ಖುಷಿ

ಬಾ ಮಳೆಯೇ ಬಾ

ಅದು ಅತಿಹೆಚ್ಚು ಮಳೆಯನ್ನು ತಡೆದುಕೊಂಡ ಭೂಮಿ. ನಮ್ಮ ಮಲೆನಾಡಿಗಿಂತ ಸುಂದರ. ಹಲವು ಜಲಪಾತಗಳ ತವರು. ಕಣ್ಣು ಕೋರೈಸುವಂಥ ಜಲಧಾರೆ. ಹಸಿರ ಮೈಸಿರಿ. ಚಿರಾಪುಂಜಿ ಹೀಗೆಲ್ಲ ಇದೆ ಅಂತ ನಾನಲ್ಲಿಗೆ ಹೋಗಿದ್ದೆ. ಆದರೆ, ಕಲ್ಪನೆ ಪೊಳ್ಳಾಯಿತು. ಅಂಥ ವೈಭವ ಅಲ್ಲಿರಲಿಲ್ಲ. ಸೌಂದರ್ಯ ಇಂಗಿಹೋಗಿದೆ. ಧುಮ್ಮಿಕ್ಕುವ ಜಲಪಾತಗಳು ಅಷ್ಟೇನೂ ಆಸಕ್ತಿ ತೋರುತ್ತಿಲ್ಲ.
ಅದೊಂದು ಕಾಲ. ಆಕಾಶವೇ ಕಳಚಿ ಬಿದ್ದಂತೆ ವರುಣನ ದಾಳಿ. ದಾಖಲೆಯ ಮಳೆ. ಭೂಪಟದ ಮುಂದೆ ಯಾರೇ ಕೋಲು ಹಿಡಿದು ನಿಂತರೂ 'ಚಿರಾಪುಂಜಿ- ಪ್ರಪಂಚದಲ್ಲೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ' ಅಂತ ಕಣ್ಣುಮುಚ್ಚಿಕೊಂಡು ತೋರಿಸುತ್ತಿದ್ದ. ಅಂಥ ಹೆಗ್ಗಳಿಕೆ ಈಗ ತಲೆಕೆಳಗಾಗುತ್ತಿದೆ. ನೀವು ನಂಬಲೇಬೇಕು, ಅದೀಗ ಮಳೆನಾಡಲ್ಲ. ಎಲ್ಲವನ್ನೂ ಕಳೆದುಕೊಂಡ ಬಟಾಬಯಲು.

ವರುಣನಿಗೆ ಅದೆಂಥ ಸಿಟ್ಟು!
ಚಿರಾಪುಂಜಿ ಸುತ್ತಲೂ ಬೆಟ್ಟಗುಡ್ಡಗಳು ಆವರಿಸಿಕೊಂಡಿವೆ. ಮಳೆ ಮಾರುತಗಳು ಯಾವ ದಿಕ್ಕಿನಿಂದ ಬೀಸಿದರೂ ಬೆಟ್ಟಗಳು ತಡೆದು ಮಳೆರಾಯನನ್ನು ಹಾಗೆಯೇ ಅಪ್ಪಿಕೊಳ್ಳುತ್ತವೆ. ಅಲ್ಲದೆ, ಬಂಗಾಳಕೊಲ್ಲಿಯಲ್ಲಿ ಯಾವುದೇ ವಾಯುಭಾರ ವ್ಯತ್ಯಾಸಗಳಾದರೂ ಅದು ಮೇಲಕ್ಕೆ ಚಲಿಸಿದಾಗ ಈಶಾನ್ಯ ರಾಜ್ಯಗಳಲ್ಲಿ ಹೆಚ್ಚು ಮಳೆಯಾಗುತ್ತದೆ. ಬಾಂಗ್ಲಾದೇಶದ ಮೇಲೆ ಹರಿದಾಡುವ ವಿಮಾನಗಳು ಸುಮಾರು 500 ಕಿ.ಮೀ.ನಷ್ಟು ವಿಸ್ತಾರವಾಗಿ ಮೋಡಗಳ ಮಧ್ಯ ಹಾರಾಡುತ್ತವೆ. ಮಳೆಯ ಮಹಿಮೆಗೆ ಲೋಹದ ಹಕ್ಕಿಗಳು ಎಷ್ಟೋ ಸಮಯ ಹಾರಾಟ ನಿಲ್ಲಿಸಿದ್ದೂ ಇದೆ. ಹೀಗಾಗಿ ಚಿರಾಪುಂಜಿ 'ಅತ್ಯಧಿಕ ಮಳೆ ಪ್ರದೇಶ' ಎಂದು ಗುರುತಿಸಿಕೊಂಡಿತ್ತಾದರೂ ಈಗ ಮಳೆರಾಯ ಚಿರಾಪುಂಜಿ ಜೊತೆ ಮುನಿಸಿಕೊಂಡಿದ್ದಾನೆ.

ಗಣಿಯತ್ತ ರೈತರು...
ಚಿರಾಪುಂಜಿಯ ಬೆಟ್ಟಗಳಲ್ಲಿ ಈಗ ಮೊದಲಿನ ಹಸಿರಿಲ್ಲ. ನಿರಾಶಾದಾಯಕ ಮಳೆ. ಕಾಡುಗಳು ನಾಶವಾಗಿವೆ. ಅಲ್ಲಿ ಬೀಳುವ ಮಳೆಯ ರಭಸ ತಡೆಯಲು ಮತ್ತು ಬಿದ್ದ ಮಳೆ ನೀರನ್ನು ಹಿಡಿದಿಡಲು ಮರಗಳೇ ಇಲ್ಲ. ಬಿದ್ದ ಮಳೆನೀರು ಬೆಟ್ಟಗುಡ್ಡಗಳಿಂದ ರಭಸವಾಗಿ ಇಳಿದು ಪಕ್ಕದ ಬಾಂಗ್ಲಾದ ಒಡಲನ್ನು ಸೇರುತ್ತಿದೆ. ಅಲ್ಲಿ ಮಳೆಗಾಲ ಹೊರತುಪಡಿಸಿದರೆ ಮಿಕ್ಕಂತೆ ನೀರಿಗೆ ತತ್ವಾರ. ನೀರು ತರಲಿಕ್ಕಾಗಿ ಜನ ನಾಲ್ಕಾರು ಕಿಲೋಮೀಟರ್‌ಗಳಷ್ಟು ನಡೆದು ಹೋಗುತ್ತಾರೆ. ನೀರಿಲ್ಲ ಎಂದ ಮೇಲೆ ರೈತ ನೇಗಿಲು ಇಳಿಸುತ್ತಾನಾ? ಕೃಷಿ ಕಡಿಮೆ ಆಗಿದೆ. ರೈತರು ಕಲ್ಲಿದ್ದಲು, ಸುಣ್ಣದ ಕಲ್ಲಿನ ಗಣಿಗಳಲ್ಲಿ ದಿನಗೂಲಿಗೆ ಹೋಗುತ್ತಿದ್ದಾರೆ.

ಹಸಿರು ದೃಶ್ಯಗಳಿಲ್ಲ...
ಅತಿ ಹೆಚ್ಚು ಮಳೆಯಿಂದ ನೂರಾರು ವರ್ಷಗಳ ತನಕ ಚಿರಾಯುವಾಗಿ ಉಳಿದ ಹೆಸರು 'ಚಿರಾಪುಂಜಿ'. ಆದರೆ, ಪ್ರಕೃತಿಯ ವೈಚಿತ್ರ್ಯ ಅದೆಲ್ಲವನ್ನೂ ಅಳಿಸಿಹಾಕಿದೆ. ಸದಾ ಮಳೆ ಬೀಳುತ್ತಿದ್ದ ಪ್ರದೇಶ ಇಂದು ಮಳೆಗಾಗಿ 'ಕಾದು' ಕೂರುವಂತಾಗಿದೆ. ಬೆಟ್ಟ ಮುಗಿಲು ಒಂದಾದಂತೆ ಕಾಣುತ್ತಿದ್ದ ದೃಶ್ಯ ಇಂದು ಕ್ಯಾಮೆರಾಕ್ಕೆ ಕಾಣಿಸುತ್ತಿಲ್ಲ. ಹಸಿರು ಇಂದು ಹೆಸರಿಗೇ ಇಲ್ಲ.

ಅವರು ಮೈಗಳ್ಳರಾದರಾ?
ಅದ್ಯಾರೋ ಮುನಿಯ ಶಾಪಕ್ಕೆ ಸಿಕ್ಕಿ ಬರಡಾದ ಸಾಮ್ರಾಜ್ಯದಂತೆ ಚಿರಾಪುಂಜಿ ಎಂಬ ಸೃಷ್ಟಿಯ ಶೃಂಗಾರ, ನೋಡುಗರನ್ನು ಸೆಳೆದು ಆಲಂಗಿಸಬೇಕಿದ್ದ ಅದ್ಭುತ ತಾಣ ನಮಗೆ ಬೇಸರ ಮೂಡಿಸಿದ್ದಂತೂ ಹೌದು. 'ಮಳೆ ಇದ್ದಾಗ ಇಲ್ಲಿನ ಜನರು ಸಿಕ್ಕಾಪಟ್ಟೆ ಕ್ರಿಯಾಶೀಲರಾಗಿದ್ದರು. ಈಗ ಮೈಗಳ್ಳರಾಗಿದ್ದಾರೆ' ಅಂತ ಯಾರೋ ಅಂದದ್ದನ್ನು ಕೇಳಿಯೂ ಹೃದಯ ಕೊಂಚ ಅಲುಗಾಡಿತು. ಹೀಗೇಕೆ ಆದೆಯೋ ಓ ಚಿರಾಪುಂಜಿ!?

ಅದೊಂದು ಪ್ರಳಯದ ಮಳೆ
ಆಗಸ್ಟ್ 1880ರಿಂದ ಜುಲೈ 1881ರವರೆಗೆ ಬಿದ್ದ ಮಳೆ 22,987 ಮಿ.ಮೀ.! ಒಂದೇ ದಿನದಲ್ಲಿ ಅತ್ಯಧಿಕ ಮಳೆ ಬಿದ್ದ ಸ್ಥಳ ಇದು. 1974ರಲ್ಲಿ ಅದೊಂದು ದಿನ ಜಲ ಪ್ರಳಯವಾದಂತೆ ಮಳೆರಾಯ ಅಬ್ಬರಿಸಿದ್ದ. 2,455 ಮಿ.ಮೀ. ದಾಖಲೆ ಮಳೆ ಸುರಿದು ಅಲ್ಲಿನ ಜನರನ್ನು ಬೆಚ್ಚಿ ಬೀಳಿಸಿತ್ತು. ಈಗ ಚಿರಾಪುಂಜಿಯಲ್ಲಿ ಆದ ಮಳೆ 3384 ಮಿ.ಮೀ. ನಷ್ಟು. ಕಾಲ ಬದಲಾದಂತೆ ಮಳೆ- ಚಿರಾಪುಂಜಿ ನಡುವಿನ ಸಂಬಂಧ ಹಳಸಿದೆ. ಅವುಗಳ ನಡುವೆ ಇದ್ದ ಬಾಂಧವ್ಯದಲ್ಲಿ ಬಿರುಕು ಮೂಡಿದೆಯೇನೋ? ಇನ್ನು 2001ರ ಜನಗಣತಿ ಚಿರಾಪುಂಜಿಯಲ್ಲಿ ಜನಸಂಖ್ಯೆ 10,086 ಇತ್ತು. ನಂತರದ 10 ವರ್ಷಗಳಲ್ಲಿ ಇಲ್ಲಿನ ಜನಸಂಖ್ಯೆ ಹೆಚ್ಚಿದ್ದು ಕೇವಲ 2,000ದಷ್ಟು ಮಾತ್ರ. ಇಲ್ಲಿ ಮಳೆಯಿಲ್ಲ, ಪ್ರವಾಸಿಗರು ಇತ್ತ ಬರುವುದು ಕಡಿಮೆ. ಇಲ್ಲಿನ ಮಂದಿ ಈ ಜಾಗ ಬಿಟ್ಟು ಬೇರೆಡೆ ಉದ್ಯೋಗಕ್ಕಾಗಿ ನಡೆಯುತ್ತಿದ್ದಾರೆ. ಆದ ಕಾರಣ ಇಲ್ಲಿನ ಜನಸಂಖ್ಯೆ ಹೆಚ್ಚಾಗುತ್ತಿಲ್ಲ ಎಂದು ಸ್ಪಷ್ಟನೆ ಕೊಡುತ್ತಾರೆ.

- ಚಿತ್ರ-ಲೇಖನ: ಸುರೇಶ್ ವತ್ಸ
sureshvatsaa@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Chalo Supreme Court: ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯಕಾಂತ್; ಸುಪ್ರೀಂ ಕೋರ್ಟ್‌ನತ್ತ ಇಂಡಿಯಾ ಬ್ಲಾಕ್ ಮೆರವಣಿಗೆ!

ಸರ್ಕಾರದ 200 ಅಧಿಕಾರಿಗಳು ವಿರೋಧ ಪಕ್ಷದ ಸಂಪರ್ಕದಲ್ಲಿ: ಪ್ರತಿಭಟನಾ ಜಾಥಾಕ್ಕೂ ಮುನ್ನ ರಾಹುಲ್ ಗಾಂಧಿ ಹೊಸಬಾಂಬ್!

'ಸುಪ್ರೀಂ ಕೋರ್ಟ್‌ಗೆ ಅಲೆದು, ಅಲೆದು ಸಾಕಾಗಿ ಹೋಗಿದೆ'; ಹಿರಿಯ ವಕೀಲ ಕಪಿಲ್ ಸಿಬಲ್ ಅಚ್ಚರಿ ಹೇಳಿಕೆ, ನ್ಯಾಯಾಲಯ ಹೇಳಿದ್ದೇನು?

ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ: 3ನೇ ಜಲಾಂತರ್ಗಾಮಿ ನಿಗ್ರಹ ಯುದ್ಧನೌಕೆ 'INS ಮಂಗ್ರೋಲ್' ಸೇರ್ಪಡೆ-Video

ಪ್ರತಿಭಟನಾಕಾರರಿಗೆ ಬಿಗ್ ಶಾಕ್; ಇನ್ಮುಂದೆ ದೆಹಲಿ Jantar Mantarನಲ್ಲಿ ಧರಣಿ ನಡೆಸುವಂತಿಲ್ಲ..!