ಖುಷಿ

ಜಂಗಲ್ ಬುಕ್

ಅನಂತತೆಯಲ್ಲಿ ಪ್ರಕೃತಿಯೆಂಬ ಚಿಂಗಾರಿ ಸದಾ ಚೆಲುವು ಸೂಸುವುದೇ ಅದ್ಭುತ ವಿಸ್ಮಯ. ಒಂದೆಡೆ ಹಸಿರು ಚಾದರ ಹೊದ್ದು ಅನನ್ಯ ಪ್ರಾಣಿ ಪಕ್ಷಿಗಳ ಸಂಕುಲವನ್ನೇ ಮಡಿಲಲ್ಲಿಟ್ಟುಕೊಂಡು ಲಾಲನೆಪಾಲನೆ ಮಾಡುವ ಕಾಡುಮೇಡುಗಳು, ಇನ್ನೊಂದೆಡೆ ಪ್ರತೀ ನಿಮಿಷಕ್ಕೂ ಅಲೆಗಳ ಮಹಾಪೂರದಲ್ಲೇ ವಾಸ್ತವಗಳ ರುದ್ರ ನರ್ತನಗೈಯ್ಯುವ ಕಡಲು ತೀರ... ಹೀಗೆ ಇವೆಲ್ಲವುಗಳೊಂದಿಗೆ ಸರಪಳಿಯಂತೆ ಬೆಸೆದು ಅವರವರ ಭಾವಕ್ಕೆ ತಕ್ಕಂತೆ ಹೊಸ ಪ್ರವಾಸಿ ದರ್ಶನ ಮಾಡಿಸುವ ಅಪರೂಪದ ಪ್ರಯತ್ನದಲ್ಲಿದೆ 'ಜಂಗಲ್ ಲಾಡ್ಜಸ್ ಆ್ಯಂಡ್ ರೆಸಾರ್ಟ್ಸ್‌'. ರಮಣೀಯ ತಾಣಗಳಲ್ಲಿ ಆದರಾತಿಥ್ಯ ಸವಿಯುವ ವ್ಯವಸ್ಥೆಯನ್ನು 'ಜಂಗಲ್ ಲಾಡ್ಜಸ್‌' ಸಂಸ್ಥೆಯು ಕರ್ನಾಟಕದಲ್ಲಿ ಕಲ್ಪಿಸಿದೆ.
ಕಬಿನಿ, ಬಂಡೀಪುರ, ಬಿಳಿಗಿರಿ ರಂಗನಬೆಟ್ಟ, ಬನ್ನೇರುಘಟ್ಟ, ದುಬಾರೆ, ಭೀಮೇಶ್ವರಿ, ಕಾರವಾರದ ದೇವಭಾಗ್, ಚೋಗ್, ಗಾಲಿಬೋರೆ, ದಾಂಡೇಲಿ, ಭದ್ರಾ ಅರಣ್ಯಧಾಮ, ಮಂಗಳೂರಿನ ಪಿಲಿಕುಳ, ಹಂಪಿ, ಗೋಕರ್ಣ, ಗಣೇಶಗುಡಿ, ಬೀದರ್, ಬೆಳಗಾವಿಯ ಭೀಮಗಡ ಮುಂತಾದ ನಿಸರ್ಗ ತಾಣಗಳಲ್ಲಿ ಪರಿಸರದ ನೈಜ ಆಲಾಪನೆ ಶೃತಪಡಿಸಲು 'ಜಂಗಲ್ ಲಾಡ್ಜಸ್‌' ಕೈಬೀಸಿದೆ.
ವಸತಿಗೆ ಪರಿಸರ ಸ್ನೇಹಿ ಕಾಟೇಜ್‌ಗಳು, ಲಾಗ್‌ಹಟ್‌ಗಳು, ಬಗೆಬಗೆಯ ಖಾದ್ಯಗಳು, ಜಂಗಲ್ ಸಫಾರಿ... ಹೀಗೆ ಎಲ್ಲಾ ಸೌಲಭ್ಯಗಳಲ್ಲೂ 'ಜಂಗಲ್ ಲಾಡ್ಜಸ್‌'ನದ್ದು ಗುಣಮಟ್ಟದ ಸೇವೆ. ಬನ್ನೇರುಘಟ್ಟದಿಂದ ಹಿಡಿದು ಬೀದರ್‌ವರೆಗೆ, ದುಬಾರೆಯಿಂದ ಹಿಡಿದು ದಾಂಡೇಲಿಯವರೆಗೆ ನಾನಾ ಕಡೆಗಳಲ್ಲಿ ಜಂಗಲ್ ಲಾಡ್ಜಸ್‌ನ ರೆಸಾರ್ಟ್‌ಗಳಿದ್ದರೂ ಒಂದಕ್ಕಿಂತ ಮತ್ತೊಂದು ಭಿನ್ನ ಮತ್ತು ವಿಶೇಷ.
