ಖುಷಿ

Body ಹೋಗದ ಬಳ್ಳಿ!

ಆರೋಗ್ಯಕರ ಆಹಾರ ಪದ್ಧತಿ, ಅದಕ್ಕೆ ಅನುಗುಣವಾದ ಲೈಫ್‌ಸ್ಟೈಲ್, ದೇಹಕ್ಕೆ ಎಷ್ಟು ಅಗತ್ಯ ಇದೆಯೋ ಅಷ್ಟೇ ಪ್ರಮಾಣದ...

ನಿಮ್ಮ ವಯಸ್ಸು ಮೂವತ್ತಾ? 'ಬರ್ತಾಬರ್ತಾ ದಪ್ಪ ಆಗ್ತಿದ್ದಿಯಾ' ಅಂತ ಮನೆಯವರು, ಗೆಳೆಯರು ಹೇಳುತ್ತಿದ್ದಾರಾ? ಕಾರಣವೇ ಇಲ್ಲದೆ ಆಗಾಗ ಸುಸ್ತು, ಜೀರ್ಣಾಂಗಗಳಿಗೆ ಸಂಬಂಧಿಸಿದ ಸಣ್ಣಪುಟ್ಟ ತೊಂದರೆಗಳು ಕಾಣಿಸಿಕೊಳ್ಳುತ್ತಿವೆಯಾ?
ನಿಮ್ಮ ಉತ್ತರ 'ಹೌದು' ಎಂದಾದರೆ... ನೋ ಡೌಟ್. ಒಂದೋ- ನೀವು ಸರಿಯಾದ ಡಯಟ್ ಪಾಲಿಸುತ್ತಿಲ್ಲ. ಅಥವಾ ಆಹಾರ ಸೇವನೆ ಪ್ರಮಾಣಕ್ಕೆ ಅನುಗುಣವಾಗಿ ದೇಹದಿಂದ ಬೆವರು ಇಳಿಸುತ್ತಿಲ್ಲ.
ನಮ್ಮ ಯುವಜನ ಈಗ 'ಡಯಟ್ ಕಾನ್ಷಿಯಸ್‌' ಆಗುತ್ತಿದ್ದಾರೆ. ಆದರೆ, ಸರಿಯಾದ ಆಹಾರ ಪದ್ಧತಿ ಯಾವುದು ಎನ್ನುವುದು ತಿಳಿದಿಲ್ಲ. ಡಯಟ್ ಎಂದರೆ ಪಥ್ಯ ಎನ್ನುವುದು ಕೆಲವರ ನಂಬಿಕೆ. 'ಏನೇ ತಿಂದರೂ, ಎಷ್ಟೇ ತಿಂದರೂ ಒಂದು ಗಂಟೆ ಜಿಮ್‌ನಲ್ಲಿ ಕಳೆದರೆ ಎಲ್ಲವನ್ನೂ ಕರಗಿಸಬಹುದು' ಎನ್ನುವುದು ಹಲವರ ಭಾವನೆ.
ನಿಮಗೆ ಗೊತ್ತಾ? ಇವೆರಡೂ ವಿಚಾರಗಳಲ್ಲಿ ಹುರುಳಿಲ್ಲ. ಆರೋಗ್ಯಕರ ಆಹಾರ ಪದ್ಧತಿ, ಅದಕ್ಕೆ ಅನುಗುಣವಾದ ಲೈಫ್‌ಸ್ಟೈಲ್, ದೇಹಕ್ಕೆ ಎಷ್ಟು ಅಗತ್ಯ ಇದೆಯೋ ಅಷ್ಟೇ ಪ್ರಮಾಣದ ದೈಹಿಕ ಕಸರತ್ತು. ಇದೇ ಸಿಂಪಲ್ ಮಂತ್ರ. ಇದರ ಪಾಲನೆಗೆ ಇವೆ ಹತ್ತು ಸರಳ ಸೂತ್ರಗಳು. ಇವನ್ನು ಪಾಲಿಸಿದರೆ ಬೊಜ್ಜು ಎನ್ನುವ ಗುಮ್ಮ ನಿಮ್ಮ ಸನಿಹವೂ ಬಾರದು.

