ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ನನ್ನ ಮಿಕ್ಸೆಡ್ ಡಬಲ್ಸ್ !

Mainashree
Updated On : 21 Dec 2013, 4:38 am

'ನಿಮ್ಮ ಮೊದಲ ಲವ್ ಟೆನ್ನಿಸ್‌' ಎಂದು ಸುಪ್ರಿಯಾ ಆಗಾಗ ಹೇಳುತ್ತಿರುತ್ತಾಳೆ. 'ಹಾಗೇನಿಲ್ಲ. ಟೆನ್ನಿಸ್‌ನಷ್ಟೇ ಗಾಢವಾಗಿ ನಿನ್ನನ್ನೂ ಪ್ರೀತಿಸುತ್ತೇನೆ' ಎನ್ನುವುದು ನನ್ನ ಉತ್ತರವಾಗಿರುತ್ತದೆ. ಅದು ನಿಜ ಕೂಡ.
ನಾನು, ಸುಪ್ರಿಯಾ ಇಬ್ಬರೂ ಕೊಡಗಿನವರು. ನಮ್ಮಿಬ್ಬರಿಗೂ ಕಾಮನ್ ಫ್ರೆಂಡ್ಸ್ ಇದ್ದಾರೆ. ಅವರ ಮೂಲಕವೇ ಬೆಂಗಳೂರಿನ ರೆಸ್ಟೊರೆಂಟ್ ಒಂದರಲ್ಲಿ ಪರಿಚಯ. ಲವ್ ಅಟ್ ಫಸ್ಟ್ ಸೈಟ್ ಅಂತಾರಲ್ಲ, ಅದು ನನ್ನ ವಿಚಾರದಲ್ಲಿ ಅಕ್ಷರಶಃ ನಿಜ. ನೋಡಿದಾಕ್ಷಣವೇ ಅವಳ ಬಗ್ಗೆ ಮಧುರ ಭಾವ ಮೂಡಿತು. ನನ್ನ ಕಸಿನ್ ಜತೆ ಅವಳು ಆತ್ಮೀಯವಾಗಿ ಮಾತನಾಡುತ್ತಿದ್ದುದನ್ನು ಕಂಡು ಮನಸ್ಸು ಹಗುರವಾಯಿತು. ಅವಳನ್ನು ಪರಿಚಯಿಸುವಂತೆ ಆತನಲ್ಲಿ ಕೇಳಿಕೊಂಡೆ. ತಮಾಷೆ ಗೊತ್ತಾ? ಆಗ ನಾನು ತಲೆ ಬೋಳಿಸಿಕೊಂಡಿದ್ದೆ. 2010ರ ವಿಂಬಲ್ಡನ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದರೆ ಹೀಗೆ ಮಾಡಿಕೊಳ್ಳುವುದಾಗಿ ನನ್ನ ಟ್ರೈನರ್ ಜತೆ ಬೆಟ್ ಕಟ್ಟಿದ್ದೆ. ಆ ಅವತಾರದಲ್ಲಿ ನನ್ನನ್ನು ನೋಡಿದ ಸುಪ್ರಿಯಾಳಿಗೆ ಏನನ್ನಿಸಿತೊ ಗೊತ್ತಿಲ್ಲ.
ಗೆಳೆಯರ ಮೂಲಕ ಸುಪ್ರಿಯಾ ಜತೆ ಸಂಪರ್ಕದಲ್ಲಿದ್ದೆ. ಬಹಳ ಡಿಫರೆಂಟ್ ಆಗಿ ಪ್ರಪೋಸ್ ಮಾಡಬೇಕು ಎಂದುಕೊಳ್ಳುತ್ತಿದ್ದೆ. ಒಂದು ದಿನ ಇದೇ ಉದ್ಯಾನ ನಗರಿಯ ಹೋಟೆಲ್‌ಗೆ ಡಿನ್ನರ್‌ಗೆಂದು ಕರೆದೊಯ್ದೆ. 'ಇನ್ನೊಂದು ತಿಂಗಳಲ್ಲಿ ಮದುವೆಯಾಗಲಿರುವ ಗೆಳೆಯನಿಗೆ ಹನಿಮೂನ್ ಸೂಟ್ ಕಾದಿರಿಸಿದ್ದೇವೆ. ನೋಡಿ ಬರೋಣ' ಎಂದು ಪುಸಲಾಯಿಸಿ ರೂಮ್‌ಗೆ ಕರೆದೊಯ್ದೆ. ಮಂದ ಬೆಳಕು. ಬಾಲ್ಕನಿಯಲ್ಲಿ ಗುಲಾಬಿ ಪಕಳೆಗಳನ್ನು ಚೆಲ್ಲಲಾಗಿತ್ತು. ಕ್ಯಾಂಡಲ್, ಕೇಕ್‌ಗಳಿದ್ದವು. ಅಲ್ಲಿ ಕಾಲಿಡುತ್ತಲೇ ತುಂಬಾ ನರ್ವಸ್ ಆದೆ. ತಕ್ಷಣ ಸಾವರಿಸಿಕೊಂಡು ಮಂಡಿಯೂರಿ ಕುಳಿತು ಪ್ರಪೋಸ್ ಮಾಡಿದೆ. ಆ ಕ್ಷಣ ಅವಳನ್ನು ನೋಡಬೇಕಿತ್ತು. ಆಶ್ಚರ್ಯ, ಖುಷಿ ಎಲ್ಲವೂ ಮಿಳಿತವಾಗಿದ್ದ ಭಾವವದು. ಅದನ್ನು ಅಲ್ಲಿದ್ದ ಕ್ಯಾಮೆರಾಗಳು ಸೆರೆಹಿಡಿದಿವೆ ಎನ್ನಿ. ಆಕೆ ತಕ್ಷಣದಲ್ಲಿ ಒಪ್ಪಿಗೆ ಸೂಚಿಸುತ್ತಾಳೆಂದು ನಾನೂ ಅಂದುಕೊಂಡಿರಲಿಲ್ಲ. 'ಎಸ್‌' ಎಂದವಳು ಹದಿನೈದು ನಿಮಿಷ ಮಾತನಾಡಲೇ ಇಲ್ಲ! ಹೀಗೇ ಎರಡೂವರೆ ವರ್ಷ ಕಳೆಯಿತು. 2012ರ ನವೆಂಬರ್ 25ರಂದು ಕೊಡವ ಸಂಪ್ರದಾಯದಂತೆ ಮಡಿಕೇರಿಯಲ್ಲಿ ದಾಂಪತ್ಯ ಜೀವನಕ್ಕೆ ಅಡಿ ಇಟ್ಟೆವು.
ಮದುವೆಯಾದ ಸ್ವಲ್ಪ ದಿನಗಳ ಬಳಿಕ ನನ್ನ ಮಾವ ತಮಾಷೆಗೆ ಹೇಳಿದರು, 'ನಮ್ಮ ಮನೆ ಈಗ ಶಾಂತವಾಗಿದೆ'. ನಾನೆಂದೇ, 'ನಮ್ಮ ಮನೆಗೆ ಈಗ ಶಕ್ತಿ ಬಂದಿದೆ'. ಸುಪ್ರಿಯಾ ನಿಜಕ್ಕೂ ನಮ್ಮ ಮನೆಗೆ ಹೊಸ ಚೈತನ್ಯ ತುಂಬಿದ್ದಾಳೆ. ಅವಳು ಪಾದರಸ. ಅವಳನ್ನು ಮದುವೆಯಾದ ನಂತರ ಒಬ್ಬ ಆಟಗಾರನಾಗಿ ಮತ್ತು ಒಬ್ಬ ವ್ಯಕ್ತಿಯಾಗಿ ನನ್ನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಮೂಲತಃ ನಾನು ನಾಚಿಕೆ ಸ್ವಭಾವದ ವ್ಯಕ್ತಿ. ಈಗ ಎಲ್ಲರೊಂದಿಗೂ ಬೆರೆಯುವುದನ್ನು ಕಲಿತಿದ್ದೇನೆ. ಆಕೆ ವಾಸ್ತವವನ್ನು ಚೆನ್ನಾಗಿ ಅರ್ಥ ಮಾಡಿಸುತ್ತಾಳೆ. ಅವಳು ವೃತ್ತಿಪರ ಸೈಕಾಲಜಿಸ್ಟ್. ಹೀಗಾಗಿ ನನ್ನನ್ನು ಬಹುಬೇಗ ಅರ್ಥ ಮಾಡಿಕೊಳ್ಳುತ್ತಾಳೆ. ನನ್ನ ಬದುಕಿನ ಬಹಳಷ್ಟು ಸಮಯ ಪ್ರಯಾಣದಲ್ಲೇ ಕಳೆದುಹೋಗುತ್ತದೆ. ಅದು ಅವಳಿಗೂ ಗೊತ್ತು. ಆರು ತಿಂಗಳಿನಿಂದ ಈಚೆಗೆ ನನ್ನೊಂದಿಗೆ ಪ್ರಯಾಣದಲ್ಲೂ ಜತೆಯಾಗುತ್ತಿದ್ದಾಳೆ. ಮೊದಲೆಲ್ಲ ಟೂರ್ನಮೆಂಟ್‌ಗಾಗಿ ಯಾವುದೇ ದೇಶದ ಯಾವುದೇ ನಗರಕ್ಕೆ ಹೋದರೂ ಟೆನ್ನಿಸ್ ಕೋರ್ಟ್, ಹೋಟೆಲ್ ಎರಡು ಸ್ಥಳಗಳನ್ನು ಬಿಟ್ಟು ಬೇರೆಡೆ ಹೋಗುತ್ತಿರಲಿಲ್ಲ. ಪ್ರಾಕ್ಟೀಸ್‌ನಲ್ಲಿ ಬೆವರಿಳಿಸುವುದು ಹೊರತುಪಡಿಸಿ ಇನ್ನೊಂದು ವಿಷಯದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಈಗ ಹಾಗಲ್ಲ. ಹೆಂಡತಿಯೊಂದಿಗೆ ಊರು ಸುತ್ತುತ್ತೇನೆ. ಅಭ್ಯಾಸದ ವೇಳೆ ಎಷ್ಟೇ ದಣಿವಾದರೂ ರೂಮಿಗೆ ಬಂದು ಅವಳನ್ನು ನೋಡಿದಾಕ್ಷಣ ಆಯಾಸವೆಲ್ಲ ಮರೆಯಾಗಿ ಬಿಡುತ್ತದೆ. ಅಂಗಳದಲ್ಲೂ ಅಷ್ಟೇ, ಅವಳನ್ನು ನೋಡುತ್ತಿದ್ದಂತೆ ಹೊಸ ಹುರುಪು ಮೂಡುತ್ತದೆ.
ಸುಪ್ರಿಯಾ ನನ್ನ ಜೀವನದಲ್ಲಿ ಪ್ರವೇಶಿಸಿದ ನಂತರ ಟೆನ್ನಿಸ್‌ನಿಂದ ಆಚೆಗೂ ಇನ್ನೊಂದು ಬದುಕಿದೆ ಎನ್ನುವುದನ್ನು ಅರ್ಥ ಮಾಡಿಕೊಂಡಿದ್ದೇನೆ. ಜೀವನವನ್ನು ಹೇಗೆ ಆನಂದಿಸಬೇಕು ಎನ್ನುವುದನ್ನು ಕಲಿತಿದ್ದೇನೆ. ಮುಖ್ಯವಾಗಿ ನಾನೀಗ ನೆಲದ ಮೇಲೆ ನಡೆದಾಡುವ ವ್ಯಕ್ತಿಯಾಗಿದ್ದೇನೆ!
ನಮಗೆ ಪ್ರತಿದಿನವೂ ಪ್ರೇಮಿಗಳ ದಿನ. ನಾವಿಬ್ಬರೂ ಜತೆಗಿರುವ ಪ್ರತಿ ಕ್ಷಣವೂ ಮಧುರವೇ. ಅಷ್ಟರಮಟ್ಟಿಗೆ ಎಂಜಾಯ್ ಮಾಡುತ್ತಿದ್ದೇವೆ.

- ರೋಹನ್ ಬೋಪಣ್ಣ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments