ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ದೇವರು!

Mainashree
Updated On : 21 Dec 2013, 4:38 am

ಸಹ್ಯವೆನಿಸದ, ಅಸಹ್ಯವೂ ಅಲ್ಲದ ಆ ಆ್ಯಂಬುಲೆನ್ಸ್‌ನ ಸೈರನ್ ನಿಂತಾಗ ಕಿವಿಗಪ್ಪಳಿಸಿದ್ದು ತಾಯಿಯ ಆಕ್ರಂದನ, ಕಣ್ಣಿಗೆ ಕಂಡಿದ್ದು ತಂದೆಯ ಅಸಹಾಯಕತೆ ಮತ್ತು ಕಾಣಬಂದವರ ಕಣ್ಣುಗಳಲ್ಲಿದ್ದ ಕುತೂಹಲ.
ಎರಡು ವರ್ಷವೂ ತುಂಬಿರದ ಹಸುಗೂಸು ಒಂದಿಷ್ಟು ಸೊರಗಿದಂತೆ ಕಂಡರೂ ಕಪಟವರಿಯದ ಮುಗ್ಧ ಮೊಗ  ಗಾಢ ನಿದ್ರೆಯಲ್ಲಿರುವಂತಿತ್ತು. ಸದ್ದು ಕೇಳಿ ಅಲ್ಲಿಗೆ ಬಂದ ವೈದ್ಯರೊಬ್ಬರು ಮಗುವನ್ನೊಮ್ಮೆ ಸೂಕ್ಷ್ಮವಾಗಿ ನೋಡಿ, ನಾಡಿ ಪರೀಕ್ಷಿಸಿ ತಂದೆಯತ್ತ ತಿರುಗಿ ಏನಾಯಿತೆಂದು ಕೇಳಿದರು..
"ಸರ್, ಇಲ್ಲಿಂದ 18 ಕಿ.ಮೀ. ದೂರದ ಹಳ್ಳಿಯೊಂದರ ಶಾಲೆಯಲ್ಲಿ ಶಿಕ್ಷಕ ನಾನು. ಬೆಳಗ್ಗೆ ಶಾಲೆಗೆಂದು ಹೊರಟರೆ ಬರುವುದು ಸಂಜೆಯೇ. ನನ್ನ ಹೆಂಡತಿ ಮನೆಯಲ್ಲೇ ಇರುತ್ತಾಳಾದರೂ, ಈಗ ಮಗ ಸ್ವಲ್ಪ ದೊಡ್ಡವನಾಗಿದ್ದನೆಂದು ಮಹಿಳಾ ಮಂಡಳಿಯಲ್ಲಿ ಸದಸ್ಯಳಾಗಿದ್ದಾಳೆ. ಮಧ್ಯಾಹ್ನ ಮಗುವನ್ನ ಮಲಗಿಸಿ ಇವಳು ಸಭೆ ಗೆಂದು ಹೋಗಿದ್ದಾಳೆ... ಅಲ್ಲೇ ಆಡುತ್ತಿದ್ದ ಹುಡುಗರು ಮನೆಯತ್ತ ಹೊಡೆದ ಚೆಂಡು ತರಲು ಹೋದಾಗ, ಮಗು ನೆಲದ ಮೇಲೆ ಚೆಲ್ಲಿದ್ದ ನೀರಿನ ಮೇಲೆ ಬಿದ್ದುಕೊಂಡು, ಒಂದೇ ಸಮನೆ ಆಳುತ್ತಾ ಜೋರಾಗಿ ಕೈ ಕಾಲು ಬಡಿದುಕೊಳ್ಳುತ್ತಿತ್ತಂತೆ. ಕಿವಿಯಲ್ಲಿ ರಕ್ತ ಸೋರುತ್ತಿತ್ತಂತೆ. ಅದನ್ನು ಕಂಡ ಹುಡುಗನೊಬ್ಬ ಓಡಿ ಬಂದು ನನ್ನ ಕರೆದ. ನಾನು ತಕ್ಷಣವೇ ಮನೆಗೋಡಿ ಹೋದಾಗ ಮನೆಯೆಲ್ಲ ನೀರು. ಆ ನೀರಿನಲ್ಲಿ ಮಗು ಒದ್ದೆಯಾಗಿ ಪ್ರಜ್ಞೆಯಿಲ್ಲದೆ ಮಲಗಿತ್ತು. ಸುತ್ತಲಿದ್ದ ನೀರು ತಿಳಿಗೆಂಪು ಬಣ್ಣಕ್ಕೆ ತಿರುಗಿತ್ತು. ಮಗುವನ್ನು ಎತ್ತಿಕೊಂಡು ನೀರೊರೆಸಿ ಹುಡುಗನೊಬ್ಬನಿಗೆ ಹೆಂಡತಿಯ ಕರೆಯಲು ಹೇಳಿ, ಆಸ್ಪತ್ರೆಗೆ ಓಡಿದರೆ ಅಲ್ಲಿ ವೈದ್ಯರಿರಲಿಲ್ಲ. ಮಗುವಿನ ಮೈ ಕೆಂಡದಂತೆ ಸುಡುತಿತ್ತು.
ಬರುವ ದಾರಿಯಲ್ಲಿ ಸಿಕ್ಕ ಕ್ಲಿನಿಕ್‌ನಲ್ಲಿ ತೋರಿಸಿದಾಗ, ಮಗು ಉಳಿಯುವುದು ಕಷ್ಟವೆಂದು, ಆದಷ್ಟು ಬೇಗ ದೊಡ್ಡಾಸ್ಪತ್ರೆಗೆ ಕರೆದೊಯ್ಯಲು ಹೇಳಿದರು ಸರ್‌". ತಂದೆಯ ಮಾತು ಮುಗಿಯುವ ಹೊತ್ತಿಗೆ ಆವರೆಗೆ ಮಡುಗಟ್ಟಿದ್ದ ದುಃಖ ಭೋರ್ಗರೆಯಿತು. ಸ್ವರ ಕಟ್ಟಿತ್ತು. ಮಾತು ಸತ್ತಿತ್ತು.
ಏನೂ ಪ್ರತಿಕ್ರಿಯೆ ತೋರದೆ ವೈದ್ಯರು ಅದೇ ನಿರಾಳ ಭಾವದಲ್ಲಿ ಶಾಂತ ಮೂರ್ತಿಯಂತೆ ಅಲ್ಲಿದ್ದ ಆಯಾಗೆ ಮಗುವನ್ನ ಒಳಗೆ ಮಲಗಿಸಲು ಹೇಳಿ ತಾವೂ ಒಳಗೆ ಹೋದರು.
ಒಂದೆರಡು ತಾಸು ಕಳೆದ ನಂತರ ನರ್ಸ್ ಬಂದು ಮಗುವನ್ನು ನೋಡಬಹುದೆಂದು ಹೇಳಿದರು. ಹೆತ್ತವರಿಬ್ಬರೂ ಒಂದೇ ಉಸಿರಿನಲ್ಲಿ ಒಳಗೋಡಿದರು. ಅಮ್ಮ ಮಗನ ಗಲ್ಲ ಮುಟ್ಟುತ್ತಾ, 'ಪುಟ್ಟೂ, ನೋಡೋ... ಅಮ್ಮ ಏಳೋ...' ಎಂದು ಗೋಳಿಟ್ಟು ಎದೆಮೇಲೆ ತಲೆಯಿಟ್ಟು ಮತ್ತಷ್ಟು ಜೋರಾಗಿ ಅಳತೊಡಗಿದಾಗ, ತನ್ನ ಪುಟ್ಟ ಕಣ್ಣುಗಳನ್ನ ತೆರೆದು 'ಅಮ್ಮ... ನೀರು' ಎಂದು ಮಗು ಹೇಳಿದಾಗ ಆ ಹೆತ್ತವರಿಗಾದ ಆನಂದ, ಅವರ ಮೊಗದೊಳಗೆ ನುಗ್ಗಲೆತ್ನಿಸಿದ ದುಃಖವನ್ನು ಪುಡಿಗಟ್ಟತೊಡಗಿತು.
ಸ್ವಲ್ಪ ಸುಧಾರಿಸಿಕೊಂಡ ನಂತರ ವೈದ್ಯರ ಬಳಿ ಹೋಗಿ 'ನಮ್ಮ ಒಬ್ಬನೇ ಮಗನನ್ನ ಉಳಿಸಿಕೊಟ್ರಿ... ನಮ್ಮ ಪಾಲಿಗೆ ನೀವೇ ದೇವರು ಸರ್‌' ಎಂದು ತಂದೆ ವಿನೀತರಾಗಿ ಹೇಳುತ್ತಿದ್ದರೆ, ಅಷ್ಟರಲ್ಲೇ ಆ ಮಹಾತಾಯಿ ದೇವರ ಕಾಲಿಗೆರಗಿ ನಮಸ್ಕರಿಸಿದಳು.
ದೇವರು!
ಏನನ್ನೂ ತಿಳಿಯದ, ಎಳಸೂ ಅಲ್ಲದ ಎಲ್ಲವನ್ನೂ ಅರಗಿಸಿಕೊಳ್ಳಬಲ್ಲಷ್ಟು ಬಲಿತೂ ಇರದ ಹುಡುಗನೊಬ್ಬ ಅಲ್ಲಿ  2-3 ತಾಸಿನಿಂದ ನಡೆಯುತ್ತಿದ್ದ ಎಲ್ಲಾ ಚಿತ್ರಣಗಳಿಗೆ ಸಾಕ್ಷಿಯಾಗಿದ್ದ. ತನ್ನ ಅಜ್ಜನ ಕಣ್ಣಿನ ಆಪರೇಷನ್‌ಗೆಂದು ತಂದೆಯೊಂದಿಗೆ ಬಂದಿದ್ದ. ಆ ಹುಡುಗನ ಗಮನ ಕೇಂದ್ರೀಕೃತವಾಗಿದ್ದು ಕೊನೆಯಲ್ಲಿ ಆ ತಂದೆ ಹೇಳಿದ ಪದ 'ದೇವರು'. ಅಪ್ಪ ಬೆಳಗ್ಗೆದ್ದು ಆ ದೇವರಿಗೆ ಪೂಜೆ ಮಾಡುತ್ತಾರೆ; ಅಮ್ಮ ಮೂರೂ ಹೊತ್ತು ಅದೇ ದೇವರ ನೆನೆಯುತ್ತಾರೆ; ಮನೆಯಲ್ಲಿ ದೇವರಿಗೆಂದೇ ಒಂದು ಕೋಣೆ ಇದೆ; ದೇವರು ತುಂಬಾ ದೊಡ್ಡವರು, ಅವರಿಗೆ ನಮಸ್ಕಾರ ಮಾಡ್ಬೇಕು ಎಂದು ನಮಸ್ಕಾರ ಮಾಡಿಸುತ್ತಾರೆ; ಆದರೆ, ಇಲ್ಲಿ ಆ ಬಿಳಿಕೋಟ್ ಅಂಕಲ್‌ನ ದೇವರು ಅಂದ್ರು; ಆ ಆಂಟಿ ನಮಸ್ಕಾರ ಮಾಡಿದ್ರು! ಆ ಅಂಕಲ್ ನಿಜವಾಗ್ಲೂ ದೇವರಾ!? ಹಾಗಾದ್ರೆ ಮನೆಯ ಕೋಣೆಯಲ್ಲಿ ಫೋಟೋದಲ್ಲಿರೋ ಥರ ಅಂಕಲ್ ಯಾಕಿಲ್ಲ?
ಪ್ರಶ್ನೆಗಳ ನಡುವೆ ಆ ಹುಡುಗ ಕೊನೆಗೊಂದು ತೀರ್ಮಾನಕ್ಕೆ ಬಂದಿದ್ದ... 'ದೊಡ್ಡೋನಾದ್ಮೇಲೆ ಆ ಬಿಳಿಕೋಟ್ ಅಂಕಲ್ ಥರ ನಾನೂ ದೇವರಾಗ್ತೀನಿ...' ಎಂದು ನಸು ನಕ್ಕಿದ್ದ.

- ಕೆ. ವಿಶಾಂತ್ ರಾವ್
kvishanthrao@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments