ಖುಷಿ

ಸಾಮಾನ್ಯನನ್ನು ಮಹದೇವನಾಗಿಸುವ ಮೆಲೂಹದ ಮೃತ್ಯುಂಜಯ!

ನೀಲಿಕಂಠ ಹೊಂದಿದ ಕಾರಣಕ್ಕೆ ನೀಲಕಂಠನೇ ಅವತರಿಸಿದ್ದಾನೆ ಎಂದೇ ನಂಬಿದ ಸೂರ್ಯವಂಶಿಯರು ಭಾರತೀಯರ ನಂಬಿಕೆಯನ್ನು ಪ್ರತಿನಿಧಿಸುತ್ತಾರೆ. ಧರ್ಮನಿಷ್ಠನಾಗಿ ನಡೆಯುವ ಪ್ರತಿಯೊಬ್ಬನಲ್ಲಿ ಮಹದೇವ ಇದ್ದಾನೆ ಎಂಬ ಸಾರ ಹೊತ್ತಿರುವ ಹೊತ್ತಿಗೆ 'ಮೆಲೂಹಾದ ಮೃತ್ಯುಂಜಯ' (ಶಿವ ಸರಣಿ 1). ಅಮೀಶ್ ಬರೆದ ಶಿವ ಟ್ರಯಾಲಜಿಯ ಮೊದಲ ಸರಣಿ ಕನ್ನಡಕ್ಕೆ ಅನುವಾದಗೊಂಡ ಕೃತಿ ಇದಾಗಿದೆ. ಶ್ರೀ ರಾಮನ ನಂತರ ಅವತಾರ ಪುರುಷನಾಗಿ ಶಿವ ಆಗಮಿಸಿದ ಕಥೆಯನ್ನು ಎಸ್. ಉಮೇಶ್ 9 ತಿಂಗಳ ಪರಿಶ್ರಮದಲ್ಲಿ ತರ್ಜುಮೆಗೊಳಿಸಿ ಕನ್ನಡಿಗರ ಮಡಿಲಿಗಿರಿಸಿದ್ದಾರೆ.
'ದಿ ಇಮ್ಮೋರ್ಟಲ್ ಆಫ್ ಮೆಲೂಹ' ಹೆಸರಿನ ಮೂಲ ಕೃತಿಗೆ ಯಾವುದೇ ಚಿಕ್ಕ ದೋಷ ಬರದಂತೆ ನಾಜೂಕಾಗಿ, ಅರ್ಥವತ್ತಾಗಿ ಚಿತ್ರಿಸಿದ್ದಾರೆ. ಗುಣ ಪಂಗಡದ ನಾಯಕನಾಗಿ ಗುರುತಿಸಿಕೊಳ್ಳುವ ಶಿವ ಕೊನೆಗೆ ಸಾಕ್ಷಾತ್ ಮಹಾದೇವನೇ ಆಗಿಬಿಡುತ್ತಾನೆ. ಓದುಗನು ತನ್ನಲ್ಲಿರುವ ಮಹಾದೇವನನ್ನು ಕಂಡುಕೊಳ್ಳುತ್ತಾ ಹೋಗುತ್ತಾನೆ. ವಸ್ತುಶಃ ತಾನೇ ಮಹದೇವನೆಂಬ ಕಲ್ಪನೆ ಓದುಗನ ಮನಸ್ಸಿನಲ್ಲಿ ಮೂಡಿರುತ್ತದೆ. ಸರಿ ತಪ್ಪುಗಳನ್ನು ಗುರುತಿಸುತ್ತಾ, ಧರ್ಮದ ನೆಲೆಯನ್ನು, ಸಂಸ್ಕೃತಿಯನ್ನು ಕಥೆಯೊಂದಿಗೆ ಬೋಧಿಸುತ್ತಾ ಸಾಗುವ ಕೃತಿ ಇದಾಗಿದೆ. ಭಾರತದ ಇತಿಹಾಸದಲ್ಲಿ ಕಾಶ್ಮೀರದ ಪವಿತ್ರತೆಯನ್ನು ಸಾರುವ ದೃಷ್ಟಿಯಲ್ಲಿ ಮಹತ್ವದ್ದಾಗಿದೆ. 'ಓಂ' ಶಬ್ಧದ ಪದ ರಚನೆ, ಹುಟ್ಟು ಮತ್ತು ವೈಶಿಷ್ಟ್ಯಗಳನ್ನು ತಿಳಿಯಪಡಿಸಿರುವ ಬಗೆ ಅರ್ಥವತ್ತಾಗಿದೆ.
ಕಾಲ ಕ್ರಿಸ್ತಪೂರ್ವ 1900. ನೂರಾರು ಶತಮಾನಗಳ ಹಿಂದೆ ವೈಭವದಿಂದ ರಾಜ್ಯಭಾರ ಮಾಡಿದ ಯುಗಪುರುಷ ಶ್ರೀರಾಮ ಕಟ್ಟಿದ ಅದ್ಭುತ ಸಾಮ್ರಾಜ್ಯವೇ ಮೆಲೂಹ. ಆ ಸಾಮ್ರಾಜ್ಯವನ್ನು ಆಳುತ್ತಿದ್ದವರು ಸೂರ್ಯವಂಶಿಗಳು. ಮೆಲೂಹದ ಪೂರ್ವದಿಕ್ಕಿನಲ್ಲಿ ಸ್ವದೀಪ ಎಂಬ ರಾಜ್ಯವಿತ್ತು. ಅದನ್ನು ಆಳುತ್ತಿದ್ದ ಚಂದ್ರವಂಶಿಗಳು. ಮೆಲೂಹನ್ನರ ಮೇಲೆ ನಿರಂತರ ಉಗ್ರದಾಳಿ ಮಾಡುವುದೇ ಚಂದ್ರವಂಶಿಯರ ಗುರಿ. ಅಲ್ಲಿನ ಜೀವನಾಡಿಯಾಗಿದ್ದ ಸರಸ್ವತಿ ನದಿ ವಿನಾಶದ ಅಂಚಿಗೆ ಸಾಗಿತ್ತು. ಹಿಂದಿನ ಜನ್ಮದಲ್ಲಿ ಘೋರ ಪಾಪಗಳನ್ನು