ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಬಾಯಿಗೇ ಮೈಕ್ ಕಟ್ಟಿಕೊಂಡಿದ್ದೀರಾ ಶ್ರೀಗಳೇ..?

Vishwanath S
Updated On : 28 Dec 2013, 4:21 am

ನಿಡುಮಾಮಿಡಿ ಮಠಾಧೀಶರಾದ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮಿಗಳಿಗೆ ನಮಸ್ಕಾರ...
ಸ್ವಾಮೀಜಿ ಹೇಗಿದ್ದೀರಿ? ಯಾಕೋ ಇತ್ತೀಚೆಗೆ ಫುಲ್ ರಾಂಗ್ ಅಗಿದ್ದೀರಿ. ಬೇಡದ ವಿಚಾರಗಳಿಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡರೆ ಹೀಗೇ ಆಗೋದು ನೋಡಿ.
ಸ್ವಾಮೀಜಿ, ನಿಮ್ ಬಗ್ಗೆ ಭಾರಿ ಕನ್‌ಫ್ಯೂಷನ್ ಇದೆ. ನೀವು ಸ್ವಾಮೀಜಿನಾ? ಪ್ರಗತಿಪರ ಚಿಂತಕರಾ? ಕಾವಿ ಹಾಕಿರೋ ರಾಜಕಾರಣಿನಾ? ಲೆಫ್ಟೋ, ರೈಟೋ ಒಂದೂ ಗೊತ್ತಾಗಲ್ಲ. ವಿಚಾರ ಯಾವುದೇ ಆಗಿರಲಿ, ನೀವು ಕಾಮೆಂಟ್ ಮಾಡ್ತೀರಿ. ಎಲ್ಲರೂ ಒಪ್ಪಿದ್ದನ್ನ ವಿರೋಧಿಸ್ತೀರಿ. ಯಾವ ಸಂದರ್ಭದಲ್ಲಿ ಎತ್ತ ತಿರುಗ್ತೀರಿ ಅನ್ನೋದೇ ತಿಳಿಯಲ್ಲ ನೋಡಿ.
ರಂಭಾಪುರಿ ಶ್ರೀಗಳು ಅಡ್ಡ ಪಲ್ಲಕ್ಕಿ ಉತ್ಸವ ಮಾಡಿದ್ದನ್ನ ನೀವು ಸಿಕ್ಕಾಪಟ್ಟೆ ವಿರೋಧ ಮಾಡಿದ್ರಿ ಅಲ್ವಾ? ಬೇರೆ ಯಾವ ಸ್ವಾಮಿಗಳೂ ಅಡ್ಡಪಲ್ಲಕ್ಕಿಯಲ್ಲಿ ಹೋಗೋದಿಲ್ವೇ? ಮೂಢನಂಬಿಕೆಗಳ ಆಚರಣೆಯನ್ನ ಜನರ ಮೇಲೆ ಹೇರೋದಿಲ್ವೇ? ಅವರ ಬಗ್ಗೆ ಏಕೆ ನೀವು ಮಾತಾಡಲ್ಲ. ಹೌದು, ರಂಭಾಪುರಿ ಶ್ರೀಗಳು ಮತ್ತು ನಿಮ್ಮ ನಡುವೆ ಏನು ಅಂಥ ದ್ವೇಷ?
ಅಡ್ಡಪಲ್ಲಕ್ಕಿ ಬಗ್ಗೆ ನೀವು ಮಾತನಾಡಿದ್ದನ್ನ ಕೇಳಿ ಕೇಳಿ ಕಿವಿ ತೂತು ಬಿದ್ದೋಯ್ತು. ಮೂಢನಂಬಿಕೆ ನಿಯಂತ್ರಿಸುವ ಕಾನೂನು ಜಾರಿ ಬಗ್ಗೆ ಚರ್ಚೆ ಮಾಡಲಿಕ್ಕೆ ಅಂತ ಸಭೆ ಕರೆದರೂ ಅಲ್ಲೂ ಅದೇ ವಿಷಯ. ಇನ್ಯಾವುದೋ ಸಭೆ, ಸಮಾರಂಭಕ್ಕೆ ಹೋದರೂ ಅದೇ ವಿಚಾರ. ಅಡ್ಡಪಲ್ಲಕ್ಕಿಯಲ್ಲಾದ್ರೂ ಹೋಗಲಿ, ಉದ್ದ ಪಲ್ಲಕ್ಕಿಯಲ್ಲಾದರೂ ಹೋಗಲಿ ಬಿಡಿ. ಜನ ಅದನ್ನ ನೋಡ್ಕೋತಾರೆ. ಅದೇನೋ ಹೊಸದಾಗಿ ಬಂದಿರೋದು ಅಲ್ವಲ್ಲ. ಹೀಗಿರುವಾಗ ನೀವೇಕೆ ಮೂಗು ತೂರಿಸ್ತೀರಿ. ಭಕ್ತರು ಬಂದು ನಿಮ್ಮ ಮುಂದೆ ಬಂದು ಅಡ್ಡಡ್ಡ ಬಿದ್ದರೆ ನೀವು ಬೇಡ ಅಂತೀರೇನು?
ಅಡ್ಡಪಲ್ಲಕ್ಕಿ ಬೇಡ ಅನ್ನೋ ನೀವು ಪಾದಪೂಜೆ ಮಾತ್ರ ಇರಲಿ ಅನ್ನೋದು ಏಕೆ? ಅದೆಲ್ಲ ಬಿಡಿ, ಪಾಪ, ಉತ್ತರ ಕರ್ನಾಟಕದ ಮಠಗಳು ನಿಮಗೆ ಏನು ಅನ್ಯಾಯ ಮಾಡಿದ್ವು. ಅಲ್ಲಿ ಮಟ್ಕಾ ದಂಧೆ ನಡೆಯುತ್ತೆ ಅಂತ ಸಾರಾಸಗಟಾಗಿ ಹೇಳಿಬಿಟ್ರಲ್ಲಾ ನೀವು. ಎಲ್ಲ ಮಠಗಳ ಬಗ್ಗೆ ತೀರ್ಪು ಕೊಡೋಕೆ ನೀವೇನಾದ್ರೂ ಜಡ್ಜಾ? ಜ್ಯೋತಿಷಿಗಳಿಂದ ನಿಮಗೆ ಅದೇನು ತೊಂದರೆ ಆಗಿತ್ತು. ಗಿಳಿಶಾಸ್ತ್ರ, ಕವಡೆ ಶಾಸ್ತದೋರು ಸುಳ್ಳು ಹೇಳಿದರೆ ಜೈಲಿಗೆ ಹಾಕಬೇಕು ಅಂದ್ರಲ್ಲ, ಸರೀಯೇ ಸ್ವಾಮಿಗಳೇ?
ಸ್ವಾಮಿಗಳು ಜಾಸ್ತಿ ಮಾತನಾಡಬಾರದು ಅಂತಾರೆ. ನೀವು ನೋಡಿದ್ರೆ ಬಾಯಿಗೇ ಮೈಕ್ ಕಟ್ಟಿಕೊಂಡೋರ ಥರ ಮಾತಾಡ್ತಾನೇ ಇರ್ತೀರಿ. ಕಾವಿ ಹಾಕಿದೋರಿಗೆ ಪ್ರಚಾರದ ಹುಚ್ಚು ಇಷ್ಟು ಇರಬಾರದು ಬಿಡಿ. ಇಷ್ಟೆಲ್ಲ ಹೇಳ್ತೀರಿ ನೀವು. ಸಮಾಜಕ್ಕೆ ನಿಮ್ಮ ಕೊಡುಗೆ ಏನು ಅನ್ನೋದನ್ನಾದರೂ ಸ್ವಲ್ಪ ತಿಳಿಸಿ. ಅದರೂ ನಿಮ್ಮ ಬಗ್ಗೆ ಜನರಲ್ಲಿ ಗೌರವ ಭಾವನೆ ಇದೆ. ಸಾಮಾಜಿಕ ಕಳಕಳಿ ನಿಮಗಿದೆ ಅನ್ನೋದೇ ಇದಕ್ಕೆ ಕಾರಣ. ಅದರೆ, ಒಂದು ವಿಚಾರ, ಸಮಾಜದ ಬಗ್ಗೆ ಇಷ್ಟೊಂದು ಕಾಳಜಿ ಇರೋ ನೀವು ಜನರ ಮಧ್ಯೆ ಏಕೆ ಹೋಗೋಲ್ಲ.
ಈವಾಗ ಮಡೆಸ್ನಾನ ಬೇಡ, ಎಂಜಲು ಎಲೆಯ ಮೇಲೆ ಉರುಳಾಡೋದು ಅಸಹ್ಯ ಅಂತ ಒಂದು ವರ್ಷದಿಂದ ಹೇಳ್ತಾ ಇದೀರಿ. ಅದನ್ನೇ ಜನರ ಬಳಿಗೆ ಹೋಗಿ ಹೇಳಬಹುದಲ್ವಾ? ಅವರಲ್ಲಿ ಜಾಗೃತಿ ಮೂಡಿಸಬಹುದಲ್ವಾ? ಆ ಕೆಲಸ ಏಕೆ ಮಾಡೋದಿಲ್ಲ ನೀವು. ಬೆಂಗಳೂರಿನಲ್ಲಿ ಕುಳಿತು ಮಡೆಸ್ನಾನ ಬೇಡ ಬೇಡ ಅಂತ ಪತ್ರಿಕೆಗಳು, ಟಿವಿಗಳಿಗೆ ಸ್ಟೇಟ್‌ಮೆಂಟ್ ಕೊಟ್ಟರೆ ಏನು ಬಂತು ಪ್ರಯೋಜನ? ಹೇಗೂ ಒಂದು ವರ್ಷದಿಂದ ಟೈಮ್ ಇತ್ತು ಆ ಕೆಲ್ಸಾನ ನೀವು ಮಾಡಬಹುದಿತ್ತು.
ಅಡ್ಡಪಲ್ಲಕ್ಕಿ, ಜ್ಯೋತಿಷ್ಯ, ಪಾದಪೂಜೆ ಇವೆಲ್ಲ ಮೂಢನಂಬಿಕೆ ಅನ್ನೋದನ್ನ ಒಪ್ಪೋಣ. ಹಾಗಾದ್ರೆ ನೀವು ಬೇರೆ ಬಣ್ಣದ ಬಟ್ಟೆ ಧರಿಸಿಯೂ ಸಮಾಜ ಸುಧಾರಣೆ ಮಾಡಬಹುದು ಅಂದ್ರೆ ಒಪ್ಪುತ್ತೀರಾ? ಅದಕ್ಕೆ ಯಾರಾದ್ರೂ ಬೇಡ ಅಂತಾರೇನು? ಅಂದಹಾಗೆ ಬಾಗೇಪಲ್ಲಿ ತಾಲೂಕಿನ ಗೂಳೂರಿನಲ್ಲಿ ನಿಮ್ಮ ಮಠ ಇದೆ. ಅದರೆ ಅವಸ್ಥೆ ನೋಡಿ ಹೇಗಾಗಿದೆ ಅಂತ. ಪೂರ್ತಿ ಹಾಳು ಬಿದ್ದೋಗಿದೆ. ನಮ್ಮ ಸ್ವಾಮಿಗಳು ಯಾವಾಗಲೂ ಬೆಂಗಳೂರಿನಲ್ಲೇ ಇರ್ತಾರೆ. ಈ ಮಠ ನೋಡಿಕೊಳ್ಳೋಕೆ ಅವರಿಗೆ ಟೈಮೇ ಇಲ್ಲ ಅಂತ ಗೂಳೂರಿನ ಜನ ಹೇಳ್ತಾ ಇದಾರೆ. ಅಲ್ಲಿಗೆ ರಾತ್ರಿ ಹೋಗ್ತೀರ, ಬೆಳಗ್ಗೆ ಬಂದುಬೀಡ್ತೀರ.
ಮಠ ಹಾಳು ಬಿದ್ದಿರೋದನ್ನ ನೋಡಲಿಕ್ಕಾಗದೆ ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಅವರು ಮಠದ ವೃದ್ಧಾಶ್ರಮವನ್ನೂ ದತ್ತು ಸ್ವೀಕರಿಸಿ ನೋಡಿಕೊಳ್ತಿದ್ದಾರೆ. ಮೊನ್ನೆ ಮಠದಲ್ಲಿ ಕಾರ್ಯಕ್ರಮ ಮಾಡಿ, ಮುಖ್ಯಮಂತ್ರಿಗಳನ್ನೂ ಕರೆಸಿದ್ರಿ. ಪಾಪ, ಸುಬ್ಬಾರೆಡ್ಡಿ ಅವರ ಹೆಸರು ನಿಮಗೆ ನೆನಪಿಗೇ ಬರಲಿಲ್ಲವಂತೆ. ಸುಬ್ಬಾರೆಡ್ಡಿಯವರು ಬಹಳ ಫೀಲ್ ಮಾಡಿಕೊಂಡು ಈ ವಿಚಾರ ಹೇಳಿದರು. ಮಠಕ್ಕೆ ನಾನು ಎಷ್ಟೊಂದು ದುಡೀತಾ ಇದೇನೆ. ನಮ್ ಸ್ವಾಮ್ಗಳು ಸ್ಟೇಜ್ ಮೇಲೆ ಅಪ್ಪಿತಪ್ಪೀನೂ ನನ್ನ ಹೆಸರು ಹೇಳಲಿಲ್ಲ ಅಂತ ನೊಂದುಕೊಂಡ್ರು.
ಇನ್ನೊಂದು ವಿಚಾರ, ಮಠದಲ್ಲಿ ನಿಧಿ ಕಲ್ಲು ಅಂತ ಇದೆ. ಅದರಲ್ಲಿ ಎಲ್ಲೋ ನಿಧಿ ಇದೆ ಅಂತ ಹೇಳಿದ್ರಿ. ಅಷ್ಟೇ ಅಲ್ಲ, ಸ್ವಾಮಿಗಳೇ, ನಿಧಿ ಸಿಕ್ಕಬಹುದು ಅಂತ 30 ಅಡಿ ಹಳ್ಳ ಬೇರೆ ತೆಗೆಯಿಸಿದ್ರಿ. ಮಣ್ಣು ಬಿಟ್ರೆ ಬೇರೇನೂ ಸಿಗಲೇ ಇಲ್ಲಿ ಬಿಡಿ ಅಲ್ಲಿ. ಸರ್ಕಾರದಿಂದ ನಿಮ್ಮ ಮಠಕ್ಕೂ ಅನುದಾನ ಬಂದಿರಬೇಕು ಅಲ್ವಾ? ಆ ಹಣದಲ್ಲಾದರೂ ಹಾಳು ಬಿದ್ದಿರೋ ಕಟ್ಟಡಗಳನ್ನ ಜೀರ್ಣೋದ್ಧಾರ ಮಾಡಿಸ್ತಾರೇನೋ ಸ್ವಾಮಿಗಳು ಅಂದುಕೊಂಡು ಭಕ್ತರು ಕಾಯ್ತಾ ಇದಾರಂತೆ. ಮಠದಲ್ಲಿರೋ ದೇವಸ್ಥಾನಕ್ಕೆ ದಲಿತರನ್ನ ಪೂಜಾರಿಯಾಗಿ ನೇಮಕ ಮಾಡ್ತೀನಿ ಅಂದ್ರಿ. ಆದೂ ಆಗಿಲ್ವಲ್ಲ.  ಆದರೂ ನಿಮ್ಮನ್ನ ಮೆಚ್ಚಬೇಕು. ಮಠದ ಹೆಸರಲ್ಲಿ ಸಿಕ್ಕಾಪಟ್ಟೆ ದುಡ್ಡು ಮಾಡಲಿಕ್ಕೆ ಹೋಗಲಿಲ್ಲ ನೀವು. ಈ ಹಿಂದೆ ನೂರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ, ಬಟ್ಟೆ, ಶಿಕ್ಷಣ ಕೊಡಿಸಿದ್ದೀರಿ. ನಿಮ್ಮ ನೆರಳಲ್ಲಿ ಬೆಳೆದವರು ಇಂದು ಎತ್ತರಕ್ಕೆ ಬೆಳೆದಿದ್ದಾರೆ. ಇನ್ನು ಸಮಾಜದ ಬಗ್ಗೆ ನಿಮಗಿರೋ ಕಳಕಳಿ ಬಗ್ಗೆಯೂ ಅನುಮಾನ ಇಲ್ಲ. ಆದರೆ, ಸುಮ್ ಸುಮ್ನೆ ಮಾತಾಡಿ ಎಲ್ಲರ ವಿರೋಧ ಕಟ್ಟಿಕೋತೀರಿ.
ಶಾಂತರಾಗಿ ಸ್ವಾಮಿಗಳೇ ಶಾಂತರಾಗಿ. ಸಮಾಜ ಸುಧಾರಣೆ ಕಡೆ ಗಮನ ಕೊಡಿ. ನಮಸ್ಕಾರ...


- ಕೆ.ವಿ. ಪ್ರಭಾಕರ್ 
prabhukolar@yahoo.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement