ಡಯಟ್ ಬಗ್ಗೆ ಇರುವ ಅತ್ಯಂತ ಮಜಬೂತ್ ವಕ್ರತುಂಡೋಕ್ತಿ ಏನು ಗೊತ್ತಾ? 'ಡಯಟ್ ಮಾಡುವವರು ಆಹಾರದ ಬಗ್ಗೆಯೇ ಯೋಚಿಸುತ್ತಿರುತ್ತಾರೆ ಮತ್ತು ಅದರ ಬಗ್ಗೆಯೇ ಮಾತಾಡುತ್ತಿರುತ್ತಾರೆ'.
ಇದು ಎಷ್ಟು ಸತ್ಯ ನೋಡಿ. ಇವತ್ತು ಡಯಟ್ ಕೇವಲ ಆರೋಗ್ಯ ರಕ್ಷಣೆಯ ಸೂತ್ರವಾಗಿ ಪರಿಗಣನೆ ಆಗಿಯೇ ಇಲ್ಲ. ಅದೊಂದು ಫ್ಯಾಷನ್. ಅದಕ್ಕಿಂತ ಹೆಚ್ಚಾಗಿ ಡಯಟ್ಟೇ ಒಂದು ಕಾಯಿಲೆ. ಒತ್ತಡದ ಯುಗದಲ್ಲಿ ಇಂದು ಆಹಾರ ಮತ್ತು ವ್ಯವಹಾರಗಳೆರಡೂ ಶಿಸ್ತನ್ನು ಕಳೆದುಕೊಂಡಿವೆ. ಮನುಷ್ಯನಿಗೆ ಮನದುಂಬಿ ತಿನ್ನುವ, ಕಣ್ತುಂಬಿ ನಿದ್ರಿಸುವ ಅವಕಾಶ ಮತ್ತು ವ್ಯವಧಾನ ಇಲ್ಲ. ಬಹುತೇಕರಿಗೆ ತಾವೇನು ತಿನ್ನುತ್ತಿದ್ದೇವೆ ಎಂಬುದರ ಅರಿವೂ ಇಲ್ಲವಾಗಿದೆ. ಏಕೆಂದರೆ ಫಾಸ್‌ಫುಡ್, ಜಂಕ್‌ಫುಡ್‌ಗಳು ಅನಿವಾರ್ಯ ಎಂದಾಗಿಬಿಟ್ಟಿದೆ. ಮತ್ತದನ್ನು ತಿನ್ನುವುದೇ ದೊಡ್ಡಸ್ತಿಕೆ, ಪ್ರತಿಷ್ಠೆ ಎಂಬ ಭ್ರಮೆಗೂ ಒಳಗಾಗಿದ್ದಾನೆ. ಪರಿಣಾಮ ಆರೋಗ್ಯಕರ ಬದುಕು ಮರೀಚಿಕೆಯಾಗಿದೆ.
ಹಿತ ಮತ್ತು ಮಿತ ಎನ್ನುವುದು ಆಹಾರದ ಮೂಲ ಮಂತ್ರ. ದೇಹಕ್ಕೆ ಹಿತವೆನಿಸುವ ಮತ್ತು ಮಿತಾಹಾರ ಸೇವನೆ ಭಾರತೀಯ ಆಹಾರ ಸಂಸ್ಕೃತಿ. ಡಯಟ್ ಅಥವಾ ಉಪವಾಸ ಎಂಬುದು ನಮಗೆ ಹೊಸ ಸಂಗತಿಯೇನಲ್ಲ. ಡಯಟ್ ಪದ ಹೊಸದಿರಬಹುದು. ಆದರೆ ಮಿತಾಹಾರ ಮತ್ತು ಉಪವಾಸಗಳು ನಮ್ಮಲ್ಲಿ ಮೊದಲಿಂದಲೂ ವ್ರತ, ಧಾರ್ಮಿಕ ಆಚರಣೆಯ ಸ್ವರೂಪದಲ್ಲಿ ಪಾಲನೆ ಆಗುತ್ತಲೇ ಬರುತ್ತಿತ್ತು. ಇವತ್ತಿಗೂ ಮನೆಯ ಹಿರಿಯರು ಗುರುವಾರ, ಶುಕ್ರವಾರ, ಶನಿವಾರ ಹೀಗೆ ವಾರಕ್ಕೊಮ್ಮೆ ಉಪವಾಸ ವ್ರತಾಚರಣೆ ಮಾಡುತ್ತಲೇ ಬರುತ್ತಿದ್ದಾರೆ. ಇನ್ನು ಸ್ವಾತಂತ್ರ್ಯಾನಂತರದ ಭಾರತದಲ್ಲಿ ಯುದ್ಧ ಸನ್ನಿವೇಶದಲ್ಲಿ ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು ದೇಶದ ಜನತೆಗೆ ಕರೆಕೊಟ್ಟ ವಾರದಲ್ಲಿ ಒಂದು ದಿನದ ಉಪವಾಸವನ್ನು ಇಂದಿಗೂ ಕೆಲವರು 'ಶಾಸ್ತ್ರಿ ಸೋಮವಾರ' ಎಂತಲೇ ಪಾಲಿಸಿಕೊಂಡು ಬರುತ್ತಿದ್ದಾರೆ.
'ಲಂಘನಂ ಪರಮೌಷಧಂ' ಎಂಬುದು ಸಂಸ್ಕೃತದ ಹಳೆಯ ಸೂತ್ರ. ಬಹುತೇಕ ಕಾಯಿಲೆಗಳಿಗೆ ಆಹಾರವೇ ಮೂಲ ಎಂಬುದರ ಜತೆಗೆ ಬಹತೇಕ ಆರೋಗ್ಯ ಸಮಸ್ಯೆಗಳಿಗೆ ಉಪವಾಸವೇ ಪರಿಹಾರ ಎಂಬುದೂ ಸತ್ಯ. ಅದೇ ರೀತಿ 'ಶರೀರ ಮಾಧ್ಯಮಂ ಖಲು ಧರ್ಮ ಸಾಧನಂ' ಎಂಬುದೂ ಬಹುಮುಖ್ಯವಾಗುತ್ತದೆ. ಇಂಗ್ಲಿಷಿನಲ್ಲಿ ಇದನ್ನೇ-without body you are nobody ಎಂದು ವ್ಯಾಖ್ಯಾನಿಸಲಾಗಿದೆ. ಒಟ್ಟಾರೆ ಆರೋಗ್ಯಕಾರಿ ಜೀವನದಿಂದ ಮಾತ್ರವೇ ಏನನ್ನಾದರೂ ಸಾಧಿಸಲು ಸಾಧ್ಯ. ಆದರಿಂದು ಡಯಟ್ ಹೆಸರಿನಲ್ಲಿ ಅವೈಜ್ಞಾನಿಕ ದೇಹದಂಡನೆಗೆ ಮುಂದಾಗಿ ಇಲ್ಲದ ಸಮಸ್ಯೆಗಳನ್ನು ತಂದುಕೊಳ್ಳಲಾಗುತ್ತಿದೆ. ಝೀರೋ ಫಿಗರ್, ಸ್ಲಿಮ್ ಆ್ಯಂಡ್ ಟ್ರಿಮ್ ಆಗಬೇಕೆಂಬ ಹುಚ್ಚಿಗೆ ಬಿದ್ದು ಆಸ್ಟಿಯೋ ಫೋರೋಸಿಸ್ (osteoporosis-ಮೂಳೆಗಳ ದುರ್ಬಲತೆ)ನಂಥ ಸಮಸ್ಯೆಯನ್ನು ಆಹ್ವಾನಿಸಿಕೊಳ್ಳಲಾಗುತ್ತಿದೆ. ದಿನದಿಂದ ದಿನಕ್ಕೆ ಮೂಳೆಗಳು ಲಡ್ಡಾಗುತ್ತಿದೆ. ಹೀಗೇ ಮುಂದುವರಿದರೆ ಮುಂದಿನ ಒಂದಿಡೀ ತಲೆಮಾರು ನಿಶ್ಯಕ್ತವಾಗಿಬಿಡುವ ಅಪಾಯವಿದೆ. ದೇಹಕ್ಕೆ ಒಂದಷ್ಟು ಪೌಷ್ಟಿಕಾಂಶಗಳು ಬೇಕೇಬೇಕು. ಸೂಕ್ತ ಪ್ರಮಾಣದ ಆಹಾರವನ್ನು ತೆಗೆದುಕೊಳ್ಳದಿದ್ದಲ್ಲಿ ಅದರ ಕೊರತೆ ನಮ್ಮನ್ನು ಬಾಧಿಸಿಯೇ ಬಾಧಿಸುತ್ತದೆ. ಆಹಾರ ತೆಗೆದುಕೊಂಡ ಮಾತ್ರಕ್ಕೆ ಸ್ಥೂಲದೇಹಿಯಾಗಿ ಬಿಡುತ್ತಾರೆ, ಕೊಬ್ಬಿನ ಸಮಸ್ಯೆ ಕಾಡುತ್ತದೆ ಎಂಬುದು ಸುಳ್ಳು. ಆಹಾರವನ್ನು ಹೆಚ್ಚು ತೆಗೆದುಕೊಂಡರೂ ಅದನ್ನು ಕರಗಿಸುವ ಶ್ರಮದ ದುಡಿಮೆ, ವ್ಯಾಯಾಮ ಇಲ್ಲದ ಪರಿಣಾಮ ಬೊಜ್ಜಿನ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಚಿಂತೆ ಮತ್ತು ಡಯಟ್- ಈ ಎರಡು ಸಂಗತಿಗಳಿಂದ ದೂರವಿದ್ದರೆ ತನ್ನಿಂದ ತಾನೇ ಬೊಜ್ಜಿನ ಸಮಸ್ಯೆಯಿಂದ ಮುಕ್ತಿ ಪಡೆದುಕೊಳ್ಳುತ್ತೀರಿ. ಬೊಜ್ಜಿನ ಬಗ್ಗೆ ಯೋಚಿಸುವುದನ್ನು ನಿಲ್ಲಿಸುವುದೇ ಇದಕ್ಕಿರುವ ಏಕೈಕ ಪರಿಹಾರ.
ವಿಶೇಷವೆಂದರೆ, ಅಸಂತುಲಿತ ಆಹಾರ ಒಂದಿಡೀ ಜನಾಂಗವನ್ನು ದುರ್ಬಲಗೊಳಿಸುತ್ತಿದೆ. ಬದಲಾಗಿ ನಿಜವಾಗಿ ಯುವ ಮನಸ್ಸಿಗೆ ಕಲಿಸಬೇಕಿದ್ದ ಶಿಸ್ತಿನ ಜೀವನಕ್ರಮ, ಶ್ರಮದ ದುಡಿಮೆ, ಯೋಗ-ವ್ಯಾಯಾಮದಂಥ ನಿಯಮಿತ ದಂಡನೆಯ ಪರಿಹಾರವನ್ನು ಯಾರೂ ಕಲಿಸುತ್ತಲೇ ಇಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ಡಯಟ್ ಎಂಬುದು ಕಾಯಿಲೆಯಾಗದಿರಲಿ ಎಂಬ ಕಾಳಜಿಯೊಂದಿಗೆ 'ಖುಷಿ'ಯ ಬದುಕಿನ ಕೆಲವು ಗುಟ್ಟನ್ನು ಹರವಿಟ್ಟಿದ್ದೇವೆ. ಸುಂದರ ದೇಹ ಮಾತ್ರವಲ್ಲ ಆರೋಗ್ಯವಂತ ಬದುಕು, ನೆಮ್ಮದಿಯ ಸಾವೂ ಡಯಟ್‌ನ ಉದ್ದೇಶವಾಗಿರಬೇಕು. ಅದಿಲ್ಲದಿದ್ದರೆ ಡಯಟ್‌ಗೆ ಅರ್ಥವಿಲ್ಲ ಎಂಬುದನ್ನು ನೆನಪಿಡಿ.
- ವಿಶ್ವೇಶ್ವರ ಭಟ್, ಪ್ರಧಾನ ಸಂಪಾದಕ