1. ಸಮತೋಲಿತ ಆಹಾರವಿರಲಿ
ಪಾಶ್ಚಾತ್ಯ ಆಹಾರ ಪದ್ಧತಿಗಳಾದ ಬ್ರೆಡ್, ಕೇಕ್, ಪಾಸ್ತಾ, ಪಿಜ್ಜಾಗಳಲ್ಲಿ ಕಾರ್ಬೊಹೈಡ್ರೇಟ್ಸ್ ಮತ್ತು ಪ್ರೊಟೀನ್ ಪ್ರಮಾಣ ಸಮ ಪ್ರಮಾಣದಲ್ಲಿರುವುದಿಲ್ಲ. ಅದೇ ಭಾರತೀಯ ಆಹಾರಗಳಾದ ದಾಲ್, ಸಬ್ಜಿ, ಅನ್ನ ಸಾಂಬಾರಿನಲ್ಲಿ ಕಾರ್ಬೋಹೈಡ್ರೇಟ್ಸ್, ಪ್ರೊಟೀನ್ಸ್ ಮತ್ತು ನಾರಿನ ಅಂಶ ಸಮಪ್ರಮಾಣದಲ್ಲಿ ದೊರೆಯುತ್ತದೆ. ಹೆಚ್ಚು ಪ್ರೊಟೀನ್ ಹಾಗೂ ಕಡಿಮೆ ಕಾರ್ಬೋ ಆಹಾರ ಸೇವನೆಯಿಂದ ಮನುಷ್ಯನ ದೈನಂದಿನ ಕಾರ್ಯಚಟುವಟಿಕೆಯಲ್ಲಿ ಹಾಗೂ ಯೋಚನೆ ಮಾಡುವ ರೀತಿಯಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಕಾರ್ಬೊಹೈಡ್ರೇಟ್ಸ್ ಕಡಿಮೆ ಇರುವ ಆಹಾರದ ಸೇವನೆಯಿಂದ ನಾವು ಸಂತೋಷವಾಗಿ, ಆರಾಮವಾಗಿ, ತೃಪ್ತಿ ಭಾವನೆ ಮೂಡುವಂತೆ ನಮ್ಮ ಮೆದುಳು ಕೆಲಸ ಮಾಡುತ್ತದೆ. ಹಾಗೆಯೇ ಸೌತ್‌ಬೀಚ್ ಆಹಾರ ಶೈಲಿಯೂ ಹೆಚ್ಚಾಗಿ ಮಹಿಳೆಯರಲ್ಲಿ ಆಯಾಸ ಉಂಟುಮಾಡುತ್ತದೆ. ಅಲ್ಲದೆ, ಯಾವ ವಿಷಯದಲ್ಲೂ ಆಸಕ್ತಿ ಇಲ್ಲದಂತಾಗಿ, ಕಿರಿಕಿರಿ ಅನುಭವಿಸುತ್ತಾರಲ್ಲದೆ ಹಾರ್ಮೋನ್‌ಗಳು ತೆಳುವಾಗುತ್ತಾ ಹೋಗುತ್ತದೆ. ಹಾಗಾಗಿ ಕಾರ್ಬೊಹೈಡ್ರೇಟ್ಸ್ ಹಾಗೂ ನಾರಿನಂಶ ಹೆಚ್ಚಾಗಿರುವ ರಾಗಿ, ಜೋಳ, ಧಾನ್ಯಗಳು ಹಾಗೂ ಗೋಧಿಯಿಂದ ತಯಾರಿಸಿದ ರೊಟ್ಟಿ, ಚಪಾತಿಯಂಥ ಆಹಾರಗಳನ್ನು ಸೇವಿಸುವುದು ಉತ್ತಮ ಎನ್ನುತ್ತಾರೆ ಆಹಾರ ತಜ್ಞರು.

2. ಉಂಡು ಮಲಗೋದ್ಯಾಕೆ?
ರಾತ್ರಿ ಮಲಗುವ ಮೂರು ಗಂಟೆ ಮೊದಲು ಊಟ ಮಾಡುವುದು ಒಳ್ಳೆಯದು. ಇದರಿಂದ ದೇಹಕ್ಕೆ ತಿಂದಿದ್ದನ್ನು ಅರಗಿಸಿಕೊಳ್ಳಲು ಸಾಕಷ್ಟು ಸಮಯ ಸಿಗುತ್ತದೆ. ಆದರೆ, ಆಧುನಿಕ ಜೀವನ ಶೈಲಿಯಲ್ಲಿ ಇದನ್ನು ಪಾಲಿಸುವುದು ಕಷ್ಟದ ಕೆಲಸ. ಅದೂ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಹಾಗೂ ತಡ ರಾತ್ರಿವರೆಗೆ ಕೆಲಸದಲ್ಲಿ ನಿರತರಾಗುವವರಿಗಂತೂ ಇದು ಸಾಧ್ಯವಾಗುವುದಿಲ್ಲ. ಹಾಗೆಯೇ ರಾತ್ರಿ ಮಲಗುವ ಸಮಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ನಿಮ್ಮ ದೇಹದ ತೂಕ ಹೆಚ್ಚಾಗುವುದರಲ್ಲಿ ಅನುಮಾನ ಇಲ್ಲ. ದೇಹಕ್ಕೆ ಸರಿಯಾದ ವಿಶ್ರಾಂತಿ ಸಿಗದಿದ್ದರೆ ನಾವು ಮಾಡುವ ಪ್ರತಿ ಕೆಲಸದಲ್ಲೂ ನಿರಾಸಕ್ತಿ ಮೂಡುತ್ತದೆ. ಅಧ್ಯಯನಕಾರರ ಪ್ರಕಾರ ಬೆಳಗ್ಗೆ ಸಮಯದಲ್ಲಿ ಕೆಲಸ ಮಾಡುವವರಿಗಿಂತ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರ ದೇಹದ ತೂಕ ಹೆಚ್ಚಾಗಿರುತ್ತದೆ. ಇದರ ಜೊತೆಗೆ ರಕ್ತದೊತ್ತಡ ಫ್ರೀ ಗಿಫ್ಟ್! ಇದಕ್ಕೆ ಮುಖ್ಯ ಕಾರಣ ದೇಹಕ್ಕೆ ವಿಶ್ರಾಂತಿ ಹಾಗೂ ವ್ಯಾಯಾಮದ ಕೊರತೆ.

3. ಕುಡಿಯುವಾಗ ತಿನ್ನಬೇಡಿ!
ಮದ್ಯ ಸೇವನೆಯಿಂದ ದೇಹದ ತೂಕ ಕಡಿಮೆಯಾಗುತ್ತದೆ ಎನ್ನುವ ಭಾವನೆ ಕೆಲವರಲ್ಲಿದೆ. ಇದು ತಪ್ಪುಕಲ್ಪನೆ. ಹಾಗೆಯೇ ಮದ್ಯ ಸೇವನೆಯಿಂದ ಹೊಟ್ಟೆ ಬರುತ್ತದೆ ಎನ್ನುವುದೂ ಸುಳ್ಳು. ಯಾವ ಬಗೆಯ ಮದ್ಯವಾದರೂ, ಅದರಲ್ಲಿ ಪೌಷ್ಟಿಕಾಂಶ ಇರುವುದಿಲ್ಲ. ಆದರೆ, ಮದ್ಯ ಸೇವಿಸುವಾಗ ನಾವು ಏನು ತಿನ್ನುತ್ತೇವೆ ಎನ್ನುವುದು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಡ್ರಿಂಕ್ಸ್ ಮಾಡುವಾಗ ಅರಿವೇ ಇಲ್ಲದಂತೆ ಅಧಿಕವಾಗಿ ತಿನ್ನುತ್ತೇವೆ. ಅದರಲ್ಲೂ ಕುರುಕಲು ತಿಂಡಿ, ಕರಿದ ಪದಾರ್ಥಗಳು ಹೊಟ್ಟೆ ಸೇರುವುದು ಹೆಚ್ಚು. ಮದ್ಯ ಸ್ವಲ್ಪಮಟ್ಟಿಗೆ ಆಹಾರವನ್ನು ಕಡೆಗಣಿಸುವುದರಿಂದ ಆಹಾರದಲ್ಲಿನ ಪೌಷ್ಟಿಕಾಂಶ, ಕೊಬ್ಬು ಜೀರ್ಣ ಆಗದೆ ಹಾಗೇ ಉಳಿದುಬಿಡುತ್ತದೆ. ಇದರಿಂದ ದೇಹದ ತೂಕ ಹೆಚ್ಚುವುದು, ಹೊಟ್ಟೆ ಬರುವುದು ಮೊದಲಾದ ತೊಂದರೆಗಳು ಉಂಟಾಗುತ್ತವೆ. ಕೆಲವರಿಗೆ ಮದ್ಯ ಸೇವಿಸಿದಾಗ ಸರಿಯಾಗಿ ನಿದ್ರೆ ಬರುವುದಿಲ್ಲ. ಇದು ಅನೇಕ ಕಾಯಿಲೆಗಳಿಗೆ ರಹದಾರಿ. ಇನ್ನು ದಢೂತಿ ದೇಹವುಳ್ಳವರು ಮಿತಿಮೀರಿ ಮದ್ಯ ಸೇವಿಸಿದರೆ ರೋಗಗಳನ್ನು ಮೈಮೇಲೆಳೆದುಕೊಂಡಂತೆಯೇ. ಅವರು ಕರಿದ ಪದಾರ್ಥಗಳನ್ನಂತೂ ಮುಟ್ಟಲೇಕೂಡದು. ಸಲಾಡ್, ಕಡಿಮೆ ಗ್ಯಾಸ್ ಉತ್ಪತ್ತಿ ಮಾಡುವ ಪದಾರ್ಥಗಳನ್ನು ತಿನ್ನುವುದನ್ನು ರೂಢಿಸಿಕೊಂಡರೆ ದೇಹದಲ್ಲಿ ಕೊಬ್ಬಿನ ಅಂಶ ಶೇಖರವಾಗುವುದು ಕಡಿಮೆಯಾಗುತ್ತದೆ.

4. ತಿಂದು 'ಹಣ್ಣಾ'ಗಬೇಡಿ
ಹಣ್ಣು ಸೇವನೆ ಆರೋಗ್ಯಕ್ಕೆ ಒಳ್ಳೆಯದೇ. ಆದರೆ ಯಾವ ಹಣ್ಣು ತಿನ್ನುತ್ತೇವೆ? ಎಷ್ಟು ಪ್ರಮಾಣದಲ್ಲಿ ತಿನ್ನುತ್ತೇವೆ ಎಂಬುದು ಬಹುಮುಖ್ಯ. ಉದಾಹರಣೆಗೆ, ಬೆಳಗ್ಗೆ ವ್ಯಾಯಾಮಕ್ಕೆ ಹೋಗುವ ಮೊದಲು ಬಾಳೆಹಣ್ಣು ಸೇವಿಸಿದರೆ ಉತ್ತಮ. ಹಾಗೆಯೇ ಊಟದ ಜೊತೆಯಲ್ಲಿ ಒಂದು ಸಪೋಟ ತಿನ್ನುವುದನ್ನು ರೂಢಿಸಿಕೊಳ್ಳಬೇಕು. ಏಕೆಂದರೆ ಪ್ರಕೃತಿಯ ಕೊಡುಗೆಯಾದ ಸಪೋಟದಲ್ಲಿ ಕ್ಯಾಲ್ಷಿಯಂ ಹಾಗೂ ನಾರಿನ ಅಂಶ ಹೆಚ್ಚಾಗಿರುತ್ತದೆ. ಇದು ನಾವು ತಿನ್ನುವ ಆಹಾರವನ್ನು ಅರಗಿಸಿಕೊಳ್ಳಲು ಹಾಗೂ ಕಲ್ಮಶಗಳನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಜತೆಗೆ ದೇಹದ ಸ್ನಾಯುಗಳನ್ನು ಗಟ್ಟಿಮುಟ್ಟಾಗಿಸುತ್ತದೆ. ಔಷಧದ ಗುಣಗಳನ್ನು ಹೊಂದಿರುವ ಸಪೋಟ ಕ್ಯಾನ್ಸರ್ ತಡೆಗಟ್ಟಲು ಸಹಕಾರಿ. ಯಾವುದೇ ಆದರೂ ಅತಿಯಾಗಿ ತಿನ್ನದೆ ನಿಗದಿತ ಪ್ರಮಾಣದಲ್ಲಿ ಸೇವಿಸುವುದು ಆರೋಗ್ಯಕರ.

