ತಿಮ್ಮಾ: ವಿಷದ ಬಾಟಲಿ ಮ್ಯಾಲೆ 'ಬೆಲ್ಲ' ಅಂತ ಬರದರ, ಅದಕ ಇರವಿ ಮುಕರುತಾವೇನಲೆ ತಮ್ಮಾ?
ತಮ್ಮಾ: ಇಲ್ಲ. ಸಾಧ್ಯನ ಇಲ್ಲ.
ತಿಮ್ಮಾ: ಹಂಗಾಗೇತಿ ನೋಡ ನಮ್ಮೂರ ಹುಡುಗಿ ಸ್ಟೋರಿ!
ತಮ್ಮಾ: ಯಾಕ ಏನಾಗೇತಿ?
ತಿಮ್ಮಾ: ಹೂ ಹುಡುಗಿ ಅಂತ ಒಬ್ಬಾಕಿ ದಿನಾ ಮನಿಯಿಂದ ಹೊರಗ ಬಂದ ಕೂಡಲೆ ಉಡಾಳನ ಹಂಗ ಕಾಣಸೋ ಹುಡುಗ ಒಬ್ಬಾವ ಸೀಟಿ ಹೊಡೆಯಾವ!
ತಮ್ಮಾ: ಎಲಾ ಇವನ... ಹೂ ಹುಡುಗಿ ಏನ್ ಮಾಡತಿದ್ಲು?
ತಿಮ್ಮಾ: ಏನ್ ಮಾಡತಾಳ ಪಾಪ, ಸುಮ್ಮನಿರತಿದ್ಲು... ಇವತ್ತಿಲ್ಲ ನಾಳೆ ಸುಧಾರಸ್ತಾನ ಅಂತ ತಲಿ ತಗ್ಗಿಸಿ ತನ್ನ ಕೆಲಸಕ್ಕ ಹೋಗಿಬಿಡತಿದ್ದಳು.
ತಮ್ಮಾ: ಕೆಲವು ವಿಷಯದಾಗ ನಿರ್ಲಕ್ಷ್ಯ ಮಾಡೋದು ಬರೋಬ್ಬರಿ ಆದರ ಇಂಥಾ ವಿಷಯದಾಗ ಸುಮ್ಮನಿರಬಾರದ ಬಿಡು.
ತಿಮ್ಮಾ: ಹೌದು, ಆಕಿ ಮನಸ್ಸು ಚಂಚಲಾಗಿ, ಸಮಾಧಾನಕ್ಕ ಅಂತ ಒಬ್ಬ ದೇವಮಾನವನ ಕಡೆ ಹೋದ್ಲು.
ತಮ್ಮಾ: ಆ ದೇವಮಾನವ ಸಮಾಧಾನ ಮಾಡಿ ಧೈರ್ಯ ತುಂಬಿ ಕಳಿಸಿದನೋ ಇಲ್ಲೋ?
ತಿಮ್ಮಾ: ಒಂದು ವಾರ ಸಮಾಧಾನ ಹೇಳಿ, ಧ್ಯಾನ ಮಾಡೋದ ಹ್ಯಾಂಗ ಅಂತ ಹೇಳಕೋತ ಕುಬಸಕ್ಕ ಕೈ ಹಾಕಿದ್ನಂತ!
ತಮ್ಮಾ: ಹೂ ಹುಡುಗಿ ಕಂಗಾಲಾಗಿರಬೇಕಲಾ...
ತಿಮ್ಮಾ: ಆಗದ ಎನ್‌ರಿ... ಎಂಥಾ ಗೋಮುಖವ್ಯಾಘ್ರ ಈ ಸ್ವಾಮಿ! ಅದನ್ನ ಜಗತ್ತಿಗೆ ತೋರಿಸಬೇಕಂತ ಪೇಪರನವನ ಕಡಿಗೆ ಹೋದ್ಲ ನೋಡಪಾ...
ತಮ್ಮಾ: ಹೌದು ನೋಡ ಪೇಪರನ್ಯಾಗ ಒಮ್ಮೆ ಬಂತಂದರ ಎಲ್ಲಾರ ಬಣ್ಣ ಬಯಲಾಕ್ಕೆತಿ. ಏನಂದ ಪೇಪರನವ?
ತಿಮ್ಮಾ: ಶಾಂತವಾಗಿ ಹೂ ಹುಡುಗಿ ಕಥಿ ಕೇಳಿದ... ಅಲ್ಲೆ ಇಲ್ಲೆ ಏನೇನೋ ಗೀಚಿಕೊಂಡ, ಒಂದೆರಡು ಫೋನ್ ಮಾಡಿದ...
ತಮ್ಮಾ: ಹುಡುಗಿ ಕೆಲಸ ಆದ್ಹಂಗಾತು ಬಿಡು.
ತಿಮ್ಮಾ: ನಾನು ಹಂಗೂ ತಿಳಿದಿದ್ದೆ... ಆದರ ಅಲ್ಲಿ ಆಗಿದ್ದ ಬ್ಯಾರೆ.
ತಮ್ಮಾ: ಏನು? ಏನಾತು?
ತಿಮ್ಮಾ: 'ನಿನ್ನ ಮನಿ ಮಟಾ ಬಿಡತೇನಿ ಬಾ' ಎಂದ ಪೇಪರನವ, ಲಿಫ್ಟ್‌ನ್ಯಾಗ ಹುಡುಗಿ ಮ್ಯಾಲ ಕೈ ಹಾಕಿದ.
ತಮ್ಮಾ: ಎಲಾ ಕಪಟಾ... ಎಂಥಾ ನೀಚ ಅದಾನರಿ ಅವಾ...
ತಿಮ್ಮಾ: ಆದರ ಹುಡುಗಿ ಸುಮ್ಮನಿರಲಿಲ್ಲ... ನಮ್ಮ ದೇಶದಾಗ ಕಾನೂನು ಎಲ್ಲಾರಿಗಿಂತ ದೊಡ್ಡದು. ತನಗ ನ್ಯಾಯ ಕೊಡಿಸಿರಿ ಅಂತ ಕೋರ್ಟಿಗೆ ಹೋದಳು...
ತಮ್ಮಾ: ನ್ಯಾಯಮೂರ್ತಿ ಈ ಗೋಳು ಕೇಳಿ ಅವರಿಗೆ ಬರೋಬ್ಬರಿ ಶಿಕ್ಷಾ ಕೊಟ್ಟಿರಬೇಕಲ್ಲಾ?
ತಿಮ್ಮಾ: ಅವರಿಗೆ ಶಿಕ್ಷ ಕೊಟ್ಟರೋ ಬಿಟ್ಟರೋ, ಆದರ 'ಹುಡುಗಿ ನೀ ಮಸ್ತ್ ಅದಿ, ಯಾವಾಗ ಒಬ್ಬಾಕಿನ ಸಿಗ್ತಿ' ಅಂತ ಆಹ್ವಾನ ಕೊಟ್ಟರು.
ತಮ್ಮಾ: ಇದೇನೋ ತಿಮ್ಮಾ ಹಿಂಗಾತು? ಹುಡುಗಿ ಹೈರಾಣಾಗಿರಬೇಕಲಾ...
ತಿಮ್ಮಾ: ಎರಡು ದಿನ ವಿಚಾರ ಮಾಡಿ ಮನಿ ಮುಂದ ನಿಂತು ಸೀಟಿ ಹೊಡಿಯೋ ಉಡಾಳನ ಹಂಗಾ ಕಾಣೋವವ್ನ ಮದುವಿ ಆಗ್ತಾಳಂತ...
ತಮ್ಮಾ: ಬರೋಬ್ಬರಿ ಆದ ಬಿಡು. ಕಾಣಿಸಿದ್ಹಂಗ ಇರುದಿಲ್ಲ ಎಲ್ಲಾ...
- ಯಶವಂತ ಸರದೇಶಪಾಂಡೆ
allthebest01@gmail.com