ನಾಟಕದ ದಿಖಾವೆ ಮುಗಿಯಲು ಕನ್ನಡಿಯಲ್ಲಿ ನೋಡುತ್ತಲೇ ಹಳಸಿದ ಒಂದೊಂದೇ ಪೋಷಾಕಿನಿಂದ ಬಿಡುಗಡೆ ಪಡೆಯುವ ಪಾತ್ರದ ಹಾಗೆ ಕಾಲೇಜಿನಿಂದ ಬಂದ ಪ್ರೊ. ಗಜಪತಿ ಆರ್ ಅಲ್ಮೇರಾ ಮುಂದೆ ನಿಂತು ಡ್ರೆಸ್ ಕಳಚತೊಡಗಿದರು. ದಿನದ ಕಾಳಗ ಮುಗಿಸಿದ ತೃಪ್ತಿ ಅವರಲ್ಲಿತ್ತು. ಅಂಗಿ-ಬನಿಯನ್ ತೆಗೆದು ಪ್ಯಾಂಟ್ ಬೆಲ್ಟ್ ಸಡಿಲಿಸಿ ಝಿಪ್‌ಗೆ ಕೈ ಹಾಕುತ್ತಿದ್ದಂತೆ ಕೈ ಏಕದಂ ಒಳಕ್ಕೇ ಹೋಯಿತು- ಗರ್ಭಗುಡಿಗೇ ಅಯಾಚಿತ ಪ್ರವೇಶ ಸಿಕ್ಕ ಕಳ್ಳನ ಹಾಗೆ! ಪ್ರೊಫೆಸರ್‌ಗೆ ಆಘಾತವೇ ಆಯಿತು.
'ಅರೆ, ಇದೇನಿದು ಝಿಪ್ ತೆರೆದೇ ಇದೆಯಲ್ಲ, ಇದನ್ನು ಯಾವಾಗ ತೆರೆದೆ? ಅಂಗಿ ತೆಗೆಯುವ ಮೊದಲೇ ತೆರೆದೆನೇ? ಛೇ! ಇಲ್ಲ...ಇಲ್ಲ... ಅಥವಾ ಅದು ತನ್ನಿಂದ ತಾನೇ ಏನಾದ್ರೂ... ಇಂಪಾಸಿಬಲ್. ಹೊಸ ಪ್ಯಾಂಟು. ಹಾಗಾಗಲು ಹೇಗೆ ಸಾಧ್ಯ ಹಾಗಿದ್ದರೆ? ಏನಾಯ್ತು ಬೆಳಿಗ್ಗೆಯಿಡೀ ಕಾಲೇಜಿನಲ್ಲಿ ಝಿಪ್ ತೆರೆದೇ ಇತ್ತೇ?' ಕ್ಲಾಸಿನಲ್ಲಿ ಮೇಡಂಗಳ ಮುಂದೆ ಈ ಸಾಧ್ಯತೆ ಊಹಿಸಿಯೇ ಅವರು ಕುಸಿದು ಹೋದರು.
ಛೇ, ಛೇ.. ಇದು ಸಾಧ್ಯವೇ ಇಲ್ಲ. ಬೆಳಿಗ್ಗೆ ಕಾಲೇಜಿಗೆ ಹೋಗುವ ಮುನ್ನ ಝಿಪ್ ಎಳೆದ ಸ್ಪರ್ಶಾನುಭವ ಅವರ ಬೆರಳುಗಳಲ್ಲಿ ಇನ್ನೂ ಹಸಿಯಾಗಿತ್ತು. ಪರ್ರ್... ಸದ್ದು ಈಗೆಂದರೀಗ ಕೇಳಿದಂತಿತ್ತು. ಮತ್ತೆ ಕಾಲೇಜಿನಲ್ಲಿ ಝಿಪ್ ಹಾಕದ ಬಗ್ಗೆ ಯಾರೂ ಕಣ್ಸೂಚನೆ ಕೂಡ ನೀಡಿರಲಿಲ್ಲ. ಕ್ಲಾಸಿನಲ್ಲಿ ವಿದ್ಯಾರ್ಥಿಗಳ ಕಿಂಚಿತ್ ನಗೆಯಲೆ ಸಹ ಕಂಡಿರಲಿಲ್ಲ. ಹುಡುಗಿಯರ ಮುಖದಲ್ಲಿ ಅಸಹ್ಯಭಾವವೂ ತೋರಲಿಲ್ಲ. ಇನ್‌ಶರ್ಟ್ ಮಾಡಿದ್ದು ಚೂರು ಅತ್ತಿತ್ತವಾದರೂ, 'ಏನ್ರೀ ಹೀರೋ, ಡ್ರೆಸ್ ಹಾಕ್ಕೊಂಡು ಹೊರಳಾಡಿ ಬಂದ್ರೇನ್ರೀ? ಹೀಗಾದ್ರೆ ಹುಡುಗಿಯರಲ್ಲಿ ತಮ್ಮ ಟಿಆರ್ಪಿ ಗತಿ ಏನ್ರೀ' ಎಂದು ಕೀಟಲೆ ಮಾಡುವ ಹಿರಿಯ ಸ್ನೇಹಿತ ಗುರುಮೂರ್ತಿ ಸರ್ ಇಂದು ಏನೂ ಹೇಳಿರಲಿಲ್ಲ. ಅಂದ್ಮೇಲೆ ಝಿಪ್ ಸರಿಯಾಗಿ ಇದ್ದಿರಲೇಬೇಕು. ಅಥವಾ... ಇದನ್ನು ನೋಡಿಯೂ ವಿದ್ಯಾರ್ಥಿಗಳು ಹೆದರಿ ಕುಳಿತರೇ? ಗುರುಮೂರ್ತಿ ಸರ್ ಸುಮ್ಮನಿದ್ದು ತಮಾಷೆ ನೋಡಿದರೇ? ಮೇಡಂಗಳ ಮೆಲುಕಿಗೆ ತನ್ನ ತೆರೆದ ಝಿಪ್ ಸಿಕ್ಕಿಬಿಟ್ಟಿತೇ...?
ಪ್ಯಾಂಟ್ ಕಳಚಿ ಹುಕ್‌ಗೆ ತೂಗುವ ಮುನ್ನ ಝಿಪ್ಪನ್ನು ಎರಡು- ಮೂರು ಸಾರಿ ಪರ್ ಪರ್ ಎಂದು ಹಿಂದೆ-ಮುಂದೆ ಎಳೆದು ಪರೀಕ್ಷಿಸಿದರು ಗಜಪತಿ. ಇಲ್ಲ, ಝಿಪ್ ಸರಿಯಾಗಿಯೇ ಇದೆ. 'ಅಯ್ಯೋ, ನನಗೇ ಹೀಗಾಗಬೇಕೇ, ಅದೂ ಇಂದು' ಗಜಪತಿ ಹೈಟೆನ್ಷನ್ನಿಗೆ ಒಳಗಾಗಿಬಿಟ್ಟರು. ಈ ಮೂರುವರೆ ಅಂಗುಲ ಝಿಪ್ ಮೂಲಕ ತನ್ನ ಮಾನವೆಲ್ಲ ಹೋಲ್ಸೇಲ್ ಹರಾಜಾದಂತೆ ಅವರಿಗೆ ತೋರಿತು. ಅವರ ತೀವ್ರ ಆತ್ಮ ಮರುಕಕ್ಕೆ ಆ ದಿನ ವಿಶೇಷ ಕಾರಣವೂ ಇತ್ತು. ಅಂದು ಎರಡು ಪೀರಿಯಡ್ ನಂತರ ಕಾಲೇಜಿನ ಆ ವರ್ಷದ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ಜರುಗಿತ್ತು. ಅದಕ್ಕೇ ಅವರು ಸ್ವಲ್ಪ ಠಾಕು-ಟೀಕಾಗೇ ಕಾಲೇಜಿಗೆ ಹೋಗಿದ್ದರು.
ಮನಸ್ಸನ್ನು ಮುಷ್ಠಿಯಲ್ಲಿ ಹಿಡಿದು ಆ ಬೆಳಗಿನ ತಮ್ಮ ಕಾರ್ಯವಿಧಿಗಳನ್ನೆಲ್ಲ ಇಂಚಿಂಚಾಗಿ ಈಗ ಸ್ಮರಿಸಿದರು. ಸ್ನಾನ ಮಾಡಿದ್ದು, ಲುಂಗಿ ಉಟ್ಟಿದ್ದು, ಸಿಂಡಿಕೇಟ್ ಬ್ಯಾಂಕ್ ಕ್ಲರ್ಕ್ ಆಗಿದ್ದ ರೂಂಮೇಟ್ ಕೇಶವನ್ ನಾಯರ್ ತಯಾರಿಸಿದ್ದ ಉಪ್ಪಿಟ್ಟು ತಿಂದಿದ್ದು, ನಂತರ ವಿಶೇಷ ಸಂದರ್ಭಕ್ಕೆಂದೇ ಆಲ್ಮೇರಾದಲ್ಲಿ ನೇತು ಬಿದ್ದಿದ್ದ ಪ್ಯಾಂಟ್ ಶರ್ಟ್, ಜಾಕೆಟ್ ಧರಿಸಿದ್ದು. ಕಾಳಜಿಯಿಂದ ಡ್ರೆಸ್‌ಗೆ ಕೊನೆಯ ಟಚ್ ಕೊಟ್ಟಿದ್ದು, ತಲೆಗೂದಲನ್ನು ತಿದ್ದಿ-ತೀಡಿ ನಮ್ರಗೊಳಿಸಿದ್ದು, ಬಗ್ಗಿ-ಸೆಟೆದು-ತಿರುಗಿ ಹತ್ತಾರು ಕೋನಗಳಿಂದ ನೋಡಿ ಡ್ರೆಸ್ಸನ್ನು ನೇರ್ಪುಗೊಳಿಸಿದ್ದು, ಮತ್ತೆ ಮತ್ತೆ ಝಿಪ್ಪನ್ನು ಎಡ-ಬಲ ಕೈಬೆರಳುಗಳಿಂದ ಮುಟ್ಟಿ ಅಂಗಡಿಕಾರರು ರಾತ್ರಿ ಅಂಗಡಿಯ ಬೀಗ ಬಿದ್ದುದನ್ನು ಖಾತ್ರಿಪಡಿಸಿಕೊಳ್ಳುವೋಪಾದಿಯಲ್ಲಿ ಖಾತ್ರಿಪಡಿಸಿಕೊಂಡಿದ್ದು- ಎಲ್ಲ ಮಂಜಿನ ತೆರೆ ಹರಿದಾಗ ಸ್ಫುಟಗೊಳ್ಳುವ ಸನ್ನಿವೇಶದಂತೆ ಕಣ್ಮುಂದೆ ಬಂತು.
ಝಿಪ್ ಹಾಕದೆ ತಾನು ಕಾಲೇಜಿಗೆ ಹೋಗಿರಲು ಶಕ್ಯವೇ ಇಲ್ಲ. ಅದೂ ಒಂದು ಸಮಾರಂಭ ಇದ್ದಾಗ ತಾನೇ ಮುಖ್ಯ ಅಥಿತಿಗಳನ್ನು ಪರಿಚಯಿಸಲಿದ್ದಾಗ ಅಥವಾ... ಅಥವಾ... ನನ್ನ ನೆನಪೇ ಕೈಕೊಟ್ಟಿದೆಯೇ? ಇಂದು ಬೆಳಿಗ್ಗೆ ಝಿಪ್ ಪರೀಕ್ಷಿಸಲು ಮರೆತಿದ್ದೆನೇ? ಕ್ರೀಡಾ ಚಟುವಟಿಕೆಗಳ ಉದ್ಘಾಟಕರಾಗಿದ್ದ ಜಿಪಂ ಸದಸ್ಯೆ ಕುಮಾರಿ ವಾಸಂತಿಯವರನ್ನು ಪರಿಚಯಿಸುವಾಗ ಹಾಗಿದ್ದರೆ ಝಿಪ್...! ಪರಿಚಯಿಸಿ ಅವರೊಂದಿಗೆ ಕೈಕುಲುಕುವಾಗ ಅವರು ಮುಖ ಕೊಟ್ಟು ನೋಡದೆ ಕೆಳಗೇ ಏನೋ ನೋಡಿದಂತಿತ್ತಲ್ಲ.. ಸಭೆಯ ನಂತರ ಅಥಿತಿಗಳೊಂದಿಗೆ ಫೋಟೋಕ್ಕೆ ಪೋಸ್ ಕೊಟ್ಟಾಗಲೂ ಝಿಪ್... ಹಾಗಿದ್ದರೆ ತಾನೊಬ್ಬ ಹಾಸ್ಯಾಸ್ಪದ ಮಾಕ್ ಹೀರೋ ಆಗಿಬಿಟ್ಟೆನೇ ಅದೂ ಹೋಗಿ ಹೋಗಿ ಈ ದಿನ...
ಪ್ರೊ. ಗಜಪತಿ ಒಂಥರಾ ಶೋಕಿಲಾಲರು. ಚಿಕ್ಕಮಗಳೂರಿನ ಯಾವುದೋ ಸರಕಾರಿ ಪಿ.ಯು. ಕಾಲೇಜಿನಿಂದ ಇಲ್ಲಿಗೆ ವರ್ಗವಾಗಿ ಬಂದಿದ್ದ ಬ್ರಹ್ಮಚಾರಿ (ಅವಿವಾಹಿತ ಅಂದ್ಬಿಡಿ ಸರ್, ಸಾಕು ಅಂತ ಅವರು ಆಗಾಗ ಹೇಳುತ್ತಿದ್ದರು)ಯಾದ ಅವರು ಸರಿಯಾದ ವಸತಿಗೆ ಹುಡುಕೀ ಹುಡುಕಿ ಕೊನೆಯಲ್ಲಿ ಕೇಶವನ್ ನಾಯರ್ ಜೊತೆ ಪುಟ್ಟ ರೂಮು ಹಂಚಿಕೊಂಡಿದ್ದರು. ಆದರೆ ಒಂದು ತಾಲೂಕು ಕೇಂದ್ರ ಸ್ಥಳವೂ ಅಲ್ಲದ ಈ ಊರಿಗೆ ಬಂದ ಮೇಲೆ ಅವರಿಗೇನೋ ಅತೃಪ್ತಿ. ಧೋಬಿ, ಟೇಲರ್, ಕ್ಷೌರಿಕರ ಬಗ್ಗೆ, ಕಾಲೇಜ್ ಸ್ಟಾಫ್‌ರೂಂ, ಕ್ಲಾಸ್ ರೂಮಿನ ಬೆಂಚ್-ಡೆಸ್ಕ್ ಬಗ್ಗೆ, ಹವಾಮಾನದ ಬಗ್ಗೆ - ಒಂದೇ, ಎರಡೇ- ಸಕಲ ಚರಾಚರ ಸಂಗತಿಗಳ ಬಗ್ಗೆ...
ನನನ
ಅವರಿಗೆ ಅತೃಪ್ತಿ. ಯಾವುದೂ ತನ್ನ ನಿರೀಕ್ಷೆಯ ಮಟ್ಟಕ್ಕಿಲ್ಲ ಎಂಬ ಕೊರಗು. ಹೀಗಿದ್ದೂ ಕ್ಲಾಸ್ ಬಗ್ಗೆ, ಅದರಲ್ಲೂ ಒಂದು ಪುಟ್ಟ ಪುಷ್ಪ ಪ್ರದರ್ಶನದಂತೆ ತೋರುವ ಹುಡುಗಿಯರ ಬಗ್ಗೆ ಮಾತ್ರ ಖುಷಿ ಇತ್ತು. ಅದಕ್ಕೇ ಕ್ಲಾಸಿನಲ್ಲಿ ತೃಪ್ತರಾಗಿ ಕಾಣುತ್ತಿದ್ದರು. ವಿಷಯವೂ ಕನ್ನಡ, ಕೇಳಬೇಕೇ? ಕತೆಗಿತೆ-ಜೋಕುಗಳ ಗಾಳದಿಂದಾಗಿ ವಿದ್ಯಾರ್ಥಿಗಳ ನೆಚ್ಚಿನ ಗಜಪತಿ ಸರ್ ಆಗಿಬಿಟ್ಟರು. ವಿದ್ಯಾರ್ಥಿಗಳಲ್ಲಿ ಇಂಪ್ರೆಶನ್ ಕ್ರಿಯೇಟ್ ಮಾಡ್ಬೇಕು, ಸ್ಟಾಫಿನಲ್ಲಿ, ಊರಲ್ಲಿ ಕೂಡ. ಹೀಗೆ ಇಂಪ್ರೆಶನ್ ಎಂಬ ಶಬ್ದ ಅವರ ದೇಹದ ಒಂದು ಭಾಗವೆಂಬಂತೆ ಅವರ ಜೊತೆ ಬೆಳೆಯಿತು. ವಿದ್ಯಾರ್ಥಿಗಳ ಕಣ್ಣಲ್ಲಂತೂ ತಾನು ದಿನೇ ದಿನೆ ಬೆಳೆಯಬೇಕೆಂಬ ಕಾತರ ಅವರಿಗೆ.
ಎಂದಿನಂತೆ ಸರಿ ಸುಮಾರು ಎರಡೂ ಕಾಲು ಘಂಟೆಗೆ ಕೇಶವನ್ ನಾಯರ್ ಊಟಕ್ಕೆ ಬಂದ. ಡ್ರೆಸ್ ಅರೆಬರೆ ಕಳಚಿ ಕೈಕಾಲು ಒರೆಸಿಕೊಳ್ಳುತ್ತಾ ಊಟದ ಟೇಬಲ್ಲಿಗೆ ಬಂದ ಆತ, 'ದಾರಿಯಲ್ಲಿ ಕಾಳೇಜ್ ಸ್ಟೂಡೆಂಟ್ಸ್ ಸಿಕ್ಕರು. ದೇ ಆರ್ ಇನ್ ಎ ಜಾಳಿ ಮೂಡ್ ಟುಡೇ. ವಾಟ್ಸ್ ದ ಮೇಟರ್?' ಎಂದ. 'ಹೇಳಿದ್ದೆನಲ್ಲಾ ನಾಯರ್, ಇಂದು ಕಾರ್ಯಕ್ರಮ ಇತ್ತು' ಅಂತಾ. ಗಜಪತಿ ಏಕೋ ಮಾತಾಡುವ ಮೂಡ್ನಲ್ಲಿಲ್ಲ ಎಂದು ಅರಿತ ನಾಯರ್. ತನ್ನನ್ನು ತಪ್ಪಾಗಿ ತಿಳಿಯಬಾರದೆಂಬ ಉದ್ದೇಶದಿಂದ, 'ಮೆಟ್ ಸ್ಟೂಡೆಂಟ್ಸ್? ಅವರು ಕಾರ್ಯಕ್ರಮದ ಬಗ್ಗೆ ಅಥವಾ ನನ್ನ ಬಗ್ಗೆ ಏನಾದ್ರೂ ಹೇಳ್ತಾ ಇದ್ರಾ?' ಅಂತ ಗಜಪತಿ ಕೇಳಿಬಿಟ್ಟರು.
'ಯಾ ಯಾ. ದೇ ವೆರ್ ಟೆಳ್ಳಿಂಗ್ ವಾಸಂತಿ ಮೇಡಂ... ಗಜಪತಿ ಸರ್... ಫೋಟೋ ಅಂತಾ ಏನೇನೋ ಹೇಳ್ತಾ ಇದ್ರು. ದೇ ವೆರ್ ಸಿಂಪ್ಳಿ ಳಾಫಿಂಗ್' ಎಂದ. ಗಜಪತಿಗೆ ಕುಳಿತ ಕುರ್ಚಿ ಪಾತಾಳಕ್ಕೇ ಕುಸಿದಂತೆನಿಸಿತು. ಸಂಶಯವೇ ಇಲ್ಲ. ಝಿಪ್ ಕಾರ್ಯಕ್ರಮದುದ್ದಕ್ಕೂ ತೆರೆದೇ ಇದ್ದಿರಬೇಕು. ಛೇ! ಎಂಥಾ ಕೆಲಸವಾಗಿಬಿಟ್ಟಿತು. ಯಾವಾಗ್ಲೂ ಕ್ಲಾಸಿಗೆ ಹೋಗುವ ಮುನ್ನ ಸ್ಟಾಫ್ರೂಮ್ ಕನ್ನಡಿ ಎದುರು ನಿಂತು ಅವರು ಹಲವು ತರದ ಡ್ರೆಸ್ ಟೆಸ್ಟ್‌ಗಳಿಗೆ ಒಡ್ಡಿಕೊಳ್ಳುತ್ತಿದ್ದರು. ಟಾಯ್ಲೆಟ್ಗೆ ಹೋಗಿ ಬಂದಾಗಲಂತೂ ಝಿಪ್ ಬಗೆಗಿನ ಅವರ ಕಾಳಜಿ ದ್ವಿಗುಣಗೊಳ್ಳುತ್ತಿತ್ತು. ಅದು ಅಚಾತುರ್ಯ ಘಟಿಸುವ ಮಾಮೂಲಿ ಸಂದರ್ಭ ಎಂಬ ಎಚ್ಚರಿಕೆ ಅವರಿಗೆ, ಯಾವುದೋ ಅರ್ಜೆಂಟ್‌ನಲ್ಲಿ ಕಪಾಟಿನ ಕದ ತೆರೆದರೆ ಅದನ್ನು ಹಾಕದೆ ಹಾಗೇ ಬಿಡುವ ಸಾಧ್ಯತೆ ಇರುತ್ತದಲ್ಲ ಅದಕ್ಕೆ.
ಇಂದು ಇದ್ದ ಒಂದೇ ಒಂದು ಪೀರಿಯಡ್‌ಗೆ ಹೋಗುವಾಗ ಕಾರ್ಯಕ್ರಮದ ಗುಂಗಿನಲ್ಲಿ ಇದನ್ನು ತಾನು ಮರೆತೆನೇ ಅಂತ ಅನ್ನಿಸಿತು. ವಿಶೇಷ ಕಾರ್ಯಕ್ರಮ ಇದ್ದಾಗಲಂತೂ ಸ್ಟಾಫಿನವರೆಲ್ಲ ಹಾಲ್‌ಗೆ ಹೋದ ಮೇಲೆ ಪ್ರಾಚಾರ್ಯರ ಚೇಂಬರಿನ ಅಲ್ಮೇರಾದ ಮುಂದೆ ನಿಂತು ಎಲ್ಲ ಹೇಗಿರಬೇಕೋ ಹಾಗೆ, ಎಲ್ಲಿರಬೇಕೋ ಅಲ್ಲಿ ಇದೆ ಅಂತ ಖಾತ್ರಿಯಾದ ಮೇಲೆಯೇ ಯಕ್ಷಗಾನದ ರಾಜ ಪಾತ್ರ ಪ್ರವೇಶಿಸುವ ಹಾಗೆ ತಡವಾಗಿ ಸಭಾಭವನ ಪ್ರವೇಶಿಸುತ್ತಿದ್ದರು. ಇಂದು ಕೂಡ ಇದರಲ್ಲಿ ವ್ಯತ್ಯಯವಾಗಿರಲಿಲ್ಲ. ಆದರೆ ಗಡಿಬಿಡಿಯಲ್ಲಿ ಝಿಪ್ ನೋಡುವುದನ್ನು ಮರೆತೆ ಅಂತ ತೋರಿತು ಅವರಿಗೆ. ಹೌದೌದು, ಮರೆತಿರಲೇಬೇಕು. ಯಾಕೆಂದರೆ, ಕಾರ್ಯಕ್ರಮದ ನಂತರ ನಡೆದ ಚಹಾಕೂಟದಲ್ಲಿ ಆ ಅರ್ಥಶಾಸ್ತ್ರ ಮೇಡಂ ನಳಿನಿ ಪಡಿಯಾರ ನನ್ನ ಟೇಬಲ್ ಅಡಿಯಿಂದ ಗಂಭೀರ ದೃಷ್ಟಿ ಹಾಯಿಸಿ ಏನನ್ನೋ ನೋಡುತ್ತಿದ್ದರು. ಈ ಗಾಂಭೀರ್ಯದ ಹಿಂದಿನ ಹಿಕ್ಮತ್ ತೆರೆದ ಝಿಪ್ಪೇ ಇದ್ದೀತೇ? ಅಥವಾ...
ಮೂರು ಘಂಟೆ ಸುಮಾರಿಗೆ ನಾಯರ್ ಬ್ಯಾಂಕಿಗೆ ಹೋದ. ಗಜಪತಿ ಮನಸ್ಸು ಒಂದು ಗ್ಯಾಂಗ್ರಿನ್ ಥರಾ ಆಗಿತ್ತು. ಇಂಥಾ ಸಣ್ಣ ವಿಷಯಕ್ಕೆ ಇಷ್ಟು ತಲೆಬಿಸಿ ಏಕೆ ಎಂದು ಅಡ್ಡಾದರು. ಆದರೆ ಝಿಪ್ ತಲೆಯಲ್ಲಿ ಓಪನ್ನಾಗಿ ಮಲಗಗೊಡಲಿಲ್ಲ. ಎದ್ದು ಚಾ ಮಾಡಿ ಕುಡಿದರು. ರೂಮಿನಲ್ಲಿರುವುದೇ ಅಸಾಧ್ಯವೆನಿಸಿತು. ಯೋಚನೆಯಲ್ಲೇ ಪ್ಯಾಂಟ್‌ಶರ್ಟ್ ಏರಿಸಿಕೊಂಡು ಹೊರ ಬಂದುಬಿಟ್ಟರು. ಸುಭಾಷ್ ಚೌಕ ದಾಟಿ ಮಾರ್ಕೆಟ್ ಬಳಿ ಬರುತ್ತಿದ್ದಂತೆ ಬೈಕಿನ ಮೇಲೆ ಮಗಳು ಪ್ರೀತಿಯನ್ನು ಕೂಡ್ರಿಸಿಕೊಂಡು ಬಂದ ಕಂಟ್ರಾಕ್ಟರ್ ಉದ್ದಂಡ ನಾಯ್ಕರು ಗಜಪತಿಯವರ ಮುಂದೆ ಅಂದ್ರೆ ಮುಂದೇ ಬಂದು ಇಳಿದುಬಿಟ್ಟರು. ಅವರನ್ನು ತಪ್ಪಿಸಿಕೊಳ್ಳುವುದು ಸಾಧ್ಯವೇ ಇರಲಿಲ್ಲ.
'ನಮಸ್ಕಾರ ಪ್ರೊ. ಸಾಹೇಬರಿಗೆ' ಎಂದರು ನಾಯ್ಕರು. ವ್ಯಂಗ್ಯವಿರಬಹುದೇ ಎಂದು ಅನುಮಾನಿಸುತ್ತಲೇ ನಮಸ್ಕಾರ ಎಂದರು ಗಜಪತಿ. ಬೆಳಿಗ್ಗೆ ಕಾರ್ಯಕ್ರಮ ಇತ್ತಂತಲ್ಲ, ಪ್ರೀತಿ ಅದರ ಬಗ್ಗೆ, ನಿಮ್ಮ ಬಗ್ಗೆ ಎಲ್ಲಾ ಹೇಳಿದಳು. 'ಎಲ್ಲಾ' ಎಂದು ನಾಯ್ಕರು ಒತ್ತಿ ಹೇಳಿದಂತೆನಿಸಿ ಅಂಗಿಯೊಳಗೆಲ್ಲೋ ಉರಿ ಇರುವೆ ಸಿಕ್ಕಂದದಲ್ಲಿ ಗಜಪತಿ ಪೇಚಾಡಿಬಿಟ್ಟರು. ಪ್ರೀತಿ ತನ್ನನ್ನೇ ಆಪಾದ ಮಸ್ತಕ ವೀಕ್ಷಿಸುತ್ತಿದ್ದಂತೆನಿಸಿತು. 'ಓಕೆ ಸರ್, ಬರ್ತೇನೆ' ಎಂದು ನಾಯ್ಕರನ್ನು ಸಾಗಹಾಕಿದ ಗಜಪತಿ ನಾಲ್ಕಾರು ಹೆಜ್ಜೆ ಹಾಕಿ ಹಿಂದೊಮ್ಮೆ ನೋಡಿದರು. ಬೈಕ್ ಮೇಲೆ ಕುಳಿತ ಪ್ರೀತಿ ಮುಸಿ ಮುಸಿ ನಗುತ್ತಿರುವಂತೆ ಭಾಸವಾಯಿತು. ದೇವರೇ, ಎಲ್ಲ ಹುಡುಗಿಯರಿಗೂ ಝಿಪ್ ಆಖ್ಯಾನ ಗೊತ್ತಾಗಿ ಬಿಟ್ಟಿದೆ. ಇನ್ನು ಮುಗಿಯಿತು ಅಂತ ನಖಶಿಖಾಂತ ಬೆವೆತುಬಿಟ್ಟರು. ಅಥವಾ ಅವಳು ಹೀಗೇ ಸಹಜವಾಗಿ ನಗೆಯಾಡಿರಬಹುದೇ?
ತಾನು ಮಾರ್ಕೆಟ್‌ಗೆ ಯಾಕೆ ಬಂದೆ ಎಂಬುದೇ ಪ್ರೊ. ಗಜಪತಿಯವರಿಗೆ ತಿಳಿದಿರಲಿಲ್ಲ. ಮಾರ್ಕೆಟ್ ಹಾದು ಹೋಗುವಾಗ, ಟೊಮೆಟೋ ಪಾವ್ ಕಿಲೋಕ್ಕೆ ಐದು ರೂಪಾಯಿ, ಹತ್ತು ರೂಪಾಯಿಗೆ ಮೂರು ಮೂಲಂಗಿ, ಸೇಬು ಅರವತ್ತು ರೂಪಾಯಿಗೆ ಕಿಲೋ ಇತ್ಯಾದಿ ಕೂಗು ಗಜಪತಿಯವರ ಕಿವಿ ತುಂಬಿತು. ಈ ವ್ಯಾಪಾರಿ ಗಂಡಸರು ಲುಂಗಿಯನ್ನು ತೊಡೆಯ ಮೇಲಕ್ಕೆ ಎತ್ತಿ ಕಟ್ಟಿ ಅಂತರ್ 'ಅಂಗ'- ಬಹಿರ್ 'ಅಂಗ'ಗಳಲ್ಲಿ ಒಂಥರಾ ಅದ್ವೈತ ಸಾಧಿಸಿದ್ದರು. ಅರೆ ತೆರೆದ, ಹೆಚ್ಚು- ಕಡಿಮೆ ಪೂರ್ಣ ತೆರೆದ ಸೆರಗಿನೆದೆಯ ಹೆಂಗಸರ 'ಎದೆಗಾರಿಕೆ'ಯನ್ನು ತಾನು ಇಂದೇ ಮೊದಲ ಸಲ ಇಷ್ಟು ಸರಿಯಾಗಿ ನೋಡಿದಂತೆನಿಸಿತು ಅವರಿಗೆ. ಅದನ್ನೇ ಕೆಲ ಹೊತ್ತು ನೋಡುತ್ತ ನಿಂತರು. ಆದರೆ ಅದು ಮುಜುಗರವೆನಿಸಿತು. ಇವರ ಜಗತ್ತಿನಲ್ಲಿ ಇದೆಷ್ಟು ಸಹಜ ಎಂದುಕೊಳ್ಳುತ್ತಿದ್ದಂತೆ ತಾನು ಝಿಪ್ನಂಥ ಒಂದು ಕ್ಷುಲ್ಲಕ ಸಂಗತಿಗೆ ಭೂವ್ಯೋಮಪಾತಾಳ ಒಂದು ಮಾಡುತ್ತಿರುವೆನೇ ಎಂದು ಯೋಚಿಸಿದರು. ಇಲ್ಲ, ಇಲ್ಲ ಇಂಥದಕ್ಕೆಲ್ಲ ನಿಶ್ಚಿಂತನಾಗಿರಲು ತಾನೇನೂ ತರಕಾರಿ ವ್ಯಾಪಾರಿಯಲ್ಲ, ಒಬ್ಬ ಗೌರವಾನ್ವಿತ ಪ್ರೊಫೆಸರ್ ಎಂದಿತು ಒಳಮನಸ್ಸು.
ನನನ
ರೂಮಿಗೆ ಮರಳಿದಾಗ ಕೇಶವನ್ ಅದಾಗಲೇ ಬಂದು ಚಹಾ ಮಾಡುತ್ತಿದ್ದರು. ಇಬ್ಬರೂ ಮುಖಾಮುಖಿಯಾಗಿ ಕುಳಿತು ಚಹಾ ಕುಡಿಯುತ್ತಿದ್ದರೂ ಮೌನ ಚಹವನ್ನು ತಣ್ಣಗಾಗಿಸುತ್ತಿತ್ತು. ಏನೂ ಗಮ್ಮತ್ ಸಿಗ್ತಾ ಇಲ್ಲ ಅಂತ ಅನ್ನಿಸಿ ನಾಯರ್, 'ವಾಟ್ ಸರ್, ಯು ಆರ್ ಡಳ್?' ಎಂದ. 'ನೋ, ನೋ ಹಾಗೇನಿಲ್ಲ' ಎಂದ ಗಜಪತಿ ಸ್ವಲ್ಪ ತಡೆದು, 'ಇಂದು ಬೆಳಿಗ್ಗೆ ನಾನು ಕಾಲೇಜಿಗೆ ಹಾಕ್ಕೊಂಡ್ ಹೋದ ಹೊಸ ಡ್ರೆಸ್ ಹೇಗಿತ್ತು?' ಎಂದು ಕೇಳಿದರು. 'ಸಕತ್ ಸಾರ್, ಫಿಟ್ಟಿಂಗ್ ಸುಪರ್ಬ್' ಎಂದ ನಾಯರ್. 'ಪ್ಯಾಂಟು ವೆಸ್ಟ್ ಎಂಡ್ ಫ್ರಂಟ್..' ಎಂದು ಕೇಳಿದ್ದಕ್ಕೆ 'ಓಳ್ ಫ್ಯಾಬ್ಯುಲಸ್' ಎಂದು ಕೊನೆಯ ನಿರ್ಣಯ ಸಾರಿಯೇ ಬಿಟ್ಟ ಮಾರಾಯ. ಥುತ್, ಹೋಗಿ ಹೋಗಿ ಈ ಮಲೆಯಾಳಿ ಮಂಕುದಿಣ್ಣೆಯನ್ನು ಕೇಳಿದೆನಲ್ಲ ಎನ್ನಿಸಿತು ಗಜಪತಿಗೆ. ಅಂತೆಯೇ ಅವರು ನಾಯರ್ ಸುದ್ದಿ ಬಿಟ್ಟರು.
ಮರುದಿನ ಬೆಳಿಗ್ಗೆ ಕಾಲೇಜಿಗೆ ಹೋಗಲೋ ಬಿಡಲೋ ಎಂಬ ತಳಮಳ ಅವರನ್ನು ಕಾಡಿತು. ಒಂದು ದಿನ ಹೋಗದಿರಬಹುದು. ಆದರೆ ಎಷ್ಟು ದಿನ ಅಂತ ತಪ್ಪಿಸಿಕೊಳ್ಳಲು ಶಕ್ಯ? ಈ ಹೊಯ್ದಾಟದಲ್ಲೇ ಹೋಗಲಣಿಯಾಗಿ ಬಿಟ್ಟರು. ಡ್ರೆಸ್ ಮಾಡಿ ಹೊರಬಂದವರು ಬೆರಳಿಂದ ಮತ್ತೆ ಮತ್ತೆ ಝಿಪ್ ಪರೀಕ್ಷಿಸಿಕೊಂಡರು. ಏನೋ ಮರೆತಂತೆನಿಸಿ ಒಳಹೋಗಿ ಆಲ್ಮೇರಾ ಮುಂದೆ ನಿಂತು ಎಲ್ಲ ಅಂಕು-ಡೊಂಕು ತಿದ್ದಿಕೊಂಡರು. ಬೈಕ್ ಮೇಲೆ ಕುಳಿತವರು ಝಿಪ್ ಕಡೆ ಕಣ್ಣು ಹಾಯಿಸಿದರು- ಕೆಲ ಝಿಪ್‌ಗಳು ಸ್ವಲ್ಪ ಪ್ರೆಶರ್ ಬಿದ್ದರೂ 'ಆ' ಎಂದು ಬಾಯ್ದೆರೆದು ಬಿಡುತ್ತವೆ ಎಂಬುದು ನೆನಪಾಗಿ.
ಆ ದಿನವೂ ಪ್ರೊ. ಗಜಪತಿಗೆ ಒಂದೇ ಒಂದು ಪೀರಿಯಡ್ ಇತ್ತು. ವಿಪರೀತ ತಲೆನೋವೆಂದು ನೆಪ ಹೇಳಿ, ಸರಸರ ಲೈಬ್ರರಿ ಸೇರಿ ಪೇಪರ್ ಓದತೊಡಗಿದರು. ಎದುರಾದ ಸಹೋದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ನಿನ್ನೆ ತಮ್ಮ ಭಾಷಣ ಬಹಳ ಚೆನ್ನಾಗಿತ್ತು ಎಂದರೂ ಅವರಿಗೆ ಏನೋ ಕಸಿವಿಸಿಯಾದಂತೆನಿಸಿತು. ತಮ್ಮ ಹತ್ತಿರ ಕೂಡಾ ಏನೂ ಮಾತಾಡದೆ ಕೇವಲ ನಮಸ್ತೆ ಸರ್ ಎಂದು ಜಾರಿಕೊಂಡ ಪ್ರೊ. ಗಜಪತಿ ಬಗ್ಗೆ ಗುರುಮೂರ್ತಿ ಸರ್‌ಗೆ ಅನುಮಾನ ಬಂದು ಅವರು ಕೂಡ ಲೈಬ್ರರಿ ಸೇರಿ ಅವರ ಮುಂದೇ ಕುಳಿತರು.
'ಇದೇನು ಪ್ರೊ. ಸಾಹೇಬರ ಮುಖದ ಮೇಲೆ ಅಕಾಲದಲ್ಲಿ ಕಾರ್ಮೋಡ?' ಎಂದರು. ಅದಕ್ಕೆ ಗಜಪತಿ 'ಏನಿಲ್ಲ ಸರ್, ಸ್ವಲ್ಪ ತಲೆನೋವು' ಅಂದರು. 'ಹಲೋ, ನಿಂದೆಲ್ಲಾ ಗೊತ್ತಪ್ಪ, ಮತ್ತೇನೋ ಬ್ರೇನ್ ಟ್ಯೂಮರ್ ಅಲ್ವಾ? ನಾಲ್ಕಾರು ತಿಂಗಳ ಹಿಂದೆ, ನೆನಪಿದೆಯಾ? ಪ್ರಿನ್ಸಿಪಾಲರು ನಿನ್ನನ್ನು ಯಾವುದೋ ಸಂದರ್ಭದಲ್ಲಿ ತಮಾಷೆಗೆ ಸುಂದರ ರಾವಣ ಅಂತ ಹೇಳಿದ್ದು.. ಅದು ಹೇಗೋ ನಿನ್ನ ಕಿವಿಗೆ ಬಿದ್ದು ಸುಂದರ ಅಂತ ಹೇಳಿದ್ದು ಸರಿ, ಆದರೆ ರಾವಣ?! ರಾವಣನ ಅತ್ಯಾಚಾರ, ಸೀತೆ ಸಹಿತ ಎಷ್ಟೋ ಹೆಂಗಸರನ್ನು ಯಾಮಾರಿಸಿದ್ದು ಎಲ್ಲ ಮನಸ್ಸಿನಲ್ಲಿ ಗಿಜಿಬಿಜಿಗೊಂಡು ತನ್ನ ಬದುಕಿನ ಯಾವುದೋ ಬ್ರಹ್ಮಾಂಡ ರಹಸ್ಯ ಬಯಲಾದ ಹಾಗೆ ಒಂದು ವಾರ ಪೆಚ್ಚಾದದ್ದು. ಈಗ ಮತ್ತೆ ಅಂಥದ್ದೇ ಏನೋ...' ಕೆಲ ಕ್ಷಣ ತಡೆದು ಗಜಪತಿ ಬಾಯ್ಬಿಟ್ಟರು. 'ಸರ್, ನಿನ್ನೆ ಕಾರ್ಯಕ್ರಮದಲ್ಲಿ, ಆ ನಂತರ ನಾವು ಕ್ಯಾಂಟೀನ್ ಹೊರಗಡೆ ಮಾತಾಡ್ತಾ ನಿಂತಾಗ ನೀವು ನನ್ನ ಡ್ರೆಸ್ ಸರಿಯಾಗಿ ನೋಡಿದ್ರಾ? ಯಾಕೆ ಕೇಳಿದೆ ಅಂದ್ರೆ... ನಾನು ರೂಮಿಗೆ ಹೋಗಿ ನೋಡ್ದಾಗ ನನ್ನ ಪ್ಯಾಂಟ್ ಝಿಪ್ ಓಪನ್ನಾಗಿಯೇ ಇತ್ತು ಸರ್. ನನಗೆ ಶಾಕ್ ಆಯ್ತು. ಯಾವಾಗ ಹಾಗಾಯ್ತೋ ಗೊತ್ತಿಲ್ಲ ಸರ್' 'ಥೋತ್ತರಿ, ಹೇಳಲಿಲ್ವೇ ಮತ್ತೆ ಯಾವುದೋ ವಿಷಾದಯೋಗ ಶುರುವಾಗಿರ್ಬೇಕು ಅಂತ. ಅಲ್ಲಾ, ನೆನಪು ಮಾಡ್ಕೊಳ್ಳಿ. ನಿನ್ನೆ ನಾವು ಮಾತಾಡ್ವಾಗ ನನ್ನ ಮಗಳು ಅಪೇಕ್ಷಾ ಇದ್ದಳು. ಅವಳನ್ನು ನೀವು ನಿಮ್ಮ ಬೈಕಿನ ಮೇಲೆ ಕೂಡ್ರಿಸಿಕೊಂಡು ಹಿಡಕೊಂಡಿದ್ರಿ. ಹಿಂದೆ ಯಾವಾಗೋ ನಿಮಗೆ ಹೇಳಿದ್ದೆ, ಅವಳು ಬಹಳ ಕಿಲಾಡಿ. ಅಂಗಿ ಬಟನ್, ಝಿಪ್ ಎಲ್ಲಾ ಗೊತ್ತಾಗದಂತೆ ತೆಗೆದು ಹಾಕಿ ಪೋಸ್ಟ್‌ಆಫೀಸ್ ಓಪನ್ ಅಂತ ಕೇಕೆ ಹಾಕ್ತಾಳೆ ಅಂತ. ನಿಮಗೆ ಮಾತಿಗೆ ನಿಂತ್ರೆ- ಅದೇನೋ ಹೇಳ್ತಾರಲ್ಲಾ- ಕತ್ತರಿಸಿಕೊಂಡು ಹೋದ್ರೂ ತಿಳಿಯೂದಿಲ್ಲಾ. ಇದು ಅವಳದೇ ಕಿತಾಪತಿ ಇರಬೇಕು' ಅಂದರು ಮೂರ್ತಿ ಸರ್.
ಹುಂ, ಇರಬಹುದು. ಬೈಕಿನ ಮೇಲೆ ರೂಮಿಗೆ ಹೋಗುವಾಗ ತೊಡೆಯ ಭಾಗದಲ್ಲಿ ಪ್ಯಾಂಟ್ ಸಡಿಲಾಗಿದ್ದಂತೆ, ಗಾಳಿ ಕದ್ದು ಒಳಸೇರಿದಂತೆ ತನಗೆ ಅನ್ನಿಸಿದ್ದರ ನೆನಪಾಯ್ತು ಪ್ರೊ. ಗಜಪತಿಗೆ. ಅಥವಾ ಇದೆಲ್ಲ ತನ್ನ ಭ್ರಮೆಯಷ್ಟೇ ಇರಬಹುದೇ? ಅಂತೆಯೇ ಹೇಳಿದರು- ಸರ್, ಕಾರ್ಯಕ್ರಮದ ಮೊದಲೇ ಹೀಗಾಗಿದ್ದರೆ...
ಅದಕ್ಕೆ ಮೂರ್ತಿ ಸರ್, 'ಇದೊಳ್ಳೆ ಕಥೆಯಾಯ್ತಲ್ಲ. ಅಲ್ಲಯ್ಯ ಅಂಥ ಕಾರ್ಯಕ್ರಮದಲ್ಲಿ ನಿನ್ನ ಝಿಪ್ ಯಾರು ನೋಡ್ತಾ ಕೂತ್ಕೊಳ್ತಾರಯ್ಯಾ? ಅದು ಓಪನ್ ಇರಲಿ, ಏನೇ ಇರಲಿ...'
'ಆದರೆ ಸರ್, ಕೆಲವರಾದ್ರೂ...' ಎಂದು ಗಜಪತಿ ರಾಗ ಎಳೆದರು. ನೋಡಪ್ಪ, ನಮ್ಮ ಕಾಲೇಜಿನಲ್ಲಿ ಈ ಝಿಪ್ ಅನ್ನೋ ಝಿಪ್ ಕುರಿತು ದೊಡ್ಡ ಪುರಾಣವೇ ಇದೆ. ನಿನ್ನದೇ ಮೊದಲಿನದಲ್ಲ. ಹಿಂದಿನ ನಮ್ಮ ಹೆಡ್ ಮಾಸ್ತರ್ರು ಇದನ್ನು ಹೇಳ್ತಿದ್ದರು.
ನನನ
ಆಗಿನ್ನೂ ಈ ಊರಿನ ಟೇಲರ್‌ವರೆಗೆ ಝಿಪ್ ಬಂದು ಮುಟ್ಟಿರಲಿಲ್ಲ. ಝಿಪ್ ಬದಲು ಬಟನ್ ಹಾಕುತ್ತಿದ್ದರು. ಆಗ ಮಕ್ಕಳು ನಕ್ಕಾಗ, ಅಣ್ಣಿಗೇರಿ ಮಾಸ್ತರ್ರು 'ಏನ್ ನಗಾಕ್ ಹತ್ತೀರ್ಯೋ? ಆ ದರ್ಜಿ ನನ್ಮಗ ಬಟನ್ ಮಾತ್ರ ಇಟ್ಟಾನ, ಕಾಜೇ ಮಾಡಿಲ್ಲ. ಏನ್ ಮಾಡಾಕ್ಕಾಕ್ಕೈತ್ರಿ' ಎಂದರಂತೆ. ಮಕ್ಕಳು ಇನ್ನೂ ಜೋರಾಗಿ ನಕ್ಕರೆ ಮಾಸ್ತರ್ರು ಪ್ಯಾಂಟ್ ಸರಿಪಡಿಸಲು ಪ್ರಯತ್ನಿಸುತ್ತಾ ಅವರ ಜೊತೆಗೇ ನಕ್ಕರಂತೆ. ಮತ್ತೆ ಕೆಲ ವರ್ಷಗಳ ನಂತರ ಅಜಿತ್ ಸರ್‌ಗೆ ಕಾಲೇಜ್ ಕ್ಲಾಸಿನಲ್ಲಿ ಇಂಥದೇ ಪರಿಸ್ಥಿತಿ. ಝಿಪ್ ಹಾಕಿರಲಿಲ್ಲ. ವಿದ್ಯಾರ್ಥಿಗಳ ಮುಸಿಮುಸಿ ನಗು. 'ಓ ಇದಾ ಹೌದು, ಝಿಪ್ ಹಾಕಲು ಮರೆತೆ. ಏನಾಯ್ತೀಗ? ಎಲ್ಲ ದರ್ಶನ ಆಯ್ತಾ? ಇಲ್ವಾ ನೋಡ್ಕೋಳಿ' ಎಂದು ಇನ್ನೂ ಕಿಸಿದು ತೋರ್ಸಿ ಪರ್ ಅಂತ ಝಿಪ್ ಹಾಕ್ಕೊಂಡ ಹೊಡೆತಕ್ಕೆ ವಿದ್ಯಾರ್ಥಿಗಳು ಆಯ್ಸಕೋಲ್ಡ್ ಆಗಿಬಿಟ್ಟಿದ್ದರಂತೆ. ನಿನ್ನದು ತೃತೀಯ ವಿನೋದ ಕಥಾನಕ. ಅವರೆಲ್ಲ ನೋಡು ಮುರಿದ ಬ್ಯಾಟ್‌ನಲ್ಲೇ ಸಿಕ್ಸರ್ ಹೊಡೆದು ಮ್ಯಾಚ್ ಗೆಲ್ಲಲು ಅದನ್ನು ಬಳಸಿದಂತೆ ಝಿಪ್ಪನ್ನು ಬಳಸಿಕೊಂಡುಬಿಟ್ಟರು. ನೀನೋ ನಿನ್ನ ಮಾನ-ಮರ್ಯಾದೆ ಎಲ್ಲ ತೆರೆದಿದ್ದ ಝಿಪ್‌ನಿಂದಲೇ ಸ್ಖಲಿಸಿ ಹೋದ ಹಾಗೆ ನಿರ್ವೀರ್ಯನಾಗಿ ಬಿಟ್ಟಿದ್ದೀಯ ಎಂದು ಬೈಕ್ ಸ್ಟಾರ್ಟ್ ಮಾಡಿದರು ಮೂರ್ತಿ ಸರ್.
'ಆದರೂ ಸರ್, ಹುಡುಗಿಯರ ಮುಂದೆ.. ಮತ್ತೆ ಸಭೆಯಲ್ಲಿ ಝಿಪ್ ಓಪನ್ ಆಗೇ ಇದ್ರೆ...' ಎಂದು ಪ್ರೊ. ಗಜಪತಿ ರಾಗ ಎಳೆಯುತ್ತಲೇ ಇದ್ದರು. ಅವರ ಸಮಾಧಾನದ ನಂತರವೂ ಗಜಪತಿ ಮನಸ್ಸಿನಲ್ಲಿ ತೆರೆದ ಝಿಪ್ ಗೊಂದಲ ಬಗೆಹರಿಯಲೇ ಇಲ್ಲ. ಬೈಕ್ ಏರುತ್ತಿದ್ದಂತೆ ತಮ್ಮ ಪೋಸ್ಟ್ ಆಫೀಸ್ ಮುಚ್ಚಿರುವ ಬಗ್ಗೆ ಖಾತ್ರಿ ಮಾಡಿಕೊಳ್ಳಲು ಅವರ ಬೆರಳು ಮರೆಯಲಿಲ್ಲ.
-ಡಾ. ವಿ.ಎನ್.ಹೆಗಡೆ
ganga.hegde@gmail.com