5. ಹೆಚ್ಚು ಅಂತರ ಸಲ್ಲದು
ಕೆಲವರಿಗೆ ಅದೊಂಥರ ವಿಚಿತ್ರ ಅಭ್ಯಾಸ. ಡಿನ್ನರ್‌ಗೆ ಹೋಟೆಲ್‌ಗೋ ಅಥವಾ ಹೊರಗಡೆಯೋ ಹೋಗಬೇಕು ಎಂದುಕೊಳ್ಳಿ. ಡಯಟ್ ಹೆಸರಿನಲ್ಲಿ ಅಂದು ಮಧ್ಯಾಹ್ನದ ಊಟ ಬಂದ್! ಇದು ನಿಶ್ಚಿತವಾಗಿಯೂ ಅನಾರೋಗ್ಯಕ್ಕೆ ದಾರಿ ಮಾಡಿಕೊಡುತ್ತದೆ. ತುಂಬಾ ಸಮಯದವರೆಗೆ ಆಹಾರ ಸೇವಿಸದಿದ್ದರೆ ದೇಹಕ್ಕೆ ಅಭದ್ರತೆ ಕಾಡುತ್ತದೆ. ಏನನ್ನಾದರೂ ತಿನ್ನುತ್ತಿದ್ದಂತೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಆಹಾರವನ್ನು ಸಂಗ್ರಹಿಸಿಕೊಳ್ಳುತ್ತದೆ. ಶರೀರ ಯಾವಾಗಲೂ ಆ ಸಮಯದಲ್ಲಿ ಎಷ್ಟು ಬೇಕೋ ಅಷ್ಟನ್ನು ಮಾತ್ರ ಬಳಸಿಕೊಂಡು ಮಿಕ್ಕಿದ್ದನ್ನು ಶೇಖರಿಸಿಟ್ಟುಕೊಳ್ಳುತ್ತದೆ. ಹೀಗೆ ಹೆಚ್ಚಾಗಿ ಶೇಖರಣೆಗೊಳ್ಳುವುದರಿಂದ ದೇಹದಲ್ಲಿ ಕೊಬ್ಬಿನಂಶ ಜಾಸ್ತಿಯಾಗಿ ತೂಕ ಹೆಚ್ಚುತ್ತದೆ.

6. ತಿಂಡಿಗೆ 'ರಾಜ'ಯೋಗ
ಈಗೇನಿದ್ದರೂ ಆಹಾರ ಸೇವನೆಯನ್ನು ಹೇಗೆ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕೆಂದು ನಾವು ಮಾಡುವ ಕೆಲಸದ ಮೇಲೆ ಅವಲಂಬಿತವಾಗಿರುತ್ತದೆ. ಬೆಳಗಿನ ತಿಂಡಿಯನ್ನು ಎರಡು ವಿಭಾಗಗಳಾಗಿ ವಿಂಗಡಿಸಬಹುದು. ಒಂದು... ವ್ಯಾಯಾಮಕ್ಕೆ ಹೋಗುವ ಮೊದಲು ಬಾಳೆಹಣ್ಣು ತಿಂದು ನಂತರ ಒಂದು ಕಪ್ ಕಾಫಿ ಅಥವಾ ಟೀ ಕುಡಿಯುವುದು. ಬೆಳಗ್ಗೆ ಸುಮಾರು 10 ಗಂಟೆ ವೇಳೆಗೆ ಹಾಲಿನ ಜತೆ ಧಾನ್ಯಗಳನ್ನು ಸೇವಿಸಬಹುದು. ಇದು ನಿಮ್ಮ ಹೊಟ್ಟೆಯ ಮೇಲೆ ಹೆಚ್ಚಿನ ಹೊರೆ ಹಾಕದೆ, ತುಂಬಾ ಹೊತ್ತಿನವರೆಗೆ ಹೊಟ್ಟೆ ತುಂಬಿದಂತಿರುತ್ತದೆ. ಕೆಲವರು ತೂಕ ಕಡಿಮೆ ಮಾಡಿಕೊಳ್ಳಲು ಒಂದು ಹೊತ್ತು ಉಪವಾಸವಿರಲು ಪ್ರಾರಂಭಿಸುತ್ತಾರೆ. ಇದು ತೂಕ ಕಡಿಮೆ ಮಾಡುವುದಕ್ಕಿಂತ ರೋಗಗಳಿಗೆ ಆಹ್ವಾನ ನೀಡುವುದೇ ಹೆಚ್ಚು. ಒಂದೇ ಬಾರಿ ಹೊಟ್ಟೆ ಬಿರಿಯುವಂತೆ ಊಟ ಮಾಡುವುದಕ್ಕಿಂತ ಎರಡು ಗಂಟೆಗೊಮ್ಮೆ ಸ್ವಲ್ಪಸ್ವಲ್ಪ ಪ್ರಮಾಣದಲ್ಲಿ ಊಟ ಮಾಡುವುದರಿಂದ ಆಯಾಸ ಆಗುವುದನ್ನು ತಪ್ಪಿಸಬಹುದು, ಗ್ಯಾಸ್ಟ್ರಿಕ್ ಸಮಸ್ಯೆಯಿಂದಲೂ ದೂರವಾಗಬಹುದು. ನಾವು ಯಾವುದೇ ಆಹಾರ ಸೇವಿಸುವಾಗಲೂ ಒಂದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅದೇನೆಂದರೆ ಹೆಚ್ಚಿನ ನಾರಿನಂಶ ಇರುವ, ಕಡಿಮೆ ಕಾರ್ಬೊಹೈಡ್ರೇಟ್ಸ್ ಇರುವ ಆಹಾರವನ್ನು ಆಯ್ಕೆ ಮಾಡಿಕೊಳ್ಳುವುದು. ಹೆಚ್ಚಿನ ಹಸಿ ತರಕಾರಿಗಳು ಹಾಗೂ ಸಕ್ಕರೆ ಪ್ರಮಾಣ ಕಡಿಮೆ ಇರುವ ಹಣ್ಣುಗಳನ್ನು  ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.

ರಾತ್ರಿ 8ಕ್ಕೆ ಕರೆಕ್ಟಾಗಿ ಊಟ

ನೈಟ್‌ಡ್ಯೂಟಿಯಲ್ಲಿರುವವರು ರಾತ್ರಿ 8 ಗಂಟೆಗೆ ಊಟ ಮಾಡುವುದನ್ನು ರೂಢಿಸಿಕೊಳ್ಳುವುದು ಒಳಿತು. ಅದೂ ಹೊಟ್ಟೆ ತುಂಬ ತಿನ್ನದೆ ಎಚ್ಚರವಿರುವಷ್ಟು ಸಮಯದಲ್ಲಿ ಪ್ರತಿ 2 ಗಂಟೆಗೊಮ್ಮೆ ಲಘು ಉಪಾಹಾರ ಅಥವಾ ಹಣ್ಣು, ಬೇಯಿಸಿದ ಮೊಟ್ಟೆ, ತರಕಾರಿ ತಿನ್ನುವ ಅಭ್ಯಾಸ ಇಟ್ಟುಕೊಳ್ಳುವುದು ಉತ್ತಮ. ಆಗಾಗ ಜ್ಯೂಸ್ ಕುಡಿಯುತ್ತಿದ್ದರೂ ಆದೀತು. ಶುರುವಿನಲ್ಲಿ ನಿಮ್ಮ ದೇಹಕ್ಕೆ ಒಗ್ಗಿಕೊಳ್ಳಲು ಕಷ್ಟವಾದರೂ ಕ್ರಮೇಣ ಹೊಂದಿಕೊಳ್ಳುತ್ತದೆ. ಆದರೆ, ಒಂದು ನೆನಪಿರಲಿ. ನಿತ್ಯ ಕನಿಷ್ಠ 8 ತಾಸು ನಿದ್ದೆ ಮಾಡುವುದನ್ನು ಯಾವುದೇ ಕಾರಣಕ್ಕೂ ತಪ್ಪಿಸಬಾರದು.

7. ಮಿತಿಮೀರಿ ವ್ಯಾಯಾಮ ಬೇಡ

ಆಹಾರ ತಜ್ಞರನ್ನು ಭೇಟಿ ಮಾಡುವ ಶೇ.80ರಷ್ಟು ಮಂದಿಯದು ಒಂದೇ ಪ್ರಶ್ನೆ- ಆಹಾರ ಪದ್ಧತಿ ಬದಲಾವಣೆ ಮಾಡಿಕೊಳ್ಳುವುದರಿಂದ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದಾ? ಡಯಟ್ ವಿಚಾರದಲ್ಲಿರುವ ಹಲವು ತಪ್ಪುಕಲ್ಪನೆಗಳಲ್ಲಿ ಇದೂ ಒಂದು. ನಾವು ತಿನ್ನೋ ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುವುದರಿಂದ ಸ್ವಲ್ಪ ಪ್ರಮಾಣದಲ್ಲಿ ದೇಹದ ತೂಕ ಕಡಿಮೆ ಮಾಡಿಕೊಳ್ಳಬಹುದಾದರೂ ಇದು ತಾತ್ಕಾಲಿಕ ಮಾತ್ರ. ಕೆಲವು ಸಮಯದ ನಂತರ ಪುನಾ ನಮ್ಮ ದೇಹದ ತೂಕ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ. ವ್ಯಾಯಾಮ ಮಾಡದೆ ಡಯಟ್ ಮಾಡುವುದರಿಂದ ಸ್ನಾಯುಗಳ ಶಕ್ತಿ ಕುಂದುತ್ತದೆ. ಇದು ತಿಂದ ಆಹಾರವನ್ನು ಅರಗಿಸಿಕೊಳ್ಳುವ ಸಾಮರ್ಥ್ಯ ಕುಗ್ಗಿಸುತ್ತದೆ. ಹೀಗಾದಾಗ ವಿಶ್ರಾಂತಿ ಪಡೆಯುವ ಸಂದರ್ಭದಲ್ಲಿ ನಮ್ಮ ದೇಹದಲ್ಲಿನ ಕ್ಯಾಲೊರಿ ಶಮನಗೊಳ್ಳುವುದು ಕಡಿಮೆಯಾಗುತ್ತದೆ. ಮುಖ್ಯ ಸಂಗತಿಯೆಂದರೆ, ದಿನದ 24 ಗಂಟೆಯೂ ನಮ್ಮ ದೇಹದಲ್ಲಿನ ಕ್ಯಾಲೊರಿ ಕರಗುತ್ತಲೇ ಇರುತ್ತದೆ. ನಾವು ನಿದ್ರಿಸುವಾಗಲೂ! ಎಷ್ಟು ಪ್ರಮಾಣದಲ್ಲಿ ಕ್ಯಾಲೊರಿ ಕರಗುತ್ತದೆ ಎಂಬುದು ದೇಹದ ಅರಗಿಸಿಕೊಳ್ಳುವ ಸಾಮರ್ಥ್ಯದ ಮೇಲೆ ಅವಲಂಬಿತ. ದೇಹದ ಸ್ನಾಯುಗಳು ಗಟ್ಟಿಯಾದಂತೆ ಅರಗಿಸಿಕೊಳ್ಳುವ ಸಾಮರ್ಥ್ಯವೂ ಹೆಚ್ಚುತ್ತದೆ. ವ್ಯಾಯಾಮ ಮಾಡುವುದರಿಂದ ದೇಹದಲ್ಲಿನ ಕೊಬ್ಬು ಸ್ನಾಯುಗಳಾಗಿ ಪರಿವರ್ತನೆಗೊಳ್ಳುತ್ತದೆ. ಇದರಿಂದ ಕ್ಯಾಲೊರಿ ಶಮನಗೊಳ್ಳುವ ಸಾಮರ್ಥ್ಯವೂ ಹೆಚ್ಚಾಗುತ್ತದೆ. ಆರೋಗ್ಯಕರ ಜೀವನಶೈಲಿ ಎಂದರೆ ನಿತ್ಯ ಕನಿಷ್ಠ 30 ನಿಮಿಷವಾದರೂ ತಪ್ಪದೇ ವ್ಯಾಯಾಮ ಮಾಡುವುದು.

8. ನೀರು ನೀರೇ!
ನಿತ್ಯ ಕನಿಷ್ಠ 5 ಲೀಟರ್ ನೀರು ಕುಡಿಯಬೇಕೆಂಬುದು ಎಲ್ಲ ವೈದ್ಯರ, ಆರೋಗ್ಯ ತಜ್ಞರ ಅಂಬೋಣ. ಹಲವರು ನೀರು, ಹಣ್ಣಿನ ರಸ, ಸೂಪ್, ಎಳನೀರು, ಟೀ, ಕಾಫಿ ಕುಡಿದು ಸರಿದೂಗಿಸಲೆತ್ನಿಸುತ್ತಾರೆ. ಆದರೆ, ನೀರಿನ ಸ್ಥಾನವನ್ನು ಬೇರ್ಯಾವುದೇ ದ್ರವಾಹಾರ ತುಂಬಲು ಶಕ್ಯವಿಲ್ಲ. ಕಾರಣ ನೀರು ಕ್ಯಾಲೊರಿ ಮುಕ್ತವಾದದ್ದು. ಇದು ನಮ್ಮ ದೇಹದಲ್ಲಿನ ಕಲ್ಮಶಗಳನ್ನು ಹೊರ ಹಾಕಲು ಸಹಾಯ ಮಾಡುತ್ತದಲ್ಲದೆ ನಾವು ತೆಗೆದುಕೊಳ್ಳುವ ಆಹಾರದಲ್ಲಿನ ವಿಟಮಿನ್ ಮತ್ತು ಮಿನರಲ್‌ಗಳನ್ನು ಹೀರಿಕೊಳ್ಳುತ್ತದೆ. ನೀರನ್ನು ಬಿಟ್ಟು ಬೇರೆ ಯಾವುದರಿಂದಲೂ ಇದು ಸಾಧ್ಯವಿಲ್ಲ. ಆಹಾರ ತಜ್ಞರು ಹೇಳುವುದು, ಊಟ ಮಾಡುವ ಮೊದಲು ಹಾಗೂ ನಂತರ ಮೂರು ಗ್ಲಾಸ್ ನೀರು ಕುಡಿಯುವುದರಿಂದ ಜೀರ್ಣಶಕ್ತಿ ಹೆಚ್ಚಾಗುತ್ತದೆ. ದೇಹದಲ್ಲಿನ ಉಪ್ಪಿನಂಶವನ್ನು ಹೊರಹಾಕುತ್ತದೆ. ಮದ್ಯಸೇವನೆಯ ಅಭ್ಯಾಸ ಉಳ್ಳವರು ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಬೇಕು.

9. ಸಸ್ಯಾಹಾರವೇ ಮೇಲು
ಪ್ರಕೃತಿ ನಮಗೆ ಎಷ್ಟು ಉಪಕಾರ ಮಾಡಿದೆ ಎಂದರೆ ಋತುಮಾನಕ್ಕೆ ತಕ್ಕಂತೆ ಹಣ್ಣು, ತರಕಾರಿಗಳನ್ನು ನಮಗೆ ನೀಡುತ್ತದೆ. ಆಯಾ ಸೀಸನ್‌ನಲ್ಲಿ ಸಿಗುವ ಹಣ್ಣು, ತರಕಾರಿಗಳನ್ನು ಸೇವಿಸುವ ಅಭ್ಯಾಸ ಇಟ್ಟುಕೊಂಡರೆ ದೇಹಕ್ಕೆ ಅಗತ್ಯವಿರುವ ಎಲ್ಲ ಪೌಷ್ಟಿಕಾಂಶಗಳೂ ದೊರೆಯುತ್ತವೆ. ಉದಾಹರಣೆಗೆ ನಿಂಬೆಹಣ್ಣು, ಕಲ್ಲಂಗಡಿ ಹಣ್ಣು. ಇವು ಬೇಸಿಗೆ ಬೆಳೆಗಳು. ಬೇಸಿಗೆಯಲ್ಲಿ ಇವುಗಳನ್ನು ಸೇವಿಸುವುದರಿಂದ ದೇಹಕ್ಕೆ ನೀರಿನ ಕೊರತೆ ನೀಗುತ್ತದೆ; ಇವುಗಳಲ್ಲಿ ವಿಟಮಿನ್ 'ಸಿ' ಹೇರಳವಾಗಿರುವುದರಿಂದ ಆಯಾಸ ಮರೆಯಾಗುತ್ತದೆ.

ಸರ್ವಾಂಗಕ್ಕೂ ಸಮಪಾಲು
ಈಗಿನ ಜೀವನ ಶೈಲಿಯಲ್ಲಿ ವಯಸ್ಸು 30 ಆಗುತ್ತಿದ್ದಂತೆ ಪ್ರತಿಯೊಬ್ಬರೂ ಡಯಟ್ ಜೊತೆಗೆ ದೈಹಿಕ ಕಸರತ್ತನ್ನೂ ರೂಢಿಸಿಕೊಳ್ಳುವುದು ಮುಖ್ಯ. ವ್ಯಾಯಾಮದಲ್ಲೂ ಅನೇಕ ಬಗೆ ಇವೆ. ಪ್ರತಿಯೊಂದು ದೇಹದ ನಿರ್ದಿಷ್ಟ ಭಾಗದಲ್ಲಿನ ಕ್ಯಾಲೊರಿ ಕರಿಗಿಸಲು ಸಹಕಾರಿಯಾಗಿದೆ. ವೇಗದ ನಡಿಗೆ, ಜಾಗಿಂಗ್, ಡ್ಯಾನ್ಸ್ ಇವೆಲ್ಲ ಸುಲಭವಾಗಿ ಮಾಡಬಹುದಾದ ಮತ್ತು ಹೆಚ್ಚು ಕ್ಯಾಲೊರಿ ಕರಗಿಸುವ ಕೆಲವು ವ್ಯಾಯಾಮಗಳು. ದೇಹದ ಎಲ್ಲ ಅಂಗಗಳೂ ಪಾಲ್ಗೊಳ್ಳುವಂಥ ವ್ಯಾಯಾಮಗಳನ್ನು ಮಾಡಿದರೆ ಒಳ್ಳೆಯದು.

ಪಿಜ್ಜಾ ತಿನ್ನಬಹುದಾ?
ವಾರ ಅಥವಾ ಎರಡು ವಾರಕ್ಕೆ ಒಮ್ಮೆ ಪಿಜ್ಜಾ, ಕಬಾಬ್, ಜಾಮೂನ್‌ಗಳಂಥ ಅಧಿಕ ಕ್ಯಾಲೊರಿ ತಿನಿಸುಗಳನ್ನು ತೆಗೆದುಕೊಳ್ಳಬಹುದು. ಅಪರೂಪಕ್ಕೆ ಎಂದುಕೊಂಡು ಧಾರಾಳವಾಗಿ ಸೇವಿಸುವುದು ಸಲ್ಲದು. ನಿತ್ಯದ ಆಹಾರದಲ್ಲಿ ಹೆಚ್ಚಿನ ಕ್ಯಾಲೊರಿ ಇರದಂತೆ ಎಚ್ಚರವಹಿಸಿದರೆ ಬಹಳಷ್ಟು ಸಮಸ್ಯೆಗಳು ಹುಟ್ಟಿಕೊಳ್ಳುವುದೇ ಇಲ್ಲ! ಊಟಕ್ಕೆ ಹೊರಗೆ ಹೋಗಬೇಕಾದ ಸಂದರ್ಭ ಬಂದಾಗ, ಹೆಚ್ಚಿನ ಪ್ರಮಾಣದ ನೀರು ಕುಡಿದು ಹೋಗಿ. ಆಗ ಅಲ್ಲಿ ಸಿಕ್ಕಿದ್ದನ್ನೆಲ್ಲ ಸೇವಿಸುವುದಕ್ಕೆ ಮನಸ್ಸಾಗುವುದಿಲ್ಲ. ತಿಂದದ್ದು ಜೀರ್ಣವಾಗಲು ಹಾಗೂ ದೇಹದ ಕಲ್ಮಶಗಳನ್ನು ಹೊರಹಾಕಲು ನೀರು ನೆರವಾಗುತ್ತದೆ.

10. ಓಡೋಡ್ತಾ ಬದುಕು
ನಾವೇನಾದರೂ ಪೇಸ್ಟ್ರಿ ತಿಂದರೆ, ಅದರಲ್ಲಿ 350 ಕ್ಯಾಲೊರಿ ಇರುತ್ತದೆ. ಇದನ್ನು ಕರಗಿಸಬೇಕೆಂದರೆ  ಟ್ರೆಡ್‌ಮಿಲ್‌ನಲ್ಲಿ 20 ನಿಮಿಷ ಓಡಬೇಕು. ಆದರೂ 300 ಕ್ಯಾಲೊರಿಯನ್ನಷ್ಟೇ ಕರಗಿಸಲು ಸಾಧ್ಯ. ಮಿಕ್ಕ ಕ್ಯಾಲೊರಿ ಜತೆಗೆ ನಾವು ತೆಗೆದುಕೊಳ್ಳುವ ದೈನಂದಿನ ಆಹಾರ ಕರಗಿಸಲು ಎಷ್ಟು ಹೊತ್ತು ಓಡಬೇಕು? ಜೀವನ ಪರ್ಯಂತ ಓಡುತ್ತಿರಬೇಕಷ್ಟೆ! ಇಂಥ ಕ್ರಮಗಳಿಂದ ತಿಂದದ್ದನ್ನೆಲ್ಲ ಕರಗಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಆಹಾರ ತಜ್ಞರು. ಹೆಚ್ಚು ದೇಹ ದಂಡಿಸುವುದು, ತುಂಬಾ ಸಮಯದವರೆಗೆ ವ್ಯಾಯಾಮ ಮಾಡುವುದರಿಂದ ನಮ್ಮ ಸ್ನಾಯುಗಳು ಕೆಲವೊಮ್ಮೆ ಮುರಿತಕ್ಕೊಳಗಾಗುವ ಸಾಧ್ಯತೆಗಳಿರುತ್ತವೆ. ವ್ಯಾಯಾಮ ಮಾಡುವಾಗ ದೇಹದಲ್ಲಿ ಎಂಡೋರ್ಫಿನ್ಸ್ ಎಂಬ ರಾಸಾಯನಿಕ ಬಿಡುಗಡೆಯಾಗುತ್ತದೆ. ಇದು ನಮ್ಮಲ್ಲಿ ಸಂತೋಷ ಭಾವನೆ ಮೂಡುವಂತೆ ಮಾಡುತ್ತದೆ. ಹೀಗಾಗಿ ಕೆಲವರು ಚಟಕ್ಕೆ ಬಿದ್ದಂತೆ ಹೆಚ್ಚಿನ ಸಮಯದವರೆಗೆ ಬೆಳಗ್ಗೆ ಹಾಗೂ ಸಾಯಂಕಾಲ ವ್ಯಾಯಾಮದಲ್ಲಿ ತೊಡಗಿಕೊಳ್ಳುತ್ತಾರೆ. ಒಂದು ದಿನವೂ ವ್ಯಾಯಾಮ ಇಲ್ಲದೆ ಇರಲು ಅವರಿಗೆ ಸಾಧ್ಯವಾಗುವುದಿಲ್ಲ. ಒಂದೊಮ್ಮೆ ಮಾಡದಿದ್ದರೆ ಏನೋ ಕಳೆದುಕೊಂಡ ಭಾವ, ಯಾವ ಕೆಲಸದಲ್ಲೂ ಅವರಿಗೆ ಆಸಕ್ತಿ ಇರದು. ಖಿನ್ನತೆಗೆ ಒಳಗಾಗುವ ಸಾಧ್ಯತೆಯೂ ಇಲ್ಲದಿಲ್ಲ. ಹೀಗಾಗಿ ಎಷ್ಟು ಬೇಕೋ ಅಷ್ಟು ವ್ಯಾಯಾಮ ಮಾಡಿದರೆ ಸಾಕು.

ನಿಯಮಿತ ಆಹಾರ ಸೇವಿಸಬೇಕು. ಏನೇ ತಿನ್ನುವುದಿದ್ದರೂ ನಿಧಾನವಾಗಿ, ಜಗಿದು ತಿನ್ನಬೇಕು. ಹೊಟ್ಟೆ ಬಿರಿಯುವಂತೆ ತಿನ್ನದೆ ನಿಗದಿತ ಅಂತರದಲ್ಲಿ ಸ್ವಲ್ಪಸ್ವಲ್ಪ ತಿನ್ನುವುದು ಒಳ್ಳೆಯದು. ಸಿಹಿ, ಹಣ್ಣುಗಳನ್ನು ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ ಎನ್ನುವ ತಪ್ಪು ಕಲ್ಪನೆ ಕೆಲವರಿಗಿದೆ. ನಿಜಕ್ಕೂ ದೇಹದ ತೂಕ ಹೆಚ್ಚಾಗುವುದು ನಾವು ತೆಗೆದುಕೊಳ್ಳುವ ಜಂಕ್‌ಫುಡ್‌ನಿಂದ. ಅತಿಯಾಗಿ ತಿಂದು ದೇಹಕ್ಕೆ ಸ್ವಲ್ಪವೂ ಶ್ರಮ ನೀಡದೇ ಇರುವುದೂ ದೇಹ ತೂಕ ಹೆಚ್ಚಲು ಕಾರಣ.
- ಡಾ.ಪಿ. ಸದಾನಂದ ಮೈಯ್ಯ, ಆಹಾರ ತಜ್ಞ

- ಶಿವಕುಮಾರ್ ಆರ್.
shivar2611@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಹಲವು ಕುಟುಂಬಗಳ ಹೆಣ್ಮಕ್ಕಳ ಮರ್ಯಾದೆ ಕಳೆದ ಪುಣ್ಯಾತ್ಮ ಡಿಕೆಶಿ; ಪ್ರಜ್ವಲ್​​ ಕೇಸ್​ ಹಿಂದಿದ್ದವರಿಂದ ಮಾಜಿ ಸಿಎಂ ಸ್ಟಿಂಗ್​​ ಆಪರೇಷನ್: HDK ಹೊಸ ಬಾಂಬ್

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ಆಪರೇಶನ್: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪೆನ್ ಡ್ರೈವ್ ಸಲ್ಲಿಕೆ; ನ್ಯಾಯಾಂಗ ತನಿಖೆಗೆ ಆಗ್ರಹ!

ಎಲ್ಲಾ ಪ್ರತಿಭಟನೆಗಳೂ ಒಂದೇ: 'ಚಾಯ್ ಪೆ ಚರ್ಚೆ' ಗೂ ಮುನ್ನ ರಾಹುಲ್ ಹೇಳಿಕೆ!

ಬೆಂಗಳೂರಿನಲ್ಲಿ SIR ಪ್ರತಿಭಟನೆ ವೇಳೆ ಪೊಲೀಸ್ ಕ್ರಮ: ಮರು ಪರಿಶೀಲನೆಗೆ ಪ್ರಿಯಾಂಕ್ ಖರ್ಗೆ ಆದೇಶ!

ಪುಣೆ ಟೆಕ್ಕಿ ಆತ್ಮಹತ್ಯೆ: ಡೆತ್‌ನೋಟ್‌ ಪತ್ತೆ; ಸಂಬಳ, ತವರು ಮನೆಯ ಫ್ಲಾಟ್ ವರ್ಗಾಯಿಸುವಂತೆ ಅತ್ತೆ-ಮಾವ ಒತ್ತಡ!