ನನ್ನನ್ನು ನೋಡಿ ನಗೆ ಚೆಲ್ಲುವಳು ಮುಂದೆ ನನ್ನ ಬಾಳಲ್ಲೂ ನಗೆ ಚೆಲ್ಲುವಳೇ?
ಶ್ರೀಕಾಂತ ಮುದಗಲ್ಲ, ಇಳಕಲ್ಲ.
'ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ' ಅಂತಾರಲ್ಲ ಏಕೆ?
-'ಅದೀಗ ಯಾರದೊ ದುಡ್ಡು ಪುಢಾರಿಗಳ ಯಾತ್ರೆ' ಅಂತಾಗಿದೆ!
ಸ್ವಾಮಿ ನಿರ್ಮಲಾ, ಉಡಿಗಾಲ.
ಇತ್ತೀಚೆಗೆ ದೇವೇಗೌಡ್ರು ಹಸ್ತ ನೋಡಿ ಭವಿಷ್ಯ ಹೇಳ್ತಾರಂತೆ?
-'ಹಸ್ತ' ನೋಡುತ್ತ ತಮ್ಮ ಪಕ್ಷದ ಭವಿಷ್ಯದ ಬಗ್ಗೆ ಯೋಚಿಸ್ತಾರೆ!
ಕೆ.ಎಂ. ಲಿಂಗರಾಜು, ನಂಜನಗೂಡು.
ಜನರಿಗೆ ನೆನಪಿನ ಶಕ್ತಿ ತುಂಬಾ ಕಮ್ಮಿ ಯಾಕೆ?
-ಈಗ ಎಲ್ಲವನ್ನೂ ಕಂಪ್ಯೂಟರ್‌ನಲ್ಲೇ ಸೇವ್ ಮಾಡಿಟ್ಕೋತಾರಲ್ಲ!
ಆರ್.ಸಿ. ಪರಶುರಾಮ್, ಶಿಕಾರಿಪುರ.
ಟಿವಿ ಜ್ಯೋತಿಷಿಗಳ ಹಾವಳಿಯಿಂದ ಜನರಿಗೆ ಭಕ್ತಿಗಿಂತ ಭಯವೇ ಹೆಚ್ಚಾಗಿದೆಯಲ್ಲ?
-ಜನರ ಬಿಪಿ ಏರಿದ್ರೆ ಅವರ ಟಿಆರ್‌ಪಿ ಏರೋದು!
ರವಿಕುಮಾರ್ ಜಿ.ಬಿ. ಬೆಂಗಳೂರು.
ಜಂಪಿಂಗ್ ಸ್ಟಾರ್ ರಕ್ಷಿತಾ, ಪೂಜಾ ಗಾಂಧಿ ಅವರ ಮುಂದಿನ ಪಕ್ಷ ಯಾವುದು?
- ಕಮ್ಯುನಿಸ್ಟ್ ಮತ್ತು ಕಾಂಗ್ರೆಸ್ ಮಾತ್ರ ಬಾಕಿ ಇರೋದು!
ಚಿಕ್ಕೋಬಲಹಳ್ಳಿ ಚಾಂದ್‌ಬಾಷ, ತಳಕು.
ವಿಧಾನಸೌಧದಲ್ಲಿ ಅಂಗಿ ಹರಿದುಕೊಂಡ ಗೂಳುಪಟ್ಟಿ ಸಂಸತ್ ಪ್ರವೇಶಿಸಿದರೆ?
- ಕ್ಷೇತ್ರದ ಸಮಸ್ಯೆಗಳ ಬಗ್ಗೆ ಬಾಯಿ ಹರಿದುಕೊಳ್ಳಬಹುದು!
ಜೆ.ಆರ್. ಆದಿನಾರಾಯಣಮುನಿ, ಶ್ರೀಕೋಡಿಹಳ್ಳಿಮಠ
ಸಂಸಾರ ಸಾಗರ ದಾಟುವ ಹಡಗು ಯಾವುದು?
-ತೆಪ್ಪದಲ್ಲೂ ದಾಟಬಹುದು, ಕಾಸಿದ್ರೆ ವಿಮಾನದಲ್ಲಿ ಹಾರ್ಕೊಂಡೂ ಹೋಗಬಹುದು!
ಪ್ರಭಾವತಿ ತಿಗರಿಮಠ, ಅಳವಂಡಿ.
ಚುನಾವಣೆ ಬಗ್ಗೆ ಮಾಧ್ಯಮದವರು ಮಾಡಿದ ಸಮೀಕ್ಷೆ ಜೋಕ್ ಅಂತೆ ಹೌದಾ?
-ಅದು ಜೋಕಾದ್ರೂ ನೀವು ಮತ ಎಣಿಕೆ ನಂತರವೇ ನಗಬೇಕು!
ಬಿ.ಎಸ್. ನಾರಾಯಣಸ್ವಾಮಿ, ಬೋಧನ ಹೊಸಹಳ್ಳಿ.
ನನ್ನನ್ನು ನೋಡಿ ನಗೆ ಚೆಲ್ಲುವಳು ಮುಂದೆ ನನ್ನ ಬಾಳಲ್ಲೂ ನಗೆ ಚೆಲ್ಲುವಳೇ?
-ನೀವು ದುಡ್ಡು ಚೆಲ್ಲುವಂತಾಗದಿದ್ರೆ ಸಾಕು!
ಪೇಂಟರ್ ಪಾಪು, ಸಂತೇಮರಹಳ್ಳಿ
ಕೈಯಲ್ಲಿ ಆಗದವರು ಮೈ ಪರಚಿಕೊಳ್ಳುವುದೇಕೆ?
- ಬೇರೆಯವರ ಮೈ ಪರಚೋಕೂ ಭಯ!
= ಎಸ್.ವಿ. ಪದ್ಮನಾಭ