ಕ್ರೇಜಿ ದಂಪತಿ'ಸ್
ಲಾರಿ ಕಂಡ್ರೆ ಭಯ
ತಿಮ್ಮ ಲಾರಿ ಕಂಡಾಗೆಲ್ಲಾ ಹೆದರುತ್ತಿದ್ದ. ಲಾರಿ ತಿಮ್ಮನಿಗಿಂತ ಬಹು ದೂರದಲ್ಲೇ ಚಲಿಸುತ್ತಿರಲಿ ಆದರೂ ಗಲಿಬಿಲಿಗೊಳ್ಳುತ್ತಿದ್ದ. ಗೆಳೆಯ ಕೋಲ್ಯಾನಿಗೆ ಮಹದಾಶ್ಚರ್ಯ. 2 ತಿಂಗಳಿಂದ ತಿಮ್ಮನ ಭಯದ ಕಾರಣ ತಿಳಿಯಲು ಪ್ರಯತ್ನಪಟ್ಟ. ಸಾಧ್ಯವಾಗಲಿಲ್ಲ. ಒಂದು ದಿನ ಕೇಳಿಯೇ ಬಿಟ್ಟ.
ಕೋಲ್ಯಾ: ಯಾಕೋ ನಿಂಗೆ ಲಾರಿ ಕಂಡರೆ ಅಷ್ಟು ಭಯ?
ತಿಮ್ಮ: ಅಂದು ನಾನು ಹೆಂಡತಿಯೊಂದಿಗೆ ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿದ್ದೆ.
ಕೋಲ್ಯಾ: ಅದಕ್ಕೂ, ಲಾರಿಗೂ, ಭಯಕ್ಕೂ ಏನು ಸಂಬಂಧ?
ತಿಮ್ಮ: ಲಾರಿಯವನೊಬ್ಬ ಬಂದು ನನ್ನ ಹೆಂಡತಿಯನ್ನು ಅಪಹರಿಸಿದ!
ಕೋಲ್ಯಾ: ಈಗ ನಿನ್ನನ್ನು ಅಪಹರಿಸಿ ಬಿಡುತ್ತಾರೆ ಎಂಬ ಭಯನಾ?
ತಿಮ್ಮ: ಅಲ್ಲಾ, ಅಪಹರಿಸಿದ ನನ್ನ ಹೆಂಡತಿಯನ್ನು ಮತ್ತೆಲ್ಲಿ ತಂದು ಬಿಡುತ್ತಾನೋ ಎಂಬ ಭಯ!
=
ಚಟ ಬಿಟ್ಟ
ಕೋಲ್ಯಾ ಹೆಂಡತಿಯೊಂದಿಗೆ ಮಾತನಾಡುತ್ತಿದ್ದ.
ಕೋಲ್ಯಾ: ನಿನ್ನನ್ನು ಮದುವೆ ಆದಾಗಿನಿಂದ ನಾನು ಸಿಗರೇಟ್ ಸೇದುತ್ತಿಲ್ಲ. ಕುಡಿಯುತ್ತಿಲ್ಲ.
ಹೆಂಡತಿ: ಅದೆಷ್ಟು ಒಳ್ಳೆಯವರಾಗಿದ್ದೀರಿ. ಎಲ್ಲಾ ನನ್ನ ಪ್ರೀತಿಯ ಪ್ರಭಾವ!
ಕೋಲ್ಯಾ: ಪ್ರೀತಿನೂ ಇಲ್ಲ, ಮಣ್ಣೂ ಇಲ್ಲ. ಅಲ್ಲಾ ಒಂದು ರುಪಾಯಾದ್ರೂ ಬಿಡ್ತೀಯ ನನ್ನ ಜೇಬಲ್ಲಿ?
=
ರಾಕ್ಷಸನ ಹಾಗೆ
ಶ್ರೀಮಂತ ವ್ಯಕ್ತಿಯಾಗಿದ್ದ ಕೀರ್ತಿ ತನ್ನ ಮಕ್ಕಳನ್ನು ಸಂಬಾಳಿಸಲು ಹೆಣಗುತ್ತಿದ್ದ. ಮಕ್ಕಳು ಹೋಂ ವರ್ಕ್ ಮಾಡದೆ ಮನೆ ತುಂಬ ಗದ್ದಲ ಮಾಡುತ್ತಿದ್ದರು. ಮಕ್ಕಳನ್ನು ಹದ್ದುಬಸ್ತಿನಲ್ಲಿ ಇಡಲು ಕೋಲ್ಯಾನನ್ನು ಪಾಠ ಮಾಡಲು ಬರಹೇಳಿದನು.
ಕೀರ್ತಿ: ಯಾವಾಗಲು ಬೆತ್ತ ಹಿಡಿದುಕೊಂಡೇ ಪಾಠ ಮಾಡಬೇಕು. ರಾಕ್ಷಸನಂತೆ ಅವರಿಗೆ ಕಾಡಬೇಕು.
ಕೋಲ್ಯಾ: ರಾಕ್ಷಸನಂತೆಯೇ ಇರಬೇಕೆ?
ಕೀರ್ತಿ: ನರರಾಕ್ಷಸನ ಪ್ರತಿರೂಪದಂತೆ ಇರಬೇಕು. ಇಲ್ಲದಿದ್ದರೆ ನನ್ನ ಮಕ್ಕಳು ನಿಮ್ಮ ಪಾಠ ಕೇಳುವುದಿಲ್ಲ.
ಕೋಲ್ಯಾ: ಸರಿ ಹಾಗಾದರೆ ನನ್ನ ಹೆಂಡತಿಯನ್ನೇ ಕಳುಹಿಸಿ ಕೊಡ್ತೀನಿ!
=
ಬಾಲಿಕೆ
ಕೋಲ್ಯಾ ಮತ್ತು ತಿಮ್ಮ ಕುಶಲೋಪರಿ ಮಾತನಾಡುತ್ತ ಕುಳಿತಿದ್ದರು.
ಕೋಲ್ಯಾ: ನನ್ನ ಹೆಂಡತಿ ಬೆಂಗಳೂರಲ್ಲೇ ನಂ 1 ದಡೂತಿ!
ತಿಮ್ಮಾ: ಹೇಗೆ ಸಂಭಾಳಿಸುತ್ತೀಯೋ?
ಕೋಲ್ಯಾ: ಅವಳನ್ನು ಬಿಬಿಎಂಬಿ ಅನ್ನುತ್ತಿರುತ್ತೇನೆ ಖುಷಿ ಪಡ್ತಾಳೆ.
ತಿಮ್ಮಾ: ಹಾಗಂದ್ರೆ ಏನೋ?
ಕೋಲ್ಯಾ: ಬೃಹತ್ ಬೆಂಗಳೂರಿನ ಮೋಹಕ ಬಾಲಿಕೆ!
ತಿಮ್ಮಾ: ನಿನ್ನಂತ ಗಂಡನನ್ನು ಪಡೆದ ಅವಳು ಭಾಗ್ಯವಂತಳೇ ಸರಿ.
ಕೋಲ್ಯಾ: ಅಸಲಿಗೆ ಬಿಬಿಎಂಬಿ ಎಂದರೆ 'ಬೃಹತ್ ಬೆಂಗಳೂರು ಮಹಾನಗರ ಬಾಲಿಕೆ!'
=
ಒಬ್ಳನ್ನ ಬಿಟ್ಟು
ಗಂಡ: ಹಾಲು ಮಾರೋ ಮಾದೇಶನಿಗೆ ನಮ್ಮ ಕೇರಿಲಿರೋ ಎಲ್ಲಾ ಹೆಂಗಸರೊಂದಿಗೆ ಅಫೇರ್ ಇದೆ ಅಂತೆ.
ಹೆಂಡತಿ: ಹೌದು ರೀ, ಪಕ್ಕದ ಮನೆಯ ಪದ್ಮ ಒಬ್ಬಳನ್ನು ಬಿಟ್ಟು!!
=
ನಾನೂ ಸಾಯ್ತೀನಿ
ಹೆಂಡತಿ: ನಾನು ಸತ್ತರೆ ಏನು ಮಾಡುತ್ತೀರಿ?
ಗಂಡ: ಬಹುಶಃ ನಾನು ಸಾಯಬಹುದು!
ಹೆಂಡತಿ: ಹೌದಾ? ಎಷ್ಟು ಪ್ರೀತಿ ರೀ ನನ್ಮೇಲೆ!
ಗಂಡ: ಅಷ್ಟು ಖುಷಿ ಕೊಡೋ ಘಟನೆ ಆದ್ರೆ ಭಾವೋದ್ವೇಗ ಹೆಚ್ಚಾಗಿ ಹೇಗೆ ತಾನೆ ಬದುಕಬಲ್ಲೆ?!
=
ಚಂದ್ರನಂತೆ
ಕೋಲ್ಯಾ: ಲೋ ಗುಂಡ ನಿನಗೆ ಯಾವ ತರದ ಹೆಂಡತಿ ಬೇಕೋ?
ಗುಂಡ: ಯಾಕೋ ಹೆಂಡತೀನ ಮಾರಾಟಕ್ಕೆ ಇಟ್ಟವನ ಥರ ಕೇಳ್ತ ಇದ್ದೀಯಾ?
ಕೋಲ್ಯಾ: ಕಾಮಿಡಿ ಅಲ್ವೋ ಸಿರಿಯಸ್!
ಗುಂಡ: ಚಂದ್ರನಂತಿರಬೇಕು.
ಕೋಲ್ಯಾ: ಅಷ್ಟೊಂದು ಸುಂದರವಾಗಿರಬೇಕೇನೋ?
ಗುಂಡ: ಹೌದು, ಹಾಗೇ ಚಂದ್ರನಂತೆ ವರ್ತಿಸಬೇಕು. ರಾತ್ರಿ ಮಾತ್ರ ಇದ್ದರೆ ಸಾಕು! ಹಗಲು ಕಾಣಿಸಬಾರದು.
ಓವರ್ ಫ್ಲೋ
ನಲ್ಲಿ ರಿಪೇರಿ ಮಾಡುತ್ತಿದ್ದ ಕಲ್ಲೇಶಿ ಹೆಂಡತಿಗೆ ವಿಚ್ಛೇಧನ ನೀಡಿದ.
ಕೋಲ್ಯಾ: ಯಾಕೋ ಕಲ್ಲೇಶಿ?
ಕಲ್ಲೇಶಿ: ಎಷ್ಟು ಸಲಾ ಅಂತ ರಿಪೇರಿ ಮಾಡೋದು?
ಕೋಲ್ಯಾ: ರಿಪೇರಿ ಆಗ್ದೇ ಇರೋವಂತದ್ದು ಏನ್ ಆಗಿತ್ತೋ?
ಕಲ್ಲೇಶಿ: ಅವಳ ಕೋಪ ಯಾವಾಗ್ಲು ಓವರ್ ಫ್ಲೋ ಆಗ್ತಿರತ್ತೆ!