ಖುಷಿ

ವಿಮಾನವೇರಿ ವಿದೇಶಕ್ಕೆ ಹೋದ ಕೊಳ್ಳಿದೆವ್ವ!

ಸಿಂಗಾಪುರಕ್ಕೆ ಬಂದು ಹದಿನೈದು ದಿನ ಕಳೆದಿತ್ತಷ್ಟೆ. ಹೊಸ ಪ್ರದೇಶವಾದ್ದರಿಂದ ಮನೆ ಬಿಟ್ಟು ಬೇರೆಲ್ಲೂ ಹೋಗಿರಲಿಲ್ಲ. ಅಲ್ಲದೆ ನಮ್ಮ ಪರಿಚಯದವರೂ ಯಾರೂ ಇರಲಿಲ್ಲ. ಅಕ್ಕಪಕ್ಕದ ಮನೆಯವರೊಡನೆ ಗೆಳೆತನಕ್ಕೆ ಪ್ರಯತ್ನಿಸಿದ್ದೆ. ಆದ್ರೆ ಅವರ್ಯಾರಿಗೂ ಚೀನಿ ಭಾಷೆ ಬಿಟ್ಟು ಬೇರೆ ಬರದ ಕಾರಣ ನನ್ನ ಪ್ರಯತ್ನ ಅಲ್ಲಿಗೇ ನಿಂತಿತು. ಒಂದು ಶನಿವಾರ ತಡರಾತ್ರಿಯ ತನಕ ಟಿವಿ ನೋಡುತ್ತಾ ಹಾಲ್‌ನಲ್ಲೇ ಮಲಗಿದ್ದೆವು. ಭಾನುವಾರ ಆಫೀಸಿಗೆ ರಜೆ ಇದ್ದ ಕಾರಣ ತಡವಾಗಿ ಎದ್ದರೆ, ಮನೆಯ ತುಂಬಾ ಹೊಗೆ ಆವರಿಸಿಕೊಂಡಿತ್ತು. ಒಂದು ಕ್ಷಣದ ಮಟ್ಟಿಗೆ ಗಾಬರಿಯಾದರೂ ಬುದ್ಧಿ ಸ್ಥಿಮಿತಕ್ಕೆ ತಂದುಕೊಂಡು ಬಹುಶಃ ಶಾರ್ಟ್ ಸರ್ಕ್ಯೂಟ್ ಆಗಿರಬೇಕೆಂದು ಮನೆಯೆಲ್ಲ ಹುಡುಕಿದೆವು. ಅದರೆ ಅಂಥ ಅನಾಹುತವೇನೂ ಸಂಭವಿಸಿರಲಿಲ್ಲ.
ತಂಪು ಗಾಳಿ ಬರಲೆಂದು ರಾತ್ರಿ ಕಿಟಕಿ ತೆರೆದು ಮಲಗಿದ್ದೆವು. ಕಿಟಕಿಯ ಮೂಲಕ ಹೊಗೆ ಒಳಬರುತ್ತಿತ್ತು. ರಾತ್ರಿ ಹೊರ ಚಿತ್ರ ನೋಡಿ ಮಲಗಿದ್ದ ನಾನು, ಇದು ಕೊಳ್ಳಿ ದೆವ್ವದ್ದೇ ಕೆಲಸ. ಬಹುಶಃ ದೆವ್ವಗಳು ನಮ್ಮ ಜೊತೆ ವಿಮಾನದ ಮೇಲೆ ಕುಳಿತು ಇಲ್ಲಿಗೆ ಬಂದಿರಬೇಕೆಂದು ಹೇಳಿ ಗಂಡನಿಂದ ಬೈಸಿಕೊಂಡೆ. ಬಾಗಿಲು ತೆರೆದು ನೋಡಿದರೆ ಒಂದು ಸಣ್ಣ ಕಬ್ಬಿಣದ ಡಬ್ಬಿಯಲ್ಲಿ ಕಾಗದಕ್ಕೆ ಬೆಂಕಿ ಹಚ್ಚಿ ಮನೆ ಎದುರು ಇಟ್ಟಿದ್ದರು. ಕಾಗದ ಸುಟ್ಟು ಹೊಗೆ ಮನೆಯೊಳಗೆ ಬರುತ್ತಿತ್ತು. ಹತ್ತಿರದಲ್ಲಿ ಯಾರೂ ಕಾಣಲಿಲ್ಲ. ಪಕ್ಕದ ಮನೆ ಬಾಗಿಲು ಮುಚ್ಚಿತ್ತು. ನಮ್ಮನ್ನು ಹೆದರಿಸಲು ಯಾರೋ ಹೀಗೆ ಮಾಡಿರಬೇಕೆಂದು ತಿಳಿದು, ಡಬ್ಬಿಗೆ ನೀರು ಸುರಿದು ಮನೆಯ ಒಳಗೆ ತಂದಿಟ್ಟುಕೊಂಡೆವು.
ಬೇರೆ ಕೆಲಸಗಳು ಹಿಂದೆ ಬಿದ್ದಿದ್ದರಿಂದ ಆ ವಿಷಯವನ್ನು ಅಲ್ಲಿಗೇ ಮರೆತು ಮನೆಗೆಲಸದಲ್ಲಿ ತೊಡಗಿದೆವು. ಊರಲ್ಲಿದ್ದ ಹಾಗೆ ಮನೆಗೆಲಸಕ್ಕೆ ಆಳುಗಳಿಲ್ಲ. ಗಂಟೆಯ ಲೆಕ್ಕದಲ್ಲಿ ಸಂಬಳ ನೀಡಿ ಪೂರೈಸುವುದು ಆಗದ ಮಾತು. ಅಲ್ಲದೆ ಮನೆ ಪರೀಕ್ಷೆ ಮಾಡಲು ಅಧಿಕಾರಿಗಳು ಅನಿರೀಕ್ಷಿತವಾಗಿ ಭೇಟಿ ಕೊಡುತ್ತಾರೆ. ಬಚ್ಚಲಮನೆಯ ಬಕೆಟ್, ಅಡುಗೆಮನೆಯ ಸಿಂಕ್‌ನಲ್ಲಿ ಸ್ವಲ್ಪವೇ ನೀರಿದ್ದರೂ ದಂಡ ತಪ್ಪಿದ್ದಲ್ಲ. ಸೊಳ್ಳೆ ಇನ್ನಿತರ ಕೀಟಗಳ ಸಂತಾನಾಭಿವೃದ್ಧಿ ತಡೆಯಲು ಈ ಕ್ರಮ ಕೈಗೊಳ್ಳುತ್ತಾರೆ. ಹೀಗಾಗಿ ಕ್ಲೀನ್ ಮಾಡುವುದರಲ್ಲೇ ದಿನವೊಂದು ಮುಗಿದು ಹೋಗುತ್ತದೆ.
ಸಂಜೆಯ ಚಹಾದ ನಂತರ ಮನೆಯ ಹತ್ತಿರವೇ ಹೊರಗೆ ಸುತ್ತಾಡಲು ಹೊರಟೆವು. ಅಲ್ಲಿ ಒಂದೆರಡು ಮರಗಳ ಕೆಳಗೆ ಅನಾನಸ್, ಕಿತ್ತಳೆ ಹಣ್ಣು ಮತ್ತು ವಿವಿಧ ಬಗೆಯ ಬಣ್ಣ ಬಣ್ಣದ ಬನ್‌ಗಳನ್ನು ಇಟ್ಟಿದರು. ನನಗ್ಯಾಕೋ ಊರಲ್ಲಿ ಮಾಟ ಮಂತ್ರದ ಲಿಂಬುವಿನ ನೆನಪಾಗಿ ಹೆದರಿಕೆಯಾಯಿತು. ಸ್ವಲ್ಪ ಮುಂದೆ ಹೋದರೆ ನೆಲದ ಮೇಲೆ ಸಾಲಾಗಿ ಊದುಬತ್ತಿ, ಮೇಣದಬತ್ತಿ ಒಂದರ ಹಿಂದೆ ಒಂದು ಹಚ್ಚಿದ್ದು ಕಂಡಿತು. ಅಲ್ಲೇ ಸನಿಹದಲ್ಲಿ ಒಂದಷ್ಟು ಜನ ಡ್ರಮ್ಮೊಂದರಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಗದವನ್ನು ಅಗ್ನಿಗೆ ಅರ್ಪಿಸುತ್ತಿದ್ದರು.
ಯಾರನ್ನಾದರೂ ಕೇಳೋಣವೆಂದು ಹುಡುಕುತ್ತಿರುವಾಗ ನಮಗೆ ಮನೆ ದೊರಕಿಸಿಕೊಟ್ಟ ಏಜೆಂಟ್ ಸಿಕ್ಕಿದ. ಅವನ ಮಾತಿನಲ್ಲೇ ವಿವರಿಸುವುದಾದರೆ, 'ಇದು ಚೀನೀಬೌದ್ಧ ಧರ್ಮೀಯರ ಒಂದು ಪ್ರಾರ್ಥನಾ ವಿಧಾನ. ಮರಣ ಹೊಂದಿದ ಹಿರಿಯರನ್ನು ನೆನಪಿಸಿಕೊಳ್ಳುತ್ತಾ ಊದುಬತ್ತಿ ಹಚ್ಚುತ್ತಾರೆ. ಹೊಗೆಯ ಮೂಲಕ ನಮ್ಮ ಸಂದೇಶಗಳು ಅವರನ್ನು ತಲುಪುತ್ತವೆ ಎಂಬುದು ಅವರ ನಂಬಿಕೆ. ಬಂಗಾರ, ಬೆಳ್ಳಿ, ದುಡ್ಡು ಎಂದು ಬರೆದ ಬಣ್ಣ ಬಣ್ಣದ ಕಾಗದ ಸುಡುತ್ತಾರೆ. ರಸ್ತೆಯ ತುಂಬೆಲ್ಲ ಕಸ ಹರಡಬಾರದೆಂದು ಡ್ರಮ್ಮಿನಲ್ಲಿ ಸುಡುತ್ತಾರೆ. ಮೇಲಂತಸ್ತಿನ ಮನೆಗಳಲ್ಲಿ ವಾಸಿಸುವವರು ತಮ್ಮ ಮನೆಯಲ್ಲಿ ಸಣ್ಣ ಡಬ್ಬಿಯನ್ನು ಇಟ್ಟುಕೊಳ್ಳುತ್ತಾರೆ.'
ಅಲ್ಲಿಗೆ ನಮಗೆ ನಮ್ಮ ಕೊಳ್ಳಿದೆವ್ವದ ಸತ್ಯ ಗೊತ್ತಾಗಿತ್ತು!

-ಡಾ. ಕೀರ್ತಿ ಶೆಟ್ಟಿ, ಕೌಲಾಲಂಪುರ
keertiskk@yahoo.co.in

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

ಮಗು ಆಡಿಸುತ್ತಿದ್ದ ವ್ಯಕ್ತಿ ಮೇಲೆ ಗೂಳಿ ದಾಳಿ; ರಕ್ಷಣೆಗೆ ಧಾವಿಸಿದ ಮಹಿಳೆ, Video ವೈರಲ್

'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!