ಖುಷಿ

ಈ ದೇಶದಲ್ಲಿ ಭಾರತೀಯರು ಎಂದರೆ ಬಡವರು

ಮರಳುಗಾಡಿನ ಓಯಸಿಸ್ ನೀಡುವ ಮುದವೇ ಮಜಬೂತಾಗಿರುತ್ತದೆ. ವಾರಾಂತ್ಯದಲ್ಲಿ 'ಹೊರಗೆ ಹೋಗೋಣ' ಎಂದು ದುಂಬಾಲು ಬೀಳುವ ಮಕ್ಕಳಿಗಾಗಿ ರೆಸ್ಟೋರೆಂಟ್‌ಗೆ ಹೋದೆವು.  ಅಲ್ಲಿ ಅಷ್ಟು ಜನಸಂಖ್ಯೆಯಿಲ್ಲದ ಕಾರಣ 'ಜನಜಂಗುಳಿ'ಎಂಬ ಮಾತೇ ಇಲ್ಲ. ಆಸೀನರಾದ ನಮ್ಮ ಪಕ್ಕದಲ್ಲೇ ಮಹಿಳೆಯೊಬ್ಬಳು ಆಕೆಯ ಮಕ್ಕಳೊಂದಿಗೆ ಕುಳಿತಿದ್ದಳು. 10-15 ನಿಮಿಷ ಕಳೆಯುತ್ತಿದ್ದಂತೆ ಆಕೆ 20 ರಿಯಾಲ್ ಅನ್ನು ಒತ್ತಾಯ ಪೂರ್ವಕವಾಗಿ ನನ್ನ ಕೈಯಲ್ಲಿ ತುರುಕಿದಳು. ತೆಗೆದುಕೊಳ್ಳದಿದ್ದಾಗ ಮೇಜಿನ ಮೇಲಿಟ್ಟು ಅವಳ ಪಾಡಿಗೆ ಅವಳು ಹಿಂತಿರುಗಿದಳು. ಆಕೆಯ ನಡೆ ನಮಗೊಂಚೂರೂ ಅರ್ಥವಾಗಲಿಲ್ಲ. ಒಂದಂತೂ ಸ್ಪಷ್ಟವಾಗಿತ್ತು, ಆಕೆ ನಮ್ಮನ್ನು ಭಾರತೀಯರು ಎಂದು ಗುರುತಿಸಿದ್ದರು.
ಅಲ್ಲೇ ಕೆಲಸ ಮಾಡುತ್ತಿದ್ದ ಕರ್ಮಚಾರಿಗೆ ಅಷ್ಟೂ ಹಣ ಕೊಟ್ಟು ಹಿಂದಿರುಗಿದೆವು. ಮಾರನೆಯ ದಿನ ಕೆಲಸಕ್ಕೆ ಹೊರಟಾಗ ಅಚ್ಚರಿ ಕಾದಿತ್ತು. ಸಿಗ್ನಲ್ ಬಳಿಯ ರಸ್ತೆಯಲ್ಲಿ ಕಸಗುಡಿಸುವವನಿಗೆ ಗಾಡಿಯ ಒಳಗಿನಿಂದ ಹೊರಬಂದ ಕೈಗಳು ಹಣ ಕೊಡುತ್ತಿದ್ದವು. ಕುತೂಹಲ ಇಮ್ಮಡಿಯಾಯಿತು. ಕೆಲಸದಲ್ಲಿ ಅಷ್ಟಾಗಿ ಲಕ್ಷ್ಯ ಕೊಡಲಾಗದೆ ಹೊರಳಾಡಿ ಸಂಜೆ ಮನೆಗೆ ವಾಪಸಾದೆ. ನಾವು ತಂಗಿರುವ ಸರ್ವಿಸ್ ಅಪಾರ್ಟ್‌ಮೆಂಟ್‌ನ  ಸಿಬ್ಬಂದಿಯನ್ನು ಕರೆದೆ. ಅವನು ಹೇಳಿದ ಪ್ರಕಾರ ಈ ಅಪಾರ್ಟ್‌ಮೆಂಟ್‌ನಲ್ಲಿ 4 ಸಿಬ್ಬಂದಿಗಳಿದ್ದರು. ಅವರಲ್ಲಿ ಇಬ್ಬರು ಭಾರತೀಯರು. ಪಕ್ಕದ ಅಂಗಡಿಗೆ ಹೋಗಿ ವಿಚಾರಿಸಿದಾಗ ಒಬ್ಬ ಭಾರತೀಯ ಹಾಗು ಮತ್ತೋರ್ವ ಪಾಕಿಸ್ತಾನಿ. ಅಲ್ಲಿಯೇ ಇದ್ದ ಧೋಬಿಯೂ ಮಲಯಾಳಿಯಾಗಿದ್ದ. ನನ್ನ ಟ್ಯೂಬ್‌ಲೈಟ್ ಅದಾಗಲೇ ಹೊತ್ತಿಕೊಂಡಿತ್ತು. ಇದರ ಹಿಂದೆ ಸಮ್‌ಥಿಂಗ್ ಇದೆ ಎನಿಸಿತು. ಕೆಲವು ವಿಚಾರಗಳ ಸಂಗ್ರಹಣೆ ಆದಾಗ ನಿರೀಕ್ಷೆ ಕಹಿಯಿಂದ ಕೂಡಿತ್ತು.  
ಈ ದೇಶದಲ್ಲಿ ಭಾರತೀಯರೆಂದರೆ ಬಡವರು! ಮನೆಗೆಲಸ ಸೇರಿದಂತೆ ಅಂಗಡಿ, ಹೋಟೆಲ್, ತೋಟಗಳ ಕೆಲಸಗಾರರು ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಿಯರು. ಭಾರತೀಯರ ಬಗ್ಗೆ ಗೌರವ ನಂಬಿಕೆಯಿದ್ದರೂ ಬಡವರೆಂದೇ ಪರಿಗಣಿಸಲಾಗುತ್ತದೆ. ಮನಸ್ಸು ತಳಮಳದಿಂದ ವ್ಯಥೆಯಿಂದ ಕಳೆಗುಂದಿತ್ತು. ಇಲ್ಲಿನ ತೋಟಗಳು ಪಟ್ಟಣದಿಂದ 30-40 ಕಿ.ಮೀ ದೂರದಲ್ಲಿವೆ. ಚಿಕ್ಕ ಚಿಕ್ಕ ಖರ್ಜೂರದ ತೋಟಗಳು. ಅದರ ಮಧ್ಯದಲ್ಲಿ ತರಕಾರಿಗಳನ್ನು ಬೆಳೆಯುತ್ತಾರೆ. ಒಬ್ಬನು ತೋಟದ ಬಳಿಯಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಮಾರುತ್ತಿದ್ದ. ಆತನೊಂದಿಗೆ ಮಾತು ಪ್ರಾರಂಭಿಸಿದೆ. ಅವನು ಉತ್ತರ ಪ್ರದೇಶದವನು. ಹಿಂದಿಯಲ್ಲಿ ಮಾತನಾಡಿದ್ದರಿಂದ ಬೇಗನೆ ಆತ್ಮೀಯರಾದೆವು. 'ನಾನು ಒಬ್ಬ ಕೃಷಿಕ' ಎನ್ನುತ್ತಲೇ ಮಾತು ಪ್ರಾರಂಭಿಸಿದ.

'ನನಗೆ, ನನ್ನ ಕುಟುಂಬದವರಿಗೆ ತುಂಬ ಕಷ್ಟದ ದಿನಗಳನ್ನು ನೋಡಬೇಕಾದವು. ಹೊಲದ ಉತ್ಪನ್ನ ಯಾತಕ್ಕೂ ಸಾಕಾಗುತ್ತಿರಲಿಲ್ಲ. ಸಾಲದ ಮೇಲೆ ಸಾಲ ಮಾಡಿದೆ. ಊಟಕ್ಕೂ ತತ್ವಾರವಾಗುತ್ತ ಬಂತು. ಕೊನೆಯಲ್ಲಿ ಹೊಲ ಮಾರಿ, ನಾನು ಸೌದಿಗೆ ಬಂದೆ. ನನ್ನ ಕುಟುಂಬದವರು ಭಾರತದಲ್ಲಿಯೇ ಇದ್ದಾರೆ. ಅವರನ್ನೆಲ್ಲ ಬಿಟ್ಟು ಒಬ್ಬನೇ ಬದುಕುವುದು ಕಷ್ಟವೇ. ಆದರೆ ಇಲ್ಲಿ ಬಂದ ಮೇಲೆ ಸಂಸಾರಕ್ಕೆ ಬೇಕಾಗುವಷ್ಟು ಊಟ ತಿಂಡಿ ಬಟ್ಟೆ ಪೂರೈಸಲು ಸಾಧ್ಯವಾಗಿದೆ. ಅಲ್ಲಿ ಅವರೆಲ್ಲ ಸಂತೋಷದಿಂದಿದ್ದಾರೆ' ರೈತನ ಕಣ್ಣುಗಳಲ್ಲಿ ನೀರು ತುಂಬಿತ್ತು. 'ಊರಿಗೆ ಹೋಗಿ ಕುಟುಂಬದವರನ್ನೆಲ್ಲ ನೋಡಬೇಕೆಂಬ ಆಸೆ ಇದೆ. ಎರಡು ವರ್ಷಗಳಿಂದ ಹೋಗಿಲ್ಲ' ಎಂದನು. ನಂತರ ಅವನಾಡಿದ ಮಾತು ಮಾರ್ಮಿಕವಾಗಿತ್ತು. 'ದೇಶ ನಿನಗೇನು ಕೊಡುತ್ತದೆ ಎಂದು ಕೇಳಬೇಡ. ನೀನು ದೇಶಕ್ಕೆ ಏನು ಮಾಡಿದೆ ಎಂದು ಕೇಳಿಕೊಳ್ಳಬೇಕು. ನಿಜ, ಆದರೆ ನನಗೆ ಊಟಕ್ಕಿರಲಿಲ್ಲ, ಉಡಲು ಬಟ್ಟೆಯಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನಾನು ದೇಶಕ್ಕೆ ಏನು ಮಾಡಬಲ್ಲೆ?' ಎಂದು ಕೇಳಿದ. 'ಮೊದಲು ಬ್ರಿಟಿಷರ ದಬ್ಬಾಳಿಕೆಯ ದಾಸ್ಯ ಮುಗಿಯಿತು. ಈಗ ನಮ್ಮ ಜನರಿಂದಲೇ ನಮ್ಮ ದಬ್ಬಾಳಿಕೆ ನಡೆಯುತ್ತಿದೆ' ಎಂದು ಆರೋಪಿಸಿದಾಗ ಸಮರ್ಪಕ ಉತ್ತರವೀಯಲು ಕಷ್ಟವೆನಿಸಿತು. ಉತ್ತರವೇ ಇರಲಿಲ್ಲ ಎಂದರೂ ಸರಿಯೇ.  ಇದು ನಮ್ಮ ಭಾರತದ ರೈತರ, ಕೆಳವರ್ಗದ ಜನರ ಪರಿಸ್ಥಿತಿ. ಕಟು ಸತ್ಯ ನಮಗೆ ಅರ್ಥವಾದಾಗ ಜೀರ್ಣಿಕೊಳ್ಳುವುದು ಕಷ್ಟ. 'ನಮ್ಮ ದೇಶ ಅಭಿವೃದ್ಧಿ ಹೊಂದಿದ ದೇಶ, ಮುಂದುವರಿದ ದೇಶ' ಎಂಬ ಊಹೆಯಲ್ಲಿ ಜೀವಿಸುತ್ತಿದ್ದೇವೆ. ನಮ್ಮ ವಿದ್ಯಾವಂತ ಭಾರತೀಯರು ಪ್ರಗತಿ ಪಥದಲ್ಲಿರುವುದು ನಿಜ. ಆದರೆ ಮತ್ತೊಂದೆಡೆ ತುತ್ತು ಅನ್ನಕ್ಕಾಗಿ, ಜೀವನದ ಸೆಣಸಾಟಕ್ಕೆ ತುತ್ತಾಗಿರುವ ಭಾರತೀಯರು ಇದ್ದಾರೆ ಎಂಬುದು ಅಷ್ಟೇ ಬಲವಾದ ಸತ್ಯ. ಭಾರತ ಸಮೃದ್ಧ, ಸಿರಿಸಂಪತ್ತಿನ ದೇಶವೇ. ಆದರೆ ಮಾತೃ ಭೂಮಿಯಲ್ಲೇ ನೆಲೆ ಸಿಗದೆ ಬೇರೊಂದು ದೇಶದ ಆಶ್ರಯದಲ್ಲಿ ನೆಲೆಸಿರುವ ಭಾರತೀಯರು ಸಾಕಷ್ಟಿದ್ದಾರೆ. ಪ್ರತಿಯೊಂದು ಗಲ್ಲಿಯಲ್ಲಿ ಕಕ್ಕಸ ತೊಳೆಯುವವರು, ರಸ್ತೆ ಗುಡಿಸುವವರು ಹೀಗೆ ಕೆಳವರ್ಗದ ಕೆಲಸ ಮಾಡುತ್ತಿರುವವರೆಲ್ಲ ಹೆಚ್ಚಾಗಿ ಭಾರತೀಯರು. ಇಲ್ಲಿನ ಮಾಲ್, ಅಂಗಡಿಗಳಲ್ಲಿ, ಮನೆಯ ಕೆಲಸಕ್ಕೆ, ಡ್ರೈವರ್‌ಗಳಾಗಿ ಕರ್ನಾಟಕದವರೂ ಬಹಳ ಜನರಿದ್ದಾರೆ.
ಸ್ವಾಗತಾರ್ಹ ಎಂಬಂತೆ ಇಲ್ಲಿಯ ಜನರಲ್ಲಿ ಬಡವರಿಗೆ ಸಹಾಯ ಮಾಡುವ ಮನೋಭಾವವಿದೆ. ನನಗಾದ ಅನುಭವದಲ್ಲಿ ಸೌದಿಯ ಜನರು ಸಹಾಯ ಮಾಡಿ ಮನುಷ್ಯತ್ವಕ್ಕೆ ಬೆಲೆ ಕೊಡುತ್ತಿದ್ದಾರೆ. ಇಲ್ಲಿ ಕೆಳವರ್ಗದಲ್ಲಿ ಕೆಲಸ ಮಾಡುತ್ತಿರುವ ಭಾರತೀಯರೆಲ್ಲ ಸಧ್ಯಕ್ಕೆ ತಮ್ಮದೇ ಆದ ಸುಂದರ ಕಲ್ಪನೆಯಲ್ಲಿದ್ದಾರೆ. ಯಾಕೆಂದರೆ ಲೋಕಸಭಾ ಚುನಾವಣೆ! ಒಬ್ಬ ಪ್ರಬುದ್ಧ ಮುಖಂಡ ಸಿಗಲಿ. ಮಾತೃಭೂಮಿಗೆ ಪುನಃ ಹಿಂದಿರುಗುವಂತಾಗಲಿ. ಮಾತೃಭೂಮಿಯಲ್ಲೇ ಕೆಲಸ ಸಿಗಲಿ ಎಂಬ ಆಶಾಭಾವನೆ ಇಲ್ಲಿರುವ ಪ್ರತಿಯೊಬ್ಬ ಭಾರತೀಯನದ್ದಾಗಿದೆ.

= ಡಾ. ವಾಣಿ ಸಂದೀಪ್, ಸೌದಿ ಅರೇಬಿಯಾ
sanvadazgmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್