ಅತ್ಯುತ್ತಮ ಪುಸ್ತಕ ಸಂಗ್ರಹಕಾರರು ನೀವು. ಒಂದು ಮೂಲಭೂತ ಪ್ರಶ್ನೆ. ಈ ಪುಸ್ತಕ ಸಂಗ್ರಹ ಅನ್ನೋದು ಏನು? ಕಲೆಯಾ? ಆಸಕ್ತಿಯಾ? ಅಬ್ಸೆಶನ್ನಾ- ಗೀಳಾ- ಹುಚ್ಚಾ?
ಇವೆಲ್ಲವೂ ಸರಿ. ಅವು ಯಾವುದನ್ನೂ ಬೇರ್ಪಡಿಸೋಕೆ ಆಗೋಲ್ಲ. ಕಲೆ ಒಳಗೆ ಹುಚ್ಚಿದೆ. ಹುಚ್ಚನ್ನೂ ಕಲೆಯ ಮಟ್ಟಕ್ಕೆ ಏರಿಸಬಹುದು. ಸಾಧನೆ ಮಾಡೋದೇ ಹುಚ್ಚು. ಪುಸ್ತಕ ಸಂಗ್ರಹ ಕಲೆ- ವಿಜ್ಞಾನವೂ ಹೌದು. ಮೊದಲಿಗೆ ಗೀಳಿನಂತೆ ಶುರುವಾಗಿ ಕ್ರಮೇಣ ಹುಚ್ಚಾಗಿ ಪರಿವರ್ತನೆ ಹೊಂದಬಹುದು. ಆಮೇಲೆ ಕಲೆ ಆಗಬಹುದು. ಅದಕ್ಕೊಂದು ವ್ಯವಸ್ಥಿತ ರೂಪ ಕೊಟ್ಟಾಗ ಅದುವೇ ವಿಜ್ಞಾನ.
ಪುಸ್ತಕ ಸಂಗ್ರಹಕಾರರಿಗೆ 'ಫಸ್ಟ್ ಎಡಿಷನ್' 'ಫಸ್ಟ್ ಎಡಿಷನ್ ಸೈನ್ಡ್ ಎಡಿಷನ್' ಪುಸ್ತಕಗಳ ಮೇಲೆ ವಿಶೇಷ ಮೋಹವಿರುತ್ತೆ ಯಾಕೆ?
ಅಂಥ ಪುಸ್ತಕ ಸಂಗ್ರಹಕಾರರು ನಮ್ಮಲ್ಲಿ ಎಷ್ಟು ಜನ ಇದ್ದಾರೆ? ದೇಶದಲ್ಲಿ ಕೆಲವರಿರಬಹುದು. ವಿಶ್ವದಲ್ಲಿ ಬಹಳ ಜನ ಇದ್ದಾರೆ. ಅಮೆರಿಕ ಐಟಿಬಿಟಿಗೆ ಪ್ರಖ್ಯಾತಿಯಾದ್ರೂ, ಅಲ್ಲೇ ಹೆಚ್ಚು ಪುಸ್ತಕದ ಗೀಳು ಇರೋದು. ಈ ಪ್ರಶ್ನೆ ಅಲ್ಲಿಗೆ ಅನ್ವಯಿಸುತ್ತೆ. ಮುಂಬೈನಲ್ಲೂ ಅಂಥ ಸಂಗ್ರಹಕಾರರು ಇದ್ದಾರಂತೆ. ನನ್ನ ಅಧ್ಯಯನದ ಪ್ರಕಾರ, ಕೋಲ್ಕತ್ತಾದ ಅಶುತೋಷ್ ಮುಖರ್ಜಿ, ಆಂಧ್ರದ ನಾರ್ಲಾ, ಮಹಾರಾಷ್ಟ್ರದ ಡಾ. ಬಿ.ಆರ್. ಅಂಬೇಡ್ಕರ್ ಮಹತ್ವದ ಪುಸ್ತಕ ಸಂಗ್ರಹಕಾರರು.
ಈ ಮೊದಲನೇ ಮುದ್ರಣ ಅಂದ್ರೆ, ಲೇಖಕ ಬದುಕಿರುವಾಗಲೇ ರೂಪ ತಳೆದಿರುತ್ತೆ. ಹಾಗಾಗಿ ಒಂದು ಅಟ್ಯಾಚ್ಮೆಂಟ್. ಕೆಲವೊಮ್ಮೆ ಲೇಖಕ ಸತ್ತ ಮೇಲೂ ಪುಸ್ತಕ ಪ್ರಕಟವಾಗಿರಬಹುದು, ಮೊದಲ ಮುದ್ರಣ ಮಾಡುವವನಿಗೆ ಆ ಪುಸ್ತಕದ ಮೇಲೆ ಕರುಳುಬಳ್ಳಿಯ ಸಂಬಂಧ ಇರುತ್ತೆ. ಈ ಮೊದಲ ಮುದ್ರಣದ ಪುಸ್ತಕಗಳು ಅದೇನೋ ಸಂತೋಷ ಕೊಡುತ್ತವೆ.
ಇನ್ನು ಸೈನ್ಡ್ ಎಡಿಶನ್ ವಿಚಾರಕ್ಕೆ ಬಂದರೆ ಅಲ್ಲಿ ಮಹತ್ವ ಬರೋದು ಯಾರು ಯಾರಿಗೆ ಆ ಪುಸ್ತಕ ಸಹಿ ಮಾಡಿಕೊಟ್ಟಿದ್ದಾರೆ ಎನ್ನುವುದರಲ್ಲಿ. ಉದಾಹರಣೆಗೆ, ಡಿವಿಜಿ, ಮಾಸ್ತಿ ಅವರಿಗೆ ಪುಸ್ತಕ ಕೊಟ್ಟರೆ, ಅದರಲ್ಲಿ ಏನು ಬರೆದುಕೊಟ್ಟಿದ್ದಾರೆ, ಪುಸ್ತಕ ತೆಗೆದುಕೊಂಡವರು ಏನಾದ್ರೂ ಗುರುತು ಹಾಕ್ಕೊಂಡಿದ್ದಾರಾ ಅನ್ನೋದೇ ಕುತೂಹಲ. ಲೇಖಕನ ಮತ್ತು ತೆಗೆದುಕೊಂಡವನ ಹಸ್ತಾಕ್ಷರ ಅದರಲ್ಲಿ ಇರುತ್ತೆ ಅನ್ನೋದಕ್ಕೆ ಅದನ್ನು ವಿಶೇಷವಾಗಿ ಕಲೆಕ್ಟ್ ಮಾಡ್ತೀವಿ.
ಲಂಕೇಶ್ ಒಂದು ಸಂದರ್ಶನದಲ್ಲಿ ಹೇಳ್ತಾರೆ, 'ಪುಸ್ತಕ ಓದೋದು ಒಂದು ಕಲೆ, ಕವರ್ ಟು ಕವರ್ ಓದುವ ಅವಶ್ಯಕತೆ ಇಲ್ಲ. ಬ್ಲರ್ಬ್, ಇಂಟ್ರೊಡಕ್ಷನ್, ರಿವ್ಯೂ ಏನು ಓದಿದರೂ ಅದು ಅನುಭವದ ಭಾಗವೇ...' ನಿಮ್ಮ ಅಭಿಪ್ರಾಯ ಏನು?
ಒಬ್ಬೊಬ್ಬರದೂ ಒಂದೊಂದು ಓದುವ ಕ್ರಮ ಇರುತ್ತೆ. ಲಂಕೇಶ ಒಬ್ಬ ಕ್ರಿಯೇಟಿವ್ ಬರಹಗಾರನಾಗಿ, ಅವರ ಮಾತು ಸರಿ. ತನಗೆ ಏನು ಬೇಕೋ, ಹೇಗೆ ಬೇಕೋ ಹಾಗೆ ಓದಿಕೊಳ್ತಾ ಇದ್ರು. ಸಂಗ್ರಹಕಾರರ ಓದು ಬೇರೆ. ಅದು ಮಗು ಎತ್ಕೊಂಡು ಆಟ ಆಡಿಸೋ ಹಾಗೆ. ಅದಕ್ಕೆ ಸಮಯದ ನಿಗದಿ ಇಲ್ಲ. ಮಗು ಅತ್ತಾಗ್ಲೂ ಎತ್ಕೋತಾರೆ, ಮುದ್ದು ಮಾಡೋಕೂ ಎತ್ಕೋತಾರೆ. ಹಾಗೇನೇ ಪುಸ್ತಕ.
ಇನ್ನು ನನ್ನ ಓದುವ ಕ್ರಮ ಅಂದರೆ, ಮುಖಪುಟದ ಶೀರ್ಷಿಕೆಯ ಅಕ್ಷರ ವಿನ್ಯಾಸದಿಂದ ಹಿಡಿದು, ಅರ್ಪಣೆ, ಮುನ್ನುಡಿ ಏನನ್ನೂ ಬಿಡದೆ ಓದುವುದು. ಒಂದು ಸರ್ತಿ ಓದಿಬಿಟ್ಟರೆ, ಇದು ದಾರ್ಷ್ಟ್ಯ ಪದ ಅನ್ನಿಸಬಹುದು. ಆದರೆ ಅರೆದು ಕುಡಿದುಬಿಡ್ತೀನಿ. ಆಮೇಲೆ ಆ ಪುಸ್ತಕದ ಯೋಗ್ಯತೆಯನ್ನು ಜಡ್ಜ್ ಮಾಡ್ತೀನಿ. ಬರಹದ ಒಟ್ಟು ಉದ್ದೇಶ ಏನು ಅಂತ ಗ್ರಹಿಸ್ತೀನಿ.
ಇವತ್ತು ಸಾಹಿತ್ಯ ಕಳಪೆ ಆಗಿರುವುದಕ್ಕೆ ಆ ಸಾಹಿತ್ಯ ಜಗಳಗಳು- ವಾಗ್ವಾದಗಳು ಇಲ್ಲದಿರುವುದೂ ಒಂದು ಕಾರಣ ಅಂತ ಹೇಳ್ತಾರೆ. ಹಿಂದೆ ಲಂಕೇಶ್ರಂಥ ಪತ್ರಕರ್ತ ಸಾಹಿತಿಗಳು ಅತಿ ಸಿಟ್ಟಿನಿಂದ ಬಹಳಷ್ಟು ಲೇಖಕರನ್ನು ಜರೀತಿದ್ರು. ಲಂಕೇಶ್ ನಂತರ ಆ ಪರಂಪರೆ ಇಲ್ಲವಾಗಿದೆ. ಈ ಕಂದಕ ಸರಿಪಡಿಸಬಹುದೆ?
ಲಂಕೇಶ್ ಯಾವುದೇ ಸಾಂಸ್ಕೃತಿಕ ವಾಗ್ವಾದವನ್ನ ಹುಟ್ಟು ಹಾಕಿಲ್ಲ. ಲಂಕೇಶ್ ಪತ್ರಿಕೆ ಆ ಕಾಲದ ಕುದಿಯುವ ಮನಸ್ಥಿತಿಯ ಮುಖವಾಣಿಯಾಗಿತ್ತೇ ಹೊರತು ಸಾಹಿತ್ಯ- ಸಾಂಸ್ಕೃತಿಕ ಪತ್ರಿಕೆ ಆಗಿರಲಿಲ್ಲ. ಲಂಕೇಶ್ ಸ್ವತಃ ಒಬ್ಬ ಪ್ರತಿಭಾವಂತ ಲೇಖಕ ಆಗಿದ್ದರಿಂದ ಆ ಪತ್ರಿಕೆಯಲ್ಲಿ ಸಿಟ್ಟು ಇತ್ತೇ ಹೊರತು, ಸಾಹಿತ್ಯದ ಮೋಟಿವ್ ಇದ್ದ ಪತ್ರಿಕೆ ಅಲ.್ಲ ಆದರೆ ವಾಗ್ವಾದಗಳು ಹಿಂದೆ ಇದ್ದವು. ಕುವೆಂಪು- ಮಾಸ್ತಿ, ಆರ್. ನರಸಿಂಹಾಚಾರ್- ಎ. ವೆಂಕಟಸುಬ್ಬಯ್ಯ, ಪಾವೆಂ ಆಚಾರ್ಯ, ತೇಜಸ್ವಿ, ಅನಂತಮೂರ್ತಿಯಂಥವರು ಹುಟ್ಟುಹಾಕಿದ ವಾಗ್ವಾದಗಳು ನಮ್ಮಲ್ಲಿವೆ. ಲಂಕೇಶ್ ನನಗೆ ತಿಳಿದಮಟ್ಟಿಗೆ ಯಾವ ವಾಗ್ವಾದವನ್ನೂ ಹುಟ್ಟು ಹಾಕಿಲ್ಲ. ಆದರೆ ಅವರು ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ತೋರಿಸುತ್ತಿದ್ದ ಸಿಟ್ಟು- ಧೈರ್ಯ ಮೆಚ್ಚಬೇಕಾದ್ದೆ. ಆಮೇಲೆ ವಾಗ್ವಾದ ಇಲ್ಲದಿರೋದು ಕಾರಣ ಅಂತಲ್ಲ. ವಾಗ್ವಾದ ಮಾಡಲು ಅದಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತೆ. ಮೌನವಾಗಿಯೂ ವಾಗ್ವಾದ ಮಾಡಬಹುದು. ಸೇಡಿಯಾಪುರಂಥ ವಿದ್ವಾಂಸರು 'ನೆತ್ತಮನಾಡಿ ಭಾನುಮತಿ ಸೋಲ್ತೊಡೆ' ಬರೆದಂಥ ಸಂದರ್ಭಗಳಲ್ಲಿ ಬೇರೆ ಬೇರೆ ವಿದ್ವಾಂಸರು ಬರೆದಿದ್ದಕ್ಕೆಲ್ಲ ಕೊಟ್ಟ ಉತ್ತರದಂಥ ವಾಗ್ವಾದಗಳು ಆಗಬೇಕು. ಇವತ್ತೂ ಇದಾರೆ, ಆದರೆ ಅವರು ವಾಗ್ವಾದಗಳಿಗೆ ಇಳೀತಿಲ್ಲ. ಅದಕ್ಕೆ ಲಂಕೇಶ್ ಅಂಥವರು ಇಲ್ಲದಿರುವುದು ಕಾರಣ ಅಲ್ಲ.
ಪಕ್ಕದ ಆಂಧ್ರದಲ್ಲಿ, ಪುಸ್ತಕಗಳಿಗೆ ತಮ್ಮ ವಿರೋಧಿಗಳಿಂದ ಮುನ್ನುಡಿ-ಹಿನ್ನುಡಿ-ಬೆನ್ನುಡಿ ಬರೆಸುವ ಪರಂಪರೆ ಇದೆ ಅಂತ ನೀವೊಮ್ಮೆ ಹೇಳಿದ ನೆನಪು. ಅದರ ಬಗ್ಗೆ ಹೇಳಿ.
ಅದು ಆಂಧ್ರದಲ್ಲಿ ಇಂದಿಗೂ ಇದೆ. ಕನ್ನಡದಲ್ಲಿ ಇರಲಿಲ್ಲ ಅಂತಲ್ಲ. ಉದಾಹರಣೆಗೆ, ಹರ್ಡೆಕರ್ ಮಂಜಪ್ಪನವರು ಬರೆದ ಪುಸ್ತಕಕ್ಕೆ ಆಲೂರು ವೆಂಕಟರಾಯರು ಮುನ್ನುಡಿ ಬರೆದಿದ್ದಾರೆ. ಬಿ.ಪಿ. ರಾಧಾಕೃಷ್ಣ ಅವರು 'ನನ್ನ ತಂದೆ' ಪುಸ್ತಕಕ್ಕೆ ಡಿ.ವಿ.ಜಿ. ಮುನ್ನುಡಿ ಬರೆದಿದ್ದಾರೆ. ಇದು ಹಿಂದೆ ನಮ್ಮಲ್ಲಿ ಇತ್ತು. ನವೋದಯದ ನಂತರ ಶುರುವಾದ ಗುಂಪುಗಾರಿಕೆಯಿಂದ ಇನ್ನೊಬ್ಬರ ಕೃತಿಗಳ ದೋಷಗಳನ್ನು ಅದರ ಬಗ್ಗೆ ಬರೆಯುವಾಗ ಹೇಳುತ್ತಿರಲಿಲ್ಲ, ಆಮೇಲೆ ಖಾಸಗಿಯಾಗಿ ಮಾತಾಡಿಕೊಳ್ತಿದ್ರು. ಆದರೆ ಆಂಧ್ರದಲ್ಲಿ ಹಾಗಲ್ಲ, ಅವರು ಅಲ್ಲೇ ಉತ್ತರ ಕೊಡ್ತಾ ಇದ್ರು. ರಾಳ್ಲಪಲ್ಲಿ ಅನಂತಕೃಷ್ಣ ಶರ್ಮ ಅವರು, ಹೊಸಕಾಲದಲ್ಲಿ ಮಹಾಕಾವ್ಯವೇ ಹೋಗಿಬಿಡ್ತು ಅಂದವರು. ಗಡಿಯಾರಂ ವೆಂಕಟ ಶೇಷಶಾಸ್ತ್ರಿಯವರು ಬರೆದ 'ಶಿವಭಾರತಮುಕಾವ್ಯ'ಕ್ಕೆ ಮುನ್ನುಡಿ ಬರೆಯುವಾಗ, ನನ್ನ ಅಭಿಪ್ರಾಯವನ್ನು ವಾಪಸ್ ತಗೋತೀನಿ ಅಂತ ಬರೆದಿದ್ದಾರೆ. ಮಹಾರಾಷ್ಟ್ರದಲ್ಲಿ ಇನ್ನೂ ಆ ವಾಗ್ವಾದಗಳು ಇವೆ.
ನಿಮ್ಮ ವಿಚಾರಧಾರೆಯನ್ನು ಪ್ರಭಾವಿಸಿದ ಪುಸ್ತಕಗಳು ಯಾವ್ಯಾವು?
ನಾನು ಅನುವಾದಿಸಿದ ಪುಸ್ತಕಗಳೆಲ್ಲ ನನ್ನ ಮೇಲೆ ಪ್ರಭಾವ ಬೀರಿರುವಂಥವೇ. ಉದಾಹರಣೆಗೆ, ಸಂಜೀವ್ ದೇವ, ನಾರ್ಲಾ. ಕುವೆಂಪು ಬಗ್ಗೆ ಕೆಲಸ ಮಾಡ್ತಾ ಇದೀನಿ. ನನ್ನ ಎಲ್ಲ ಸಾಹಿತ್ಯದ ಉಳುಮೆಗೆ ಕುವೆಂಪು ಅವರ ಬದುಕು ಬರಹ ನನಗೆ ಹೊನ್ನ ನೆಲದಂತಿದೆ. ವಿಶ್ವ ಸಾಹಿತ್ಯದ ಆಲೋಚನೆ ಮಾಡ್ತಾ ಹೋದಾಗ ಹೆಚ್ಚು ಪ್ರಭಾವ ಬೀರಿದ್ದು ವಿಕ್ಟರ್ ಹ್ಯೂಗೋ. ಅವನು ಬದುಕನ್ನು ಕಂಡ ರೀತಿ ಬಹುಶಃ ನಾನು ಕಂಡ ಬದುಕಿಗೆ ಹತ್ತಿರ ಇರೋದರಿಂದ ಅವನು ಬಹುದೊಡ್ಡ ಲೇಖಕನಾಗಿ ಕಾಣಿಸ್ತಾನೆ. ಅವನ 'ಲೇ ಮಿಸರೆಬಲ್ಸ್' ಬಹಳ ಪ್ರಭಾವ ಬೀರಿದೆ. ನನ್ನ ಮಗನಿಗೆ 'ಜೀನ್ ವಾಲ್ ಜೀನ್' ಅಂತ ಹೆಸರಿಡಬೇಕೆಂಬ ಆಸೆ ಇತ್ತು. ಆಂಧ್ರದ ಕಾವ್ಯದಲ್ಲಿ ಹೆಚ್ಚು ಇನ್ಫ್ಲುಯೆನ್ಸ್ ಮಾಡಿರೋದು ಶ್ರೀ ಶ್ರೀ ಕಾವ್ಯ.
-ಆಕೃತಿ ಗುರುಪ್ರಸಾದ್