ಅದು ಮಾಂತ್ರಿಕ ವಾಸ್ತವತೆ ಎನ್ನುವ ಸಾಹಿತ್ಯ ಪರಿಭಾಷೆಯೇ ಪ್ರಚಲಿತವಿರದ ಕಾಲ. ಅಂದರೆ ಕಳೆದ ಶತಮಾನದ ಐವತ್ತರ ದಶಕದಲ್ಲಿ ತ.ರಾ.ಸು. ಅವರ ಹಂಸಗೀತೆ ಪ್ರಕಟವಾದದ್ದು. ಅದರಲ್ಲಿ ಪ್ರಾರಂಭದಲ್ಲಿಯೇ ಕಥಾ ನಾಯಕ ಭೈರವಿ ವೆಂಕಟಸುಬ್ಬಯ್ಯನವರು ನೇರವಾಗಿ ಕಾರಣರಲ್ಲದ ಉಪಕಥೆಯ ನಿರೂಪಣೆ ಇದೆ. ಅದನ್ನು ಸಂಕ್ಷಿಪ್ತವಾಗಿ ಹೀಗೆ ವಿವರಿಸಬಹುದು; ದುರ್ಗದ ಪಾಳೆಯಗಾರರು ಪ್ರತಿದಿನ ಹಿಡಂಭೇಶ್ವರ ಮತ್ತು ಇತರ ದೇವಸ್ಥಾನಗಳಿಗೆ ಮಂಗಳಾರತಿ ಹಾಗೂ ಪ್ರಸಾದ ಸ್ವೀಕರಿಸುವುದಕ್ಕೆ ಬರುವುದು ವಾಡಿಕೆ. ಹಿಡಂಭೇಶ್ವರ ಅರ್ಚಕ ವೀರಣ್ಣಜ್ಜ ಅದರ ಪರಮ ಭಕ್ತ. ಅವರಿಗಿದ್ದ ಒಂದೇ ದುರ್ಗುಣವೆಂದರೆ ಹೆಂಡತಿಯಲ್ಲದೆ ಇನ್ನೊಬ್ಬಳು ಪ್ರಿಯತಮೆ. ಪ್ರತಿದಿನ ಪೂಜಾವಿಧಿಗಳನ್ನು ಪೂರೈಸಿ ಪ್ರಭುಗಳು ತೆರಳಿದ ನಂತರ ದೇವರಿಗೆ ಮುಡಿಸಿದ ಹೂವಿನ ಹಾರ ತೆಗದುಕೊಂಡು ಹೋಗಿ ತನ್ನ ಪ್ರಿಯತಮೆಗೆ ಮುಡಿಸುವುದು ನಿರಂತರವಾಗಿರುತ್ತದೆ. ಅದೊಂದು ದಿನ ನಡುರಾತ್ರಿ ಕಳೆದರೂ ಪ್ರಭುಗಳು ಬಾರದಿದ್ದರಿಂದ ಅರ್ಚಕರು ಹೋಗಿ ದೇವರಿಗೆಂದು ಮೀಸಲಿದ್ದ ಹೂವಿನ ಸರವನ್ನು ಪ್ರಿಯತಮೆಗೆ ಮುಡಿಸಿದ ನಂತರ ಅರಮನೆಯಲ್ಲಿ ಬತೇರಿ ಕಹಳೆ ಮೊಳಗುತ್ತದೆ. ಅದು ಪಾಳೆಯಗಾರರು ಮಾಮೂಲಿನಂತೆ ದೇವಸ್ಥಾನಗಳಿಗೆ ಹೊರಟ ಸೂಚನೆ. ಗಾಬರಿಗೊಂಡ ವೀರಣ್ಣಜ್ಜರು ಅವಸರದಲ್ಲಿ ಹೂವಿನ ಸರವನ್ನು ಆಕೆಯಿಂದ ತೆಗೆದುಕೊಂಡು ಹೋಗುತ್ತಾರೆ. ಅದನ್ನು ಹಿಡಂಭೇಶ್ವರನಿಗೆ ಮುಡಿಸಿ ಪೂಜೆ ಮಾಡಿ ಕಾಯುತ್ತಿದ್ದು ಅನಂತರ ಪ್ರಭುಗಳಿಗೆ ಹೂ-ಪ್ರಸಾದ ಕೊಟ್ಟಾಗ ಅವರಿಗೆ ಅದರಲ್ಲಿ ಅಷ್ಟುದ್ದದ ಕೂದಲೆಳೆ ಸಿಗುತ್ತದೆ. ಪ್ರಭುಗಳು ಅದನ್ನು ಗಮನಿಸಿ ಪ್ರಶ್ನಿಸುತ್ತಾರೆ. ಅರ್ಚಕರು ಅದು ದೈವದ ಕೂದಲೆಂದು ಹೇಳಿಬಿಡುತ್ತಾರೆ! ಮಾತುಗಳು ಬೆಳೆದು ವಾತಾವರಣ ಬಿಗಿಯಾಗುತ್ತದೆ. ಅದನ್ನು ತಿಳಿಗೊಳಿಸಲು ಪ್ರಭುಗಳ ಜೊತೆಗೆ ಬಂದಿದ್ದ ಅವರ ಆಪ್ತರಾದ ವೆಂಕಟಸುಬ್ಬಯ್ಯನವರು ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ. ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಮುಂದುವರಿಸುವ ಪ್ರಭುಗಳು ದೇವರ ಜಡೆಯ ದರ್ಶನ ಬಯಸುತ್ತಾರೆ. ವೀರಣ್ಣಜ್ಜ ಮತ್ತು ವೆಂಕಟಸುಬ್ಬಯ್ಯ ಅದನ್ನು ಸವಾಲಿನಂತೆ ಸ್ವೀಕರಿಸುತ್ತಾರೆ. ಮಾರನೆಯ ದಿನ ಬೆಳಿಗ್ಗೆ ದೇವರ ಪೂಜೆಗೆ ಬಂದ ಪ್ರಭುಗಳಿಗೆ ದೇವರ ದಟ್ಟ ಕೂದಲಿನ ಜಡೆಯ ದರ್ಶನವಾಗುತ್ತದೆ. ಪ್ರಭುಗಳು ಬೆರಗಾಗುತ್ತಾರೆ. ಅವರಲ್ಲಿ ಅಪರಾಧಿ ಭಾವನೆ ಉಂಟಾಗುತ್ತದೆ. ವೀರಣ್ಣಜ್ಜ ಭಾವಪರವಶರಾಗಿರುತ್ತಾರೆ. ಇಡೀ ಪ್ರಸಂಗದಿಂದ ವ್ಯಗ್ರಗೊಂಡಿದ್ದ ವೆಂಕಟಸುಬ್ಬಯ್ಯನವರು ಅಷ್ಟಕ್ಕೇ ಬಿಡದೆ ಕೃತಕವಿರಬಹುದೇನೋ ನೋಡಿ ಎಂದು ಪ್ರಭುಗಳಿಗೆ ಸವಾಲು ಹಾಕಿ ಮುಷ್ಟಿಯಷ್ಟು ಕೂದಲೆಳೆಗಳನ್ನು ಹಿಡಿದು ಬಲವಾಗಿ ಜಗ್ಗುತ್ತಾರೆ. ದೇವರ ವಿಗ್ರಹದ ನೆತ್ತಿಯ ಮೇಲೆ ಕೊಂಚ ರಕ್ತ ಕಾಣಿಸಿಕೊಳ್ಳುತ್ತದೆ. ಅದನ್ನು ಎಲ್ಲರೂ ಗಮನಿಸುತ್ತಾರೆ. ಸೋಜಿಗವೆಂದರೆ ಪ್ರಭುಗಳಿಗಿರಲಿ ಉಳಿದವರು ಕೂಡ ಹೀಗಾಗುವುದೆಂದು ನಿರೀಕ್ಷಿಸಿರುವುದಿಲ್ಲ. ಅವರೇಕೆ ಓದುಗರೂ ಕೂಡ ಸಾಕಷ್ಟು ಹಿಂಜರಿಕೆಯಿಂದಲೇ ಅದನ್ನು ಒಪ್ಪಿಕೊಂಡು ಕಥನದಲ್ಲಿ ಬೆರೆಯುತ್ತಾರೆ. ಇಲ್ಲಿ ವಾಸ್ತವವದ ಜೊತೆಗೆ ಅತಾರ್ಕಿಕ ಅಥವಾ ಅಸಂಭವ ಎಂದು ಗ್ರಹೀತಕ್ಕೊಳಗಾಗಿರುವ ಅಂಶ ಅಂದರೆ ಮಾಂತ್ರಿಕತೆಯ ಅಂಶ ಮಿಳಿತಗೊಳ್ಳುತ್ತದೆ. ಅನಂತರ ಕಾದಂಬರಿ ವಾಸ್ತವತೆಯ ಜಾಡು ಹಿಡಿದು ಮುಂದುವರಿಯುತ್ತದೆ. ಇದು ಮಾಂತ್ರಿಕ ವಾಸ್ತವತೆಯ ಪ್ರಮುಖ ಜೀವದ್ರವ್ಯ.
ಲಂಕೇಶರ 'ವಾಸನೆ'ಯ ಕಥಾ ನಾಯಕ ಎಂಎಲ್ಎ ಬಸವರಾಜಯ್ಯನ ಮೈಯಿಂದ ಹಬ್ಬುವ ಸಹಿಸಿಕೊಳ್ಳಲು ಅಸಾಧ್ಯವೆನಿಸುವ ವಾಸನೆ ಕಥೆಯ ನೇಯ್ಗೆಯಲ್ಲಿದೆ. ಅವನು ತನ್ನವರು ಹಾಗೂ ಜನಸಮುದಾಯದಿಂದ ಒಂದಿಲ್ಲೊಂದು ಬಗೆಯಲ್ಲಿ ದೂರವಾಗತೊಡಗುತ್ತಾನೆ. ವಾಸನೆಯನ್ನು ಸಾಂಕೇತಿಕ ಅರ್ಥದಲ್ಲಿ ಬಳಸಿಕೊಳ್ಳಲಾಗಿದೆ ಎಂದು ಭಾವಿಸಲು ಸಾಧ್ಯವಿದೆ.
ಕಥೆಯ ಉದ್ದೇಶಕ್ಕೆ ಅಂದರೆ ಬಸವರಾಜಯ್ಯನ ಪಾತ್ರದ ಮೂಲಕ ರಾಜಕೀಯ ವ್ಯಕ್ತಿಗಳ ಧೋರಣೆ ಇತ್ಯಾದಿಯನ್ನು ಧ್ವನಿಸುವುದಕ್ಕೆ ಈ ತಂತ್ರದ ಬಳಕೆಯ ಬಗ್ಗೆ ಎಲ್ಲರ ಗಮನ ಹೋಯಿತಷ್ಟೆ. ಅದು ಪಡೆದಿರುವ ವಿಶೇಷತೆಯನ್ನು ಗುರುತಿಸುವ ಸಾಧ್ಯತೆ ಇರಲಿಲ್ಲ. ಈ ಕಥೆಗಳಗಳಲ್ಲದೆ ಮಾಂತ್ರಿಕ ವಾಸ್ತವತೆಯ ಪರಿಕಲ್ಪನೆಯ ಪರಿಧಿಗೆ ಹೊಂದುವ ಇನ್ನೂ ಕೆಲವು ಕನ್ನಡದ ಕಥೆಗಳು ಉಂಟೆಂದು ತೋರುತ್ತದೆ.
ಮಾಂತ್ರಿಕ ವಾಸ್ತವತೆ ಎನ್ನುವುದು ಪ್ರಪಂಚದ ಸಾಹಿತ್ಯ ವಲಯದಲ್ಲಿ ಆ ಹೆಸರಿನಿಂದ ಪ್ರಚುರಗೊಂಡದ್ದು ಕೊಲಂಬಿಯಾದ ಲೇಖಕ ಗೇಬ್ರಿಯಲ್ ಗಾಷರ್ ಯಾ ಮಾರ್ಕ್ವೆಜ್ ಅವರ ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್ ಕಾದಂಬರಿಗೆ 1982ರಲ್ಲಿ ನೊಬೆಲ್ ಪುರಸ್ಕಾರ ದೊರೆತ ನಂತರ. ಈಗ ಎಂಭತ್ತೈದರಲ್ಲಿರುವ ಆತ ತನ್ನ ಮೂವತ್ತೊಂಬತ್ತನೇ ವಯಸ್ಸಿನಲ್ಲಿ ಸ್ಪಾನಿಷ್ನಲ್ಲಿ ಬರೆದ ಕಾದಂಬರಿ ಅದು. ಹಾಗೆ ನೋಡಿದರೆ ಮಾತ್ರಿಕ ವಾಸ್ತವತೆ ಎನ್ನುವುದು ಭಾರತೀಯರ ಭಾವಪ್ರಪಂಚಕ್ಕೆ ಅತ್ಯಂತ ಹತ್ತಿರವಾದದ್ದು. ಧಾರ್ಮಿಕ ನೆಲೆಗಟ್ಟಿನ ಪುರಾಣ ಹಾಗೂ ಜಾನಪದವನ್ನು ಯಥಾವತ್ತಾಗಿ ಒಪ್ಪಿಕೊಂಡು ನಮ್ಮ ಕಲ್ಪನೆಯ ಚೌಕಟ್ಟಿಗೆ ಹೊಂದಿಸಿಕೊಂಡಿರುವುದು ಇದಕ್ಕೆ ಮೂಲ. ಇವುಗಳಲ್ಲದೆ ಪಾಶ್ಚಿಮಾತ್ಯ ಸಾಹಿತ್ಯದ ವರ್ಜೀನಿಯಾ ವೂಲ್ಫ್, ಜೇಮ್ಸ್ ಜಾಯ್ಸ್ ಇತ್ಯಾದಿಯವರ ಕೃತಿಗಳು ಮತ್ತು ಅನಂತರ ಕನ್ನಡ ಸಾಹಿತ್ಯದಲ್ಲಿಯೂ ಮೊದಲಿಟ್ಟ ಪ್ರಜ್ಞಾಪ್ರವಾಹದ ಅರಿವಿನ ಕಾರಣ ಮಾತ್ರಿಕ ವಾಸ್ತವತೆ ಪರಕೀಯವೆನಿಸುವುದಿಲ್ಲ. ಇಲ್ಲಿ ಗಮನಿಸಬೇಕಾದ ಅತಿ ಮುಖ್ಯ ವಿಷಯವೆಂದರೆ ಪ್ರಜ್ಞಾಪ್ರವಾಹ ಶೈಲಿಯ ಈ ರೀತಿಯ ಬರಹ ಮನುಷ್ಯನ ಒಳಪ್ರಪಂಚಕ್ಕೆ ಸಂಬಂಧಿಸಿರುತ್ತದೆ. ಮಾತ್ರಿಕ ವಾಸ್ತವತೆಯಲ್ಲಿ ಅದು ಹೊರಪ್ರಪಂಚಕ್ಕೆ ಸಂಬಂಧಿಸಿರುತ್ತದೆ. ಇಲ್ಲಿ ಜರುಗುವುದು ಮ್ಯಾಜಿಕ್ ಎಂದು ಹೇಳಲಾಗುವ ಕಣ್ಣುಕಟ್ಟುವಾಟವಲ್ಲ, ಅದು ವಾಸ್ತವ ಜಗತ್ತಿನಲ್ಲಿ ಅಡಗಿಕೊಂಡಿರುವ ಮ್ಯಾಜಿಕಲ್ ಅಂಶವನ್ನು. ಅಂದರೆ ಮಾಂತ್ರಿಕತೆಯನ್ನು ಗುರುತಿಸುವ, ಸೂಕ್ಷ್ಮ ಸಂವೇದನೆಯಿಂದ ಅದಕ್ಕೆ ಪ್ರತಿಕ್ರಿಯಿಸುವ, ಅನುಭವಕ್ಕೆ ತಂದುಕೊಳ್ಳುವ ರೀತಿಯಿದು.
ವಿಮರ್ಶಕರ ಪ್ರಕಾರ ಮಾಂತ್ರಿಕ ವಾಸ್ತವತೆ ಎನ್ನುವುದನ್ನು ಕುರಿತ ಪ್ರಥಮ ಪರಿಕಲ್ಪನೆ ಮೊದಲು ವ್ಯಕ್ತಗೊಂಡದ್ದು ಚಿತ್ರಕಲೆಯಲ್ಲಿ. ಅದಾದದ್ದು 1920ರಲ್ಲಿ, ಜರ್ಮನಿಯ ಕಲಾ ವಿಮರ್ಶಕ ಫ್ರಾನ್ಸ್ ರೋ ವಾಸ್ತವದಲ್ಲಿ ಹುದುಗಿರುವ ಮಾತ್ರಿಕ ಅಂಶಗಳನ್ನು ವ್ಯಕ್ತಗೊಳಿಸುವ ಅಭಿಪ್ರಾಯವನ್ನು ಸೂಚಿಸಿದಾಗ. ಇದರ ಪ್ರಭಾವ ದಕ್ಷಿಣ ಅಮೆರಿಕ ಮತ್ತು ಐರೋಪ್ಯ ದೇಶಗಳಲ್ಲಿ ವಿಶೇಷವಾಗಿ ಕಂಡುಬಂತು. ಆದರೆ ಸಾಹಿತ್ಯದ ಪ್ರಭೇದಕ್ಕೆ ಮಾಂತ್ರಿಕ ವಾಸ್ತವತೆ ಎನ್ನುವ ನಾಮಕರಣ ಮಾಡಿದವನು ಕ್ಯೂಬಾದ ಅಲಿಯೋ ಶೆರ್ಪಾಂತಯೇ (ಅವನ ದಿ ಲಾಸ್ಟ್ ಸ್ಟೆಪ್ಸ್, ಕಿಂಗ್ಡಮ್ ಆಫ್ ದ ವರ್ಡ್, ಎಕ್ಸ್ಪೊಸಿಷನ್ ಇನ್ ಕೆಥೆಡ್ರಲ್ ಕಾದಂಬರಿಗಳು ಪ್ರಸಿದ್ಧ). ಮಾಂತ್ರಿಕ ವಾಸ್ತವತೆಯ ವಿಶೇಷತೆಯೆಂದರೆ ಸಾಮಾನ್ಯವಾಗಿ ಅದು ಎರಡು ಅಂಶಗಳನ್ನು ಒಳಗೊಂಡಿರುತ್ತದೆ. ಒಂದು ಸ್ವೀಕೃತ ವಾಸ್ತವಕ್ಕೆ, ಸಂಭಾವ್ಯಕ್ಕೆ, ತರ್ಕಕ್ಕೆ, ಪರೀಕ್ಷಿಸಲು ಸಾಧ್ಯವಾಗುವ ವಿಧಾನಕ್ಕೆ, ಈಗಾಗಲೇ ಒಗ್ಗಿ ಹೋಗಿರುವ ಪ್ರಜ್ಞಾ ಪರಿಧಿಯೊಳಗೆ ಸುಲಭವಾಗಿ ಒಳಗೊಳ್ಳುವ ರೀತಿ ಮತ್ತು ಇದಕ್ಕೆ ವ್ಯತಿರಿಕ್ತವಾಗಿ ಅವಾಸ್ತವ, ಅಸಂಭಾವ್ಯವೆನಿಸುವ, ಅತಾರ್ಕಿಕವೆಂದು ತೋರುವ, ಪರೀಕ್ಷಿಸಲು ಅಸಾಧ್ಯವಾದ, ವಾಸ್ತವ ಪ್ರಜ್ಞೆಯ ಸೀಮೆಯೊಳಗೆ ಪ್ರವೇಶಿಸಲು ಹವಣಿಸುವ ಮಾಂತ್ರಿಕ ರೀತಿಯ ಅಂಶವೊಂದಿರುತ್ತದೆ. ಇದು ಅಭಿಜಾತ, ಮಿಥ್, ಜಾನಪದ ಅಥವಾ ಇನ್ನಿತರ ರೀತಿಯದಾಗಿರಬಹುದು.
ಇದು ಪ್ರಮುಖ ಭಾಗವಾದರೆ ಮತ್ತಷ್ಟು ಪ್ರಮುಖವಾದದ್ದು ಇವೆರಡೂ ಒಂದರ ಜೊತೆ ಮತ್ತೊಂದು ಉಂಟುಮಾಡುವ ಸಾಂಗತ್ಯ. ಇನ್ನಷ್ಟು ಸರಳ ಪದಗಳಲ್ಲಿ ಹೇಳುವುದಾದರೆ ಸಾಮಾನ್ಯವಾದ ವಾಸ್ತವ ನೆಲೆಗಟ್ಟಿನಲ್ಲಿ ಅಸಾಮಾನ್ಯತೆ ಬೆರೆತು ಒಂದಾಗುವ ಬಗೆ. ಮಾಂತ್ರಿಕತೆ ಅಸ್ತಿತ್ವ ಪಡೆಯುವುದು ಅಥವಾ ಹುಟ್ಟು ಪಡೆಯುವುದು ಈ ಎರಡು ಅಂಶಗಳು ಒಂದರ ಜೊತೆ ಮತ್ತೊಂದು ಮಿಳಿತವಾಗಬೇಕಾದ ಸಂದರ್ಭದಲ್ಲಿ. ಇವೆರಡು ಪರಸ್ಪರ ಬೆಂಬಲಿಸಿ ಹೊಂದಿಕೊಳ್ಳಬಹುದು ಅಥವಾ ಒಂದರ ವಿರುದ್ಧ ಮತ್ತೊಂದು ಸಿಡಿದು ನಿಲ್ಲಬಹುದು. ಸಾಮಾನ್ಯವಾಗಿ ವಿರುದ್ಧ ಬಗೆಯ ಈ ಭಾಗಗಳು ಬಾಲ್ಯ: ಹರೆಯ, ಸಾವು: ಬದುಕು, ಎಚ್ಚರ: ನಿದ್ದೆ, ಭೂತ: ವರ್ತಮಾನ, ನಾಗರಿಕ: ಅನಾಗರಿಕ, ಪುರಾತನ: ಆಧುನಿಕ ಇತ್ಯಾದಿ ರೀತಿಯಲ್ಲಿರುತ್ತವೆ. ಹೀಗೆ ವಿರೋಧ ಭಾಗಗಳು ಸಂಧಿಸಿದಾಗ ಸಾಮಾನ್ಯವಾಗಿ ಅವುಗಳ ಅಸ್ತಿತ್ವವಷ್ಟೇ ಅಲ್ಲ, ಕಾಲ, ಸ್ಥಾನಗಳೂ ಪಲ್ಲಟಗೊಳ್ಳುತ್ತವೆ. ಹೀಗುಂಟಾದ ಪಲ್ಲಟ ಕೃತಿಯ ಶಿಲ್ಪದಲ್ಲಿ ಸಾಮರಸ್ಯ ಹೊಂದಿರುತ್ತದೆ.
ಮಾಂತ್ರಿಕ ವಾಸ್ತವತೆಯಲ್ಲಿ ಜೈವಿಕ ಮತ್ತು ಇತರ ಎಲ್ಲ ರೂಪಗಳಿಗೂ ಭಾವಜಗತ್ತುಂಟು. ಇದಕ್ಕೆ ಮಾಂಟೇಗ್ ನಿರೂಪಿಸಿದ ಸಂಕ್ಷಿಪ್ತ ಮತ್ತು ಸಮರ್ಥ ಉದಾಹರಣೆ ಇದೆ. ತಾನು ಸಾಕಿದ ಬೆಕ್ಕಿನ ಜೊತೆ ಆಟವಾಡುತ್ತ ಸಂತೋಷವಾಗಿದ್ದೇನೆ ಎಂದು ಅವನು ಭಾವಿಸಿದ. ಹೀಗಿದ್ದರೆ ಅದು ವಾಸ್ತವತೆಯಾಗುತ್ತದೆ. ಆದರೆ ಮುಂದುವರಿದು ಬೆಕ್ಕು ಕೂಡ ಅದನ್ನೇ ಮಾಡುತ್ತ ಸಂತೋಷವಾಗಿದೆ ಎನ್ನುವುದು ವಾಸ್ತವದ ಇನ್ನೊಂದು ಮುಖ. ಇದು ಮಾಂತ್ರಿಕ ವಾಸ್ತವತೆಯಾಗುತ್ತದೆ ಎನ್ನುತ್ತಾನೆ. ಇಲ್ಲಿ ಒಂದು ಸಮಸ್ಯೆ ಎದುರಾದರೆ ಆಶ್ಚರ್ಯವಿಲ್ಲ. ಸಾಮಾನ್ಯವಾದ್ದದ್ದು ಅಥವಾ ವಾಸ್ತವದ ಅಂಶ ಅಡೆತಡೆಯಿಲ್ಲದೇ ಸ್ವೀಕೃತವಾಗುತ್ತದೆ. ಆದರೆ ಮಾಂತ್ರಿಕತೆ ಅಥವಾ ಅವಾಸ್ತವ ಅಂಶ ಸ್ವೀಕೃತವಾಗುವುದು ಹೇಗೆ? ಸಾಮಾನ್ಯ ಅಂಶವನ್ನು ಸರಿಯಾದ ಕ್ರಮದಲ್ಲಿ ಸ್ವೀಕರಿಸುವುದಕ್ಕೆ ಓದುಗರ ವಾಸ್ತವ ಪ್ರಜ್ಞೆ ಯಾವ ಬಿಗಿತ ಬಂಧನಗಳಿಗೆ ಒಳಗಾಗದೇ ಸ್ವತಂತ್ರ ಸ್ಥಿತಿಯಲ್ಲಿ ಬೇರೆಯೇ ಆದ ಇನ್ನೊಂದು ವಿಶಿಷ್ಟ ನೆಲೆಗೆ ತಲುಪಲು ಸಿದ್ಧವಾಗಿರಬೇಕಾಗುತ್ತದೆ. ಈ ಮೊದಲು ಹೇಳಿದ ಕಥೆಯಲ್ಲಿ ಬೆಕ್ಕಿಗೂ ಸಂತೋಷವಾಯಿತು ಎನ್ನುವುದು ಕೊಂಚ ಅಚ್ಚರಿ ಹುಟ್ಟಿಸುತ್ತದೆಯಲ್ಲವೇ? ಇದನ್ನು ಸ್ವೀಕರಿಸಲು ಸಣ್ಣ ಹಿಂಜರಿಕೆಯಿಂದಲಾದರೂ ಸರಿಯೆ, ಓದುಗರು ಸಿದ್ಧವಾಗಬೇಕಾಗುತ್ತದೆ. ಸಾಮಾನ್ಯವಾಗಿ ಹಾಗೆ ಮಾಡುತ್ತಾರೆಂದೂ ಮತ್ತು ಒಳ್ಳೆಯದೆಂದೂ ವಿಮರ್ಶಕ ವಲಯ ಗುರುತಿಸಿದೆ.
ಮಾಂತ್ರಿಕ ವಾಸ್ತವತೆ ಮನುಷ್ಯನ ವೈಯಕ್ತಿಕ ವಿಷಯಗಳು, ಅಂದರೆ ವ್ಯಕ್ತಿಯ ಮೂಲಭೂತವಾದ ರಾಗ ದ್ವೇಷಗಳು, ಕಾಮ, ಪ್ರೇಮ, ದ್ವೇಷ, ದುಗುಡ, ಕರುಣೆ, ಕ್ಲೇಷ, ದುಃಖ, ದುಮ್ಮಾನ ಮುಂತಾದವು ಮತ್ತು ಪರಸ್ಪರ ಸಂಬಂಧಗಳಲ್ಲಿ ತಲೆದೋರುವ ಲೆಕ್ಕವಿರದಷ್ಟು ವಿನ್ಯಾಸಗಳು ಮತ್ತು ಸಮಷ್ಟಿ ಪ್ರಜ್ಞೆಗೆ ಮತ್ತು ಸಮೂಹಕ್ಕೆ ಅನ್ವಯಿಸುವ ರಾಜಕೀಯ, ಆಧ್ಯಾತ್ಮಿಕ ವಿಷಯಗಳ ತಳಕ್ಕಿಳಿದು ಪರಿಶೋಧಿಸುವುದನ್ನೂ ಸಮರ್ಪಕವಾಗಿ ನಿರ್ವಹಿಸಿ ಪ್ರಜ್ಞಾವಿಸ್ತಾರಕ್ಕೆ ಸಹಾಯ ಮಾಡುತ್ತದೆ. ಈ ದೃಷ್ಟಿಯಿಂದ ಮಾಂತ್ರಿಕ ವಾಸ್ತವತೆ ಪರಂಪರಾಗತ ವಾಸ್ತವತೆಯ ವಿರೋಧಿಯಲ್ಲ. ಬದಲಿಗೆ ಅದರ ಎಲ್ಲ ರೀತಿಯ ಹೆಚ್ಚಳಕ್ಕೆ ಶ್ರಮಿಸುತ್ತದೆ. ಹೆಚ್ಚುಕಡಿಮೆ ಈ ಎಲ್ಲ ಹತ್ತಾರು ವಿಷಯಗಳನ್ನು ಒಳಗೊಂಡ ಕೃತಿ ಮಾರ್ಕ್ವೆಜ್ನ ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್ ಕಾದಂಬರಿ ಪ್ರಪಂಚದ ಓದುಗರಿಗೆ ಅದರಲ್ಲಿನ ಮಾಂತ್ರಿಕ ವಾಸ್ತವತೆಯನ್ನು ಅರ್ಥೈಸುವುದಕ್ಕೆ ಯಾವ ತೊಡಕೂ ಉಂಟಾಗಲಿಲ್ಲ. ಬದಲಿಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕು ಯೋಗ್ಯ ಪುರಸ್ಕಾರ, ಮನ್ನಣೆ ದೊರಕಿತು. ಇದರಿಂದ ಮಾತ್ರಿಕ ವಾಸ್ತವತೆಯ ಪರಿಕಲ್ಪನೆಗೆ ಸಂಪೂರ್ಣ ಸಮರ್ಥನೆ ಒದಗಿ ಬಂತು. ಈ ಕಾದಂಬರಿಯಲ್ಲಿ ಅದರ ವ್ಯಾಪ್ತಿ ವಿಸ್ತಾರಗಳಿಗೆ ಸಂಬಂಧಿಸಿದಂತೆ ಅನೇಕ ಉದಾಹರಣೆಗಳು ಸಿಗುತ್ತವೆ. ಇಲ್ಲಿ ಒಂದು ಮುಖ್ಯ ವಿಷಯವನ್ನು ತಿಳಿಸಬೇಕೆಂದು ಕಾಣುತ್ತದೆ. ಮಾರ್ಕ್ವೆಜ್ನ ಪ್ರಜ್ಞೆಯ ಪರಿಧಿಯನ್ನು ಹಿಗ್ಗಿಸಿದವನು ಫ್ರಾನ್ಜ್ ಕಾಫ್ಕಾ. ಅವನ ಮೆಟಮಾರ್ಫಸಿಸ್ ಕಥೆಯನ್ನು ಓದಿದ ನಂತರ ಮಾರ್ಕ್ವೆಜ್ ಆ ಮುಂಚಿನವನಾಗಿ ಉಳಿದಿರಲಿಲ್ಲವೆಂದು ಅವನೇ ಹೇಳಿಕೊಂಡಿದ್ದಾನೆ. ನಮಗೆಲ್ಲ ಗೊತ್ತಿರುವಂತೆ ಕಾಫ್ಕಾನ ಕಥೆಯಲ್ಲಿ ನೋವು, ಯಾತನೆಗೊಳಗಾದ ಕಥಾ ನಾಯಕ ಗ್ರೆಗೊರಿ ಸಾಂಸನಿಗೆ ದೊಡ್ಡ ಜಿರಲೆಯಾಗಿ ರೂಪಾಂತರಗೊಂಡಿರುವುದರ ಅರಿವಾಗುತ್ತದೆ. ಕ್ರಮೇಣ ಅವನು ಹೊರಜಗತ್ತಿನ ವ್ಯಕ್ತಿಗಳ ಜೊತೆ ಮುಖಾಮುಖಿಯಾಗಿ ತನ್ನ ಸತ್ಯವನ್ನು ದೈನಂದಿನ ಅನುಭವಗಳ ಮೂಲಕ ಅರಿತುಕೊಳ್ಳುತ್ತಾನೆ. ಕಥೆ ಅತ್ಯಂತ ಸಮರ್ಥ ಎನ್ನುವುದು ನಿಜ. ಆದರೆ ನೇತ್ಯಾತ್ಮಕ ಧೋರಣೆ ವ್ಯಕ್ತವಾಗುತ್ತದೆ. ಮಾರ್ಕ್ವೆಜ್ ಕಥೆಯೊಂದಿದೆ, 'ದ ಹ್ಯಾಂಡ್ಸಮೆಸ್ಟ್ ಡ್ರೌನ್ಡ್ ಮ್ಯಾನ್ ಇನ್ ದ ವರ್ಲ್ಡ್' (ಮುಳುಗಿ ಸತ್ತ ಚೆಲುವ). ಇದರಲ್ಲಿ ಸಮುದ್ರದಲ್ಲಿ ತೇಲಿ ಬಂದು ದಡ ಸೇರಿದ ಭಾರಿ ಗಾತ್ರದ ಸತ್ತ ಮನುಷ್ಯನೊಬ್ಬ ಅದಕ್ಕೆ ಹೊಂದಿಕೊಂಡ ಹಳ್ಳಿಯ ಒಳಿತಿಗೆ ಮತ್ತು ಹಳ್ಳಿಗರಿಗೆ ಜೀವಪರ ದೃಷ್ಟಿಕೋನ ಉಂಟಾಗುವುದಕ್ಕೆ ಕಾರಣವಾಗಿ ಕಥೆ ಒಟ್ಟಾರೆ ಧನಾತ್ಮಕ ಧೋರಣೆ ಹೊಂದಿರುವುದನ್ನು ಕಾಣುತ್ತೇವೆ.
ಈ ಪರಿಕಲ್ಪನೆ ಪ್ರಮುಖವಾಗಿ ಬೇರೂರಿದ್ದು ಹಾಗೂ ಬೆಳೆದದ್ದು ದಕ್ಷಿಣ ಅಮೆರಿಕದಲ್ಲಿ. ಹೀಗಾಗುವುದಕ್ಕೆ ಶತಮಾನಗಳ ಕಾಲ ಅಲ್ಲಿನ ಪ್ರಾಚೀನ ಹಾಗೂ ವಸಾಹತು ಸಂಸ್ಕೃತಿಗಳು ಏಕಕಾಲದಲ್ಲಿ ಅಸ್ತಿತ್ವದಲ್ಲಿ ಇದ್ದದ್ದೇ ಕಾರಣ- ನಮ್ಮಲ್ಲಿ ಒಟ್ಟೊಟ್ಟಿಗೆ ಪುರಾತನ ಹಾಗೂ ಆಧುನಿಕ ಸಂಸ್ಕೃತಿ ಇಲ್ಲವೇ? ಹಾಗೆ. ಶೇಕಡಾವಾರು ಅತಿ ಹೆಚ್ಚಿನ ನಿರಕ್ಷರಕುಕ್ಷಿಗಳಾದ ಗ್ರಾಮೀಣ ಸಮುದಾಯದ ವಿವೇಕಿಗಳು ಹಾಗೂ ಅಲ್ಪ ಪ್ರಮಾಣದ ಪುಸ್ತಕದ ಬದನೆಕಾಯಿಯ ವಿದ್ಯಾವಂತರಿಲ್ಲವೇ? ಹಾಗೆ. ರಾಜಕೀಯ ದೊಂಬರಾಟ, ಸೋಗಲಾಡಿತನ, ಹಣ, ಅಧಿಕಾರ ಮತ್ತು ಅಲ್ಲಿನ ಎಲ್ಲ ರೀತಿಯ ಒಳಿತು-ಕೆಡಕುಗಳಿಲ್ಲವೇ? ಹಾಗೆ. ದೌರ್ಜನ್ಯ, ದಮನೀಕರಣವಿಲ್ಲವೇ? ಹಾಗೆ. ಇವುಗಳಲ್ಲಿ, ಉದಾಹರಣೆಗೆ ಹೇಳುವುದಾದರೆ ಇಲ್ಲಿಯ ತನಕ ನಮ್ಮಲ್ಲಿ ಆಗಿರುವಂತೆ ಜಗತ್ತಿನ ಅನೇಕ ದೇಶಗಳಲ್ಲಿ ಔದ್ಯೋಗಿಕ ಪ್ರಗತಿ ಎಂದು ಹೇಳಲಾಗುತ್ತಾದ್ದರಿಂದ ಬಹುಜನರ ಬದುಕಿಗೆ ಉಂಟಾದ ನೆರವಿಗಿಂತ ಹಾನಿಯೇ ಹೆಚ್ಚಾಗಿರುವುದನ್ನು ಅರ್ಜೆಂಟೀನಾದ ಯೋರ್ಹ ಲೂಯಿ ಬೋಹರ್, ಅರ್ಜೆಂಟೀನಾದ ಹುಲಿಯೋ ಕರ್ತಸಾರ್, ಬ್ರೆಜಿಲ್ನ ಕ್ಲಾರಿಸ್ ಲಿಸ್ಪೆಕ್ಟರ್ ಮುಂತಾದವರು ಸಮರ್ಥವಾಗಿ ತಮ್ಮ ಕೃತಿಗಳಲ್ಲಿ ವ್ಯಕ್ತಪಡಿಸಿದ್ದಾರೆ.
ಮಾಂತ್ರಿಕತೆ ಸಾಮಾನ್ಯವಾಗಿ ಎರಡು ರೀತಿಯಲ್ಲಿ ಉಂಟಾಗುತ್ತದೆ. ವಾಸ್ತವ ರೀತಿಯಲ್ಲಿಯೇ ಪ್ರಾರಂಭಗೊಂಡು ಅನಂತರ ಅದರ ಪ್ರವೇಶವಾಗಿ ಮತ್ತೆ ವಾಸ್ತವದ ಲಕ್ಷಣಗಳನ್ನು ಅನುಸರಿಸುವುದು ಒಂದು. ಇನ್ನೊಂದರಲ್ಲಿ ಮಾತ್ರಿಕತೆಯಿಂದಲೇ ಪ್ರಾರಂಭಗೊಂಡು ಕ್ರಮೇಣ ವಾಸ್ತವ ಸ್ವರೂಪದಲ್ಲಿ ಮುಂದುವರೆಯುವುದು.
ಮಾಂತ್ರಿಕ ವಾಸ್ತವತೆಯನ್ನು ಸಾಮಾನ್ಯವಾಗಿ ಅದ್ಭುತರಮ್ಯದ ಮತ್ತೊಂದು ರೀತಿಯೆಂದು ಗುರುತಿಸಿಬಿಡುವುದು ವಾಡಿಕೆ. ಇದರಿಂದ ಉಂಟಾಗುವ ಗೊಂದಲದ ನಿವಾರಣೆಗೆ ಅದ್ಭುತರಮ್ಯ ಸಾಹಿತ್ಯ ಪ್ರಕಾರದ ಮುಖ್ಯ ಲಕ್ಷಣಗಳನ್ನು ಗಮನಿಸುವುದು ಒಳ್ಳೆಯದು.
ಅದ್ಭುತರಮ್ಯ ಕಥೆಗಳು ಸೃಷ್ಟಿಸುವ ಪ್ರಪಂಚ ವಾಸ್ತವ ಪ್ರಪಂಚಕ್ಕಿಂತ ಸಂಪೂರ್ಣ ಭಿನ್ನ. ಈಗಾಗಲೇ ವ್ಯವಸ್ಥಿತವಾಗಿರುವ ಪ್ರಪಂಚಕ್ಕಿಂತ ತೀರ ದೂರವಾದದ್ದು, ಕೇವಲ ಕಲ್ಪಿತವಾದದ್ದು. ಇದರಲ್ಲಿ ಲೇಖಕನ ಕಲ್ಪನಾ ವಿಲಾಸಕ್ಕೆ ಮುಕ್ತ ಅವಕಾಶ. ಈ ವಿಶೇಷತೆ ಕಥೆಯ ಸನ್ನಿವೇಶ, ಘಟನೆ ಇತ್ಯಾದಿಗಳಿಗೆ ಅನ್ವಯವಾಗುತ್ತದೆ. ಹೀಗೆ ಸೃಷ್ಟಿಯಾದ ಆ ಲೋಕದಲ್ಲಿ ಜರುಗುವ ವಿಧಿ-ವಿಧಾನಗಳು, ಕಟ್ಟಳೆ-ನಿಯಮಗಳು, ನಡವಳಿಕೆ-ವರ್ತನೆಗಳು ವಾಸ್ತವ ಜಗತ್ತಿಗಿಂತ ವಿಭಿನ್ನ ರೀತಿಯಲ್ಲಿರುತ್ತವೆ. ಅವು ದಿಗ್ಭ್ರಮೆ ಹುಟ್ಟಿಸುವ ಸ್ವರೂಪವನ್ನು ಹೊಂದಿರುತ್ತವೆ. ಚಕಿತಗೊಳಿಸುವ ಮತ್ತು ರೋಚಕ ಗುಣವನ್ನೂ ಪಡೆದಿರುತ್ತವೆ. ಈ ಬಗೆಯಲ್ಲಿ ಸೃಷ್ಟಿಗೊಂಡ ಲೋಕದಲ್ಲಿ ಓದುಗ ತನ್ನ ಕಾಲದಲ್ಲಿ ಪ್ರಚಲಿತವಾಗಿರುವ ನಂಬಿಕೆಗಳನ್ನು ಅಮಾನತ್ತಿನಲ್ಲಿಟ್ಟು ಯಾವುದೇ ತಕರಾರಿಲ್ಲದೆ, ಹಿಂಜರಿಕೆಯಿಲ್ಲದೆ, ಸ್ವೀಕರಿಸುವ ಅಗತ್ಯವಿರುತ್ತದೆ.
ಅದ್ಭುತರಮ್ಯ ಸಾಹಿತ್ಯ ಮುಖ್ಯವಾಗಿ ಮಕ್ಕಳ ಮನಸ್ಸಿಗೆ ಯಥೇಚ್ಛ ಆಹಾರ ಒದಗಿಸುವುದಲ್ಲದೆ ಕೆಲವು ಗಂಭೀರ ಸ್ವರೂಪದ ಉದ್ದೇಶಗಳಿರುವುದನ್ನು ಕಾಣಬಹುದು. ಮನುಷ್ಯನ ವಿಚಾರ, ಆಲೋಚನಾ ಶಕ್ತಿ, ಅರ್ಥಗ್ರಹಣೆ, ನಂಬಿಕೆಗಳು ಮತ್ತು ತಾನೇ ಬೆಳೆಸಿದ ವಿಜ್ಞಾನ-ತಂತ್ರಜ್ಞಾನಗಳ ಗೋಜಲು- ಗೊಂದಲದೊಳಗೆ ಸಿಲುಕಿರುವ ಅವಸ್ಥೆ, ವಾಸ್ತವ ಜಗತ್ತಿನ ವ್ಯಾವಹಾರಿಕ ಒತ್ತಡ, ಮಾನವ ಸಂಬಂಧಿತ ಮೌಲ್ಯಗಳ ಅಧೋಗತಿ, ಅಸಂಗತ- ಅಸಂಬದ್ಧಗಳ ಮೇಲುಗೈ ಇತ್ಯಾದಿಗಳಿಂದ ದಿಕ್ಕು ತೋಚದೆ ಹೊಸ ಅರ್ಥ, ಹೊಸ ಸತ್ಯ, ಹೊಸ ಆದರ್ಶದ ಕಡೆ ತೀವ್ರವಾದ ಹುಡುಕಾಟದಲ್ಲಿರುವುದನ್ನು ಅದ್ಭುತರಮ್ಯ ಸಾಹಿತ್ಯದಲ್ಲಿ ಕಾಣಲು ಸಾಧ್ಯವಿದೆ.
ಅದ್ಭುತರಮ್ಯ ಕಥೆಗಳಲ್ಲಿ ಮುಖ್ಯವಾಗಿ ಹಾಗಿದ್ದರೇನು, ಮುಂದೇನು ಮತ್ತು ಹಾಗಾದರೇನು ಎಂಬ ಮೂರು ಪ್ರಶ್ನೆಗಳನ್ನು ಕೇಳಿಕೊಂಡು ಅವುಗಳಗೆ ಉತ್ತರ ದೊರಕಿಸಿಕೊಡುವ ಪ್ರಯತ್ನವಿರುತ್ತದೆ. ವಾಸ್ತವ ಪ್ರಜ್ಞೆಯ ಪರಿಗ್ರಹಣದ ಸ್ವರೂಪವನ್ನು ನಿರಾಕರಿಸಲು ಅದ್ಭುತರಮ್ಯ ಕಥೆಗಳು ಹಲವು ಆಘಾತಗಳನ್ನು ಉಂಟುಮಾಡುತ್ತವೆ. ಇವುಗಳನ್ನು ಸಾಂಸ್ಕೃತಿಕ ಆಘಾತಗಳೆಂದು ಕರೆಯಲಾಗಿದೆ. ಈ ಆಘಾತಕ್ಕೆ ಮನುಷ್ಯನಲ್ಲಿ ಆಳವಾಗಿ ನೆಲೆಯೂರಿದ ವಿಚಾರ, ಆಲೋಚನಾ ವಿಧಾನ, ನಂಬಿಕೆ, ತರ್ಕ ಸರಣಿ ಮುಂತಾದವು ಗುರಿಯಾಗುತ್ತವೆ. ಪರಿಣಾಮವಾಗಿ ಓದುಗ ಕಥೆಗಳಲ್ಲಿ ಅನಿರೀಕ್ಷಿತವಾದದ್ದನ್ನಷೇ ನಿರೀಕ್ಷಿಸುವುದು ಮಾತ್ರವಲ್ಲದೆ ವಿರುದ್ಧವಾದದ್ದನ್ನೂ ಸ್ವೀಕರಿಸಬೇಕಾಗುತ್ತದೆ. ಮಾಂತ್ರಿಕ ವಾಸ್ತವತೆ ಎನ್ನುವ ವಿಶಿಷ್ಟ ಪರಿಕಲ್ಪನೆಯ ಬಗ್ಗೆ ಸಾಹಿತ್ಯಾಕ್ತರ ಗಮನ ಹರಿಯಲು ಮಾರ್ಕ್ವೆಜ್ಗೆ ನೊಬೆಲ್ ಪುರಸ್ಕಾರ ದೊರತದ್ದು ಪ್ರಮುಖ ಕಾರಣವೆನಿಸಿದರೆ ಆಶ್ಚರ್ಯವಿಲ್ಲ. ಸಾಹಿತ್ಯವೂ ಸೇರಿದಂತೆ ವಿವಿಧ ಸೃಷ್ಟ್ಯಾತ್ಮಕ ಕ್ಷೇತ್ರಗಳಲ್ಲಿ ಆ ರೀತಿಯ ಮನ್ನಣೆ ದೊರೆಯದೆ ಪ್ರಪಂಚದ ಜನ ಸಮುದಾಯ ವಂಚಿತವಾಗಿರುವ ಸಾಧ್ಯತೆಯೂ ಇಲ್ಲವೆಂದು ಹೇಳಲಾಗುವುದಿಲ್ಲ.
-ಪ್ರಸನ್ನ ಎ.ಎನ್.
prasanna450@gmail.com