ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ರಾಮಾಯಣ ರಿಂಗಾಯಣ!

Vishwanath S
Updated On : 28 Dec 2013, 4:30 am

'ಹಲೋ ಲಕ್ಷ್ಮಣ, ನೋಡು ಫೋನ್ ರಿಂಗ್ ಆಗ್ತಿದೆ. ನನಗ್ಯಾಕೋ ಈ ರಿಂಗ್ ಸೌಂಡ್ ಕೇಳ್ತಾ ಇದ್ರೆ ನಿನ್ನಣ್ಣನದೇ, ಆ 'ಹಾಟ್‌ಬೀಟ್‌' ನನಗಷ್ಟೇ ಗೊತ್ತು. ಫೋನ್ ರಿಸೀವ್ ಮಾಡು. ಏನು ಕಷ್ಟ ಬಂದಿದ್ಯೋ ಏನೋ...'.
'ಅತ್ತಿಗೆಮ್ಮಾ, ಟೆನ್ಷನ್ ಮಾಡ್ಕೋಬೇಡಿ. ಇದು ನನ್ನಣ್ಣನ ನಂಬರ್ ಅಲ್ಲ. ಪರಿಚಿತರದ್ದೂ ಅಲ್ಲ. ಇದು ಅನೌನ್ ನಂಬರ್. ನಾನು ರಿಸೀವ್ ಮಾಡಲ್ಲ. ಇದರಲ್ಲೇನೋ ಸಂಚಿದೆ. ನಾನಿಲ್ಲದಾಗ ನೀವು ಬಂಗಾದ ಜಿಂಕೆ ಎಂದು ತಿಳಿದು ಯಾವುದೋ ಮಾಯಾವಿಯ ಹಿಂದೆ ನನ್ನಣ್ಣನನ್ನು ಕಳಿಸಿದ್ದೀರಿ. ಆ ಮಾಯಾವಿಯೇ ಹೀಗೆಲ್ಲ ಆಟ ಹೂಡಿರಬೇಕು. ಇನ್ನೊಮ್ಮೆ ಕಾಲ್ ಬರಲಿ ರಿಸೀವ್ ಮಾಡೋಣ...'.
'ಇಲ್ಲಾ ಲಕ್ಷ್ಮಣ, ನನ್ನ ಒಳಮನಸ್ಸು ಹೇಳುತ್ತಿದೆ... ನನ್ನ ಮನದೊಡೆಯನಿಗೆ ಏನೋ ಕಷ್ಟ ಬಂದಿದೆ. ಅದಕ್ಕೇ ಹೆಲ್ಪ್... ಹೆಲ್ಪ್... ಅಂತ ನಿನಗೆ ರಿಂಗಣಿಸಿದರೆ ನೀನು ತಾತ್ಸಾರದಿಂದ ರಿಸೀವ್ ಮಾಡ್ತಿಲ್ಲ. ಅತ್ತಿಗೆಮ್ಮಾ, ನೀವು ವಿನಾಕಾರಣ ಬಿಪಿ ರೈಸ್ ಮಾಡ್ಕೊಳ್ತಿದ್ದೀರಿ. ನನ್ನಣ್ಣನೇನು ಸಾಮಾನ್ಯನೇ? ಪರಾಕ್ರಮಿ. ಅವನಿಗೆ ವಿಪತ್ತು ಬರೋದುಂಟೆ?'.
'ಹೌದು, ಹೀಗೆ ಹೇಳಿ ನನಗೆ ನೀನು ಮೋಸ ಮಾಡ್ತಿದ್ದಿ. ನಿನ್ನಣ್ಣ ಏನಾದ್ರೆ ನಿಂಗೇನು? ಸ್ಫುರದ್ರೂಪಿ ಅತ್ತಿಗೆ ನಿನ್ನೊಂದಿಗಿದ್ದರೆ ಸಾಕು ಎಂದು ನಿನ್ನ ಮನದ ಎಣಿಕೆಯೇ? ಕುಹಕಿ...'.
'ಇದು ನೀವಾಡೋ ಮಾತೇ? ನೀವು ನನ್ನ ಮಾತೆಯಂತೆ. ನೀವೇ ನಿಮ್ಮ ವತ್ಸನಿಗೆ ಹೀಗನ್ನುವುದೇ? ಸರಿ, ಹಾಗಾದರೆ ನಿಮಗಾಗಿ ಏನು ಮಾಡಲಿ? ನಿಮ್ಮ ಪಾದ ಧೂಳಿಯನ್ನು ತಲೆಯ ಮೇಲೆ ಹೊರಲೇ?'.
'ಅಷ್ಟೇನು ಬೆಣ್ಣೆಯ ಮಾತುಗಳು ಬೇಡ. ನಿನ್ನಣ್ಣ ಹೋದ ದಾರಿಯಲ್ಲಿ ಹೋಗಿ ಆತನನ್ನೂ ಸುರಕ್ಷಿತವಾಗಿ ಕರೆದು ತಾ... ಹೊರಡು ತಡಬೇಡ... ನನ್ನ ಪತಿದೇವರಿಂದ ನನಗೆ ರಿಂಗ್ ಮಾಡಿಸು...'.
'ಈ ಕಾನನದ ನಟ್ಟನಡುವಿನಲ್ಲಿ ಅಣ್ಣನ ಆಣತಿ ಇಲ್ಲದೆ ನಿಮ್ಮನ್ನು ಬಿಟ್ಟು ಕ್ಷಣವೂ ಕದಲಲಾರೆ... ನಿಮಗೇನಾದರೂ ಆಪತ್ತು ಎದುರಾದರೆ ನನ್ನಣ್ಣನಿಗೆ ಏನು ಹೇಳಲಿ? ಎರ್ಮಜೆನ್ಸಿ ಇದ್ದರೆ ಅಣ್ಣನೇ ರಿಂಗ್ ಮಾಡುತ್ತಾನೆ. ಕಾಯೋಣಾ...'.
'ಸರಿ, ನೀನು ಇಲ್ಲೇ ಇರು. ನಾನೇ ನನ್ನ ಪ್ರಾಣನಾಥನನ್ನು ಹುಡುಕಲು ಹೊರಡುತ್ತೇನೆ. ನನ್ನ ರಾಮ್ ಎಲ್ಲೋ ನಾನೂ ಅಲ್ಲೇ, ವಿಥೌಟ್ ರಾಮ್... ಐ ಕಾಂಟ್ ಲಿವ್‌' ಎನ್ನುತ್ತಾ ಸೀತೆ ಹೊರಟಳು.
'ಯೆಸ್ ಮದರ್, ವಿಥೌಟ್ ಮೈ ಬ್ರದರ್ ಆ್ಯಮ್ ಆಲ್ಸೋ ಕಾಂಟ್ ಲಿವ್... ಆ್ಯಮ್ ಲಿವ್ ನೌ... ಟೇಕ್ ಕೇರ್ ಆಫ್ ಯುವರ್ ಸೆಲ್ಫ್, ಓ ನನ್ನ ಪ್ರಾಣಿಪಕ್ಷಿಕುಲ ಸಂತತಿಗಳೇ, ವೃಕ್ಷರಾಜರೇ, ಜಲಜೀವರಾಶಿಗಳೇ, ಕ್ರಿಮಿಕೀಟ ಬ್ಯಾಕ್ಟೀರಿಯಾಗಳೇ ಈಕೆ ನಿಮ್ಮ ಮಗಳು 'ಭೂಮಿಸುತೆ'. ಇವಳನ್ನು ಕಾಪಾಡುವ ಹೊಣೆ ನಿಮ್ಮದೆ. ಅತ್ತಿಗೆಮ್ಮಾ ನಿಮಗಾಗಿ ನಿಮ್ಮ ಸುತ್ತಾ ಈ ವರ್ತುಲವನ್ನು ಬರೆಯುತ್ತಿದ್ದೇನೆ. ಇದು 'ಫೈರ್ ವಾಲ್‌'! ಯಾವ ದುಷ್ಟ ಜಂತುಗಳು, ವೈರಸ್‌ಗಳು ಇದನ್ನು ಕ್ರಾಸ್ ಮಾಡಿ ಅಟ್ಯಾಕ್ ಮಾಡಲಾಗದು. ಇಲ್ಲಿಂದ ಹೊರ ಬರಬೇಡಿ. ರಾಮಧ್ಯಾನ ಮಾಡುತ್ತಿರಿ. ಹೀಗೆ ಹೋಗಿ, ಹಾಗೆ ಬರ್ತೀನಿ. ಕಷ್ಟ ಬಂದಲ್ಲಿ ಮಿಸ್ ಕಾಲ್ ಕೊಡಿ' ಎನ್ನುತಾ ಲಕ್ಷ್ಮಣ ಹೊರಟೇಬಿಟ್ಟ.
ಇತ್ತ ರಾವಣ ಬ್ರಾಹ್ಮಣ ರೂಪದಲ್ಲಿ ಬಂದಾಯ್ತು. ಸೀತೆಯನ್ನು ಲಕ್ಷ್ಮಣ ಹಾಕಿದ್ದ 'ಫೈರ್‌ವಾಲ್‌'ನಿಂದ ಹೊರಗೆ ಕರೆಸಿಕೊಳ್ಳಲಾಗದೆ ನಿಂತ ಜಾಗವನ್ನೇ ಜೆಸಿಬಿ ಎತ್ತಿ ಪಕ್ಕಕ್ಕೆ ಇಡುವಂತೆ ತನ್ನ ಪುಷ್ಪಕ ವಿಮಾನದಲ್ಲಿರಿಸಿ ಸೀತೆಯ ಆರ್ತನಾದವನ್ನು ಲೆಕ್ಕಿಸದೇ ಮೇಲೆ ಹಾರಿಯೇ ಬಿಟ್ಟ. ಸೀತೆಯು 'ರಾಮ್... ರಾಮ್...' ಎನ್ನುತ್ತಾ ರಾಮನಿಗೆ ಕಾಲ್ ಮಾಡಿದಾಗ ಅತ್ತ ರಾಮನ ಮೊಬೈಲ್ ರಿಂಗ್ ಆಯಿತು. ಆದರೆ, ಅಷ್ಟರಲ್ಲೇ ರಾವಣನ ವಿಮಾನ 'ಔಟ್ ಆಫ್ ಕವರೇಜ್ ಏರಿಯಾ'ದಿಂದ ಹೊರಬಿತ್ತು. ಅಪಹರಣವನ್ನು ಗಮನಿಸಿದ ಜಟಾಯು ಪಕ್ಷಿ ಸೀತೆಯನ್ನು ಕಾಪಾಡಲು ರಾವಣನೊಡನೆ ಅಂತರಿಕ್ಷದಲ್ಲಿ ಹೋರಾಡಿ, ರೆಕ್ಕೆಗಳನ್ನು ಕಳೆದುಕೊಂಡಿತು. ಸೀತಾ ಮೊಬೈಲನ್ನು ತನ್ನ ಗುರುತಿಗಾಗಿ ಶ್ರೀರಾಮನಿಗೆ ತಲುಪಿಸಲು ಜಟಾಯುವಿಗೆ ಕೊಟ್ಟಳು.
ಇತ್ತ ರಾಮ-ಲಕ್ಷ್ಮಣ ಸೀತೆ ಇದ್ದ ಸ್ಥಳಕ್ಕೆ ಬಂದರು. ಆಕೆ ಕಾಣಲಿಲ್ಲ. ರಾಮನು ಆಕೆಯ ಮೊಬೈಲ್‌ಗೆ ರಿಂಗ್ ಮಾಡಿದ. ಮರಣಶಯ್ಯೆಯಲ್ಲಿದ್ದ ಜಟಾಯು ರಿಸೀವ್ ಮಾಡಿ, ನಡೆದ ದುರಂತವನ್ನು ವಿವರಿಸಿತು. ತಾನಿರುವ ಜಾಗವನ್ನೂ ಹೇಳಿತು. ಅಂತೂ ಅವರು ಜಟಾಯುವಿದ್ದಲ್ಲಿಗೆ ಬಂದು, ಅದರ ಕ್ಷೇಮ ವಿಚಾರಿಸಿ, ಮೊಬೈಲ್ ಪಡೆದು ಹೊರಟರು. ವಾಲಿ- ಸುಗ್ರೀವರ ಕಥೆಯ ನಂತರ ಹನುಮಂತನ ಸಹಾಯದಿಂದ ಜಾಂಬವಂತನಾದಿಯಾಗಿ ಮುಂದಿನ ಯೋಜನೆಯನ್ನು ರೂಪಿಸಿದರು.
ಲಂಕಾದಲ್ಲಿರುವ ಸೀತೆಗಾಗಿಯೇ ರೋಮಿಂಗ್ ಇರುವ ಪೋಸ್ಟ್‌ಪೇಯ್ಡ್ ಫೆಸಿಲಿಟಿಯ ಮೊಬೈಲನ್ನು ಹನುಮನ ಕೈಲಿತ್ತು ಆಕೆಗೆ ತಲುಪಿಸುವಂತೆ ಕೋರಿದರು. 'ಅಲ್ಲಿ ತಲುಪಿದ ಮೇಲೆ ಆಕೆಗೆ ಕಾಲ್ ಮಾಡಲು ಹೇಳು' ಎಂದು ಕೋರಿದರು.
'ಕೌಸಲ್ಯ ಸುಪ್ರಜಾರಾಮಾ...' ಎಂದು ಮೊಬೈಲ್ ಅಲಾರ್ಮ್ ಮೊಳಗುತ್ತಿತ್ತು. ಸುಬ್ಬುವಿಗೆ ಎಚ್ಚರವಾಯ್ತು. ಅರೇ ನಾನೆಲ್ಲಿದ್ದೀನಿ! ಸೀತಾಪಹರಣ, ಲಂಕಾದಲ್ಲಿದ್ದ ಸೀತೆಗೆ ರಾಮ ರಿಂಗ್ ಮಾಡೋದು... ಇದೆಲ್ಲ ಕನಸೇ ಎಂದು ಬಡಬಡಿಸುತ್ತಿರಲು 'ರೀ ನೋಡ್ರಿ ಇಲ್ಲಿ, ನಿನ್ನೆ ಶ್ರೀರಾಮ ನವಮಿಗೆ ಮಾಡಿದ ಹೆಸರುಬೇಳೆ ಕೋಸಂಬರಿ ತಿಂದು ನಿಮ್ಮ ಮಗ ಹಾಸಿಗೆಯಲ್ಲೇ ಎಲ್ಲ ಮಾಡ್ಕೊಂಡಿದ್ದಾನೆ. ಎದ್ದು ಸ್ವಲ್ಪ ಕ್ಲೀನ್ ಮಾಡಿ, ಗೀಸರ್ ಆನ್‌ಮಾಡಿ ಸ್ನಾನನಾದ್ರೂ ಮಾಡ್ಸಿ. ಹಾಳಾದ್ದು ಈ ಮೊಬೈಲ್ ಅಲಾರ್ಮ್ ಹೊಡ್ಕೊಳ್ತಾನೆ ಇದೆ' ಎಂದೆಲ್ಲ ಬಯ್ದು ನನ್ನ ಕನಸಿನ ಗುಂಗನ್ನು ಹೆಂಡ್ತಿ ಹಾಳುಮಾಡಿದಳು. ನಾನೆದ್ದು, 'ರಾಮ ರಾಮಾ...' ಅಂತ ಕ್ಲೀನು ಮಾಡತೊಡಗಿದೆ.



-ಸಂಕೇತ್ ಗುರುದತ್ತ
gurudattans@gmail.com



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement