ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಖುಷಿ

ನಿಂತಲ್ಲೇ ಓಡಿದೆವು ನೂರು ಮೈಲು

Lingaraj Badiger
Updated On : 19 Apr 2014, 5:08 am

ಬದುಕೊಂದು ಟ್ರೆಡ್‌ಮಿಲ್‌ನ ಓಟ
'ರಂಗವರ್ತುಲ' ತಂಡ ಅಭಿನಯಿಸಿದ 'ಟ್ರೆಡ್‌ಮಿಲ್‌' ನಾನು ಇತ್ತೀಚೆಗೆ ನೋಡಿದ ಅತ್ಯಂತ ಪರಿಣಾಮಕಾರಿ ಹಾಗೂ ಸಾರ್ಥಕ ರಂಗಪ್ರಯೋಗಗಳಲ್ಲೊಂದು. ಇಂದಿನ ಧಾವಂತದ ಜೀವನ ಯುವಜನತೆಯಲ್ಲಿ ಮೂಡಿಸುತ್ತಿರುವ ತವಕ, ತಲ್ಲಣ, ಖಿನ್ನತೆ, ಖಾಲಿತನಕ್ಕೆ ಒಡ್ಡಿದ ಕಲಾಕನ್ನಡಿಯಂತಿದೆ ಈ ಕಿರುನಾಟಕ (ಹಿಂದಿ ಮೂಲ: ಸಂದೀಪ್ ಶಿಖಾರ್, ಕನ್ನಡಕ್ಕೆ: ರಾಘವೇಂದ್ರ ಆಚಾರ್ಯ).
ನಾಟಕದ ವಸ್ತು ಕನ್ನಡಕ್ಕೆ ಹೊಸದೇನಲ್ಲ. ನಗರ ಜೀವನ, ಅದರ ಯಾಂತ್ರಿಕತೆ, ಧಾವಂತದ ಬದುಕು, ತೀರದ ಧನದಾಹ, ಐಹಿಕ ಲೋಲುಪ್ತಿ, ಯಶಸ್ಸಿನ ಹಿಂದೆ ನಿಲ್ಲದ ಓಟ, ಭ್ರಷ್ಟ ರಾಜಕೀಯ- ಇತ್ಯಾದಿಗಳು ನವ್ಯದ ಕಾಲದಿಂದಲೂ ನಮ್ಮ ಕಥಾಸಾಹಿತ್ಯದ ಸಾಮಗ್ರಿಗಳೇ. ಆಗ ಮಾನವ ಜೀವನವನ್ನು ಒಂದು ಪಯಣಕ್ಕೆ (ಯಶವಂತ ಚಿತ್ತಾಲ ) ಹೋಲಿಸುತ್ತಿದ್ದರು. ಈಗ ಅದು ಓಟವಾಗಿದೆ. ನಿಂತಲ್ಲೇ ಓಡುವ ಟ್ರೆಡ್‌ಮಿಲ್ ಮೇಲಿನ ಓಟ. ಒಟ್ಟಾರೆ ಮಾನವ ಜೀವನಕ್ಕೆ ಒಂದು ಪೂರ್ವನಿಶ್ಚಿತ ಅರ್ಥ, ಗುರಿ ಆಗಲೂ ಗೊತ್ತಿರಲಿಲ್ಲ. ಈಗಲೂ ಗೊತ್ತಿಲ್ಲ. ಅಸ್ತಿತ್ವವಾದದ ಸಾರ್ತ್ರೆ ಹೇಳುವಂತೆ, 'ನಮ್ಮ ಜೀವನಕ್ಕೆ ತಾನಾಗಿ ಯಾವುದೇ ಅರ್ಥವಿಲ್ಲ; ನಾವು ಕೊಟ್ಟುಕೊಂಡಷ್ಟೇ ಅರ್ಥ' ಎಂಬ ಮಾತೇ ನಿಜವಿರಬಹುದೆ? ಇದಕ್ಕೆ ಉತ್ತರ ಈ ನಾಟಕದ ಆದಿ ಮತ್ತು ಅಂತ್ಯದಲ್ಲಿ ಬರುವ ಈ ಮಾತೇ ಇದ್ದೀತು 'ಐ ಡೋಂಟ್ ನೊ'.
ಹೀಗೆ 'ಟ್ರೆಡ್‌ಮಿಲ್‌' ನಾಟಕ ಅನಾದಿಯಿಂದ ಮನುಷ್ಯ ನಡೆಸುತ್ತ ಬಂದಿರುವ ಬದುಕಿನ ಸಾರ್ಥಕತೆಯ ಶೋಧಕ್ಕೆ ಇಂದಿನ ಸಮಕಾಲೀನತೆಯ ಕೆಲವು ಎಳೆಗಳನ್ನು ಜೋಡಿಸಿದೆ. ನಗರದ ಜನಸಾಮಾನ್ಯ ವರ್ಗಕ್ಕೆ ಸೇರಿದ ಕಾಲೇಜಿನ ಗುಮಾಸ್ತೆ, ಟೀಸ್ಟಾಲ್ ಕಾಕಾ, ಆಟೋ ಡ್ರೈವರ್, ಮನೆಗೆಲಸದ ಹನುಮಕ್ಕ ಅಲಿಯಾಸ್ ರಮ್ಯ ಎಚ್., ಟೈಲರ್ ಚಾಚಾ- ಇವರಿಂದ ಹಿಡಿದು ಸಿನಿಮಾ ನಟ, ಪ್ರಾಧ್ಯಾಪಕ, ಸಾಫ್ಟ್‌ವೇರ್ ಯುವ ಪ್ರೇಮಿಗಳ ಜೋಡಿಯವರೆಗೆ ಹಲವು ಸ್ತರಗಳ ಪಾತ್ರಗಳು ಇಡಿಕಿರಿದಿರುವ ಈ ನಾಟಕದ ವೈಶಿಷ್ಟ್ಯವೆಂದರೆ ಇದರಲ್ಲಿರುವುದು ಕೇವಲ ಮೂವರೇ ಪಾತ್ರಧಾರಿಗಳು. ನಾಯಕನಾಗಿ ನಿತೀಶ್, ನಾಯಕಿಯಾಗಿ ಮಾನಸ ಜೋಶಿ ಮತ್ತು ಹಲವು ಪಾತ್ರಗಳಲ್ಲಿ ತನ್ನ ಲವಲವಿಕೆಯ ಮನೋಜ್ಞ ಅಭಿನಯದಿಂದ ಇಡೀ ನಾಟಕವನ್ನು ಹೊತ್ತು ನಿಭಾಯಿಸಿರುವ ಅದ್ಭುತ ಕಲಾವಿದ ಪೂರ್ಣಚಂದ್ರ ತೇಜಸ್ವಿ.
ಇದು ಓದು- ನಾಟಕಕ್ಕಿಂತ ಮಿಗಿಲಾಗಿ ನೋಡು- ನಾಟಕ. ರಂಗಸ್ಥಳದಲ್ಲಿ ಸದ್ಯೋಜಾತವೆಂಬಂತೆ ಸಂಭವಿಸಬೇಕಾದ ನಾಟಕ. ಆದ್ದರಿಂದ ಇದು ನಿರ್ದೇಶಕನಿಗೆ, ಅವನ ಕಲ್ಪನಾಸಾಮರ್ಥ್ಯಕ್ಕೆ ದೊಡ್ಡ ಸವಾಲು. ಈ ಸವಾಲನ್ನು ಯುವ ನಟ, ನಿರ್ದೇಶಕ ಎಸ್. ನಿತೀಶ್ ಅತ್ಯಂತ ಸಮರ್ಥವಾಗಿ, ಯಶಸ್ವಿಯಾಗಿ ನಿಭಾಯಿಸಿದ್ದಾರೆ. ರಂಗಸಜ್ಜಿಕೆಯ ಕಲ್ಪನೆ, ದೃಶ್ಯ ವಿನ್ಯಾಸ, ಬೆಳಕು ಮತ್ತು ಹಿನ್ನೆಲೆ ಸಂಗೀತದ (ಸಂಗೀತ- ವಾರಿಜಶ್ರೀ ವೇಣುಗೋಪಾಲ್) ಪರಿಣಾಮಕಾರಿ ಬಳಕೆ ಭಲೇ ಅನಿಸುತ್ತದೆ. ಮದುವೆಯ ಆರತಕ್ಷತೆಯ ದೃಶ್ಯವಂತೂ ಬಹುಕಾಲ ನೆನಪಿನಲ್ಲಿ ಉಳಿಯುತ್ತದೆ. ಲೌಕಿಕ ಸ್ತರದಲ್ಲಷ್ಟೇ ವಿರಮಿಸದೆ ತಾತ್ವಿಕ ನೆಲೆಗೂ ಪ್ರೇಕ್ಷಕರನ್ನು ಕೊಂಡೊಯ್ಯುವುದರಿಂದ ಈ ನಾಟಕಕ್ಕೆ ವಿಶೇಷ ಗಹನತೆ, ಘನತೆ ಪ್ರಾಪ್ತವಾಗಿದೆ. ಟೈಲರ್ ಚಾಚಾನ ಮಾರ್ಮಿಕ ಮಾತುಗಳು ಮತ್ತು ಅಮ್ಮ-ಮಗನ ಭಾವನಾತ್ಮಕ ಸಂಬಂಧದ ಭ್ರಾಮಕ ದೃಶ್ಯ ಪರಿಕಲ್ಪನೆ ನಾಟಕಕ್ಕೆ ಅನುಭಾವಿಕ ಅಯಾಮವನ್ನು ಒದಗಿಸಿವೆ.
ಇದು ನಮ್ಮ ಕಥೆಯಷ್ಟೇ ಅಲ್ಲ, ನಿಮ್ಮದೂ ಇರಬಹುದು ಎಂಬ ನಾಟಕದ ಭರತವಾಕ್ಯದ ಸತ್ಯಾಸತ್ಯತೆಯನ್ನು ಮನವರಿಕೆ ಮಾಡಿಕೊಳ್ಳಲಿಕ್ಕಾದರೂ ಪ್ರತಿಯೊಬ್ಬರೂ 'ಟ್ರೆಡ್‌ಮಿಲ್‌' ಅನ್ನು ತಪ್ಪದೆ ನೋಡಬೇಕು.

-ಬಿ.ಆರ್. ಲಕ್ಷ್ಮಣರಾವ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement