ಡಾ. ಎ.ಎಂ. ಢವಳಾರ
ಕೆಪಿಎಸ್ಸಿಯಲ್ಲಿ ಉಪನ್ಯಾಸಕರ ಹುದ್ದೆಗೆ ಆಯ್ಕೆಯಾಗದೆ ಕೆಎಟಿಯಲ್ಲಿ ಅರ್ಜಿ ಹಾಕಿದ್ದೆ. ಆದರೆ ಕಚೇರಿಯ ಆಬ್ಜೆಕ್ಷನ್ಗಳನ್ನು ಸರಿಪಡಿಸದೇ ಇದ್ದುದರಿಂದ ಅರ್ಜಿ ವಜಾ ಆಗಿದೆ. ಹೈಕೋಟ್ನಲ್ಲೂ ವಜಾ ಆಗಿದೆ. ಪರಿಹಾರವೇನು?
- ನ್ಯಾಯಾಲಯದ ಎಲ್ಲ ಹಂತದಲ್ಲೂ ನಿಮ್ಮ ಅರ್ಜಿ ವಜಾ ಆಗಿರುವುದರಿಂದ ಅಲ್ಲಿ ಪರಿಹಾರ ಸಿಗುವುದಿಲ್ಲ. ಆದರೆ ನಿಮ್ಮ ವಕೀಲರು ಹೈಕೋರ್ಟಿನಲ್ಲಿ ತಿಳಿಸಿದಂತೆ ಈಗಾಗಲೇ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದೀರಿ. ಅದನ್ನು ಕುರಿತು ನೀವು ನಿಮ್ಮ ಪ್ರಯತ್ನ ಮುಂದುವರಿಸಬೇಕು.
ಹಿತೈಷಿಗಳ ಸಮಕ್ಷಮ ಬಗೆಹರಿಸಿಕೊಳ್ಳಿ
ಹೆಸರು, ಊರು ಬೇಡ
ಮೊದಲನೇ ಹೆಂಡತಿಯ ನಿಧನದ ನಂತರ ಎರಡನೇ ಬಾರಿ ಮದುವೆಯಾಗಿದ್ದೇನೆ. ಅದು ನೋಂದಣಿಯಾಗಿದೆ. ಹೆಂಡತಿಗೆ ನನ್ನ ಬಗ್ಗೆ ಕಾಳಜಿಯಿಲ್ಲ. ನನಗೂ ಸಾಕಾಗಿದೆ. ಬಿಡುಗಡೆ ಸಾಧ್ಯವೇ?
- ಕಾನೂನಿನಂತೆ ಸಾಧ್ಯ. ಆದರೆ ಈ ಇಳಿವಯಸ್ಸಿನಲ್ಲಿ ಕೋರ್ಟಿಗೆ ಹೋಗಿ ತೀರ್ಮಾನವಾಗುವುದಕ್ಕೆ ಎಷ್ಟೋ ವರ್ಷಗಳು ಹಿಡಿಯುತ್ತವೆ. ಬದಲಾಗಿ ನೀವಿಬ್ಬರೂ ನಿಮಗೆ ಬೇಕಾದ ಹಿತೈಷಿಗಳ ಬಳಿ ಮಾತಾಡಿ ರಾಜಿಯಾಗುವುದಾಗಲೀ ಅಥವಾ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನವನ್ನಾಗಲೀ ಮಾಡಿಕೊಳ್ಳುವುದು ಲೇಸು.
ಕರಾರುಪತ್ರ ರದ್ದುಗೊಳಿಸಿ
ವೀರೇಶ್, ಹುಬ್ಬಳ್ಳಿ
1995ರಲ್ಲಿ ಜಮೀನು ಮಾರಾಟಕ್ಕೆ ಛಾಪಾ ಕಾಗದದ ಮೇಲೆ ಕರಾರು ಪತ್ರ ಮಾಡಿಕೊಂಡಿದ್ದೇವೆ. ಆದರೆ ಖರೀರದಿದಾರರು ಪತ್ರ ನೋಂದಣಿ ಮಾಡಿಸಲು ಬರುತ್ತಿಲ್ಲ. ಅಲ್ಲದೇ ಹಣವನ್ನೂ ಕೊಡುತ್ತಿಲ್ಲ. ಜಮೀನು ಅವರ ಸ್ವಾಧೀನದಲ್ಲಿದೆ. ಪರಿಹಾರವೇನು?
- ಅವರಿಗೆ ಲಾಯರ್ ಮೂಲಕ ನೋಟೀಸ್ ಕೊಟ್ಟು ಕರಾರು ರದ್ದಾಗಿದೆಯೆಂದೂ, ಜಮೀನು ವಾಪಸ್ ಕೊಡುವಂತೆಯೂ ತಿಳಿಸಿ. ನಂತರ ಅಗತ್ಯವಾದರೆ ನ್ಯಾಯಾಲಯದಲ್ಲಿ ದಾವಾ ಹಾಕಬಹುದು.
ದಾವಾ ಹಾಕಿ
ಮೇಘರಾಜ್, ಊರುಬೇಡ
ತಂದೆಯ ಅಣ್ಣಂದಿರು ಪಿತ್ರಾರ್ಜಿತ ಆಸ್ತಿ ಹಿಸ್ಸೆ ಮಾಡಿಕೊಂಡರು. ಅವರು ತೀರಿಹೋದ ಮೇಲೆ ಅವರ ಹೆಂಡತಿ, ಮಕ್ಕಳು ಆ ಆಸ್ತಿಗಳನ್ನು ಮಾರಿಕೊಂಡಿದ್ದಾರೆ. ನಮಗೆ ಏನೂ ಕೊಟ್ಟಿಲ್ಲ. ಮನೆಯು ನಮ್ಮ ತಂದೆಯ ಸ್ವಯಾರ್ಜಿತ. ಆದರೆ ಅದು ದೊಡ್ಡಪ್ಪನ ಹೆಸರಿನಲ್ಲಿದೆ. ಈಗ ಏನು ಮಾಡಬೇಕು?
- 1987ರಿಂದ ಇಲ್ಲಿಯವರೆಗೆ ನೀವು ಏಕೆ ಸುಮ್ಮನೆ ಕೂತಿದ್ದೀರಿ? ಈಗಲೂ ಕಾಲ ಮಿಂಚಿಲ್ಲ. ನ್ಯಾಯಾಲಯದಲ್ಲಿ ತಂದೆಯ ಸ್ವತ್ತಿಗೆ ದಾವಾ ಹಾಕಿ. ಸಹಾಯವಾಗಬಹುದು.
ಪೊಲೀಸ್ ಠಾಣೆಯಲ್ಲಿ ಅರ್ಜಿ ಕೊಡಿ
ಉಮೇಶ್, ಬೆಳಗಾವಿ
ಓಣಿಯೊಂದರಲ್ಲಿ ಜಗಳ ಬಿಡಿಸಲು ಹೋದಾಗ ಗಂಡ ಹೆಂಡಿರು ಸೇರಿಕೊಂಡು ನನ್ನ ವಿರುದ್ಧ ಸಿಪಿಸಿ ಕಲಂ 354ರನ್ವಯ (ಮಾನಭಂಗ ಮಾಡುವ ಉದ್ದೇಶದಿಂದ ಹೊಡೆಯುವುದು ಅಥವಾ ಬಲಪ್ರಯೋಗ ಮಾಡುವುದು) ಪೊಲೀಸರಿಗೆ ದೂರು ನೀಡಿದ್ದಾರೆ ಹಾಗೂ ಸುಳ್ಳು ಸಾಕ್ಷಿಗಳ ಹೆಸರುಗಳನ್ನು ಸೇರಿಸಿದ್ದಾರೆ. ಈ ರೀತಿ ಕಾನೂನನ್ನು ದುರುಪಯೋಗಪಡಿಸಿಕೊಳ್ಳುವುದನ್ನು ಹೇಗೆ ತಡೆಯುವುದು? ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಬಹುದೇ? ಕೇಸಿನ ಫಲಿತಾಂಶ ಏನಾಗಬಹುದು?
- ಠಾಣೆಯಲ್ಲಿ ನಿಮ್ಮ ಅನಿಸಿಕೆಗಳನ್ನು ತಿಳಿಸಿ. ಜತೆಗೆ ಜಿಲ್ಲಾ ಎಸ್ಪಿಯವರನ್ನು ಕಂಡು ಅರ್ಜಿ ಕೊಡಿ. ಪ್ರಯೋಜನವಿಲ್ಲದಿದ್ದರೆ ಒಬ್ಬ ವಕೀಲರನ್ನು ನೇಮಿಸಿ, ಸರಿಯಾಗಿ ಪಾಟೀಸವಾಲನ್ನು ಮಾಡಿಸಿ. ಪ್ರಕರಣ ಸಾಬೀತಾದರೆ 2 ವರ್ಷ ಶಿಕ್ಷೆ ಅಥವಾ ದಂಡ ಅಥವಾ ಎರಡೂ ಆಗಬಹುದು. ಹಾಗಾದಾಗ ನೀವು ಮೇಲ್ಮನವಿಯನ್ನೂ ಸಲ್ಲಿಸಬಹುದು. ಯಾರಿಗೆ ಮನವಿ ಸಲ್ಲಿಸಿದರೂ ಪ್ರಕರಣ ಅಷ್ಟು ಬೇಗ ಮುಕ್ತಾಯವಾಗುವುದಿಲ್ಲ.
- ಎಚ್.ಆರ್. ಕಸ್ತೂರಿರಂಗನ್