ಮಾಡಿ ಈ ಜನ್ಮದಲ್ಲಿ ವಿಕಾರವಾಗಿ ಹುಟ್ಟಿರುವ ರಕ್ತಪಿಪಾಸುಗಳಾದ ನಾಗಾಗಳು ಸಾಮ್ರಾಜ್ಯದ ಗಡಿಯಲ್ಲಿ ನೆಲೆಸಿದ್ದರು. ನಾಗಾಗಳಿಗೆ ಧರ್ಮವನ್ನು ಅನುಸರಿಸುವವರ ಮೇಲೆ ದಾಳಿ ಮಾಡುವುದೇ ಬದುಕಿನ ಸಾರ್ಥಕ್ಯ. ಚಂದ್ರವಂಶಿಗಳು ನಾಗಾಗಳ ಜತೆ ಸೇರುತ್ತಾರೆ. ಇಬ್ಬರು ಅಧರ್ಮಿಗಳು ಧರ್ಮದ ವಿರುದ್ಧ ಮಾರಣಾಂತಿಕ ಸಮರ ಸಾರುತ್ತಾರೆ.
ಸಂಕಷ್ಟ, ಸಂದಿಗ್ಧ ಸಮಯದಲ್ಲಿ ಯುಗಾವತಾರಿಯೊಬ್ಬ ತಮ್ಮ ರಕ್ಷಣೆಗೆ ಬಂದೇ ಬರುತ್ತಾನೆ ಎಂಬ ಏಕೈಕ ಭರವಸೆ ಮೆಲೂಹನ್ನರಿಗೆ. ಆತನಿಗಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿರುತ್ತಾರೆ. ಜಗತ್ತಿನಲ್ಲಿ ಅಧರ್ಮ, ಅನ್ಯಾಯ, ಅಕ್ರಮಗಳಿಗೆ ಇತಿಶ್ರೀ ಹಾಡಲು ಮಹದೇವ ಬಂದೇ ಬರುತ್ತಾನೆ ಎಂಬುದೇ ಮೆಲೂಹನ್ನರ ಬಲವಾದ ನಂಬಿಕೆ.
ಕೈಲಾಸ ಪರ್ವತದ ತಪ್ಪಲಿನಲ್ಲಿರುವ ಮಾನಸ ಸರೋವರ ಬಳಿ ಗುಣ ಪಂಗಡ ವಾಸವಿರುತ್ತದೆ. ಮಾನಸ ಸರೋವರದ ಜಲ ಪವಿತ್ರವಾದುದು ಎಂಬ ನಂಬಿಕೆ ಬಲವಾಗಿತ್ತು. ಆದರೆ ಪಕ್ರಾಟಿ ಎಂಬ ದುಷ್ಟರ ಗುಂಪು ಮಾನಸ ಸರೋವರವನ್ನು ಆಕ್ರಮಿಸಲು ಹಿಂದಿನಿಂದ ಗುಣ ಪಂಗಡದವರ ಮೇಲೆ ಆಕ್ರಮಣ ನಡೆಸುತ್ತಿರುತ್ತಾರೆ. ಶಿವ ಗುಣ ಪಂಗಡದ ನಾಯಕ. ದಿನನಿತ್ಯ ತನ್ನ ಪಂಗಡದ ಹೆಂಗಸರು ಮತ್ತು ಮಕ್ಕಳು ಕೊಲೆಗೀಡಾಗುತ್ತಿದ್ದುದು ಶಿವನಿಗೆ ಕಗ್ಗಂಟಾಗಿ ಪರಿಣಮಿಸುತ್ತದೆ. ಅದೇ ಸಂದರ್ಭದಲ್ಲಿ ಮೆಲೂಹನ್ನರು ಶಿವನನ್ನು ತಮ್ಮ ನಾಡಿಗೆ ಆಹ್ವಾನಿಸುತ್ತಾರೆ. ಆಕ್ರಮಣಕಾರಿಗಳಾದ ಪಕ್ರಾಟಿಗಳನ್ನು ಹಿಮ್ಮೆಟ್ಟಿಸಿ ಗುಣ ಪಂಗಡದವರನ್ನು ರಕ್ಷಿಸಿ ತಮ್ಮ ನಾಡಿಗೆ ಕರೆತರುವಲ್ಲಿ ಮೆಲೂಹನ್ನರು ಸಫಲರಾಗುತ್ತಾರೆ. ಶಿವನ ಕುತ್ತಿಗೆ ಭಾಗದಲ್ಲಿ ನೀಲಿಗಟ್ಟಿರುವುದನ್ನು ಆಯುರ್ವತಿ ಎಂಬ ವೈದ್ಯೆ ಗಮನಿಸುತ್ತಾಳೆ. ಶಿವನ ಅವತಾರವಾಯಿತು ಎಂಬ ಖುಷಿಯ, ಭಕ್ತಿಯ, ನೆಮ್ಮದಿಯ ಸಮಾಚಾರ ಸಾಗುತ್ತದೆ. ಅದು ನಿಜವೇ ಆದರೆ 'ದರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ' ಎಂಬಂತೆ ಅಸಾಧಾರಣ ಧೈರ್ಯ ತೋರಿ ಆತ ಮೆಲೂಹನ್ನರನ್ನು ರಕ್ಷಿಸಬಲ್ಲನೆ?
ಹೀಗೆ ಸಾಮಾನ್ಯ ಮನುಷ್ಯನಾಗಿದು, ಸತ್ಕರ್ಮಗಳಿಂದಲೇ ದೇವರ ದೇವ ಮಹಾದೇವನಾಗಿ ರೂಪುಗೊಂಡ ಶಿವನ ರೋಚಕ ಕಥನವೇ ಈ ಪುಸ್ತಕದ ಜೀವಾಳ.

