹಾರ, ಸೆಕ್ಸ್. ಹೌದು, ಆಹಾರಕ್ಕಾಗಿ ಹೊಡೆದಾಡೋದು ಸರಿ. ಆದ್ರೆ ಯಾಕಪ್ಪ ಈ ಸೆಕ್ಸ್‌ಗೆ? ಈ ಪ್ರಾಣಿಗಳೂ ಮನುಷ್ಯನಂತಾಗಿವೆ ಅಂತ ಆ ಕ್ಷಣಕ್ಕೆ ಅನಿಸಿತು. ಆಗ ಕಾದಿದ್ದು ಅಚ್ಚರಿ. ಗಂಡು ಸಾರಂಗ ತನ್ನ ಫೆರಮೋನ್ಸ್ ಅನ್ನು ಸ್ರವಿಸಿ ತನ್ನ ಗಡಿ ನಿರ್ಮಿಸಿಕೊಳ್ಳುತ್ತಿತ್ತು. ಆ ಸಮಯಕ್ಕೆ ಅದೇ ಜಾಗಕ್ಕೆ ಬಂದ ಮತ್ತೆರೆಡು ಗಂಡು ಸಾರಂಗಗಳೊಡನೆ ಯುದ್ಧ ಪ್ರಾರಂಭವಾಗೇ ಬಿಡ್ತು. ಕೊಂಬುಗಳಿಂದ ತಿವಿದು, ಹಣೆಯಿಂದ ಹಣೆಗೆ ಹೊಡೆದು, ತಲೆ ಗಿಮ್ ಅನ್ನೋವರೆಗೆ ಯುದ್ಧ ನಡಿತಾನೆ ಇತ್ತು. ಈ ಕಾಳಗವನ್ನು ಅವಲೋಕಿಸುತ್ತಲೇ ಅಲ್ಲೇ ಗುಂಪಿನಲ್ಲಿದ್ದ ಸುಂದರ ಕೋಮಲ ವಯ್ಯಾರಿ ಹೆಣ್ಣು ಸಾರಂಗ ಬಾಗುತ್ತ ಬಳುಕುತ್ತ, ಅಂಗಸೌಷ್ಠವ ಪ್ರದರ್ಶಿಸುತ್ತಾ ತನ್ನ ಲೈಂಗಿಕ ಆಸೆಗೆ ಪುರುಷ ಸಂಗಾತಿಯ ಆಯ್ಕೆ ಪ್ರಕ್ರಿಯೆ ಆರಂಭಿಸಿತ್ತು. ಕಾದಾಡುತ್ತಿದ್ದ 4 ಪುರುಷ ಸಾರಂಗಗಳನ್ನು ಓರೆಗಣ್ಣಿನಿಂದ ನೋಡುತ್ತಾ ಸಾಗುತ್ತಿದ್ದ ಹೆಣ್ಣು ಸಾರಂಗವನ್ನು ಕಂಡ ಗಂಡು ಸಾರಂಗಗಳು, ಹೆಣ್ಣು ಸಾರಂಗದ ಮೇಲೆ ಮುತ್ತಿಡುತ್ತವೆ. ಪ್ರಬಲ ಪುರುಷ ಸಖರ ಆಕ್ರಮಣಕ್ಕೆ ಪ್ರತಿಯಾಗಿ ಹೆಣ್ಣು ಗಂಡಿನ ಫೆರಮೋನ್ಸ್ ಅನ್ನು ಗ್ರಹಿಸಿ ಆತ ತನಗೆ ಸೂಕ್ತವೋ, ಇಲ್ಲವೋ ಎಂದು ಪರೀಕ್ಷಿಸುತ್ತದೆ. ಹೀಗೆ 3 ಸಾರಂಗಗಳನ್ನು ತಿರಸ್ಕರಿಸಿ ಕಡೆಯದಾಗಿ ಬಲಿಷ್ಠ, ಆರೋಗ್ಯಕರ ಪುರುಷ ಸಂಗಾತಿಗೆ ಸಂಭೋಗಕ್ಕೆ ಅವಕಾಶ ನೀಡುತ್ತದೆ.
