ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಇಸ್ರೇಲಿನ ಹಿಮಾಲಯ

Lingaraj Badiger
Updated On : 19 Apr 2014, 5:06 am

ಮೌಂಟ್ ಹೆರ್ಮೋನ್‌ನ ಬಿಳಿ ಮೈ
ಚಳಿಗಾಲ ಪ್ರಾರಂಭವಾಯಿತೆಂದರೆ ಇಸ್ರೇಲ್‌ನ ಈ ಸ್ವರ್ಗಸದೃಶ ಪ್ರವಾಸಿ ತಾಣಕ್ಕೆ ಅದೇ ವಸಂತ. ನವ ಚೈತನ್ಯ ಪಡೆದುಕೊಂಡು ಹಿಮಹಾಸುಗಳ ಬೆಡ್‌ಶೀಟನ್ನು ಬೆಚ್ಚನೆ ಹೊದ್ದು ಶ್ವೇತಶೋಭಿತವಾಗುತ್ತದೆ. ದಸರೆಯ ಸಮಯದಲ್ಲಿ ನಮ್ಮ ಮೈಸೂರು ಸಿಂಗಾರಗೊಂಡು ಕಂಗೊಳಿಸುತ್ತ ಜನರನ್ನು ಸೆಳೆಯುತ್ತಲ್ಲ, ಹಾಗೆ ಇಸ್ರೇಲಿಗರನ್ನು ಕೈಬೀಸಿ ಕರೆಯುತ್ತದೆ. ಈ ಜಾಗವೇ ಮೌಂಟ್ ಹೆರ್ಮೊನ್.
ಬೇಕಾದರೆ ಭಾರತದ ಹಿಮಾಲಯ ಪರ್ವತಕ್ಕೆ ಇದು ಇಸ್ರೇಲ್‌ನ ಪರ್ಯಾಯ ಎನ್ನಿ. ಮೌಂಟ್ ಹೆರ್ಮೋನ್ ಇಸ್ರೇಲಿನ ಉತ್ತರದ ತುತ್ತ ತುದಿ. ಈ ವಿಶಾಲ ಪರ್ವತಗಳ ಶ್ರೇಣಿಯ ಬಹು ಭಾಗ ಲೆಬನಾನ್ ಮತ್ತು ಸಿರಿಯಾಗಳ ಪಾಲಿನಲ್ಲಿದ್ದು, ಇಸ್ರೇಲ್ ಕಡೆಗೆ ಅದು ಗೋಲನ್ ಹೈಟ್ಸ್‌ನ ಭಾಗವಾಗಿ ಚಾಚಿಕೊಂಡಿದೆ. ಅಲ್ಲದೆ ಇಸ್ರೇಲ್‌ನ ಅತಿ ಎತ್ತರದ ಪ್ರದೇಶವೂ ಇದಾಗಿದೆ. ರಾಜಧಾನಿ ಟೆಲ್ ಅವಿವ್ ಅಥವಾ ಜೆರುಸಲೇಮ್‌ನಿಂದ ಸುಮಾರು ಒಂದೂವರೆ ಗಂಟೆಗಳ ಪ್ರಯಾಣದ ನಂತರ ಈ ಪರ್ವತ ಶ್ರೇಣಿ ಸಿಗುತ್ತದೆ.
ಇಲ್ಲಿನ ಪ್ರಮುಖ ಆಕರ್ಷಣೆ ಎಂದರೆ ಸ್ಕೀ ರೆಸಾರ್ಟ್(ಡ್ಞ್ಝ ್ಠಜಡ್ಟ್ಠಡಿ). ಜನರು ಉದ್ದುದ್ದ ಸಪಾಟು ಪಟ್ಟಿಗಳುಳ್ಳ ಬೂಟು ಕಟ್ಟಿಕೊಂಡು ಹಿಮದ ಮೇಲೆ ರೊಯ್ಯನೆ ಜಾರುತ್ತಾ ಸಾಗುವುದನ್ನು ನೋಡುವುದೇ ರೋಮಾಂಚಕ. ಹಿಮದ ನಡುವೆ ಸ್ಥಾಪಿಸಿದ ಹಳಿಗಳ ಮೇಲೆ ರಭಸದಿಂದ ಕಾರು ಓಡಿಸುವುದು ಮತ್ತೊಂದು ಅದ್ಭುತ ಅನುಭವ. ನಿಮಗೆ ಹಿಮದ ಮೇಲೆ ಸ್ಕೇಟಿಂಗ್ ಮಾಡಲು ಬರದಿದ್ದರೆ, ಚಿಂತೆ ಬೇಡ. ಅಲ್ಲಿಯೇ ಕಲಿಯುವುದಕ್ಕೆ ಅವಕಾಶ ಉಂಟು. ಸ್ವಲ್ಪ ಹಣ ನೀಡಿದರೆ, ಸುಮಾರು ಅರ್ಧ ಗಂಟೆ ತರಬೇತಿ ಕೊಟ್ಟು, ಉಪಕರಣಗಳನ್ನು ಕೊಟ್ಟು ನಿಮ್ಮನ್ನು ಹಿಮದ ಮೇಲೆ ಸ್ಕೇಟಿಂಗ್ ಮಾಡಲು ಬಿಡುತ್ತಾರೆ. ಪರ್ವತದ ಬುಡದಿಂದ ತುತ್ತ ತುದಿಗೆ ಕರೆದೊಯ್ಯಲು ಉಕ್ಕಿನ ಹಗ್ಗಕ್ಕೆ ಕಟ್ಟಿದ ತೊಟ್ಟಿಲಿನಂತ ಕುರ್ಚಿಗಳಿವೆ. ಈ ರೀತಿಯ ನೂರಾರು ಆಸನಗಳುಳ್ಳ ರೋಪುಗಳು ಸತತ ಆಕಾಶದೆತ್ತರದಲ್ಲಿ ಪ್ರವಾಸಿಗರನ್ನು ಹೊತ್ತು ಹರಿದಾಡುತ್ತಲೇ ಇರುತ್ತವೆ. ಮೋಡಗಳ ಮಧ್ಯ ಸಂಚರಿಸುತ್ತ ಕೆಳಗಡೆ ಮೋಜಿನಿಂದ ಸ್ಕೇಟಿಂಗ್ ನಡೆಸುತ್ತಿರುವವರನ್ನು ನೋಡುವುದೇ ಸೊಗಸು.
ಚಿಕ್ಕ ಮಕ್ಕಳು ಪ್ಲಾಸ್ಟಿಕ್ ಹಲಗೆಯ ಮೇಲೆ ಮಲಗಿ ಮಂಜಿನ ಮೇಲೆ ಜಾರುತ್ತಾ ಮೋಜು ಅನುಭವಿಸಿದರೆ, ಯುವಜೋಡಿಗಳಿಗಿದು ಪ್ರೇಮ ಕಾಶ್ಮೀರ. ತಮಗಿಷ್ಟ ಬಂದಂತೆ ಹಿಮದಲ್ಲಿ ಗೊಂಬೆಗಳನ್ನು ಮಾಡಿ ಅವುಗಳ ಜೊತೆ ಆಡುವವರಿಗೆ ವಯಸ್ಸಿನ ಭೇದವಿಲ್ಲ. ಶಾಲಾ ಮಕ್ಕಳನ್ನು ಅಪಾರ ಸಂಖ್ಯೆಯಲ್ಲಿ ಕರೆ ತರುವ ಶಿಕ್ಷಕರು ಮಂಜಿನ ಮೋಜಿನಲ್ಲಿ ನಿರತರಾಗುವ ಅವರನ್ನು ಹದ್ದುಬಸ್ತಿನಲ್ಲಿಡಲು ಪಡಿಪಾಟಲು ಪಡುತ್ತಾರೆ. ಬೇಸಿಗೆಯಲ್ಲಿ ಬೋಳು ಗುಡ್ಡದಂತಿರುವ ಇಲ್ಲಿ ಸಂಶೋಧಕರು, ವಿದ್ಯಾರ್ಥಿಗಳು ವಿಶಿಷ್ಟ ಸಸ್ಯ ಸಂಕುಲಗಳನ್ನು ಅಭ್ಯಸಿಸಲು ಬರುತ್ತಾರೆ.
ನಾವು ಇರುವ ಬೀರ್ಶೇವ ಇಸ್ರೇಲಿನ ದಕ್ಷಿಣದ ಒಂದು ಮರುಭೂಮಿ. ಆದರೆ ಅಲ್ಲಿಂದ ಕೇವಲ 3- 4 ಗಂಟೆಗಳ ಪ್ರಯಾಣ ದೂರದಲ್ಲಿ ಹಿಮಪರ್ವತ ಸಿಗುತ್ತದೆ! ಇಸ್ರೇಲಿನ ಭೌಗೋಳಿಕ ವಿಸ್ಮಯಕ್ಕೆ ಇದೊಂದು ಉದಾಹರಣೆ. ವಿಸ್ತೀರ್ಣದಲ್ಲಿ ಹೆಚ್ಚೆಂದರೆ ಕರ್ನಾಟಕದ ಎರಡು ಜಿಲ್ಲೆಗಳಷ್ಟಿರುವ ಈ ದೇಶ ಒಂದು ರೀತಿಯಲ್ಲಿ ಮಿನಿ ಭಾರತ ಎಂದರೆ ತಪ್ಪಿಲ್ಲ. ಪ್ರತಿ 100 ಕಿ.ಮೀ.ಗಳಿಗೆ ಇದರ ಚಹರೆ ಬದಲಾಗುತ್ತದೆ. ಮರುಭೂಮಿ, ಹಿಮ ಪರ್ವತ, ಮಲೆನಾಡನ್ನು ನೆನಪಿಸುವ ಹಸಿರು ತುಂಬಿದ ಪ್ರದೇಶಗಳು, ವಿಶಾಲ ಬಯಲು, ಧಾನ್ಯ ಬೆಳೆಯುವ ಗದ್ದೆಗಳು ಎಲ್ಲವೂ ಇಲ್ಲಿವೆ.
ಮಲೆನಾಡಿನಲ್ಲಿ ಹುಟ್ಟಿ ಬೆಳೆದ, ಮೌಂಟ್ ಎವರೆಸ್ಟ್‌ಬಗ್ಗೆ ಕೇವಲ ಪುಸ್ತಕ, ಟಿವಿಗಳಲ್ಲಿ ನೋಡಿ ತಿಳಿದಿದ್ದ ನಮಗೆ ಮೌಂಟ್ ಹೆರ್ಮೊನ್ ಕಂಡಾಗ ನೆನಪಾಗಿದ್ದು ಎಂ.ಕೆ. ಇಂದಿರಾ ಅವರ ಗದ್ಯದ 'ಮನದಣಿಯೆ ನೋಡಿ ಮಣಿದೆ' ಸಾಲು.

-ಹೇಮಂತ ಹೊಸಹಳ್ಳಿ,ಇಸ್ರೇಲ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement