ಕಳೆದ ಐದು ವರ್ಷಗಳಿಂದ ನಾನು ಬೌದ್ಧ ಧರ್ಮದ ಬಗ್ಗೆ ಪುಸ್ತಕ ಬರೆಯಲು ಮಗ್ನನಾಗಿದ್ದೆ. ಆ ಪುಸ್ತಕ ನನ್ನ ಧರ್ಮದೀಕ್ಷೆಯ ವೈಶಾಖ ತಿಂಗಳ ಪೂರ್ವದಲ್ಲಿ ಪ್ರಕಟವಾಗಬೇಕೆಂದು ನಾನು ಮುಂಬೈಗೆ ಬಂದೆ. ನನ್ನ ಆರೋಗ್ಯವು ಸರಿಯಾಗಿರದಿದ್ದರಿಂದ ನಾನು ಆ ಪುಸ್ತಕ ಬರೆಯಲು ತಡವಾಯಿತು. ಪುಸ್ತಕವು ಇಂಗ್ಲಿಷ್ ಭಾಷೆಯಲ್ಲಿದ್ದು 700 ಪುಟಗಳದ್ದು ಇರುತ್ತದೆ. ಇಂಗ್ಲಿಷ್ ತಮಗೆಲ್ಲರಿಗೂ ತಿಳಿಯುವುದು ಕಠಿಣವಾಗಬಹುದೆಂದು ಆ ಪುಸ್ತಕವನ್ನು ನಾನು ಮರಾಠಿಯಲ್ಲಿ ಬೇಗನೆ ಭಾಷಾಂತರಗೊಳಿಸುವೆ. ಆದ್ದರಿಂದಲೇ ರಂಗೂನಕ್ಕೆ ಹೋಗಲು ನನಗೆ ಸಾಧ್ಯವಾಗಲಿಲ್ಲ. ಇಂದು ನನ್ನ ಮುಂದಿರುವ ಜನ ಸಮುದಾಯವನ್ನು ನೋಡಿ ನನಗೆ ಬಹಳ ಸಂತೋಷವಾಗಿದೆ.
ನಾನು ಚಿಕ್ಕವನಾಗಿದ್ದಾಗ್ಗೆ ನನಗೆ ರಾಮಾಯಣ, ಮಹಾಭಾರತ ದಿನಾಲು ಓದಲು ಹೇಳಲಾಗುತ್ತಿತ್ತು. ಆದರೆ ಈ ಒತ್ತಾಯ ಏಕೆ ಎಂದು ತಂದೆಯನ್ನು ಕೇಳಲು ನನಗೆ ಧೈರ್ಯವಿರಲಿಲ್ಲ. ಒಂದು ದಿನ ಕೇಳಿದ್ದಾಗ್ಯೆ ನನ್ನ ತಂದೆ ಹೇಳಿದರು 'ರಾಮಾಯಣ ಮಹಾಭಾರತದಲ್ಲಿಯ ಮಹಾಪುರುಷರ ಇತಿಹಾಸ ಓದುವುದರಿಂದ ಅದರ ಚರಿತ್ರೆ ನಮ್ಮ ಮೇಲೆ ಪರಿಣಾಮ ಬೀರಬಹುದು'. ಅವರ ಉತ್ತರದಿಂದ ನನಗೆ ಸಮಾಧಾನವಾಗಲಿಲ್ಲ.
ಮಹಾಭಾರತದ ದ್ರೋಣಾಚಾರ್ಯರು ಅತ್ಯಂತ ಪರಾಕ್ರಮಿಯಾದ ರಾಜಗುರುಗಳಾಗಿದ್ದಾರೆ. ಕೌರವರಿಗೆ ಹಾಗೂ ಪಾಂಡವರಿಗೆ ಶಸ್ತ್ರವಿದ್ಯೆ ಕಲಿಸಿದರು. ಆದರೆ ಮಹಾಯುದ್ಧದಲ್ಲಿ ಅವರು ನ್ಯಾಯದ ಮಾರ್ಗ ಹಿಡಿಯಲಿಲ್ಲ. ಕೌರವರೊಂದಿಗೆ ಕೂಡಿ ಯುದ್ಧ ಮಾಡಿದರು. ಕಾರಣ ಅವರು ಕೌರವರಲ್ಲಿ ನೌಕರಿ ಮಾಡುತ್ತಿದ್ದರು. ಇಂಥ ಪುರಾಣಪುರುಷರಿಂದ ನಮಗೇನು ಲಾಭ?
ಪುಸ್ತಕ: ಸುಪ್ರಸಿದ್ಧ ಭಾಷಣಗಳು
ಲೇಖಕರು: ಡಾ. ಬಾಬಾಸಾಹೇಬ್ ಅಂಬೇಡ್ಕರ್
ಕನ್ನಡಕ್ಕೆ: ಡಾ. ಸರಜೂ ಕಾಟ್ಕರ್
ಪ್ರಕಾಶನ: ಯಾಜಿ
ಪುಟಗಳ ಸಂಖ್ಯೆ: 134 , ಬೆಲೆ: 120