ನಗುವ ವರುಷ, ತರಲಿ ಹರುಷ
'ನೀವು ನಕ್ಕರೆ ನಿಮ್ಮೊಂದಿಗೆ ಇಡೀ ಜಗತ್ತು ನಗುತ್ತದೆ. ನೀವು ಗೊರಕೆ ಹೊಡೆಯುವವರಾದರೆ, ನೀವೊಬ್ಬರೇ ಮಲಗಬೇಕಾಗುತ್ತದೆ.' ಅಂದರೆ ಈ ಜಗತ್ತು, ಈ ಬದುಕು ಸದಾ ನಗುವವರ ಪರ. ಆದರೂ ನಮ್ಮಲ್ಲಿ ತುಂಬಿರುವುದು ಬರೀ ವಿಷಾದ, ಬೇಸರ, ಕೊರಗು, ಹತಾಶೆ, ಅವಮಾನ, ನಕಾರಾತ್ಮಕತೆ, ನೋವು. ಈ ಅಪಸವ್ಯಗಳನ್ನೆಲ್ಲ ನಾವು ಯಾಕೆ ತುಂಬಿಕೊಂಡಿದ್ದೇವೆ ಅಂದ್ರೆ ನಮ್ಮ ಜೀವನದಲ್ಲಿರಬೇಕಾದ ನಗು, ಹಾಸ್ಯ, ವ್ಯಂಗ್ಯ, ವಿಡಂಬನೆಗಳನ್ನೆಲ್ಲ ಖಾಲಿ ಮಾಡಿ, ಆ ಜಾಗದಲ್ಲಿ ಬೇಡವಾದ ಇವುಗಳನ್ನು ಇಟ್ಟುಕೊಂಡಿದ್ದೇವೆ. Laughter is the best medicine ಎಂಬುದು ನಮಗೆ ಇನ್ನೂ ಅರ್ಥವಾಗಿಲ್ಲ. ನಮ್ಮ ಹಾಸ್ಯಪ್ರಜ್ಞೆ ಹಾಸ್ಯೋತ್ಸವದಲ್ಲಿ ಇದ್ದಷ್ಟು ಹೊತ್ತಿಗೆ ಮಾತ್ರ ಸೀಮಿತವಾಗಿದೆ. ಒಂದು ಒಳ್ಳೆಯ ಜೋಕಿಗೆ ನಗಲು, ಜೋಕನ್ನು ಹೇಳಲು, ಆಸ್ವಾದಿಸಲು ನಮಗೆ ಟೈಮಿಲ್ಲ. ಇನ್ನು ನಮ್ಮನ್ನು ನೋಡಿ ನಗುವುದು, ಜೋಕು ಮಾಡಿಕೊಳ್ಳುವುದು ದೂರವೇ ಉಳಿಯಿತು.
ನಮ್ಮಲ್ಲಿ ಸದಾ ನಗುವನ್ನು ಅರಳಿಸಿಕೊಳ್ಳುವುದೆಂದರೆ, ಸದಾ ಜೋಕುಗಳನ್ನು ಕೇಳುವುದಲ್ಲ, ಹೇಳುವುದೂ ಅಲ್ಲ. ಜೋಕು ಕೇಳಿದಾಗ, ಹೇಳಿದಾಗ ನಗುವುದು ಹಾಸ್ಯೋತ್ಸವದಲ್ಲಿ ಮಾತ್ರ. ಆದರೆ ಸದಾ ನಗುವಿನ ಪಸೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದೆಂದರೆ, ಮನಸ್ಸನ್ನು ತಿಳಿಯಾಗಿ, ನಿರ್ಮಲವಾಗಿಟ್ಟುಕೊಳ್ಳುವುದು ಹಾಗೂ ಜಂಜಡ, ಒತ್ತಡಗಳಿಂದ ಮುಕ್ತವಾಗುವುದು ಎಂದರ್ಥ. 'ನಗು ಅಧ್ಯಾತ್ಮಕ್ಕೆ ಸಮವಾದ ಸ್ಥಿತಿ.' ಅಂತಾನೆ ಓಶೋ. ನಮ್ಮ ಕ್ಲೇಶಗಳಿಂದ ಹಗುರವಾಗುವುದು, ಮುಕ್ತವಾಗುವುದು ನಗು ಹಾಗೂ ಅಧ್ಯಾತ್ಮ ಸ್ಥಿತಿಯಲ್ಲಿ ಮಾತ್ರ. ಒಂದು ಜೋಕು ಇಡೀ ಸಮುದಾಯವನ್ನು ನಗುವಿನ ಅಲೆಯಲ್ಲಿ ತೇಲಿಸಬಹುದು. ಇದನ್ನೇ ಖ್ಯಾತ ಇಂಗ್ಲಿಷ್ ಕವಿ ಟಿ.ಎಸ್. ಈಲಿಯಟ್ ಹೀಗೆ ಹೇಳಿದ್ದಾನೆ -'ನಾವು ಅನುಭವಿಸಿದ ನೋವುಗಳನ್ನು ಮಾತ್ರ ನೆನಪಿಟ್ಟುಕೊಳ್ಳುತ್ತೇವೆ. ಆದರೆ ನಾವು ಕೇಳಿದ, ಓದಿದ ಜೋಕುಗಳನ್ನೂ, ಹಾಸ್ಯ ಪ್ರಸಂಗಗಳನ್ನೂ ನೆನಪಿಟ್ಟುಕೊಂಡಿದ್ದರೆ, ಇಷ್ಟೊಂದು ದುಃಖಿಗಳಾಗುತ್ತಿರಲಿಲ್ಲ. ಹಾಸ್ಯ ಮನೋಭಾವ ಬೆಳೆಸಿಕೊಂಡರೆ ದುಃಖಕ್ಕೆ ಆಸ್ಪದವೆಲ್ಲಿ?'
ಮನುಷ್ಯನಿಗೂ ಪ್ರಾಣಿಗೂ ವ್ಯತ್ಯಾಸವೇನೆಂದರೆ ಮನುಷ್ಯ ನಗುತ್ತಾನೆ, ಪ್ರಾಣಿಗಳು ನಗೋಲ್ಲ. ವಿಚಿತ್ರವೆಂದರೆ ನಗು ಗೊತ್ತಿರದ ಪ್ರಾಣಿಗಳೇ ಮನುಷ್ಯನಿಗಿಂತ ವಾಸಿ. ಅವುಗಳಿಗೆ ಚಿಂತೆ ಇಲ್ಲ. ಅವುಗಳಿಗೆ ಗೊತ್ತಿರದ 'ವಿದ್ಯೆ' ನಮಗೆ ಗೊತ್ತಿದ್ದರೂ ನಮ್ಮದು ಬರೀ ಚಿಂತೆಯೋ ಚಿಂತೆ.
ನಮ್ಮ ಸಾರ್ವಜನಿಕ, ರಾಜಕೀಯ ಜೀವನವೂ ಹಾಗೆ. ಅಲ್ಲಿ ಜೋಕಿಗೆ ಆಸ್ಪದವಿಲ್ಲ. ನಮ್ಮ ಮುಖ್ಯಮಂತ್ರಿಯಾಗಲಿ, ವಿರೋಧ ಪಕ್ಷದ ನಾಯಕರಾಗಲಿ, ಪ್ರಧಾನಿಯಾಗಲಿ, ರಾಷ್ಟ್ರಪತಿಯಾಗಲಿ ಒಂದು ಒಳ್ಳೆಯ ಜೋಕು, ಹಾಸ್ಯ ಪ್ರಸಂಗ ಹೇಳಿದ್ದು ನೆನಪಿಲ್ಲ. ಬೇಕಾದರೆ ಅವರು ನಗೆಪಾಟಲಿಗೆ ಈಡಾಗುತ್ತಾರೆ. ಆದರೆ ನಗೆ ಹೊನಲನ್ನು ಹರಿಸಲೊಲ್ಲರು. ಎಲ್ಲರ ಮುಖದಲ್ಲೂ ಚಿಂತೆ, ಸಿಟ್ಟು-ಸೆಡವು , ಖಿನ್ನತೆ. ನಗೆಯ ಸ್ನಾಯುಗಳು ಮಾಯ. ತಮ್ಮ ಒಂದು ಹಾಸ್ಯ ಚಟಾಕಿ ಇಡೀ ದೇಶದ ಜನರ ಮುಖದಲ್ಲಿ ಒಂದು ಸ್ವಚ್ಛಂದ ನಗೆ ಮೂಡಿಸಬಹುದು ಎಂದು ಸಹ ಯೋಚಿಸುವುದಿಲ್ಲ. ಸೀರಿಯಸ್ಸಾಗಿ ಇದ್ದು ಬಿಡುತ್ತಾರೆ. ರಾಜಕಾರಣಿಗಳಿಗೆ, ಅಧಿಕಾರದಲ್ಲಿರುವವರಿಗೆ 'ನಗದು' ಇಷ್ಟ, ಅದು ಹಣದ ರೂಪದಲ್ಲಿದ್ದಾಗ ಮಾತ್ರ!
