ಆನೆ ಮನೆ
ಮಾನವಶಾಸ್ತ್ರದಿಂದ ಪ್ರಾಣಿಶಾಸ್ತ್ರ!
ಪ್ರಜ್ಞಾ ಓದಿದ್ದು ಮಾನವಶಾಸ್ತ್ರವಾದ್ರೂ ಪ್ರೀತಿ ಹುಟ್ಟಿದ್ದು ಮಾತ್ರ ಪ್ರಾಣಿಗಳ ಮೇಲೆ. ಯೆಸ್, ಇಟ್ ವಾಸ್ ಅ ಲವ್ ಅಟ್ ಫಸ್ಟ್ ಸೈಟ್. ಅದೊಂದು ದಿನ ಪ್ರಜ್ಞಾ ಚೌಟ ತನ್ನ ಪತಿ ಫಿಲಿಪ್ ಜೊತೆ ಜೀಪ್ನಲ್ಲಿ ಹೋಗ್ತಿದ್ರು. ದಾರಿಯಲ್ಲಿ ನದಿಯ ದಡದಲ್ಲಿ ಆನೆಯೊಂದನ್ನು ಕೆಲವು ಸ್ಥಳೀಯ ಮಾವುತರು ಮಲಗಿಸಿ ತೊಳೆಯುತಿದ್ರು. ಅದನ್ನು ನೋಡಿದ್ದೇ ಅದೇನು ಉಮೇದು ಬಂತೋ, ಇಬ್ಬರೂ ಜೀಪು ನಿಲ್ಲಿಸಿ, ಪ್ಯಾಂಟ್ ಮೇಲೆ ಎತ್ತಿ ಮಡಚಿ ತಾವೂ ಆನೆ ತೊಳೆಯಲು ಶುರುವಿಟ್ಟುಕೊಂಡ್ರು. ಅರ್ಧ ಗಂಟೆ ಕಳೆವಷ್ಟರಲ್ಲಿ ಆ ಖುಷಿಯ ದಿವ್ಯ ಅನುಭವವಾಗಿತ್ತು. ಮಾಡಿದ್ರೆ ಇದೇ ಕೆಲಸ ಮಾಡಬೇಕು ಎಂದೆನಿಸಿಬಿಟ್ಟಿತ್ತು. ಆ ಕ್ಷಣವೇ ನಿರ್ಧಾರ ಮಾಡಿಬಿಟ್ರು, ಸಾಕಿದ್ರೆ ಆನೆಯನ್ನೇ ಸಾಕಬೇಕು ಅಂತ. ಪ್ರಜ್ಞಾ ಹೇಳುವಂತೆ ಅದೊಂದು ಬೆಳಕಿನ ಕ್ಷಣ ಅವರ ಬದುಕು ಬದಲಿಸಿತ್ತು. ದಿಟ್ಟ ಮನಸ್ಥೈರ್ಯದ ಈ ಸಾಹಸಿ ಮಹಿಳೆಯನ್ನು ಗುರುತಿಸಿ ಇದೀಗ ಸುವರ್ಣ ನ್ಯೂಸ್ -ಕನ್ನಡಪ್ರಭ ಗ್ರೂಪ್ ಪ್ರಜ್ಞಾರಿಗೆ ಸುವರ್ಣ ಮಹಿಳೆ ವಿಶೇಷ ಪ್ರಶಸ್ತಿ ಕೊಟ್ಟು ಗೌರವಿಸಿದೆ.
ಹೆಸರಿಗೆ ಆನೆ ಮನೆ ಎಂಬುದಿದ್ರೂ ಇಲ್ಲಿ ಮನೆ ಎಂದೇನೂ ಇಲ್ಲ. ನಟ್ಟು ಬೋಲ್ಟು ಹಾಕಿ ಜೋಡಿಸಿದ ಮರದ ರಿಪೀಸುಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸಿಟ್ಟು ಬಂದಾಗ ಆನೆಗಳು ಒಮ್ಮೆ ದೂಕಿದರೂ ಸಾಕು, ಈ ಮನೆ ಬಿದ್ದು ಹೋಗುತ್ತದೆ. ಎಷ್ಟೋ ಬಾರಿ ಹಾಗಾಗಿದ್ದೂ ಇದೆ. ನಾಲ್ಕಾರು ಪಾತ್ರೆಗಳಿರುವ ಅಡುಗೆ ಮನೆಯಲ್ಲಿ ಮಾವುತರೆಲ್ಲರಿಗೂ ಪ್ರವೇಶವಿದೆ. ಅವರ ಊಟವೂ ಅಲ್ಲಿಯೇ. ಬೇಸರವಾದಾಗ ಮಾವುತರ ಸಂಸಾರದ ಜೊತೆ ಆಡುವ ಕೇರಂ ಇವರ ಅತಿ ದೊಡ್ಡ ಮನರಂಜನೆ. ಬಿಸಿಲು, ಚಳಿ, ಮಳೆ ಎಲ್ಲವೂ ಇವರಿಗೆ ಬಯಲಿನಲ್ಲಿ ನಿಂತಷ್ಟೇ ಸ್ಪಷ್ಟ. ಮಳೆ ಬಂದರಂತೂ ಕಾಡಿನ ಹಾದಿ ಕೆಸರಗದ್ದೆಯಾಗಿ ಜಿಪ್ಸಿಯೂ ಸಾಗದೆ, ತಿಂಗಳುಗಟ್ಟಲೆ ಹೊರಪ್ರಪಂಚದ ಸಂಪರ್ಕವೇ ಕಡಿತಗೊಳ್ಳುತ್ತದೆ. ಈ ಎಲ್ಲ 'ಇಲ್ಲ'ಗಳ ನಡುವೆಯೇ ಪ್ರಜ್ಞಾ ಬದುಕಿನಲ್ಲಿ ಖುಷಿ ಇದೆ. ನೆಮ್ಮದಿ ಇದೆ.
ಆನೆಗಳನ್ನು ಆನೆಗಳಂತೆ ಕಾಡಲ್ಲಿ ಸ್ವಚ್ಛಂದವಾಗಿ ಬಿಡುವುದು ಪ್ರಜ್ಞಾ ಅವರ ಪದ್ಧತಿ. ಪ್ರಜ್ಞಾ ಅದೇ ಕಾಡಿನ ಕೆಲ ಬುಡಕಟ್ಟಿನ ಜನರಿಗೆ ತರಬೇತಿ ಕೊಟ್ಟು ಮಾವುತರನ್ನಾಗಿಸಿದ್ದಾರೆ. ಅವರು ಬೆಳಗಿನ ಹೊತ್ತು ಈ ಆನೆಗಳಿಗೆ ತಿನ್ನುವುದಕ್ಕೆ ಕೊಟ್ಟು, ನೀರು ಕುಡಿಸಿಬಿಟ್ಟರೆ ಮುಗಿಯಿತು. ಅನಂತರ ಮಕ್ಕಳನ್ನು ಶಾಲೆಗೆ ಬಿಟ್ಟು ಬರುವಂತೆ ಈ ಐದೂ ಆನೆಗಳನ್ನು ಕಾಡಿಗೆ ಬಿಡಲಾಗುತ್ತದೆ. ಈ ಆನೆಗಳೂ ಅಷ್ಟೇ, ವಿಧೇಯ ಮಕ್ಕಳಂತೆ ಮತ್ತೆ ಮಾರನೇ ದಿನ ಬೆಳಗಿನ ಜಾವ ಪ್ರಜ್ಞಾ ಅವರ 'ಆನೆಮನೆ'ಯ ಮುಂದೆ ಪ್ರತ್ಯಕ್ಷವಾಗ್ತವೆ. ಕೆಲವೊಮ್ಮೆ ಕಾಡಿನಿಂದ ಬರುವ ಆನೆಗಳು ತಮ್ಮ ಬಾಯ್ಫ್ರೆಂಡ್ ಅರ್ಥಾತ್ ಕಾಡಾನೆಗಳನ್ನೂ ಜೊತೆಗೆ ಕರೆತರುವುದಿದೆ. ಹಿಂಡು ಹಿಂಡು ಆನೆಗಳು ಮನೆಯ ಮುಂದೆ ನಿಂತಿದ್ರೆ 'ಆನೆಮನೆ'ಯ ಮನುಷ್ಯರೆಲ್ಲ ದೂರ ಓಡಿ ಹೋಗಲೂ ಸಾಧ್ಯವಿಲ್ಲದೆ ನಡುಗುತ್ತಾ ನಿಂತ ನಿದರ್ಶನಗಳಿವೆ.
ಆನೆಗಳ ನಡವಳಿಕೆ ಬಗ್ಗೆ ಅಧ್ಯಯನ ಮಾಡೋದು ಮಾತ್ರವಲ್ಲ, ಅವುಗಳ ಚಲನವಲನಗಳ ಬಗ್ಗೆಯೂ ಪ್ರಜ್ಞಾ ನಿಗಾ ಇಟ್ಟಿದ್ದಾರೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ವಿದ್ಯಾರ್ಥಿಗಳ ಸಹಾಯ ಪಡೆದು ದೇಶದಲ್ಲೇ ಮೊದಲ ಬಾರಿಗೆ ಆನೆಗಳ ಚಲನವಲನ ಅರಿಯಲು ರೇಡಿಯೋ ಕಾಲರ್ ತೊಡಿಸಲಾಗಿದೆ. ಆನೆಗಳು ಎಲ್ಲೇ ಹೋದ್ರೂ ಜಿಪಿಎಸ್ ಮೂಲಕ ಪ್ರತಿ ಕ್ಷಣದ ಮಾಹಿತಿ ಇಂಟರ್ನೆಟ್ನಲ್ಲಿ ಪಡೆದುಕೊಳ್ಳಬಹುದು. ಪ್ರತಿ ಎರಡು ಗಂಟೆಗೊಮ್ಮೆ ಅವರ ಮೊಬೈಲ್ಗೆ ರಿಪೋರ್ಟ್ ಬರುವ ಸಾಫ್ಟ್ವೇರ್ ಸಹ ಅಳವಡಿಸಿಕೊಂಡಿದ್ದಾರೆ. ಹಾಗಾಗಿ ಆನೆಗಳು ತಪ್ಪಿಸಿಕೊಂಡಾವೆಂಬ ಭಯ ಇವರಿಗಿಲ್ಲ.
ಕರ್ನಾಟಕದ ಸಕ್ಕರೆಬೈಲು, ದುಬಾರೆ ಸೇರಿದಂತೆ ಆನೆ ಕ್ಯಾಂಪ್ಗಳಲ್ಲಿ ಹೋಗಿ ಇದ್ದು ಅಧ್ಯಯನ ಮಾಡಿದ್ದಾರೆ. ಅರುಣಾಚಲದ ಗಡಿಭಾಗದಲ್ಲಿದ್ದು ಆನೆಗಳ ಪ್ರಾಚೀನ ವಲಸೆ ಮಾರ್ಗವನ್ನು ಪತ್ತೆ ಹಚ್ಚಿದ್ದಾರೆ. ಮ್ಯಾನ್ಮಾರ್ನಿಂದ ವಲಸೆ ಬರುವ ಆನೆಗಳು ಇಲ್ಲಿಯ ಕಾಡಿನಲ್ಲಿ ಹೇಗೆ ಹೊಂದಿಕೊಳ್ಳುತ್ತವೆ ಎನ್ನುವ ಬಗ್ಗೆ ಇವರ ಅಧ್ಯಯನ ಈಗಲೂ ಗಜಪ್ರೇಮಿಗಳಿಗೆ ಮಾರ್ಗದರ್ಶಿ. ಮನುಷ್ಯ ಕೊಡುವ ಸನ್ನೆಗಳನ್ನು, ಭಾಷೆಯನ್ನು ಅರ್ಥಮಾಡಿಕೊಳ್ಳುವ ಆನೆಗಳ ಸಂವೇದನೆ ಬಗ್ಗೆಯೂ ಗಂಭೀರ ಅಧ್ಯಯನ ಮಾಡಿ 'ಎಲಿಫೆಂಟ್ ಕೋಡ್' ಎಂಬ ಪುಸ್ತಕವನ್ನೂ ರಚಿಸಿದ್ದಾರೆ. ಕನ್ನಡದಲ್ಲಿ ಅದು ಗಜಸಂಹಿತೆ ಎಂದು ಪ್ರಕಟವಾಗಿದೆ. ಇಂದು ಸಕ್ಕರೆಬೈಲು, ಮೈಸೂರು ಝೂ, ಮೈಸೂರು ಅರಮನೆ ಸೇರಿದಂತೆ ಹಲವು ಕಡೆ ಆನೆಗಳನ್ನು ನೋಡಿಕೊಳ್ಳುವ ಕೆಲಸದಲ್ಲಿರುವುದು ಇವರಿಂದ ತರಬೇತಾದ ಮಾವುತರೇ!
ಆಧುನಿಕ ಸಮಾಜದ ಎಲ್ಲ ಸುಖಸವಲತ್ತುಗಳ ಅರಿವಿದ್ದೂ, ಖರ್ಚು ಮಾಡಲು ಹಣವಿದ್ದೂ ಅವುಗಳನ್ನು ಬಿಟ್ಟು ಪ್ರಜ್ಞಾ ದಂಪತಿ ಕಾಡಿನತ್ತ ಹೆಜ್ಜೆ ಹಾಕಿದ್ದಾರೆ. ಸುಖ ಅಂದ್ರೆ ಸವಲತ್ತುಗಳಲ್ಲ, ಜೀವನ ಪ್ರೀತಿ ಅನ್ನೋದಕ್ಕೆ ಸಾಕ್ಷಿಯಾಗಿದ್ದಾರೆ.
ಆನೆಮನೆ ಅಡ್ರೆಸ್ಸು
ಮಡಿಕೇರಿ ಬಳಿಯ ಕುಶಾಲನಗರದಿಂದ 26 ಕಿ.ಮೀ. ದೂರದಲ್ಲಿದೆ ದುಬಾರೆ ಅರಣ್ಯ. ಇಲ್ಲಿಯ ಅರಣ್ಯ ಇಲಾಖೆಗೆ ಸೇರಿದ ಆನೆ ಕ್ಯಾಂಪ್ ಜನಪ್ರಿಯ. ಅಲ್ಲಿ ಬೋಟ್ನಲ್ಲಿ ನದಿ ದಾಟಿದ್ರೆ ಆನೆಗಳಿಗೆ ತರಬೇತಿ ಕೊಡುವ ಶಿಬಿರವಿದೆ. ಸದಾಕಾಲ ಪ್ರವಾಸಿಗರಿಂದ ತುಂಬಿ ತುಳುಕುವ ಸ್ಥಳವಿದು. ಇಲ್ಲಿಂದ ಒಂದೂವರೆ ಕಿ.ಮೀ. ಕಾಡಿನೊಳಗೆ ಸಾಗಿದ್ರೆ 'ಆನೆಮನೆ' ಸಿಗುತ್ತೆ. ಆದ್ರೆ ಪ್ರಜ್ಞಾ ಚೌಟರ ಪೂರ್ವಾನುಮತಿ ಇಲ್ಲದೆ 'ಆನೆಮನೆ'ಗೆ ಹೋಗಲು ಸಾಧ್ಯವಿಲ್ಲ. ನಿಮಗೆ ಅದೃಷ್ಟವಿದ್ರೆ, ಸದಾ ಜನರಿಂದ, ಪ್ರಚಾರದಿಂದ ದೂರವಿರಬಯಸುವ ಪ್ರಜ್ಞಾ ಒಪ್ಪಿದ್ರೆ, ಅವರೇ ಆನೆ ಶಿಬಿರಕ್ಕೆ ಜಿಪ್ಸಿ ತೆಗೆದುಕೊಂಡು ಬಂದು 'ಆನೆಮನೆ'ಗೆ ಕರೆದೊಯ್ಯತ್ತಾರೆ.
ರೇಡಿಯೋ ಕಾಲರ್ ಪರಿಹಾರ
ಇತ್ತೀಚೆಗೆ ಆನೆ ಹಾಗೂ ಮನುಷ್ಯನ ಸಂಘರ್ಷ ಹೆಚ್ಚುತ್ತಿದೆ. ಕಾಡಲ್ಲಿ ಆಹಾರ ಸಿಗದೆ ನಾಡಿಗೆ ನುಗ್ಗಿ ದಾಂಧಲೆ ನಡೆಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅದಕ್ಕೆ ಎಲ್ಲ ಆನೆಗಳಿಗೆ ರೇಡಿಯೋ ಕಾಲರ್ ತೊಡಿಸುವುದು ಉತ್ತಮ ಪರಿಹಾರವಾಗಬಲ್ಲದು ಎನ್ನುವುದು ಪ್ರಜ್ಞಾರ ಅಭಿಪ್ರಾಯ. ಇದರಿಂದ ಆನೆಗಳು ಎಲ್ಲಿ ಹೋಗುತ್ತವೆ, ಬರುತ್ತವೆನ್ನುವ ಖಚಿತ ಮಾಹಿತಿ ಸಿಗುತ್ತದೆ. ಸೂಕ್ತ ಮುನ್ನೆಚ್ಚರಿಕೆ ಸಿಗೋದ್ರಿಂದ ಹಾನಿಯ ಪ್ರಮಾಣ ಕಡಿಮೆ ಮಾಡಬಹುದು.
ಕವರ್ ಸ್ಟೋರಿ
ಲೆಲೆಲೆಲೆಲೆ... ಮೃದುವಾದ ಕೂಗೊಂದು ದುಬಾರೆ ಕಾಡು ಹಾದಿಯಲ್ಲಿ ಕೇಳಿ ಬಂತು. ದಟ್ಟ ಕಾನನದ ಮಧ್ಯ ಹುಲ್ಲು ಮೇಯುತ್ತಿದ್ದ, ಕಾಡಾನೆಗಳ ಜೊತೆ ಸೆಣೆಸುತ್ತಿದ್ದ ಆನೆಗಳ ಕಿವಿ ಒಮ್ಮೆಲೆ ಚುರುಕಾಯ್ತು. ಕೃಷ್ಣನ ಕೊಳಲಗಾನಕೆ ಮರುಳಾಗುವ ಗೋವುಗಳಂತೆ ಆನೆಗಳು ತಲೆದೂಗುತ್ತಾ ಕಾಡಹಾದಿಗೆ ವಾಪಸಾದವು. ಅಲ್ಲಿ 'ಲೆಲೆಲೆ' ಕೂಗು ಹಾಕುತ್ತಿದ್ದ ಯುವತಿ ಅದೇನು ಸನ್ನೆ ಮಾಡಿದಳೋ, ದೈತ್ಯ ಗಾತ್ರದ ಆನೆ ತಲೆತಗ್ಗಿಸಿ, ಕಾಲು ಮಡಚಿ ಆಕೆಯ ಮುಂದೆ ಮೊಣಕಾಲೂರಿತು. ನಿರಾಯಾಸವಾಗಿ ಆನೆ ಹತ್ತಿದ ಯುವತಿ ಅದರ ಮೇಲೆ ಸವಾರಿ ಮಾಡುತ್ತಾ ಮುಂದೆ ಹೋಗುತ್ತಿದ್ರೆ ನಾಲ್ಕೈದು ಆನೆಗಳು ಅವಳ ಹಿಂದೆ ತಲೆ ತಗ್ಗಿಸಿ ಸಾಗುತ್ತಿದ್ದವು...
ಕೇಳಿದ್ರೆ ಯಾವುದೋ ಟಾರ್ಜನ್ ಚಿತ್ರದ ದೃಶ್ಯದಂತಿದೆ. ಅದ್ರೆ ಇದು ಕುಶಾಲನಗರದ ದುಬಾರೆ ಕಾಡಿನೊಳಗಿನ ನಿತ್ಯದ ದೃಶ್ಯ. ಪ್ರಜ್ಞಾ ಚೌಟ ಎಂಬ ಯುವತಿ 'ಆನೆಮನೆ' ಎಂಬ ಆನೆಗಳ ಮನೆಯೊಂದನ್ನು ಕಟ್ಟಿಕೊಂಡು ವಾಸವಾಗಿದ್ದಾರೆ. 'ಆನೆಮನೆ' ಅಂದ್ರೆ ಅದು ಮನೆಯಲ್ಲ, ಕಾಡಿನ ಮಧ್ಯದಲ್ಲಿರುವ ಬಯಲು. ಇಲ್ಲಿ ಮೌನದ ಭಾಷೆಯ ಮುಂದೆ ಮಾತು ಸೋತು ಹೋಗುತ್ತದೆ. ಪ್ರಜ್ಞಾಳ ಕಣ್ಣ ಸನ್ನೆಗೆ, ಕೈ ಸ್ಪರ್ಶಕೆ ದೈತ್ಯ ಆನೆ ಪುಟ್ಟ ಮಗುವಿನಂತೆ ವಿಧೇಯವಾಗಿ ಮಾತು ಕೇಳುತ್ತದೆ. ಮರಿ ಆನೆಗಳು ಆಕೆಯ ಹಿಂದೆ ಆಹಾರ ಬೇಡುತ್ತಾ ಹುಸಿ ಜಗಳವಾಡುತ್ತವೆ. ಆಕೆ ಬೇರೊಂದು ಆನೆಗೆ ಆಹಾರ ತಿನ್ನಿಸಿದ್ರೆ ಪುಟ್ಟ ಮಕ್ಕಳಂತೆ ಕೋಪಗೊಳ್ಳುತ್ತವೆ. ಸೊಂಡಿಲೆತ್ತಿ, ಬಾಯಿ ತೆರೆದು ಆಕೆ ತಿನ್ನಿಸುವ ಬಾಳೆಕಾಯಿಗಾಗಿ ದುಂಬಾಲು ಬೀಳುತ್ತವೆ. ಇದು ಕಲ್ಪನಾ, ಕುಂತಿ, ಧರ್ಮ, ಕುಜ ಹಾಗೂ ಮೂರು ತಿಂಗಳ ಮರಿಯಾನೆ ಗಜ ಇರುವ 'ಆನೆಮನೆ'.
12 ವರ್ಷಗಳಿಂದ 'ಆನೆಮನೆ'ಯಲ್ಲಿ ವಾಸಿಸುತ್ತಿರುವ ಪ್ರಜ್ಞಾ ಚೌಟ ಅಪ್ಪಟ ಕನ್ನಡದ ಹುಡುಗಿ. ಖ್ಯಾತ ರಂಗಕರ್ಮಿ ಡಿ.ಕೆ. ಚೌಟ ಅವರ ಮಗಳು. ಅಣ್ಣ ಸಂದೀಪ್ ಚೌಟ ಬಾಲಿವುಡ್ನ ಖ್ಯಾತ ಸಂಗೀತ ನಿರ್ದೇಶಕ. ಪ್ರಜ್ಞಾ ಸಹ ಲಂಡನ್ನಿನ ಯೂನಿವರ್ಸಿಟಿಯಲ್ಲಿ ಆಂಥ್ರಪಾಲಜಿ ಓದಿದಾಕೆ. ಪ್ರಜ್ಞಾಳ ಪತಿ ಫಿಲಿಪ್ ಗಾಟಿಯರ್ ಫ್ರೆಂಚ್ ಚಿತ್ರ ನಿರ್ದೇಶಕ. ಆತನೊಂದಿಗೆ ದೇಶ ಸುತ್ತುತ್ತಾ, ವಿವಿಧ ಡಾಕ್ಯುಮೆಂಟರಿಗಳಿಗೆ ಸ್ಕ್ರಿಪ್ಟ್ ಬರೆಯುತ್ತಿದ್ದ ಪ್ರಜ್ಞಾಗೆ ಆನೆಗಳ ಬಗ್ಗೆ ಮೊದಲು ಅಂಥ ಒಲವೇನೂ ಇರಲಿಲ್ಲ. ಯಾವುದೋ ಒಂದು ಸಿನೆಮಾಗೆ ಮಾವುತರ ಬಗ್ಗೆ ಅಧ್ಯಯನ ಮಾಡಲು ವೈನಾಡು, ಕೇರಳದಲ್ಲಿ ಆನೆ ಕ್ಯಾಂಪ್ಗಳಲ್ಲಿ ವಾಸ್ತವ್ಯ ಹೂಡಿದ್ದರು. ಅಲ್ಲಿ ಆನೆಗಳ ಸಾಂಗತ್ಯದಲ್ಲಿ ಆವರ ಆಸಕ್ತಿ ಬದಲಾಗಿತ್ತು. ಆನೆಗಳ ದೈತ್ಯ ಗಾತ್ರ, ಅಪಾರ ಶಕ್ತಿ, ಮಗುವಿನಂಥ ಮುಗ್ಧ ಪ್ರೀತಿ, ತಕ್ಷಣ ಸ್ಪಂದಿಸುವ ಬುದ್ಧಿವಂತಿಕೆ ಎಲ್ಲಕ್ಕೂ ಮಾರು ಹೋಗಿದ್ದರು. ಅಲ್ಲದೆ ಸಾವಿರಾರು ವರ್ಷಗಳಿಂದ ಬಂದ ಸಾಂಪ್ರದಾಯಿಕವಾದ ಆನೆ ಪಳಗಿಸುವ ವಿದ್ಯೆ ನಶಿಸಿಹೋಗುತ್ತಿರುವುದನ್ನು ನೋಡಿದ ಮೇಲೆ ಇವರಿಗೆ ಸುಮ್ಮನಿರಲಾಗಲಿಲ್ಲ. ಆನೆ ಸಾಕೋ ನಿರ್ಧಾರ ಮಾಡಿದ್ರು.
ಆನೆ ಸಾಕೋದು ಅಂದ್ರೆ ನಾಯಿ ಸಾಕಿದಂತಲ್ಲ. ಮನೆಯಲ್ಲಿ ಅದನ್ನು ಸಾಕುವ ಹಾಗಿಲ್ಲ. ಅದಕ್ಕಾಗಿ ಪ್ರಜ್ಞಾ ಕಾಡುಗಳನ್ನೇ ಹುಡುಕಿದ್ರು. ಮಡಿಕೇರಿಯ ಕುಶಾಲನಗರದ ಬಳಿ ಇರುವ ಆನೆಗಳ ವಾಸಯೋಗ್ಯ ಕಾಡಿನಲ್ಲೇ ಖಾಸಗಿ ಜಮೀನು ತೆಗೆದುಕೊಂಡ್ರು. ಆ 'ಆನೆಮನೆ'ಯೇ ಪ್ರಜ್ಞಾಳ ಮನೆಯಾಯಿತು. ಬದುಕಿಗೆ ಗುರಿಯಾಯಿತು.
ಆದ್ರೆ ಕಾಡಿನ ಜೀವನ ಅಂದುಕೊಂಡಷ್ಟು ರಮ್ಯವಲ್ಲ. ಲಂಡನ್ನಿನಲ್ಲಿ ಓದಿ, ಪ್ಯಾರಿಸ್ಸಿನ ಸಿನೆಮಾ ನಿರ್ದೇಶಕನನ್ನು ಕೈ ಹಿಡಿದ ಪ್ರಜ್ಞಾಗೆ ಕಾಡಿನ ಜೀವನಶೈಲಿಗೆ ತಮ್ಮನ್ನು ತಾವು ಅರ್ಪಿಸಿಕೊಂಡದ್ದೇ ಒಂದು ಸಾಧನೆ. ಏಕೆಂದರೆ ಪ್ರಜ್ಞಾ ಇರುವ ಕಾಡಿನಲ್ಲಿ ರಸ್ತೆ ಇಲ್ಲ. ನೂರಾರು ಎಕರೆ ದೂರದ ಕಾಡನ್ನು ಬರಿಗಾಲಿನಲ್ಲೇ ಸುತ್ತುತ್ತಾರೆ. ಲಗೇಜು ಸಾಗಿಸುವುದಕ್ಕೆ ಜಿಪ್ಸಿ ಇದೆ. ವಿದ್ಯುತ್ ಸಂಪರ್ಕ ಇಲ್ಲ. ಸೋಲಾರ್ ಪ್ಯಾನೆಲ್ ಹಾಕಿಸಿಕೊಂಡಿರುವುದರಿಂದ ರಾತ್ರಿ ದೀಪಕ್ಕೆ, ಮೊಬೈಲ್ ಚಾರ್ಜ್ ಮಾಡಿಕೊಳ್ಳುವುದಕ್ಕೆ ತೊಂದರೆ ಇಲ್ಲ. ಮೊದಲು ಒಂದು ಫೋನ್ ಕಾಲ್ ಮಾಡಬೇಕಂದ್ರೆ 26 ಕಿ.ಮೀ. ದೂರದ ಕುಶಾಲನಗರಕ್ಕೇ ಬರಬೇಕಿತ್ತು. ಇದೀಗ ಇಲ್ಲಿ ಬಿಎಸ್ಸೆನ್ನೆಲ್ ನೆಟ್ವರ್ಕ್ ಅಲ್ಪಸ್ವಲ್ಪ ಸಿಗೋದ್ರಿಂದ ಅದರಲ್ಲೇ ಕಷ್ಟಪಟ್ಟು ಮಾತಾಡುತ್ತಾರೆ. ಮೊಬೈಲನ್ನು ಬಟ್ಟೆ ಒಣಗಿಸುವ ಹಗ್ಗಕ್ಕೆ ತೂಗುಬಿಟ್ಟು, ನೆಟ್ವರ್ಕ್ ಹಿಡಿಯುತ್ತಾರೆ! ಗ್ಯಾಸ್ ಸೌಲಭ್ಯವಿಲ್ಲ. ಹಾಗಾಗಿ ಕಟ್ಟಿಗೆ ಒಲೆಯೇ ಗತಿ.
-ರಜನಿ ಎಂ.ಜಿ.
rajani.mg@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.