ಅಭಿವೃದ್ಧಿಯ ಹರಿಕಾರನಾಗಿ ಕಂಗೊಳಿಸುತ್ತಿರುವ ನರೇಂದ್ರ ಮೋದಿಯವರನ್ನು ಮುಂದಿಟ್ಟುಕೊಂಡ ಬಿಜೆಪಿ ಈ ಬಾರಿ ರಾಮ ಮಂದಿರ ನಿರ್ಮಾಣ ವಿಚಾರವನ್ನು ಪ್ರಸ್ತಾಪಿಸಲಾರದು ಎಂದೇ ಬಹುತೇಕರು ತರ್ಕಿಸಿದ್ದರು. ಆದರೆ ಹಾಗಾಗಲಿಲ್ಲ. ತನ್ನ ಪ್ರಣಾಳಿಕೆಯಲ್ಲಿ ಅದು 'ಸಂವಿಧಾನದ ಸಾಧ್ಯತೆಗಳನ್ನು ಬಳಸಿಕೊಂಡು' ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವುದಾಗಿ ಘೋಷಿಸಿದೆ. ಆಡ್ವಾಣಿಯವರ ಕನಸು ಮೋದಿಯವರ ನಿದ್ರೆಯಲ್ಲೂ ಪ್ರತ್ಯಕ್ಷವಾಗಿದೆ. ಇದೇ ಸಮಯಕ್ಕೆ ಸರಿಯಾಗಿ 'ಕೋಬ್ರಾಪೋಸ್ಟ್' ಪತ್ರಿಕೆ ಬಾಬರಿ ಮಸೀದಿ ಧ್ವಂಸದ ಕುರಿತ ಸ್ಟಿಂಗ್ ವರದಿ ಪ್ರಕಟಿಸಿದೆ. ಭೂತವು ಹೊಸ ರೂಪದಲ್ಲಿ ಹೀಗೆ ವರ್ತಮಾನವಾಗುವುದು ರಾಜಕೀಯದಲ್ಲಿ ಇದ್ದದ್ದೇ.
1956ರಲ್ಲೇ ಹಿರಿಯ ಸಮಾಜವಾದಿ ಮುತ್ಸದ್ಧಿ ರಾಮಮನೋಹರ ಲೋಹಿಯಾ 'ರಾಮ, ಕೃಷ್ಣ, ಶಿವ' ಎಂಬ ಲೇಖನ ಬರೆದಿದ್ದರು. ಲೋಹಿಯಾ ಹುಟ್ಟೂರು ಫೈಜಾಬಾದ್, ಅಯೋಧ್ಯೆಗೆ ಕೂಗಳತೆಯಲ್ಲಿದೆ. ಒಮ್ಮೆ ಅವರು ಅಯೋಧ್ಯೆಯ ಹತ್ತಿರ 'ರಾಮಾಯಣ ಮೇಳ'ವನ್ನೂ ಆಯೋಜಿಸಿದ್ದರು. ತಮ್ಮ ಪ್ರಸಿದ್ಧ ಲೇಖನದಲ್ಲಿ ಅವರು ಪ್ರತಿಪಾದಿಸಿದಂತೆ ಶ್ರೀರಾಮ 'ಘನತೆಯ ಪ್ರತಿರೂಪ'. ಈ ಮೂವರೂ ಐತಿಹಾಸಿಕ ವ್ಯಕ್ತಿಗಳಿದ್ದಿರಬಹುದು. ಆದರೆ, ಸಮುದಾಯವೊಂದರ ಆಸೆ ಕನಸು ಕಲ್ಪನೆಗಳು ಆದರ್ಶ ರೂಪ ಪಡೆದು ಪುರಾಣಗಳ ಪಾತ್ರವಾಗುವ ಸಾಧ್ಯತೆಯೇ ಹೆಚ್ಚು. ರಾಮ, ಶಿವ, ಕೃಷ್ಣರು ಕ್ರಮವಾಗಿ ಕ್ಷತ್ರಿಯ, ಶೂದ್ರ, ವೈಶ್ಯ ತತ್ವಗಳ ರೂಪಕಗಳು. ಇವರ ಮೈಬಣ್ಣವೂ ನಮ್ಮ ಜಾತಿ ವರ್ಗಗಳ ವೈವಿಧ್ಯವನ್ನು ಬಿಂಬಿಸುವಂತೆಯೇ ಇದೆ. ಇಂದು ಲೋಹಿಯಾರ ಈ ಲೇಖನವನ್ನು ಸಮಾಜ ಚಿಂತನೆಯೊಂದರ 'ಕ್ಲಾಸಿಕ್' ಎಂಬಂತೆ ಪರಿಗಣಿಸಲಾಗುತ್ತದೆ.
ಭಾರತದ ರಾಜಕಾರಣದಲ್ಲಿ ರಾಮನನ್ನು ಮೊದಲಿಗೆ ಹೀಗೆ ತಂದವರು ಲೋಹಿಯಾ ಎನ್ನಬಹುದೆ? ಅವರೇನೂ ಆಗ ಕಾಂಗ್ರೆಸ್‌ನಲ್ಲಿರಲಿಲ್ಲ. ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯಲ್ಲಿದ್ದರು. ಆದರೆ ರಾಮನನ್ನು ಹೋರಾಟದ ಹಾದಿಗೆ ಹಚ್ಚಿದ ಹೆಗ್ಗಳಿಕೆ ನಮ್ಮ ರಾಷ್ಟ್ರಪಿತನಿಗೇ ಸಲ್ಲಬೇಕಲ್ಲವೆ? ಅವರು 'ರಘುಪತಿ ರಾಘವ ರಾಜಾರಾಮ್' ಎಂದು ಭಜನೆ ಉರುಹಚ್ಚಿಸದಿದ್ದರೆ ಸ್ವಾತಂತ್ರ್ಯ ಹೋರಾಟಕ್ಕೆ ಅಷ್ಟೊಂದು ಅಲೌಕಿಕ ಆಯಾಮ ಸೇರಿಕೊಳ್ಳುತ್ತಿತ್ತಾದರೂ ಹೇಗೆ? ಸ್ವಾತಂತ್ರ್ಯ ಹೋರಾಟವೆಂಬುದು ಬರೀ ಐಹಿಕವಲ್ಲ, ದೈವಿಕ ಮತ್ತು ಆಧ್ಯಾತ್ಮಿಕ ಅರ್ಥಗಳನ್ನುಳ್ಳದ್ದು ಎಂದು ಪ್ರತಿಪಾದಿಸಿ ಇಡೀ ದೇಶಕ್ಕೇ 'ಮಂಕು ಬೂದಿ ಎರಚಿದ' ಆ ಮಹಾತ್ಮ ರಾಜಕಾರಣಿಯಲ್ಲವೆಂದು ಹೇಗೆ ಹೇಳೋಣ?
ಹೀಗೆ ತಣ್ಣಗಿದ್ದ ರಾಮನನ್ನು, ಕಾಲು ಶತಮಾನದ ಕೆಳಗೆ ಕೈಗೆತ್ತಿಕೊಂಡ ಬಿಜೆಪಿ, ಹಿಡಿದರೆ ಸುಡುವ ಬೆಂಕಿಯ ಉಂಡೆಯಾಗುವಂತೆ ಮಾಡಿತು. ಲಾಲ್‌ಕೃಷ್ಣ ಆಡ್ವಾಣಿ ದೇಶಾದ್ಯಂತ ರಥಯಾತ್ರೆ ನಡೆಸಿ, ಪ್ರತಿ ಊರಲ್ಲೂ ಒಂದೊಂದು ಅಯೋಧ್ಯೆ ಸೃಷ್ಟಿಸಿದರು. 1992ರ ಡಿಸೆಂಬರ್‌ನಲ್ಲಿ ನಡೆದ ಕರಸೇವೆಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ಈಗ ಮತ್ತೆ ಚುನಾವಣೆಯ ಸಮಯದಲ್ಲಿ ಆ ಕುರಿತು 'ಕೋಬ್ರಾಪೋಸ್ಟ್' ಜಾಲಪತ್ರಿಕೆ ಕುಟುಕು ವರದಿ ಮಾಡಿದೆ.
ಚುನಾವಣೆಯ ವೇಳೆಯೇ ಹೀಗೆ ಕುಟುಕಿಸಿದವರು ಕಾಂಗೈಯವರೇ ಇರಬೇಕು ಎಂಬುದರಲ್ಲಿ ಬಿಜೆಪಿಯವರಿಗೆ ಯಾವ ಅನುಮಾನವೂ ಇಲ್ಲ.
'ಬಾಬರಿ ಮಸೀದಿ ಧ್ವಂಸ' ಎಂಬುದು ಕಾಂಗ್ರೆಸ್ ಪಾಲಿಗೆ ಅಸ್ತ್ರ. ಅದು ಆಗಾಗ ಅದನ್ನು ಬಿಜೆಪಿ ಮೇಲೆ ಪ್ರಯೋಗಿಸುತ್ತಾ ಬಂದಿದೆ. ಈ ಅಸ್ತ್ರಪ್ರಯೋಗಕ್ಕೆ ಅದರದೇ ಆದ ಅವಾರ್ಡುಗಳೂ, ರಿವಾರ್ಡುಗಳೂ ಇವೆ. 1984ರ ಸಿಖ್ ವಿರೋಧಿ ಹತ್ಯಾಕಾಂಡವನ್ನು ಬಿಜೆಪಿ ಆಗಾಗ ಕಾಂಗ್ರೆಸ್ ಮೇಲೆ ಬೀಸುತ್ತಾ ಇರುತ್ತದಲ್ಲ, ಹಾಗೇ ಇದೂ. ಚುನಾವಣೆ ಇಂಥದಕ್ಕೆಲ್ಲ ಸೂಕ್ತ ಸಮಯ.
ಹೀಗೆ ಶ್ರೀರಾಮನನ್ನು ರಾಜಕಾರಣಕ್ಕೆ ಬಳಸುತ್ತಿರುವವರು ಬಿಜೆಪಿ, ಕಾಂಗ್ರೆಸ್‌ನವರು ಮಾತ್ರವೇನೂ ಅಲ್ಲ. ಕೆಲ ವರ್ಷಗಳ ಹಿಂದೆ ಡಿಎಂಕೆಯ ಪರಮನಾಯಕ ಕರುಣಾನಿಧಿ, 'ಶ್ರೀರಾಮ ಕಾಲ್ಪನಿಕ ವ್ಯಕ್ತಿ' ಎಂಬ ಹೇಳಿಕೆ ನೀಡಿದ್ದರು. ಇನ್ನು ಇನ್ನೂರು ವರ್ಷ ಕಳೆದರೆ ತಾನೇ ಕಾಲ್ಪನಿಕ ವ್ಯಕ್ತಿಯಾಗಿಬಿಡುತ್ತೇನೆ ಎಂದು ಅವರಿಗೆ ಗೊತ್ತಿಲ್ಲವೆಂದಲ್ಲ. ಅವರ ಗುರು ಪೆರಿಯಾರ್ ರಾಮಸ್ವಾಮಿ ಹೇಳಿಕೊಟ್ಟದ್ದು ಹಾಗೆ. ಅವರ ದ್ರಾವಿಡ ಚಿಂತನೆಯಲ್ಲಿ ರಾಮನಿಗೆ ಜಾಗವಿಲ್ಲ. ಹಾಗೆಂದು ಅವರು ಸುಮ್ಮನಿರುವುದಿಲ್ಲ, ರಾಮನನ್ನು ನಂಬಿದವರನ್ನು ಆಗಾಗ ಕೆಣಕುತ್ತಾ ಮಜಾ ತೆಗೆದುಕೊಳ್ಳುವುದು ಅವರ ರೀತಿ.
ತುಸು ಲಘುವಾಗಿ ನೋಡುತ್ತ ಹೋದರೆ, ನಮ್ಮ ದೇಶದ ರಾಜಕಾರಣದಲ್ಲಿ ಎಷ್ಟೊಂದು 'ರಾಮ'ರು! ರಾಜಾರಾಮ್ ಮೋಹನರಾಯ್, ಕಾನ್ಷಿರಾಮ್, ಪೆರಿಯಾರ್ ರಾಮಸ್ವಾಮಿ, ಎಂ.ಜಿ.ರಾಮಚಂದ್ರನ್, ರಾಮಮನೋಹರ ಲೋಹಿಯಾ, ರಾಮಕೃಷ್ಣ ಹೆಗಡೆ, ಎನ್.ಟಿ.ರಾಮರಾವ್, ರಾಮ್‌ವಿಲಾಸ್ ಪಾಸ್ವಾನ್, ಸೀತಾರಾಂ ಯೆಚೂರಿ, ಶ್ರೀರಾಮುಲು, ರಾಮದಾಸ್! ರಾಮಾಯಣವನ್ನು ರೂಪಕ ಸ್ಮ ೃತಿಯಾಗಿ ಪಡೆದ ಈ ದೇಶದಲ್ಲಿ ಹಾಗಿರಬೇಕಾದ್ದೇ.
ರಾಮನನ್ನು ಕುರಿತ ಲೇಖನ ನಮ್ಮ ಕವಿ ಗೋಪಾಲಕೃಷ್ಣ ಅಡಿಗರ 'ಶ್ರೀರಾಮ ನವಮಿಯ ದಿವಸ' ಕವಿತೆಯ ಪ್ರಸ್ತಾಪವಿಲ್ಲದೆ ಪೂರ್ತಿಯಾಗಲಾರದು. ಅವರು ಚಿತ್ರಿಸುವ ಶ್ರೀರಾಮ, 'ಹುತ್ತಗಟ್ಟಿದ ಚಿತ್ತ ಕೆತ್ತಿದ ಪುರುಷೋತ್ತಮನ ರೂಪರೇಖೆ'. ಆತ ಕ್ಷಣದಿಂದ ಕ್ಷಣಕ್ಕೆ, ದಿನದಿಂದ ದಿನಕ್ಕೆ ವಿಕಾಸವಾಗುತ್ತ ಹೋಗುವ ಚೇತನ. ಅಲ್ಲಿ 'ಅಂತರಂಗದ ಸುರುಳಿ ಬಿಚ್ಚಿ ಸರ್ಚ್‌ಲೈಟಲ್ಲಿ ಹೆದ್ದಾರಿ ಹಾಸಿದ್ದ ರಾಮಚರಿತ'ವಿದೆ. ಅಂದರೆ, ಪ್ರತಿಯೊಬ್ಬನ ರಾಮನ ಮೂರ್ತಿಯೂ ಅವನವನ ಅಂತರಂಗದಲ್ಲೇ ರೂಪುಗೊಳ್ಳಬೇಕಾದದ್ದು ಎಂಬರ್ಥ.
ಇದರ ಜತೆಗೇ ನಾವು ನಮ್ಮ ಇನ್ನೊಬ್ಬ ಕವಿ ಎಚ್.ಎಸ್.ವೆಂಕಟೇಶಮೂರ್ತಿಯವರು ಕಂಡರಿಸಿದ 'ಶ್ರೀಸಂಸಾರಿ' ರಾಮನನ್ನೂ ನೋಡಬಹುದು. 'ಶ್ರೀರಾಮನು ತಾನೊಬ್ಬನೆ ಎಲ್ಲೂ ಪೂಜೆಗೊಳ್ಳುವುದು ಕಂಡಿಲ್ಲ...' ಅವರ ರಾಮ ಸಂಸಾರಿ. ರಾಮನ ಫ್ಯಾಮಿಲಿಯ ಗ್ರೂಪ್ ಫೋಟೋದಲ್ಲಿ ಸಹೋದರರಿಗೆ, ಹೆಂಡತಿ ಮಕ್ಕಳಿಗೆ, ಆಂಜನೇಯನಿಗೆ, ಕೊನೆಗೆ ಅಳಿಲಿಗೂ ಆತನ ಹೆಗಲಲ್ಲಿ ಜಾಗವಿದೆ.
ಆದರೆ ಬಿಜೆಪಿ, ಡಿಎಂಕೆ, ಕಾಂಗ್ರೆಸ್‌ಗಳು ಪ್ರತಿಪಾದಿಸುವ ರಾಮ, ಅಡಿಗರ ರಾಮನಲ್ಲ. ಆತ ಎಚ್‌ಎಸ್‌ವಿಯವರ ರಾಮನೂ ಅಲ್ಲ. ಆತ ಬಿಲ್ಲು ಬಾಣಗಳನ್ನು ಕೈಯಲ್ಲಿ ಹಿಡಿದು ಶತ್ರುಗಳನ್ನು ಸಂಹರಿಸಲು ಸಿದ್ಧನಾಗಿ ನಿಂತ ಕೋದಂಡರಾಮ. ಆತನ ಪಕ್ಕದಲ್ಲಿ ಸೀತೆಗಾದರೂ ಜಾಗವಿದೆಯೋ ಇಲ್ಲವೋ, ನಮಗೆ ತಿಳಿಯದು. ಮೋದಿಯವರ ಕನಸು ನನಸಾಗಿ, ಅಯೋಧ್ಯೆಯಲ್ಲಿ ರಾಮಮಂದಿರ ಸ್ಥಾಪನೆಗೊಂಡರೆ, ಅದರ ಗರ್ಭಗುಡಿಯಲ್ಲಿ ಅಳಿಲಿಗೂ ಒಂದು ಜಾಗವಿರಲಿ ಎಂದು ನಾವು ಆಶಿಸಬಹುದಷ್ಟೇ.
ಇಪ್ಪತ್ತು ವರ್ಷಗಳ ಹಿಂದೆ ನಮ್ಮ ಹೆಗ್ಗೋಡಿನ ಸುಬ್ಬಣ್ಣನವರೂ ಒಂದು ಲೇಖನ ಬರೆದಿದ್ದರು, 'ಪ್ರತಿಮೆಗಳನ್ನು ಮೂರ್ತಿಗಳನ್ನಾಗಿಸುತ್ತಿದ್ದೇವೆ' ಎಂಬ ಶೀರ್ಷಿಕೆಯದ್ದು. ರಾಮಾಯಣದ ಶ್ರೀರಾಮ, ಭಾಗವತದ ಕೃಷ್ಣ, ಪುರಾಣದ ಶಿವ ಇವರೆಲ್ಲ ಸುಂದರ ರೂಪಕ, ಕಾವ್ಯಾತ್ಮಕ ಪ್ರತಿಮೆಗಳು. ಅವು ಪ್ರತಿಯೊಬ್ಬನ ಅಂತರಾಳದಲ್ಲಿ ಮೂಡಬೇಕಾದ ಅನಾದಿ ಪ್ರತಿಮೆಗಳು. ಅವುಗಳನ್ನು ಅಸಂಬದ್ಧ ಮೂರ್ತಿಗಳನ್ನಾಗಿಸುವ ಕೆಲಸವನ್ನು ನಾವು ರಾಜಕಾರಣಿಗಳಿಗೆ ಕೊಟ್ಟುಬಿಟ್ಟಿದ್ದೇವೆ.
ಹೀಗೆ ಮೂರ್ತೀಕರಣ ಮತ್ತು ರಾಜಕೀಕರಣದ ಪ್ರಕ್ರಿಯೆ ಇಲ್ಲಿಗೇ ನಿಲ್ಲಲಾರದು ಎಂಬುದೂ ನಮಗೆ ಗೊತ್ತು. ಗಣೇಶೋತ್ಸವದ ಇಂದಿನ ರೂಪ ಹೀಗಾಗುತ್ತದೆಂದು ಅದನ್ನು ಆರಂಭಿಸಿದ ಬಾಲಗಂಗಾಧರ ತಿಲಕರಿಗೆ ಗೊತ್ತಿತ್ತೆ? ಶ್ರೀರಾಮನ ರಥವನ್ನು ಹೊರಳಿಸಿಬಿಟ್ಟರೆ ಅದು ಮುಂದೆಂದೂ ನಿಲ್ಲಲಾರದೆಂದು ಆಡ್ವಾಣಿಯವರಿಗೂ ತಿಳಿದಿತ್ತೋ ಇಲ್ಲವೋ. ಈಗ ನಮಗೆ ಗೊತ್ತಾಗಿದೆ- ಈ ಬೃಹತ್ ರಥದ ಗಾಲಿಗಳು ನಿಲ್ಲುವಂಥವಲ್ಲ, ನಮ್ಮನ್ನೆಲ್ಲ ನುಗ್ಗುನುರಿ ಮಾಡದೆ ಹೋಗುವುದಿಲ್ಲ ಎಂದು. ಆದರೆ ಅದನ್ನು ನಿಲ್ಲಿಸಲಾರೆವು. ಯಾಕೆಂದರೆ, ಜಾತಿ ಧರ್ಮ ವರ್ಗಗಳಿಂದ ವಿಚ್ಛಿದ್ರವಾಗಿರುವ ಈ ದೇಶದಲ್ಲಿ, ಅದನ್ನು ನಿಲ್ಲಿಸಲು ಬೇಕಾದ ಬ್ರೇಕುಗಳೇ ಇಲ್ಲ. ಬೇಕಿದ್ದರೆ 'ಶ್ರೀರಾಮ್'ಗೆ ಎದುರಾಗಿ 'ಹೇರಾಮ್'ನನ್ನು ಬಳಸಿ ನೋಡಬಹುದೋ ಏನೋ!
ಮತ್ತೆ ಅಡಿಗರ ಪದ್ಯಕ್ಕೆ ಬರುವುದಾದರೆ:
'ಅಥವಾ ಚಕ್ರಾರಪಂಕ್ತಿ: ಚಕಮಕಿ ಕಲ್ಲನುಜ್ಜುತ್ತ
ಕೂತುಕೊಂಡಿದ್ದೇನೆ ಕತ್ತಲೊಳಗೆ,
ಪನಿವಾರ ತಿಂದು ಪಾನಕ ಕುಡಿದು ನೋನುತ್ತ
ಸ್ಫೋಟಕ್ಕೆ ಕಾದು ಕಿವಿ ಕಂಪಿಸುತ್ತ'.
= ಹರೀಶ್ ಕೇರ
harishkera@gmail.com