ಅಂದರೆ ನಾವು ಇಂದು ಒಂದು ಉತ್ತಮ ನಗುವನ್ನು ವಿನಿಮಯ ಮಾಡಿಕೊಳ್ಳದ ಸ್ಥಿತಿಯಲ್ಲಿದ್ದೇವೆ. ನಗು, ಹಾಸ್ಯ ಇಲ್ಲದ ಕಡೆ ವಿಷಾದ, ಬೇಸರ ತುಂಬಿಕೊಳ್ಳುವುದು ಸಹಜ ತಾನೆ? ಹೊಸ ವರ್ಷದ ಹೊಸ್ತಿಲಲ್ಲಿರುವ ಈ ಸಂದರ್ಭದಲ್ಲಿ ಒಂದು ನಿರ್ಣಯ ಕೈಗೊಳ್ಳೋಣ. ಹಿಂದಿಗಿಂತ ಹೆಚ್ಚು ನಗೋಣ, ಖುಷಿಯಾಗಿರೋಣ. ನಮ್ಮ ನಗುವನ್ನು ಬೇರೆಯವರಿಗೂ ಹಂಚೋಣ. ಈ ಜಗತ್ತಿನಲ್ಲಿ ಉಚಿತವಾದದ್ದೇನಾದರೂ ಇದ್ದರೆ ಅದು ನಗು ಮಾತ್ರ. ಬೇರೆಯವರಿಗೆ ಧಾರಾಳವಾಗಿ ಕೊಡಬಹುದಾಗಿದ್ದು ಅದೊಂದೇ. ಲೆಕ್ಕಾಚಾರವಿಲ್ಲದ ಕೊಡುಕೊಳ್ಳುವಿಕೆಯೂ ನಗುವಿನಲ್ಲೊಂದೇ.
ಹೊಸ ವರ್ಷ ಬರಮಾಡಿಕೊಳ್ಳುವ ಈ ಸಂದರ್ಭದಲ್ಲಿ ಬಡಪಾಯಿ ಗಂಡನನ್ನು ನೆನೆದು ಒಂದು ವಕ್ರತುಂಡೋಕ್ತಿ-ಗಂಡ ತನ್ನ ಮನಸ್ಸಿನಲ್ಲಿರುವುದನ್ನೆಲ್ಲ ಬೇರೆ ಯಾರಿಗೂ ಕೇಳದಂತೆ ದಟ್ಟ ಅರಣ್ಯದೊಳಗೆ ಹೋಗಿ ಹೇಳಿದರೂ ತಪ್ಪಾಗಿ ಭಾವಿಸಿ ಅದನ್ನು ಮನೆಮಂದಿಗೆಲ್ಲ ಗೊತ್ತಾಗುವಂತೆ ಹೇಳುವವಳಿಗೆ ಹೆಂಡತಿ ಎನ್ನಬಹುದು.
ಒಂದು ಮೊಬೈಲ್ ಜೋಕು. ಕೋಲ್ಯನಿಗೆ ಕ್ಷಣಕ್ಷಣಕ್ಕೆ "I LOVE YOU' ಎಸ್ಸೆಮ್ಮೆಸ್ ಬರುತ್ತಿತ್ತು. ಅದನ್ನು ಗಮನಿಸಿದ ಅವನ ಸ್ನೇಹಿತ 'ನೀನೇ ಪುಣ್ಯವಂತ ಕಣೋ. ಎಷ್ಟೊಂದು ಗರ್ಲ್ಫ್ರೆಂಡ್ಸ್ ನಿನ್ನನ್ನು ಇಷ್ಟಪಡ್ತಾರೆ. ನನಗೆ ಒಬ್ಬಳಾದರೂ ಅಂಥ ಮೇಸೇಜ್ ಕಳಿಸ್ತಾಳಾ? ಹಾಳಾದ್ದು ನನ್ನ ಜನ್ಮ.' ಎಂದ. ಅದನ್ನು ಕೇಳಿದ ಕೋಲ್ಯ 'ಸುಮ್ನಿರಯ್ಯಾ ತಲೆ ಹಾಳುಮಾಡಬೇಡ. ಇದು ನನ್ನ ಮೊಬೈಲ್ ಅಲ್ಲ. ಬರುವಾಗ ಮರೆತು ಹೆಂಡತಿ ಮೊಬೈಲ್ ತಂದುಬಿಟ್ಟೆ' ಎಂದ.
ಅಂದ ಹಾಗೆ ಹೊಸ ವರ್ಷದ ಶುಭಾಷಯಗಳು.
ನಿಮ್ಮ ಬದುಕಿನಲ್ಲಿ ನಗೆ ಸದಾ ತುಂಬಿರಲಿ.
- ವಿಶ್ವೇಶ್ವರ ಭಟ್, ಪ್ರಧಾನ ಸಂಪಾದಕ