ಉದಾಹರಣೆಗೆ, ರಬಿನಿ ಜಂಗಲ್ ಲಾಡ್ಜಸ್‌ಗೆ ಬರುವ ಪ್ರವಾಸಿಗರಿಗೆ ನಾಗರಹೊಳೆಯ ವಿಹಂಗಮ ಕಾನನದಲ್ಲಿ ನಿರ್ಭಯವಾಗಿ ಓಡಾಡಿಕೊಂಡಿರುವ ಹುಲಿ, ಚಿರತೆ, ಕಾಡಾನೆ, ಜಿಂಕೆ, ಕಡವೆ, ಸಾರಂಗಗಳ ಹಿಂಡಿನ ಸಮೀಪ ದರ್ಶನ 'ಜಂಗಲ್ ಸಫಾರಿ'ಯಾದರೆ ದಾಂಡೇಲಿಯಲ್ಲಿ ವಯ್ಯಾರಿಯಂತೆ ಹರಿಯುವ ಕಾಳಿ ನದಿಯಲ್ಲಿ ರಾಫ್ಟಿಂಗ್‌ಗೆ ಹೇರಳ ಅವಕಾಶ, ಜತೆಗೆ ಪಕ್ಕದ ಅರಣ್ಯದಲ್ಲಿ ವಿಶೇಷವಾಗಿರುವ ಮಂಗಟ್ಟೆಗಳ (ಹಾರ್ನ್‌ಬಿಲ್) ದರ್ಶನ ಬೋನಸ್.
ಭೀಮೇಶ್ವರಿಯಲ್ಲಿ ಗಾಳ ಹಾಕಿ ದೊಡ್ಡ ದೊಡ್ಡ ಮಹಶೀರ್ ಮೀನುಗಳನ್ನು ಹಿಡಿಯುವುದೇ ವಿಶೇಷವಾದರೆ, ಬಂಡೀಪುರದ ದಟ್ಟ ಕಾಡಿನಲ್ಲಿ ಚಾರಣಗೈಯ್ಯುತ್ತಾ ದಿವ್ಯ ಮೌನದ ಬೇಟೆ ನಡೆಸುವುದೇ ದಿವ್ಯಾನುಭೂತಿ. ಕಾಳಿನದಿ ಮತ್ತು ಅರಬ್ಬೀ ಸಾಗರದ ಸರಸ ಸಲ್ಲಾಪ, ಒಂದನ್ನೊಂದು ಮುತ್ತಿಕ್ಕುತ್ತಾ ಸಂಗಮಿಸುವ ದೃಶ್ಯ ವೈಭವವನ್ನು ಸವಿಯಬೇಕೆಂದರೆ ದೇವಭಾಗದ ಜಂಗಲ್ ಲಾಡ್ಜಸ್ ರೆಸಾರ್ಟ್‌ಗೆ ತೆರಳಬೇಕು. ಭದ್ರ ಹಿನ್ನೀರು ಪ್ರದೇಶದ ಪುಟ್ಟ ಪುಟ್ಟ ದ್ವೀಪಗಳಲ್ಲಿರುವ ಜಂಗಲ್ ಕಾಟೇಜ್‌ಗಳಲ್ಲಂತೂ ಸದಾ 'ರಿವರ್ ಟರ್ನ್‌' ಹಕ್ಕಿಗಳದ್ದೇ ಕಲರವ. ಬೀದರ್, ಹಂಪಿಗಳಲ್ಲಿ ಇತಿಹಾಸದ ಗತ ವೈಭವದ ಪ್ರಚ್ಛನ್ನ ಸೊಗಸನ್ನು ಪ್ರತ್ಯಕ್ಷವಾಗಿ ಸವಿಯಲು ಅನನ್ಯ ಅವಕಾಶ. ಹೀಗೆ ಭಿನ್ನ- ವಿಭಿನ್ನ ರುಚಿ, ಅಭಿರುಚಿ ಇರುವ ಹಕ್ಕಿಗಳಿಗೆ ಜಂಗಲ್ ಲಾಡ್ಜಸ್ ಎಲ್ಲಿಯೂ ಏಕತಾನತೆ ಕಾಡದಂತೆ ಅವಕಾಶಗಳ ದಿಗಂತವನ್ನೇ ತೆರೆದಿಡುತ್ತದೆ. ನಿಸರ್ಗದ ಬಾಂಧವ್ಯವನ್ನು, ಬಂಧುರತೆಯನ್ನು ಆಸ್ವಾದಿಸಲು ಸದಾ ನಿಮ್ಮನ್ನು ಸ್ವಾಗತಿಸುತ್ತದೆ.  ಕರ್ನಾಟಕದ ಅಪರೂಪದ ಪ್ರವಾಸಿ ತಾಣಗಳನ್ನು ಅತ್ಯಂತ ಸುವ್ಯವಸ್ಥಿತವಾಗಿ ಪ್ರವಾಸಿಗರಿಗೆ ದರ್ಶನ ಮಾಡಿಸಬೇಕೆಂಬ ಉದ್ದೇಶದಿಂದ ಕರ್ನಾಟಕ ಸರ್ಕಾರ ಪ್ರಾರಂಭಿಸದ ಜಂಗಲ್ ಲಾಡ್ಜಸ್ ರೆಸಾರ್ಟ್ಸ್ ಕಳೆದ ಮೂರು ದಶಕಗಳಿಂದಲೂ ರಾಷ್ಟ್ರೀಯ- ಅಂತಾರಾಷ್ಟ್ರೀಯ ಪ್ರಶಸ್ತಿ- ಪುರಸ್ಕಾರಗಳನ್ನು ಗಳಿಸಿಕೊಂಡ ಸಂಸ್ಥೆಯಾಗಿದೆ.
ವನ್ಯಜೀವಿಗಳ ಮತ್ತು ಪರಿಸರ ಸಂರಕ್ಷಣೆಯಲ್ಲಿ ವಿಶೇಷ ಕಾಳಜಿಯಿರುವ ಅರವಿಂದ್ ಜಾಧವ್, ಸಂಜಯ್ ಮೋಹನ್, ವಿಜಯ್ ಮೋಹನ್ ರಾಜ್, ಅವತಾರ್ ಸಿಂಗ್‌ರ ಸಮರ್ಥ ಮುಂದಾಳತ್ವದಲ್ಲಿ, ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆಯವರ ಮಾರ್ಗದರ್ಶನದಲ್ಲಿ ಜಂಗಲ್ ಲಾಡ್ಜಸ್‌ನ ಸೇವೆಯನ್ನು ನಾಡಿನ ಇನ್ನೂ ಅನೇಕ ಪ್ರವಾಸಿಧಾಮಗಳಿಗೆ ವಿಸ್ತರಿಸಲು ಪ್ರಯತ್ನಗಳು ನಡೆಯುತ್ತಿವೆ.
ಈ ಬೇಸಿಗೆ ರಜಾದಲ್ಲಿ ಹೆಂಡತಿ ಮಕ್ಕಳೊಂದಿಗೆ ಬರೀ ಕಾಂಕ್ರೀಟ್ ಕಾಡಿನ ಶಾಪಿಂಗ್ ಮಾಲ್‌ಗಳಲ್ಲೇ ಕಾಲಹರಣ ಮಾಡದೇ, ನಾಡಿನಿಂದ ಕಾಡಿಗೆ-ಕಡಲಿಗೆ ಕರೆಯುವ ಜಂಗಲ್ ಲಾಡ್ಜಸ್ ಕಾಡುಕುಟೀರಗಳತ್ತ ಹೆಜ್ಜೆ ಹಾಕುವ ಮನಸ್ಸು ಮಾಡಿದರೆ ಒಂದಷ್ಟು ಹೊಸಬಗೆಯ ರೋಚಕ ಅನುಭವ ನಿಮ್ಮದಾಗಬಹುದು. ಹ್ಯಾಪಿ ಜರ್ನೀ ಟು ಜಂಗಲ್!!

= ರಾಜು ಅಡಕಳ್ಳಿ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'ವಿರಾಟ್ ಕೊಹ್ಲಿ ಬೇಗ ಔಟಾದರೆ ನನಗೆ ಊಟವೇ ಸೇರಲ್ಲ': ಸ್ಟಾರ್ ಬ್ಯಾಟರ್ ಬಗ್ಗೆ ನಾನಾ ಪಾಟೇಕರ್ ಹೇಳಿಕೆಯ ಹಳೆಯ ವಿಡಿಯೋ ವೈರಲ್

ಬೆಂಗಳೂರಿನಲ್ಲಿ CJP ಪ್ರತಿಭಟನೆ: ಪ್ರಕಾಶ್ ರಾಜ್, YouTuber ಧ್ರುವ್ ರಾಠಿ ಭಾಗಿ; CEC ರಾಜೀನಾಮೆಗೆ ಬಿಗಿಪಟ್ಟು..!

ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