ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ಕಾಗೆ ಕಲಿಸಿದ ಪಾಠ

Lingaraj Badiger
Updated On : 19 Apr 2014, 5:12 am

ಒಂದು ಕಾಡಲ್ಲಿ ಇದ್ದಕ್ಕಿದ್ದಂತೆ ಬಿರುಗಾಳಿ ಬೀಸಿತು. ಒಂದು ಟೊಳ್ಳು ಮರದ ರೆಂಬೆ ಮೇಲೆ ಒಂದು ಕಾಗೆ ಕುಳಿತಿತ್ತು. ಗಾಳಿಗೆ ಮರ ಆಗಲೋ ಈಗಲೋ ಬಿದ್ದು ಹೋಗುವುದರಲ್ಲಿತ್ತು. ಕಾಡಿನಲ್ಲಿ ಅಡ್ಡಾಡುತ್ತಿದ್ದ ದಾರಿಹೋಕನೊಬ್ಬ ಒಮ್ಮೆ ಆ ಕಾಗೆಯನ್ನೂ ಮತ್ತೊಮ್ಮೆ ಆ ಮರವನ್ನೂ ದಿಟ್ಟಿಸಿದ. ಖಂಡಿತ ಈ ಮರ ಇನ್ನೇನು ನೆಲ ಕಚ್ಚುವುದರಲ್ಲಿ ಅನುಮಾನವಿಲ್ಲ. ಅನ್ಯಾಯವಾಗಿ ಕಾಗೆ ಸಾಯುತ್ತದೆ. ಮಳೆ ಬೇರೆ ಸುರಿಯತೊಡಗಿದೆ. ಅದಕ್ಕೆ ಎಚ್ಚರಿಸೋಣ ಎಂದುಕೊಂಡು 'ಎಲವೋ ಕಾಗೆರಾಯನೆ, ನೀನು ಬಹಳ ವಿವೇಕಿ ಅಂತಲೇ ತಿಳಿದಿದ್ದೆ. ಕಲ್ಲುಗಳನ್ನು ಒಂದೊಂದಾಗಿ ಹೂಜಿಗೆ ಹಾಕಿ ಅದರ ತಳದಲ್ಲಿದ್ದ ನೀರನ್ನು ದಕ್ಕಿಸಿಕೊಂಡವನು ನೀನೇ ಅಂತ ಓದಿದ್ದೆ. ಕೇಳಿದ್ದೆ. ಈಗ ಇದ್ದಕ್ಕಿದ್ದಂತೆ ಇಷ್ಟೊಂದು ದಡ್ಡನಾದೆಯಲ್ಲ ಹಾರಿ ಎಲ್ಲಿಗಾದರೂ ಸುರಕ್ಷಿತ ಜಾಗಕ್ಕೆ ಹೋಗಬಾರದೆ?'
'ನೀವು ಮನುಷ್ಯರು... ನಿಮ್ಮನ್ನು ಬಿಟ್ಟರೆ ಯಾವ ಪ್ರಾಣಿ, ಪಕ್ಷಿಯಾಗಲಿ ಮೂರ್ಖರೆಂದೇ ನೀವು ತಿಳಿಯುತ್ತೀರಿ. ನಮಗೂ ಮಿದುಳಿದೆ ಗೊತ್ತಿದೆ ತಾನೆ...?'
'ಗೊತ್ತಪ್ಪ. ನಿನ್ನನ್ನು ಅವಮಾನಿಸಲೆಂದು ನಾನು ಹಾಗೆ ಹೇಳಲಿಲ್ಲ ಮಾರಾಯ. ಎಲ್ಲ ಜೀವ ವೈವಿಧ್ಯಗಳ ಬಗ್ಗೆಯೂ ಮಾನವರಿಗೆ ಗೌರವವಿದೆ. ನಮ್ಮ ತಪ್ಪು ನಮಗೆ ಅರಿವಾಗಿದೆ'.
'ಬಹಳ ಸಂತೋಷ. ಆದರೆ, ನನಗೆ ಈ ಮರ ಬಿಟ್ಟು ಹಾರಿಹೋಗು ಅನ್ನುವುದು ಸರಿಯೇ? ಈ ಮರ ನಾನು ಹುಟ್ಟಿದಾಗಿನಿಂದಲೂ ನನಗೆ ಆಶ್ರಯ ನೀಡಿದೆ...'
'ಹಾಗಲ್ಲ ತಮ್ಮ, ಮರವೇ ಹೇಳಹೆಸರಿಲ್ಲದಂತಾಗುವಾಗ ಅದು ಹೇಗೆ ತಾನೆ ನಿನ್ನ ಕಾಪಾಡಲಾದೀತು ಹೇಳು?'
'ಓ, ಹಾಗೋ? ನನಗಿಂತಲೂ ನನಗೆ ಭಯ ಹೆಚ್ಚಿರುವಂತಿದೆಯಲ್ಲ?'
'ಸಾಕು ನಿನ್ನ ತಮಾಷೆ. ಇಂಥ ಕಷ್ಟ ಸಮಯದಲ್ಲೂ ಈ ಬೋಳು ಮರದ ಮೇಲೇ ನಿನಗೆ ವಿಶ್ವಾಸವಿದೆಯಲ್ಲ... ಅದನ್ನೇ ನಂಬಿರುವೆಯಲ್ಲ? ನಿನ್ನ ನೋಡಿದರೆ ಪಾಪ ಅನಿಸುತ್ತದೆ...' 'ಅಯ್ಯಾ ಮಿತ್ರ, ನಾನು ಈ ಮರವನ್ನೇ ನಂಬಿರುವೆನೆಂದು ಹೇಳಿದ್ದಲ್ಲ. ನಾನು ನಂಬಿರುವುದು ನನ್ನ ರೆಕ್ಕೆಗಳನ್ನು ಮಾತ್ರ...' 'ಅಬ್ಬಾ ಕಾಗೆರಾಯನೆ, ಮೆಚ್ಚಿದೆ ನಿನ್ನನ್ನು. ಚಿನ್ನದಂಥ ಮಾತಾಡಿದೆ. ನಿನ್ನ ಆತ್ಮವಿಶ್ವಾಸವನ್ನು ನಿನ್ನ ರೆಕ್ಕೆಗಳಿಗೆ ಹೋಲಿಸಿಕೊಂಡೆಯಲ್ಲ... ಭಲೇ' ಎಂದು ಆ ದಾರಿಹೋಕ ಕಾಗೆಯನ್ನು ಮನಸಾರೆ ಹೊಗಳಿ ಹೊರಟ.

-ಬಿಂಡಿಗನವಿಲೆ ಭಗವಾನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement