ಕತ್ತಲಲ್ಲಿ ಕಂಡ ದೃಶ್ಯಗಳು
ಸದಾ ನಮ್ಮ ಪಯಣ ಕತ್ತಲೆಯಿಂದ ಬೆಳಕಿನೆಡೆಗೆ ಸಾಗಬೇಕು, ನಿಜ. ಆದರೆ ಕತ್ತಲೆಯ ಅನುಭವವೇ ಇಲ್ಲದವನಿಗೆ ಬೆಳಕಿನ ಬೆಲೆ ತಿಳಿಯುವುದು ಸಾಧ್ಯವೆ? ಕೃತಕ ಬೆಳಕಿನ ಮೋಹಕ್ಕೆ ಸಿಲುಕಿ ಸಹಜ ಕತ್ತಲೆಯ ಸೊಗಸನ್ನು ಕಳೆದುಕೊಳ್ಳುವುದು ಎಷ್ಟು ಸರಿ? ಹೀಗೊಂದು ಪ್ರಶ್ನೆ ಉದ್ಭವಿಸಿದ್ದು ಮೊನ್ನೆ ಮಲೆನಾಡಿನ ನಮ್ಮ ಮನೆಯ ಅಡಕೆ ಚಪ್ಪರದ ಮೇಲೆ ಕೂತು ಅಸಂಖ್ಯ ತಾರೆಗಳ ರಾಶಿಯನ್ನು ನೋಡುತ್ತಿದ್ದಾಗ. ಅಲ್ಲಿ ಮರ್ಕ್ಯುರಿ, ಹ್ಯಾಲೋಜನ್ ದೀಪಗಳ ಝಗಮಗವಿರಲಿಲ್ಲ, ಸೀಳಿಕೊಂಡು ಬರುವ ವಾಹನಗಳ ಡಿಮ್ಮು ಡಿಪ್ಪುಗಳಿರಲಿಲ್ಲ. ಕರೆಂಟ್ ಹೋದರೂ ನಿರಾತಂಕವಾಗಿ ಉರಿಯುವ ಎದುರು ಮನೆಯ ಯುಪಿಎಸ್ ಕಾಟವಿರಲಿಲ್ಲ. ಅಬ್ಬಾ, ಎಷ್ಟು ದಿನವಾಗಿತ್ತು ಈ ಅಂಧಕಾರವನ್ನು ನೋಡಿ! ಎಷ್ಟು ದಿನವಾಗಿತ್ತು ಈ ತಡೆರಹಿತ ನಿಶ್ಶಬ್ದವ ಕೇಳಿ!
ಅಪರೂಪಕ್ಕೆ ಪೇಟೆ ಬಿಟ್ಟು ಹಳ್ಳಿಗೆ ಹೋದಾಗ ನಿಮಗೂ ಈ ಅನುಭವವಾಗಿರಬಹುದು. ನಗರದಲ್ಲೇ ಹುಟ್ಟಿ ಬೆಳೆದ ಮಕ್ಕಳಿಗಂತೂ ಅಮವಾಸ್ಯೆಯ ಕತ್ತಲು, ಹುಣ್ಣಿಮೆಯ ಬೆಳದಿಂಗಳುಗಳ ನಡುವಿನ ವ್ಯತ್ಯಾಸವೇ ಗೊತ್ತಿಲ್ಲದಿದ್ದರೂ ಅಚ್ಚರಿಯಿಲ್ಲ. ಕಾರಣ ಇಷ್ಟೇ, ಅವಶ್ಯವಿರಲಿ ಇಲ್ಲದಿರಲಿ ಸಂಜೆಯಾಗುವುದರೊಳಗೆ ನಗರದ ಮೂಲೆ ಮೂಲೆಗಳು ಕೃತಕ ದೀಪಗಳಿಂದ ಅಲಂಕೃತವಾಗುತ್ತವೆ. ಮನೆಗಳಲ್ಲಿ ಸಿಎಫ್‌ಎಲ್ ದೀಪಗಳು, ಹೊರಗೆ ಬೀದಿ ದೀಪಗಳು, ಜಾಹೀರಾತು ಫಲಕಗಳು, ವಾಹನಗಳ ಎಲ್‌ಇಡಿಗಳು ಇತ್ಯಾದಿ ಎಲ್ಲೆಡೆಯಿಂದಲೂ ಸೂರ್ಯ ಚಂದ್ರರಿಗೆ ಸವಾಲೆಸೆಯುವ ಇವು ಹಗಲು ಕಾಣದ ಬಾವಿಯನ್ನೂ ಇರುಳಲ್ಲಿ ತೋರಿಸಿ ಬಿಡಬಲ್ಲವು. ಒಳ್ಳೆಯದೆ ಆಯ್ತಲ್ಲ, 'ಇದರಿಂದ ನಿಮಗೇನು ತೊಂದರೆ? ಬೆಳಕಿದ್ರೆ ತಾನೆ ಪ್ರಪಂಚ ನೋಡೋಕೆ ಸಾಧ್ಯ? ಕತ್ತಲಲ್ಲಿ ಏನು ಕಾಣಿಸುತ್ತೆ ಮಣ್ಣು?' ಅಂತ ಕೆಲವರು ಮೂಗು ಮುರಿಯಬಹುದು. ಈ ಕೃತಕ ದೀಪಗಳಿಂದ ಆಗೋ ನಷ್ಟ ಏನು ಎಂಬುದನ್ನು ಎರಡು ರೀತಿಯಲ್ಲಿ ವಿಶ್ಲೇಷಿಸಬಹುದು. ಒಂದು ವೈಜ್ಞಾನಿಕ ದೃಷ್ಟಿಕೋನದಿಂದ, ಇನ್ನೊಂದು ಭಾವನಾತ್ಮಕ ದೃಷ್ಟಿಯಿಂದ. ವೈಜ್ಞಾನಿಕ ದೃಷ್ಟಿಯಿಂದ ನೋಡಿದರೆ ಅತಿಯಾದ ಕೃತಕ ಬೆಳಕು ಪ್ರಕಾಶ ಮಾಲಿನ್ಯಕ್ಕೆ (Photo pollution) ಕಾರಣವಾಗುತ್ತದೆ.
ಈ ವೈಜ್ಞಾನಿಕ ಕಾರಣವನ್ನು ಒತ್ತಟ್ಟಿಗಿಟ್ಟು ನೋಡಿದರೂ ಬೆಳಕಿನ ದರ್ಬಾರಿನಲ್ಲಿ ನಾವು ಕಳೆದುಕೊಂಡ ಸುಖ ಸಂತೋಷಗಳಿಗೆ ಲೆಕ್ಕವಿಲ್ಲ. ಅದೇನೆಂದು ತಿಳಿಯಬೇಕೆಂದರೆ, ನಗರೀಕರಣದ ಸ್ಪರ್ಶವಿಲ್ಲದ ಮಲೆನಾಡ ಮೂಲೆಯ ದಟ್ಟ ಕಾನನದ ನಡುವಿನ ಮನೆಯಲ್ಲಿ ಕುಳಿತು ಕಣ್ಣು-ಕಿವಿ-ಮನಸ್ಸುಗಳನ್ನು ರಾತ್ರಿಯ ನೀರವತೆಗೆ ತೆರೆದಿಡಬೇಕು. ಅಲ್ಲಿ ಬೆಳಕಲ್ಲಿ ಕಾಣದ ಲೋಕವೊಂದು ಮೆಲ್ಲನೆ ತೆರೆದುಕೊಳ್ಳುತ್ತದೆ. ವಾಹನಗಳ ಕಿವಿಗಡಚಿಕ್ಕುವ ಸದ್ದಿನ ಬದಲಾಗಿ ಯಾವುದೋ ಅಜ್ಞಾತ ಮೂಲೆಯಲ್ಲಿ ಕೂತು 'ಕಿರ್ರೋ...' ಎಂದು ಅರಚುವ ಜೀವಿಗಳ ಸಂಗೀತಗೋಷ್ಠಿ ನಿಮ್ಮನ್ನು ಸ್ವಾಗತಿಸುತ್ತದೆ, ಮಳೆಗಾಲವಾದರೆ ಇವುಗಳ ಜೊತೆ ಮಂಡರಗಪ್ಪೆಗಳ ಜುಗಲ್‌ಬಂದಿ. ಅವನ್ನು ಆಲಿಸುತ್ತಾ ತೋಟದ ಮಾವಿನಮರದಲ್ಲಿ ಸೇರಿರುವ ಮಿಂಚುಹುಳುಗಳ ಜಾತ್ರೆ ವೀಕ್ಷಿಸುತ್ತಾ ಕುಳಿತರೆ ಮೆಲ್ಲನೆ ಹೊತ್ತು ಜಾರಿ ಹೋಗುವುದರ ಪರಿವೆಯೇ ಇರದು.
ಹಳ್ಳಿಯಲ್ಲಿ ಬಾಲ್ಯ ಕಳೆದವರಿಗೆ ಇದೆಲ್ಲ ಹೊಸತೇನಲ್ಲ. ನಗರದ ವ್ಯಾಮೋಹದಲ್ಲಿ, ಬೆಳಕಿನೆಡೆ ಸಾಗುವ ಧಾವಂತದಲ್ಲಿ ಕತ್ತಲಿನ ಈ ಸಣ್ಣ ಸಣ್ಣ ಖುಷಿಗಳನ್ನು ಮರೆತಿದ್ದೇವಷ್ಟೇ. ಚಿಕ್ಕಂದಿನಲ್ಲಿ ದಾರಿ ತಪ್ಪಿ ಮನೆಯೊಳಗೆ ಬಂದ ಮಿಂಚುಹುಳುವನ್ನು ಕೈಯ್ಯೊಳಗೆ ಹಿಡಿದುಕೊಂಡು ನಕ್ಷತ್ರವೇ ಕೈ ಸೇರಿದಂತೆ ಸಂಭ್ರಮಿಸುತ್ತಿದ್ದೆವಲ್ಲಾ, ಈಗ ಆ ಖುಷಿ ದೊರೆಯುವುದಾದರೂ ಹೇಗೆ? ಈ ಕತ್ತಲ ಕೋಟೆಯನ್ನು ತೋರಿಸಿಯೇ ಅಲ್ಲವೇ? 'ಊಟ ಮಾಡಿಲ್ಲ ಅಂದ್ರೆ ಗುಮ್ಮ ಬಂದು ಹೊತ್ಕಂಡ್ ಹೋಗುತ್ತೆ' ಅಂತ ಅಮ್ಮ ಹೆದರಿಸುತ್ತಿದ್ದಿದ್ದು, ಆ ಕತ್ತಲಲ್ಲಿ ಮುಗಿಲೆತ್ತರಕ್ಕೆ ಬೆಳೆದು ನಿಂತಿದ್ದ ಮರಗಿಡಗಳು ಗುಮ್ಮನ ಆಕಾರ ತಾಳಿ ನಮ್ಮ ಅಳು ನಿಲ್ಲುವಂತೆ ಮಾಡುತ್ತಿದ್ದುದು ಸುಳ್ಳಲ್ಲ. ಬರೀ ಚಿಕ್ಕವರನ್ನು ಹೆದರಿಸುವ ಗುಮ್ಮನಷ್ಟೇ ಅಲ್ಲ, ದೊಡ್ಡವರನ್ನು ನಡುಗಿಸುವ ಹುಣಸೆಮರದ ಬ್ರಹ್ಮರಾಕ್ಷಸ, ಕೊಳ್ಳಿದೆವ್ವಗಳಿಗೂ ಈ ಕತ್ತಲ ಕೂಪವೇ ತವರಾಗಿತ್ತು.
ಇನ್ನು ನಕ್ಷತ್ರ ವೀಕ್ಷಣೆಯ ವಿಷಯಕ್ಕೆ ಬಂದರಂತೂ ನಗರದ ಬೆಳಕಲ್ಲಿ ಮಸುಕಾಗಿ ಮಂಕಾಗಿ ಕುಳಿತಿದ್ದ ಚುಕ್ಕಿಗಳೆಲ್ಲ ಇಲ್ಲಿ ಸಂತೋಷದಿಂದ ಮಿನುಗುತ್ತಾ ಕಣ್ಸೆಳೆಯುತ್ತಿರುತ್ತವೆ. ಅವನ್ನು ನೋಡುತ್ತಾ ಮೈಮರೆಯಲು ನಾವು ಖಗೋಳ ವಿಜ್ಞಾನಿಯಾಗಬೇಕೆಂದಿಲ್ಲ ಅಥವಾ ಕವಿಯಾಗಬೇಕಾಗೂ ಇಲ್ಲ. ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಮನಸ್ಸಿದ್ದರೆ ಸಾಕು, ತಾರೆಗಳ ಅಗಾಧತೆ ನಮ್ಮನ್ನು ವಿಸ್ಮಯಗೊಳಿಸುತ್ತದೆ; ರಾಕೆಟ್ ವೇಗದಲ್ಲಿ ಬೀಳುತ್ತಾ ಒಮ್ಮೆಲೆ ಮಾಯವಾಗುವ ಉಲ್ಕೆ ಮನಸ್ಸನ್ನು ಮುದಗೊಳಿಸುತ್ತದೆ. ಹೀಗೆ ಒಳಗಿನ ಕಣ್ಣು ತೆರೆದರೆ ಕತ್ತಲಲ್ಲಿ ಕಾಣುವ ದೃಶ್ಯಗಳು ಒಂದೆರಡಲ್ಲ. ಆದರೆ ಬೆಳಕಿನೆಡೆಗಿನ ಪಯಣದಲ್ಲಿ ನಾವು ಮತ್ತೆ ಹಿಂದಿರುಗಲಾರದಷ್ಟು ದೂರ ಬಂದುಬಿಟ್ಟಿದ್ದೇವೆ. ಎಲ್ಲವನ್ನೂ ಬದಲಿಸುವುದು ಸಾಧ್ಯವಿಲ್ಲವಾದರೂ ನಮ್ಮ ಇತಿಮಿತಿಯಲ್ಲಿ ಕೃತಕ ದೀಪಗಳ ಬಳಕೆ ಕಡಿಮೆ ಮಾಡಿ ಬೆಳಕಿನ ಅನವಶ್ಯ ಸೋರಿಕೆಯನ್ನು ತಡೆಗಟ್ಟಬಹುದಲ್ಲವೆ? ನಮ್ಮ ಮುಂದಿನ ಪೀಳಿಗೆಗೆ ಹಗಲು ಮತ್ತು ರಾತ್ರಿಯ ನಡುವೆ ಕನಿಷ್ಠ ವ್ಯತ್ಯಾಸವಾದರೂ ಗೋಚರಿಸಬೇಕಲ್ಲವೆ?
= ಮಧುಸೂದನ ರಾವ್
madhusudan.srg@gmail.com