ಮುದುಕ ಹೇಳಿದ ಜೋಕು
ಒಂದು ಸಭೆಗಾಗಿ ಜನ ಸೇರಿದ್ದರು. ಆದರೆ ಸಭೆ ಆರಂಭವಾಗುವುದು 30 ನಿಮಿಷ ತಡವಾಗಬಹುದೆಂದೂ, ಈ ಸಮಯದಲ್ಲಿ ಸಭಿಕರಲ್ಲಿ ಯಾರಾದರೂ ಕತೆ, ಕವನ, ಜೋಕ್ ಹೇಳಬಹುದೆಂದು ನಿರ್ವಾಹಕರು ಕೋರಿದರು. ಸಭಿಕರ ಮಧ್ಯದಿಂದ ಒಬ್ಬ 80 ವರ್ಷದ ತಾತ ತಾನು ಜೋಕ್ ಹೇಳುವುದಾಗಿ ಎದ್ದು ಬಂದ. ಜೋಕ್ ಹೇಳಿದ. ಸಭಿಕರೆಲ್ಲರೂ ಬಿದ್ದೂ ಬಿದ್ದೂ ನಕ್ಕರು.
ಈಗ ತಾತ ಮತ್ತೆ ಜೋಕ್ ಹೇಳುವುದಾಗಿ ಹೇಳಿ, ಮೊದಲು ಹೇಳಿದ ಜೋಕನ್ನೇ ಮತ್ತೆ ಹೇಳತೊಡಗಿದ. ಈ ಬಾರಿ ಕೆಲವರು ಮಾತ್ರ ನಕ್ಕರು. ಸುಮ್ಮನಿರದ ತಾತ ಮತ್ತೆ ಅದೇ ಜೋಕನ್ನು ಹೇಳತೊಡಗಿದ. ಮುಖಮುಖ ನೋಡಿಕೊಂಡ ಸಭಿಕರೆಲ್ಲರೂ ತಾತನಿಗೆ ಅರಳುಮರಳು ಎಂದು ತೀರ್ಮಾನಕ್ಕೆ ಬಂದರು. ಅದರಲ್ಲೊಬ್ಬ ತಾಳ್ಮೆಗೆಟ್ಟು ಎದ್ದುನಿಂತು ಪ್ರಶ್ನಿಸಿಯೇ ಬಿಟ್ಟ, 'ಒಂದೇ ಜೋಕ್‌ಗೆ ಎಷ್ಟು ಸಾರಿ ನಗಲಾದೀತು? ನಿಮಗೇನು ಅರಳುಮರಳೇ?' ತಾತ ಸಾವಕಾಶವಾಗಿ ಉತ್ತರಿಸಿದ, 'ಒಂದೇ ಜೋಕ್‌ಗೆ ಪದೇ ಪದೆ ನಗಲಾರದ ಮನುಷ್ಯ ಒಂದೇ ವಿಷಯ ಹಿಡಿದು ಪದೇ ಪದೆ ಕೊರಗುವುದೇಕೆ?' ಸಭೆ ಸ್ತಬ್ಧವಾಯಿತು.