- ಮಂಜುನಾಥ್ ಎಲ್.ಕೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ ದಿಗ್ಬಂಧನ ಧಿಕ್ಕರಿಸಿ, ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಟೋಲ್ ಸಂಗ್ರಹ; ಟ್ರಂಪ್'ಗೆ ಟೆಹ್ರಾನ್ ಡಿಚ್ಚಿ

Tamilnadu & West Bengal Election 2026 Live Updates |ಸಂಜೆ 5 ಗಂಟೆ ವೇಳೆಗೆ ತಮಿಳುನಾಡು ಶೇ. 81, ಪಶ್ಚಿಮ ಬಂಗಾಳ ಹಂತ-I ಶೇ.90 ಮತದಾನ

ಪಾಕಿಸ್ತಾನ ಡಬಲ್ ಗೇಮ್ ಆಡುತ್ತಿದೆ: ಇರಾನ್ ಕೆಂಡಾಮಂಡಲ, ಮುಂದಿನ ನಡೆಯೇ ನಿಗೂಢ! ಏನಿದು ಹೊಸ ವಿವಾದ?

Indian Stock Market: ಇರಾನ್ ಸಂಘರ್ಷ, ತೈಲ ಬೆಲೆ ಏರಿಕೆ.. ಷೇರುಮಾರುಕಟ್ಟೆ ಕುಸಿತ, Sensex 852 ಅಂಕ ಇಳಿಕೆ

ಬೆಟ್ಟಿಂಗ್ ಪ್ರಕರಣಕ್ಕೆ ಹೈಕೋರ್ಟ್ ತಡೆ: ಗೃಹ ಸಚಿವ ಪರಮೇಶ್ವರ​​​ಗೆ ಬಿಗ್ ರಿಲೀಫ್!

SCROLL FOR NEXT