ಇಂಥ ಅನೇಕ ಕೌತುಕ ನೋಡಿದ ಮನಸ್ಸಿನಲ್ಲಿ ಬಂದದ್ದು- ಹಲವು ಸಂಘರ್ಷಗಳೊಂದಿಗೆ ತಮ್ಮ ಮುಂದಿನ ಬಲಿಷ್ಠ ಸಂತತಿಗೆ ಜನ್ಮ ನೀಡುವ ಅಭಿಲಾಷೆಯನ್ನು ಈಡೇರಿಸಲು ಅನುಸರಿಸುವ ಸಲಿಂಗ ಕಾಮ, ಉಭಯಲಿಂಗಿ ಲೈಂಗಿಕ ಕಾಮ, ಶವಕಾಮ ಸೇರಿದಂತೆ ಅನೇಕ ವಿಚಿತ್ರ, ವಿಸ್ಮಯ, ವಿಲಕ್ಷಣ ವರ್ತನೆಗಳ ಅನಾವರಣ.

ಗಾಂಧಿ ಹಾಗಿದ್ದರು!
ಗರ್ಭವತಿಯಾದ ಹೆಣ್ಣಿಗೆ ಮೊದಲ ತಿಂಗಳಲ್ಲೇ ತನ್ನ ಮಗುವಿನ ಬಗ್ಗೆ ಅದೇನೋ ಪ್ರೀತಿ, ವಾತ್ಸಲ್ಯ. ಅವುಗಳೆಲ್ಲದರೊಡನೆ ದೊಡ್ಡದೊಂದು ಕನಸು. ಮಗು ಎಲ್ಲರಿಗಿಂತ ಭಿನ್ನನಾಗಬೇಕು, ಒಳ್ಳೆಯವನಾಗಬೇಕು, ಸತ್ಪ್ರಜೆಯಾಗಬೇಕೆಂಬ ಮಹದಾಸೆ. ಆ ತಾಯಿಗೆ ನಿನ್ನ ಮಗು ಒಳ್ಳೆಯವನಾಗಬೇಕು ಅಂತೀಯಲ್ಲ, ಒಳ್ಳೆಯವ ಅಂದ್ರೆ ಹೇಗೆ ಅಂತ ಕೇಳಿದ್ರೆ, ಆಕೆ ಹೇಳೋದು... ಗಾಂಧಿ ತಾತನ ಹಾಗೆ, ಭಗವತ್ಪಾದ ಶಂಕರರ ಹಾಗೆ, ಬುದ್ಧನ ಹಾಗೆ ಅಂತ.
ಖ್ಯಾತ ಇತಿಹಾಸಜ್ಞ ಜಾಡ್ ಆಡಮ್ಸ್ 'ಗಾಂಧೀ: ನೇಕೆಡ್ ಆಂಬಿಷಿಯನ್‌' ಕೃತಿಯಲ್ಲಿ ಬಾಪೂಜಿಯವರ ವಿಲಕ್ಷಣ ನಡವಳಿಕೆಗಳನ್ನು ತೆರೆದಿಟ್ಟಿದ್ದಾರೆ. ಅಲ್ಲಿ ವಿಶ್ಲೇಷಿಸಿದಂತೆ, ಗಾಂಧೀಜಿ ತಂದೆಯ ಅಂತ್ಯ ಕಾಲದಲ್ಲಿ ಅವರ ಯೋಗಕ್ಷೇವುದ ಬಗ್ಗೆ ವಿಚಾರಿಸದೆ ಕಸ್ತೂರ ಬಾರೊಡನೆ ಲೈಂಗಿಕ ಕ್ರಿಯಾಸಕ್ತರಾಗಿ ಮೈಮರೆತಿದ್ದರು. ಕೆಲವು ದಶಕಗಳ ಕಾಲ ಕಸ್ತೂರ ಬಾರನ್ನು ಲೈಂಗಿಕವಾಗಿ ದೂರಮಾಡಿ ಕಾಮ ನಿಗ್ರಹವನ್ನೂ ಮೆರೆದರು ಗಾಂಧೀಜಿ. ಅವರ ಆಪ್ತ ಸಹಾಯಕಿ ಮನು ಬೆನ್ ಹೇಳುವಂತೆ, 'ಕಾಮನಿಗ್ರಹದ ಪ್ರಯೋಗವಾಗಿ ಗಾಂಧೀಜಿ 12 ವರ್ಷದ ಬಾಲಕಿ ಮತ್ತು ಇತರೆ ಮಹಿಳೆಯರೊಡನೆ ಇಡೀ ರಾತ್ರಿ ಬೆತ್ತಲೆ ಮಲಗುತ್ತಾರೆ'. ಈ ಘಟನೆ ಗಾಂಧಿಯವರ ಕಾಮನಿಗ್ರಹದ ಸಾಬೀತು ಎಂದು ಕೊಂಡಾಡುವ ನಾವು, ಸಾಮಾನ್ಯ ಜನರನ್ನೇಕೆ ಕಾಮದ ವಿಚಾರದಲ್ಲಿ ನಿಂದಿಸುತ್ತೇವೆ? ದೂಷಿಸುತ್ತೇವೆ?

ಮನರಂಜನಾ ವಸ್ತುವಾಯಿತಾ?
ಬ್ಯಾಕ್ಟೀರಿಯಾದಂಥ ಸೂಕ್ಷ್ಮಾಣು ಜೀವಿಗಳು ದ್ವಿದಳನ ಪ್ರಕ್ರಿಯೆಯಿಂದ ವಂಶಾಭಿವೃದ್ಧಿ ನಡೆಸುತ್ತವೆ. ಹಾಗೆಯೇ ಎಲ್ಲ ಪ್ರಾಣಿಗಳೂ ದ್ವಿದಳನದ ಮೂಲಕವೇ ವಂಶಾಭಿವೃದ್ಧಿ ನಡೆಸಬಹುದಿತ್ತಲ್ಲ! ಏಕೆ ಈ ಸೆಕ್ಸ್? ಎಂಬ ಪ್ರಶ್ನೆಗೆ ಸಂಶೋಧನೆಗಳು ನೀಡಿರುವ ಉತ್ತರ- ಪ್ರಕೃತಿ ಜೀವವಿಕಸನಕ್ಕಾಗಿ ಸೆಕ್ಸ್ ಅನ್ನು ಆಯ್ದುಕೊಂಡಿದೆ. ಸೆಕ್ಸ್‌ನಿಂದ ಜೀವ ವಿಕಸನ, ಜೀವ ವಿಕಸನದಿಂದ ನಾವು, ನಮ್ಮಿಂದ ಈ ಸಮಾಜ. ಹಾಗಾದ್ರೆ ಈ ಸಮಾಜಕ್ಕೆ ಏಕೆ ಸೆಕ್ಸ್ ಮೇಲೆ ಅಸಹ್ಯ? ಇಂದ್ರ - ಅಹಲ್ಯೆಯರು ಆದರ್ಶವಾಗಿರುವ ನಮಗೆ ಅವರ ಕಾಮ ಕಂಡೂ ಕಾಣದ ವಸ್ತು. ಆದರೆ ಇಂದು ಪರಸ್ಪರ ಸಹಮತದಿಂದಲೇ ಪ್ರೀತಿ ಪ್ರೇಮದಾಳಕ್ಕೆ ಇಳಿದು ಸ್ತ್ರೀ- ಪುರುಷರು ಕಾಮದಾಟವಾಡಿದ್ದಾರೆ ಎಂದರೆ ಅದು ಎಲ್ಲರಿಗೂ ಬಿಸಿ ಸುದ್ದಿ. ಅವರೇನೋ ಅಪರಾಧ ಎಸಗಿದ್ದಾರೆ ಎನ್ನುವ ಪರಿಕಲ್ಪನೆ. ಬಲಾತ್ಕಾರವನ್ನು ವಿರೋಧಿಸೋಣ. ಆದರೆ, ಭಾವನೆಗಳ ದಾಸರಾಗಿ ಕಾಮದಾಟವಾಡಿದ ಜನರನ್ನು ನಮ್ಮ ಮನರಂಜನಾ ವಸ್ತುಗಳಾಗಿ ನೋಡುವುದು ಬೇಡ.  ಇಂದಿನ ಸಮಾಜದಲ್ಲಿ ಕಾಮವನ್ನು ಮುಚ್ಚಿಡಲು ಯತ್ನಿಸಿ ಅದರ ಮೇಲಿನ ವ್ಯಾಮೋಹವನ್ನು ಹೆಚ್ಚಿಸುತ್ತಿದ್ದೇವೆ. ಸಿನಿಮಾಗಳಲ್ಲಿನ ಹಿಂಸಾತ್ಮಕ, ಸಮಾಜಘಾತುಕ ಸನ್ನಿವೇಶಗಳನ್ನು ಸೆನ್ಸಾರ್ ಮಾಡದೆ, ಲೈಂಗಿಕ ದೃಶ್ಯಗಳನ್ನು ಸೆನ್ಸಾರ್ ಮಾಡಿ ಎನ್ನುವ ವಿವೇಕ- ವಿಚಾರವಾದಿಗಳ ತರ್ಕ ಕುಹಕವಾಗಿದೆ.

ಕೊಲೆ ದೃಶ್ಯಕ್ಕೆ ಸೆನ್ಸಾರ್ ಇಲ್ವೇ?
'ಚಾರ್ಲಿ ಕಂಟ್ರಿಮ್ಯಾನ್‌' ಚಲನಚಿತ್ರದಲ್ಲಿನ ನಾಯಕ- ನಾಯಕಿಯರ ಪ್ರಣಯದ ದೃಶ್ಯಗಳನ್ನು ಸೆನ್ಸಾರ್ ಮಾಡಿ, ಕೊಲೆಪಾತಕ ಸನ್ನಿವೇಶಗಳನ್ನು ಹಾಗೆಯೇ ಬಿಟ್ಟ ಮೋಷನ್ ಪಿಕ್ಚರ್ಸ್ ಅಸೋಸಿಯೇಷನ್ ಆಫ್ ಅಮೆರಿಕ ಅವರಂಥ ವಿಚಾರವಾದಿಗಳ ವಿಚಾರಕ್ಕೆ ಸೆಡ್ಡು ಹೊಡೆದ 26ರ ಹರೆಯದ ಚಿತ್ರದ ನಾಯಕಿ ಇವನ್ ರಚೆಲ್‌ವುಡ್‌ರ ಕಾಮದ ಬಗೆಗಿನ ಚಿಂತನೆ ನಮ್ಮೆಲ್ಲರ ಸಂಕುಚಿತ ಭಾವಗಳಿಗೆ ಆದರ್ಶಪ್ರಾಯ.
ಇಂದಿನ ಸಮಾಜದಲ್ಲಿ ಗಂಡ- ಹೆಂಡಿರು ಕೂಡ ನಾಚಿ, ಹೆದರಿ ಸಂಭೋಗಿಸಬೇಕಾದ ದುಸ್ಥಿತಿ ಇದೆ. ಮಗು ಬಾಲ್ಯ, ಶೈಶವ ಅವಸ್ಥೆಗಳನ್ನು ಪೂರೈಸಿ ಯೌವನಕ್ಕೆ ಕಾಲಿಡುತ್ತಿದ್ದಂತೆ ಪ್ರಕೃತಿ ಸಹಜವಾಗಿ ಆಗುವ ಹಾರ್ಮೋನುಗಳ ಬದಲಾವಣೆ ತನ್ನ ಭಾವದಲ್ಲಿನ ಬದಲಾವಣೆಗೆ ಕಾರಣವಾಗುತ್ತದೆ. ಅಂಥ ವ್ಯಕ್ತಿತ್ವಕ್ಕೆ, ಭಾವಕ್ಕೆ ಸಮಾಜದ ದೃಷ್ಟಿಯಲ್ಲಿ ಕೆಟ್ಟದ್ದಾಗಿರುವ ಕಾಮವನ್ನು ಸಮಾಜಕ್ಕೆ ಕಾಣದಂತೆ ಆಸ್ವಾಧಿಸುವ ವಾಂಛೆ. ಈ ಸಮಾಜ ಮತ್ತು ಭಾವದ ನಡುವಿನ ಕಣ್ಮುಚ್ಚಾಟದ ಪರಿಣಾಮ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ, ಸೆಕ್ ಹಗರಣ ಇತ್ಯಾದಿ. ಕಾಮಕೆಟ್ಟದ್ದು ಅಂತ ಎಲ್ಲಾ ಜೀವಿಗಳೂ ಕಾಮದಾಸರಾಗದೆ ಯೋಗಿಗಳಾಗ ಹೊರಟಲ್ಲಿ ಇಂದಿನ ಪ್ರಪಂಚ ಅಸ್ತಿತ್ವದಲ್ಲಿರುತ್ತಿತ್ತೇ?ಟಿ

ಶಂಕರರು ಸೋತಿದ್ದರಲ್ಲ!
ಶ್ರೀ ಶಂಕರರು ಒಮ್ಮೆ ಮಂಡನ ಶರ್ಮನೆಂಬ ವಿದ್ವಾಂಸನೊಂದಿಗೆ ಜ್ನಾನಯುದ್ಧ ಮಾಡುವಾಗ, ಕೊನೆಗೆ ಶರ್ಮನು ಸೋಲುತ್ತಾನೆ. ಆತನ ಪತ್ನಿ ಶ್ರೀ ಶಂಕರರಿಗೆ ಸಕಲ ಜ್ಞಾನ ಸಂಪನ್ನರಾದ ನೀವು ನನ್ನ ಪ್ರಶ್ನೆಗಳಿಗೆ ಉತ್ತರಿಸಬೇಕೆಂದು ಹೇಳಿ ಯೋಗಿ ಶಂಕರರಿಗೆ ಕಾಮಕೇಳಿಯ ಕುರಿತ ಪ್ರಶ್ನೆ ಕೇಳುತ್ತಾಳೆ. ಅವಕ್ಕೆ ಉತ್ತರಿಸಲಾಗದ ಶಂಕರರು ಆಕೆಯ ಪ್ರಶ್ನೆಗಳನ್ನು ಸ್ವೀಕರಿಸಿ ಕಾಲಾವಕಾಶ ಪಡೆದು ಹಿಂದಿರುಗುತ್ತಾರೆ. ಬರುವ ದಾರಿಯಲ್ಲಿ ಕಾಮುಕ ಸ್ತ್ರೀಲೋಲ ಅರಸನೊಬ್ಬ ಬೇಟೆಗೆ ಹೋದಾಗ ಪ್ರಾಣಿಗಳ ದಾಳಿಗೆ ಬಲಿಯಾಗಿ ಆತನ ದೇಹ ಕಾಡಿನಲ್ಲಿ ಬಿದ್ದಿರುತ್ತದೆ. ಇದನ್ನರಿತ ಶಂಕರರ ಆತ್ಮ ಆ ಸ್ತ್ರೀಲೋಲ ರಾಜನ ದೇಹ ಪ್ರವೇಶಿಸಿ, ಅಂದಿನ ರಾತ್ರಿ ರಾಜಸಖಿಯೊಡನೆ ಕಳೆದು ಕಾಮದ ಬಗೆಗಿನ ಜ್ಞಾನಾರ್ಜನೆ ಮಾಡಿ ಮಂಡನ ಶರ್ಮನ ಹೆಂಡತಿಯ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಶಂಕರರು ಸ್ತ್ರೀಯೊಂದಿಗೆ ಒಂದು ರಾತ್ರಿ ಕಳೆದ ಮಾತ್ರಕ್ಕೆ ಅವರ ಆಚಾರ- ಸಂಸ್ಕೃತಿ ಸರಿಯಲ್ಲ ಎನ್ನದ ನಾವು ವಾಸ್ತವ ಜಗತ್ತಿನಲ್ಲಿ ಏನು ಮಾಡುತ್ತಿದ್ದೇವೆ?

ಕಾಮ ಕೆತ್ತನೆಗಳು
ನಮ್ಮ ಸಮಾಜಕ್ಕೆ ಆದರ್ಶವಾಗಿರುವ ಪುರಾಣಗಳನ್ನೇ ನೋಡುವುದಾದರೆ ತನ್ನ ತಂದೆಯಿಂದಲೇ ಮೋಹಿಸಲ್ಪಟ್ಟ ಬ್ರಹ್ಮನ ಮಾನಸ ಪುತ್ರಿ ಬೊಮ್ಮನರಸಿ ಸರಸ್ವತಿ. ಮೋಹಿನಿ ರೂಪಧಾರಿ ವಿಷ್ಣುವಿನ ಸೌಂದರ್ಯದಾಸನಾದ ಶಿವನ ಕಾಮದ ಫಲ ಅಯ್ಯಪ್ಪ. ಇಂಥ ವಿಲಕ್ಷಣ ಘಟನಾವಳಿಗಳನ್ನೊಳಗೊಂಡ ಗ್ರಂಥಗಳನ್ನು ಆಧರಿಸುವ ನಾವು ಇಡಿಪಸ್ ಕಾಂಪ್ಲೆಕ್ಸ್, ಎಲೆಕ್ಟ್ರಾ ಕಾಂಪ್ಲೆಕ್ಸ್‌ನಂಥ ವಿಲಕ್ಷಣ ಮನೋದೌರ್ಬಲ್ಯಗಳಿಂದ ಬಳಲುತ್ತಿರುವ ತಂದೆ ತನ್ನ ಮಗಳನ್ನು ಕಾಮಿಸಿದ ಎಂಬ ವಿಷಯವನ್ನು ವೈಭವೀಕರಿಸುವುದೇಕೆ? ಇಂಥ ಘಟನೆಗಳನ್ನು ನಿಂದಿಸುವ, ದೂಷಿಸುವ ನಾವು ಅದರ ಬದಲು ಕಾರಣ ಹುಡುಕಿ ಸಮಸ್ಯೆಗೆ ಪರಿಹಾರ ಹುಡುಕಲು ಹಿಂಜರಿಯುವುದೇಕೆ? ಹೆಣಗಳೊಂದಿಗೆ ಲೈಂಗಿಕ ಕ್ರಿಯೆ ಮಾಡುವ ಶವಕಾಮಿ ನಾಗಾಸಾಧುಗಳ ಯೋಗ ಶಕ್ತಿಯನ್ನು ಹೊಗಳುವ ನಾವು ವಾಸ್ತವದಲ್ಲಿ ಕಾಮದ ಬಗ್ಗೆ ಮಾಡುವ ಚಿಂತನೆಗಳೇನು? ಪ್ರತಿಷ್ಠಿತ ದೇಗುಲಗಳ ಆಡಳಿತ ಮಂಡಳಿ ಭಕ್ತಾದಿಗಳ, ಸಾರ್ವಜನಿಕರ ಉಡುಗೆ- ತೊಡುಗೆಗಳ ಬಗ್ಗೆ ನಿಯಮ ಜಾರಿ ಮಾಡುವಾಗ ನಗು ಬರುತ್ತೆ. ದೇಗುಲದ ಮೇಲಿರುವ ಅರೆನಗ್ನ ಶಿಲ್ಪಕಲಾ ಕೆತ್ತನೆಗಳು ಆಗಿನ ಶಿಲ್ಪಿಗಳ ಸಂಸ್ಕೃತಿ- ಸಂಸ್ಕಾರ- ಸಮಾಜವನ್ನು ಬಿಂಬಿಸುತ್ತೆ ಅನ್ನೋದು ಇತಿಹಾಸಕಾರರ ಅಂಬೋಣ. ಮನುಕುಲದ ಇತಿಹಾಸವನ್ನು ತಿರುವಿ ಕಾಮದ ಬಗೆಗಿನ ಪುಟಗಳನ್ನು ಓದಿದರೆ ತಿಳಿಯುತ್ತೆ ಕಾಮಕ್ಕೆ ಅಂದಿನ ಸಮಾಜ ನೀಡಿದ ಪ್ರಾಶಸ್ತ್ಯ, ಗೌರವ. ದೇಗುಲಗಳಲ್ಲಿ ಕಂಡುಬರುವ ಲೈಂಗಿಕ ಭಾವಭಂಗಿಗಳು ಅವರ ಕಾಮ ಕುರಿತ ವಿಶಾಲ ಮನೋಭಾವಕ್ಕೆ ಹಿಡಿದ ಕನ್ನಡಿ. ಖಜುರಾಹೋದಲ್ಲಿನ ಶಿಲ್ಪಕಲಾ ಕೆತ್ತನೆಗಳೇ ಇದಕ್ಕೆ ಸಾಕ್ಷಿ. ಅಂದಿನ ಸಮಾಜ ಕಾಮವನ್ನು ಒಂದು ವಿಷಯವನ್ನಾಗಿ ಅಭ್ಯಸಿಸುತ್ತಿತ್ತು ಎನ್ನುವುದಕ್ಕೆ ವಾತ್ಸಾಯನನ ಕಾಮಸೂತ್ರದಂಥ ಸಂಶೋಧನಾ ಕೃತಿ ಸಾಕ್ಷಿ.

- ಸಿಂಧೂರ ಬಿ.ಆರ್.
sindhur.br@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CJP ಪ್ರತಿಭಟನೆಯಲ್ಲಿ ಭಾಗಿ: ನಟ Imran Khanಗೆ ಮುಂಬೈ ಪೊಲೀಸರಿಂದ 'Leave India' ನೋಟಿಸ್, ಅ.28ರೊಳಗೆ ಭಾರತ ತೊರೆಯುವಂತೆ ಗಡುವು..!

ಭಾರತೀಯರ ಸಾಮೂಹಿಕೆ ಹತ್ಯೆಗೆ ಸಂಚು: ರೈಫಲ್ ಹಿಡಿದು ಅಮೆರಿಕದ ಹಿಂದೂ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್; ಕೊನೆ ಕ್ಷಣದಲ್ಲಿ ಗನ್ ಜಾಮ್, ಆರೋಪಿ ಬಂಧನ..!

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಕೇರಳಂ: ಮಿನಿ ಕೂಪರ್ ಕಾರು ಅಪಘಾತದಲ್ಲಿ ಮೂವರ ಸಾವು, ತಡರಾತ್ರಿಯಲ್ಲಿ ಹಿಂದೂ ಯುವತಿಯರು ಹೊರಗೆ ಹೋಗಿದ್ಯಾಕೆ? ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